ಕಳೆದು ಪಡೆದ ಮತ್ತೊಂದು ಭಾನುವಾರ!

November 10, 2008 at 7:54 am | In ನಿಮ್ಮೊಂದಿಗೆ | 18 Comments
Tags: ,

ಭಾನುವಾರ ಕಳೆದಿದ್ದೇ ಗೊತ್ತಾಗಲಿಲ್ಲ!
ಅದು ಹಾಗೇ. ಈ ಭಾನುವಾರಗಳು ಯಾವತ್ತೂ ಚಿಕ್ಕವಾಗಿಯೇ ಇರುತ್ತವೆ. ಬೇಗ ದಿನ ಮುಗಿದುಹೋಗುತ್ತದೆ. ಅದರಲ್ಲೂ ಅವತ್ತು ನಮ್ಮ ಇಷ್ಟದ ಪ್ರೋಗ್ರಾಮುಗಳಿದ್ದರಂತೂ ಮುಗಿದೇಹೋಯ್ತು!

ಈ ಭಾನುವಾರವೂ ಹಾಗೇ ಆಯ್ತು. ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ವಿವೇಕ ಚಿಂತನ ಯುವ ಸಮ್ಮೇಳನವಿತ್ತು. ಜೊತೆಗೆ, ಚಕ್ರವರ್ತಿಯ ‘ಜಾಗೋ ಭಾರತ್’ ತಂಡದಿಂದ ಗೀತಗಾಯನ.
ಓಹ್! ಎಷ್ಟೊಂದು ಮಕ್ಕಳು! ಮಕ್ಕಳಂದ್ರೆ, ಕಾಲೇಜು ಹುಡುಗ ಹುಡುಗಿಯರು. ಇಡೀ ದಿನ ಅದೆಷ್ಟು ಆಸ್ಥೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಗೊತ್ತಾ? “ಈ ಕಾಲದ ಹುಡುಗರಾ? ಒಳ್ಳೇದೇನೂ ಬೇಡ ಅವಕ್ಕೆ!” ಅಂತ ಜನರಲೈಸ್ ಮಾಡಿ ಗೊಣಗಾಡುವ ಹಿರಿಯರು ಸಿಕ್ಕರೆ ಕರೆದುಕೊಂಡು ಬಂದು ತೋರಿಸಬೇಕು ಇದನ್ನೊಮ್ಮೆ ಅಂದುಕೊಂಡೆ. ಹಾಗೆ ಕಿಕ್ಕಿರಿದು ತುಂಬಿತ್ತು ಆಡಿಟೋರಿಯಮ್.
ವಿಜಯನಗರದ ಭವತಾರಿಣಿ ಶಾರದಾ ಆಶ್ರಮದವರು ಏರ್ಪಡಿಸಿದ್ದ ಸಮ್ಮೇಳನವದು. “ಅಂಥಾ ಕಾರ್ಯಕ್ರಮಕ್ಕೂ ಕಾಲೇಜು ಹುಡುಗರು ಬರ್ತಾರಾ?” ನಾನು ಬಾಗಿಲು ಹಾಕಿ ಕೀಲಿ ತಿರುವುವಾಗ ಎದುರು ಮನೆ ವಸು ಕೇಳಿದಳು. ನಾನು ಸುಮ್ಮನೆ ನಕ್ಕೆ ಅಷ್ಟೆ. ಈಗ ನಾಲ್ಕು ವರ್ಷದ ಮೊದಲು ನಾನೂ ಇದೇ ಪ್ರಶ್ನೆ ಕೇಳಿದ್ದು ನೆನಪಾಯ್ತು.

~
ಮೊದಲ ಮೂರು ಸೆಷನ್ ಗಳು ನಡೆಯುತ್ತಿರುವಾಗ ಬುಕ್ ಕೌಂಟರಿನಲ್ಲಿ ಸುತ್ತಾಡುತ್ತಿದ್ದ ನಾನು, ಅಣ್ಣನ ಭಾಷಣದ ಹೊತ್ತಿಗೆ ಒಳಹೊಕ್ಕಿದ್ದೆ. ಹುಡುಗರೆಲ್ಲ ಅಲುಗಾಡದೆ ಕುಳಿತಿದ್ದರು. ಅಲ್ಲವನು ಮೇಜರ್ ಭಾತ್ರಾನ ಕಥೆ ಹೇಳುತ್ತಿದ್ದರೆ, ಇಲ್ಲೊಬ್ಬಳು ಕಣ್ಣೊರೆಸಿಕೊಳ್ಳುತ್ತಿದ್ದಳು. ಕ್ಯಾಪ್ಟನ್ ಮುಗಿಲನ್ ಬಗ್ಗೆ ಹೇಳುವಾಗ, ಇಲ್ಲೊಬ್ಬ ತಾನಿನ್ನು ಜೀವಮಾನವಿಡೀ ಕೇಸರಿಭಾತು ತಿನ್ನುವುದಿಲ್ಲವೆಂದು ಶಪಥ ಮಾಡುತ್ತಿದ್ದ.
ಭಾಷಣ ಮುಗಿದ ಮೇಲೂ ಕುಳಿತಿದ್ದ ಹುಡುಗರು ಏಳಲಿಲ್ಲ. ಭಾರವಾದ ಮೌನದೊಳಗೆ ಅವರೆಲ್ಲ ಕಳೆದುಹೋಗಿದ್ದರು. ಕೊನೆಗೆ, ‘ಎರಡು ಗಂಟೆಯೊಳಗೆ ಊಟ ಮುಗಿಸಿ ಬರಬೇಕು’ ಅಂತ ಮೈಕಲ್ಲಿ ಅನೌನ್ಸ್ ಮಾಡಿದಾಗಲೇ ಎಲ್ಲರೂ ಎದ್ದಿದ್ದು. ನೆನಪಿರಲಿ… ಅವರೆಲ್ಲರೂ ಶುದ್ಧ ತರಳೆ ಎನ್ನಬಹುದಾದ ವಯಸ್ಸಿನ ಹುಡುಗರು!

~
“ಯೂಥ್ಸ್ ಆರ್ ನಾಟ್ ಯೂಸ್ ಲೆಸ್… ದೇ ಆರ್ ಲೆಸ್ ಯೂಸ್ಡ್. …” ಸ್ವಾಮಿ ಚಿನ್ಮಯಾನಂದರ ಮಾತು. ಸರಿಯಾದ ಮಾರ್ಗದರ್ಶನವೊಂದು ಸಿಕ್ಕುಬಿಟ್ಟರೆ ವಜ್ರವಾಗಿ ಹೊಳೆಯುವ ಕಲ್ಲುಗಳು ಈ ಯುವ ಜನಾಂಗ. ಅಲ್ಲಿ ಸೇರಿದ್ದ ಐನೂರು ವಿದ್ಯಾರ್ಥಿಗಳಲ್ಲಿ ಐವರಾದರೂ ಕಾರ್ಯಕ್ರಮದ ಲಾಭ ಪಡೆದು ವಜ್ರದ ಹಾಗೆ ಬೆಳಗುತ್ತಾರೆನ್ನುವುದು ಖಚಿತ. ಇದಕ್ಕೆ ಉದಾಹರಣೆಗಳು ಒಂದೆರಡಲ್ಲ.

ವಿವೇಕ ಚಿಂತನ ಸಮ್ಮೇಳನದ ಅಂಗವಾಗಿ, ಮನರಂಜನೆ ಕಾರ್ಯಕ್ರಮವೂ ಇತ್ತು. ಅದು, ಜಾಗೋ ಭಾರತ್ ತಂಡದ ಗೀತಗಾಯನ. ಸದಾ ಸಿನೆಮಾ ಹಾಡುಗಳ- ಪ್ರೇಮಗೀತೆಗಳ ಗುಂಗಲ್ಲೇ ಇರುವ ಹುಡುಗರು ದೇಶಪ್ರೇಮದ ಹಾಡುಗಳನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಚಿಂತೆ ನನಗೆ ಮಾತ್ರ ಇತ್ತು. (ಯಾಕೆಂದರೆ, ಆಶ್ರಮದವರು ಮತ್ತು ಅಣ್ಣನಿಗೆ ಯಾವಾಗಲೂ ಧನಾತ್ಮಕವಾಗಿ ಆಲೋಚಿಸಿಯೇ ಅಭ್ಯಾಸ!)
ಶುರುವಾಯ್ತು ನೋಡಿ, ವಂದೇ ಮಾತರಂ! ಮತ್ತೆ ತಣ್ಣಗಿನ ಮೌನ. ಹುಡುಗರು ತಾವೇ ತಾವಾಗಿ ಎದ್ದು ನಿಂತು ಗೌರವ ಸಲ್ಲಿಸುವಷ್ಟು ಪ್ರಬುದ್ಧರು! ಯಾರು ಹೇಳಿದ್ದು ಇವರಿಗೆ ದೇಶದ ಬಗ್ಗೆ ಗೌರವವಿಲ್ಲ ಅಂತ!?

ಬಂಕಿಮರ ವಂದೇ ಮಾತರಂ, ಧರೆಗಿಳಿದಿದೆ ಸ್ವರ್ಗದ ಸ್ಫರ್ಧಿಯು, ಪರ್ ದೇಸ್ ಫಿಲಮ್ಮಿನ ಐ ಲವ್ ಮೈ ಇಂಡಿಯಾ, ರಂಗ್ ದೆ ಬಸಂತೀ ಚೋಲಾ, ಎಲೆಗಳು ನೂರಾರು, ಏ ಮೇರೆ ವತನ್ ಕೀ ಲೋಗೋ, ಎಚ್ಚರಾಗು ಧೀರ, ಜೈ ಭಾರತ ಜನನಿಯ, ರೆಹಮಾನರ ವಂದೇ ಮಾತರಂ, ಜಿಸ್ ದೇಸ್ ಕಿ ಧರ್ತೀ… ಒಟ್ಟು ಹತ್ತು ಹಾಡುಗಳು. ಒಂದೊಂದು ಹಾಡಿಗೂ ಮಕ್ಕಳು ಹುಚ್ಚೆದ್ದು ಕುಣಿಯುತ್ತಿದ್ದರು. ಚಪ್ಪಾಳೆ ತಟ್ಟುತ್ತ ದನಿಗೂಡಿಸುತ್ತಿದ್ದರು. ಹಾಡುಗಳ ನಡುವಿನ ನಿರೂಪಣೆಯ ಸಮಯದಲ್ಲಿ ಹೇಳಲಾಗುತ್ತಿದ್ದ ಕಥೆಗಳಿಗೆ ಕಣ್ಣೀರಾಗುತ್ತಿದ್ದರು. ಭಾರತದ ಹಿರಿಮೆ ಸಾರುವ ಮಾತುಗಳು ಬಂದಾಗಲೆಲ್ಲ ಎದ್ದು ನಿಂತು ಚಪ್ಪಾಳೆಯ ಜಡಿಮಳೆಯನ್ನೇ ಸುರಿಸುತ್ತಿದ್ದರು!

“ಅಂಥಾ ಕಾರ್ಯಕ್ರಮಕ್ಕೂ ಕಾಲೇಜು ಹುಡುಗ್ರು ಬರ್ತಾರಾ?” ಅಂತ ಕೇಳಿದ್ದವಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆ. ಅವಳಂತೂ  ಅಲ್ಲಿನ ಉತ್ಸಾಹದ ಅಲೆಯಲ್ಲಿ ಕೊಚ್ಚಿಹೋಗಿಬಿಟ್ಟಿದ್ದಳು!

~
ಕಾರ್ಯಕ್ರಮದ ಯಶಸ್ಸನ್ನ ಬರೀ ಚಪ್ಪಾಳೆಗಳಿಂದ ಅಳೆಯಲು ಬರುವುದಿಲ್ಲ. ಅದು ಸರಿಯೂ ಅಲ್ಲ. ಅಲ್ಲಿ ಸೇರಿದ್ದವರಲ್ಲಿ ಶೇ. ನಲವತ್ತರಷ್ಟು ಮಕ್ಕಳು ಕಾರ್ಯಕ್ರಮ ಮುಗಿದ ನಂತರ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಡುವ ಪ್ರಮಾಣ ಮಾಡಿದರಲ್ಲ, ಅದು ಯಶಸ್ಸು. ಅವರವರ ಕಾರ್ಯಕ್ಷೇತ್ರಗಳಲ್ಲೇ ಇದ್ದುಕೊಂಡು ದೇಶದ ಪ್ರಗತಿಗೆ ಪೂರಕವಾಗಿ ದುಡಿಯುವ ಭರವಸೆ ನೀಡಿದರಲ್ಲ, ಅದು ಯಶಸ್ಸು.
ಮುಂದೆಯೂ ಅ ಹುಡುಗರ ಮನಸ್ಸು ಆ ದಿಕ್ಕಿನಲ್ಲೇ ಚಿಂತಿಸುವಂತಾಗಲಿ ಅನ್ನುವ ಹಾರೈಕೆ ನನ್ನದು.

~
ಒಟ್ಟಿನಲ್ಲಿ ನನ್ನ ಭಾನುವಾರ ಖುಷಿಯಿಂದ ಕಳೆಯಿತು. ನೆನ್ನೆಯದು ಮಾತ್ರವಲ್ಲ, ನನ್ನ ಬಹುತೇಕ ಭಾನುವಾರಗಳು ಕಳೆಯುವುದು ಹೀಗೇ. ಈ ಸಾರ್ತಿ ನಿಮ್ಮೊಂದಿಗೆ ಇದನ್ನ ಹಂಚಿಕೊಳ್ಳಬೇಕನಿಸಿತು, ಹೇಳಿಕೊಂಡೆನಷ್ಟೆ. ಯಾಕೆಂದರೆ ಇದು ವಿದ್ಯಾರ್ಥಿಗಳ ವಿಷಯ.
…ಇಂದಿನ ಪೀಳಿಗೆ ಕುಲಗೆಟ್ಟುಹೋಗಿದೆ. ಇದರಿಂದ ಹಾಗಾಗಿಬಿಡುತ್ತೆ, ಹೀಗಾಗಿಬಿಡುತ್ತೆ… ಅಂತೆಲ್ಲ ಹಳಹಳಿಸುವ ಯಾರಾದರೂ ಇದ್ದರೆ, ಅವರಿಗೊಂದು ತಸಲ್ಲೀ ನೀಡುವ ಸಲುವಾಗಿ ಅಷ್ಟೆ. ಅದಕ್ಕಿಂತ ಹೆಚ್ಚಾಗಿ, ನನಗೆ ಮೂಡಿರುವ ಭರವಸೆ ಹುಸಿಹೋಗದಿರಲಿ ಎಂದು ಹಾರೈಸಿಕೊಳ್ಳುತ್ತಾ ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ಸಾಕ್ಷಿ ಇದು!

ನಿಜ್ವಾಗ್ಲೂ ಮರೆತಿದ್ದೆ.
ವಿವೇಕ ಚಿಂತನ ಕಾರ್ಯಕ್ರಮ ಆಯೋಜಿಸಿದ್ದು ವಿಜಯ ನಗರದ ಭವತಾರಿಣಿ ಅಶ್ರಮ. ಪಾಲ್ಗೊಂಡಿದ್ದು, ವಿವಿಧ ಹೈಸ್ಕೂಲು- ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ನನ್ನಂಥ ಒಂದಷ್ಟು ಸಾರ್ವಜನಿಕರು.
ಗೀತಗಾಯನದಲ್ಲಿ ರಾಷ್ಟ್ರ ಕಥನ- ನಿರೂಪಣೆ- ಚಕ್ರವರ್ತಿ ಸೂಲಿಬೆಲೆ. ಹಾಡುಗಾರಿಕೆ- ಗಣೇಶ್ ದೇಸಾಯಿ, ಮಾಲಿನಿ ಕೇಶವ ಪ್ರಸಾದ್ ಮತ್ತು ತಂಡದವರು.

ಭಾನುವಾರಗಳನ್ನು ಸಾರ್ಥಕವಾಗಿ ಕಳೆಯಲಿಕ್ಕೆ ನನ್ನ ಹತ್ತಿರ ಬಹಳಷ್ಟು ಉಪಾಯಗಳಿವೆ. ಇಲ್ಲಿ ನಾವು, ಒಂದು ದಿನವನ್ನ ಕಳೆದುಕೊಂಡರೂ ಬಹಳಷ್ಟು ಪಡೆಯುತ್ತೇವೆ. ನಿಮಗೂ ಆಸಕ್ತಿಯಿದ್ದರೆ, ಮುಂದೆಂದಾದರೂ ಹೇಳ್ತೇನೆ. ಸರೀನಾ?

Blog at WordPress.com. | Theme: Pool by Borja Fernandez.
Entries and comments feeds.