ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!
December 19, 2008 at 8:18 am | In ನಿಮ್ಮೊಂದಿಗೆ | 14 CommentsTags: ಕಲ್ಕತ್ತಾ, ಪುರಿ, ಪ್ರವಾಸ
ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು.
ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ…. ಆಆಆಆಆ………. ಖ್ಷೀ…….
ಉಹ್… ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು!

ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು ಕೊಂಕಿರಲಿಲ್ಲ. ಗಂಗೆಯಲ್ಲಿ, ಸಮುದ್ರದಲ್ಲಿ ಹೊರಳಾಡಿ ಬಂದಿದ್ದರೂ ಮೂಗು ನೆಂದಿರಲಿಲ್ಲ! ಇಷ್ಟೂ ದಿನ ಕರಾವಳಿಯ ಧಗೆಯಲ್ಲಿ ( ಅಲ್ಲಿ ಚಳಿಗಾಲ ಅಂತ ಅಲ್ಲಿನವರೆಲ್ಲ ಶಾಲು ಹೊದೆಯುತ್ತಿದ್ದರು ಗೊತ್ತಾ?) ಬೆಂದು ಬಂದಾಗಲೂ ತೆಪ್ಪಗಿದ್ದ ನರ ನಾಡಿಗಳು ಬೆಂಗಳೂರಿನ ಧೂಳು ಗಾಳಿ ಹೊಕ್ಕುತ್ತಿದ್ದ ಹಾಗೆ ಹೇಗೆ ಎಗರಿಬಿದ್ದವು ನೋಡಿ!?
ಅಂತೂ ಸುಖಕರ ಪ್ರಯಾಣ ಮುಗಿಸಿ ಬಂದ ನಾನೀಗ ಹುಷಾರು ತಪ್ಪಿ, ಮೂಗೊರೆಸಿಕೊಳ್ಳುತ್ತ ಆಫೀಸಲ್ಲಿ ಕುಂತಿದ್ದೇನೆ. ಅಲ್ಲಿದ್ದಷ್ಟೂ ದಿನ ‘ಈಸ್ಟ್ ಆರ್ ವೆಸ್ಟ್, ಬೆಂಗ್ಳೂರ್ ಇಸ್ ದ ಬೆಸ್ಟ್’ ಅಂತ ಹಾಡುತ್ತಿದ್ದ ನನ್ನ ಬಗ್ಗೆಯೇ ಗಂಭೀರವಾಗಿ ಚಿಂತಿಸುತ್ತಾ….
ಕಲ್ಕತ್ತಾಗೆ ಹೋಗ್ತಿರೋದು ಇದು ಎರಡನೆ ಸಾರ್ತಿಯಾದರೂ ಡೀಟೇಲಾಗಿ ನೋಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಜನರ ಗಿಜಿಬಿಜಿ, ಕಂಬಳಿಹುಳದ ಹಾಗೆ ರಸ್ತೆ ಮಧ್ಯ ಒಡುವ ಟ್ರಾಮು, ಗಲೀಜುಮಯ ಗಲ್ಲಿಗಳು, ಅಗಲಗಲ ಬೊಟ್ಟಿನ- ತುಂಬು ಸಿಂಧೂರದ ಹೆಂಗಸರು, ಮುದ್ದಾದ ಹುಡುಗರ, ಸೊಗಸಾದ ಭಾಷೆ, ಆಹಾ! ರಸಗುಲ್ಲಾ!! ಯಾವ ಪುಣ್ಯಾತ್ಮರೋ, ‘ದೇಶ ನೋಡು, ಕೋಶ ಓದು’ ಅಂದವರು…. ಎಷ್ಟು ನಿಜದ ಮಾತು ಹೇಳಿದಾರಲ್ವ? ನಮ್ಮದೇ ದೇಶದ ಬೇರೆಯದೇ ಬಗೆಯ ಆಚಾರ ವಿಚಾರಗಳ ಜನರ ಸಹವಾಸ ಕಟ್ಟಿಕೊಡುವ ಅನುಭವವನ್ನ ಅನುಭವಿಸಿಯೇ ತೀರಬೇಕು.
ನನಗದ್ಯಾಕೋ ಬಂಗಾಳದ ಬಗೆಗೊಂಥರಾ ಆಕರ್ಷಣೆ. ಹಾಗಂತಲೇ ಕಳೆದ ವರ್ಷ ಬಂಗಾಲಿ ಓದಲು- ಬರೆಯಲು ಕಲಿತಿದ್ದೆ. ಚಿಕ್ಕ ಮಕ್ಕಳು ಹೊಸತಾಗಿ ಓದು ಕಲಿತಾಗ ಮಾಡ್ತಾರಲ್ಲ ಹಾಗೆ- ಬಂಗಾಳದ ಹಾದಿ ಬೀದಿ ಸುತ್ತುವಾಗ ಅಂಗಡಿ ಬೋರ್ಡುಗಳ ಹೆಸರನ್ನ ಓದಿದ್ದೇ ಓದಿದ್ದು! ಜೊತೇಲಿದ್ದವರೆಲ್ಲ ‘ಭಲೇ’ ಎನ್ನುವಾಗ ಬೀಗಿದ್ದೇ ಬೀಗಿದ್ದು!
ಓಹ್! ಕೆಲವೊಂದಷ್ಟು ಹಳ್ಳಿಗಳನ್ನ ಕಾಲ್ನಡಿಗೆಯಲ್ಲಿ ತಿರುಗಿದ್ದು, ಹಳ್ಳಿಗರ ಮನೆ ಹೊಕ್ಕು ಊಟ ಮಾಡಿದ್ದು, ಕಂಡ ಕಂಡ ಕೆರೆಯಲ್ಲಿ ಎಮ್ಮೆಗಳ ಹಾಗೆ ಹಾರಿದ್ದು, ನೊಣಗಳ ಸಾಮ್ರಾಜ್ಯದಂತಿದ್ದ ದಾರಿಬದಿ ಹೋಟೆಲುಗಳಲ್ಲಿ ಪರೋಟಾ ತಿಂದು ಚಪ್ಪರಿಸಿದ್ದು ಅವೆಲ್ಲ ಮಜವೇ ಮಜ. ಈ ಎಲ್ಲ ಮನರಂಜನೆಯನ್ನು ಹಿಂದಿಕ್ಕಿ ರಾಮ ಕೃಷ್ಣಾಶ್ರಮದ ತಂಪು ನನ್ನನಪ್ಪಿ ಮೈದಡವಿ ಕಳಿಸಿತಲ್ಲ, ಅದರ ನವಿರು ಹಾಗೇ ಉಳಿದಿದೆ ಇನ್ನೂ. ಸಧ್ಯದ ಮಟ್ಟಿಗಂತೂ ಪರಮಹಂಸರ ಚಿಂತನೆಗಳು ನನ್ನ ಕೆಲವು ಭ್ರಮೆಗಳನ್ನ ಅಲುಗಾಡಿಸಿವೆ. ಕೆಲವು ಆಲೋಚನೆಗಳನ್ನ ಗಟ್ಟಿಗೊಳಿಸಿವೆ. ಮನಸ್ಸೆಂಬ ಮಹಾಕೋತಿ ನಿಂತಲ್ಲಿ ಎಷ್ಟು ದಿನ ನಿಂತೀತೋ ಯಾರಿಗೆ ಗೊತ್ತು?
ನಾವು ಹೋಗಿದ್ದು ಬರೀ ಕಲ್ಕತ್ತೆಗಲ್ಲ, ಒರಿಸ್ಸಾದ ಪುರಿ ಗೂ ಹೋಗಿದ್ವಿ. ಯಾಕಾದ್ರೂ ಹೋದೆವೋ ಅನ್ನಿಸಿದ್ದು ಸುಳ್ಳಲ್ಲ. ಇದನ್ನ ಹೇಳಿಕೊಳ್ಳುವಾಗ ನಾಚಿಕೆಯಿಂದ ತಲೆ ತಗ್ಗಿಹೋಗಿದೆ. ಒಂಥರಾ ಉಸಿರುಕಟ್ಟಿದ ಅನುಭವ. ಮುಂದೆ ಕೂಡ ನಾನು ಈ ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾತಾಡುವಾಗ ಹೀಗೇ ಕುಗ್ಗಿಹೋಗುತ್ತೇನೆ. ಈ ಬಗ್ಗೆ ವಿವರವಾಗಿ ಹೇಳಿಕೊಳ್ಳುವೆ. ಅದಕ್ಕೆ ಮುನ್ನ, ಅಂತಹ ಪ್ರಾಮಾನಿಕತೆ ನನಗಿದೆಯಾ? ಯೋಚಿಸಬೇಕಿದೆ. ಪ್ರಸಾದ ಕ್ಷೇತ್ರದಲ್ಲಿ ಭಗವಂತನ ಹೆಸರಲ್ಲಿ ಪಂಡಾಗಳು ನಡೆಸುವ ಲೂಟಿ, ಅವರ ಪರಮ ಕೊಳಕುತನಗಳೆಲ್ಲ ಹಾಗೇ ಕಣ್ಮುಂದೆ ಹಾದು ಹೋಗುತ್ತಿದೆ.
ಹೀಗೆ ಮನಸ್ಸು ಕಸಿವಿಸಿಗೊಂಡು ‘ಇಲ್ಲಿ ಬರಲೇ ಬಾರದಿತ್ತು’ ಅಂದುಕೊಳ್ತಿದ್ದ ನಮಗೆ ಮತ್ತೆ ಸಾಂತ್ವನ ನೀಡಿದ್ದು ರಾಮಕೃಷ್ಣಾಶ್ರಮವೇ. ಅದು, ಭುವನೇಶ್ವರದಲ್ಲಿ. ಕೊನಾರ್ಕ್ ನಲ್ಲಿ ಮತ್ತಷ್ಟು ತಲೆ ಬೇಯಿಸಿಕೊಂಡು, ಅತ್ಯದ್ಭುತ ಸೂರ್ಯ ದೇಗುಲದ ಅಂದವನ್ನು ಸವಿಯುತ್ತ, ಜೊತೆಜೊತೆಗೇ ಅದರ ಅವಸ್ಥೆಗೆ ಮರಗುತ್ತಾ ‘ದೇವಾಲಯಗಳ ನಗರ’ ಹೊಕ್ಕ ನಮಗೆ ಮತ್ತಷ್ಟು ಆಘಾತ ಕಾದಿತ್ತು. ‘ಮಂದಿರವಲ್ಲೇ ಕಟ್ಟುವೆವು’ ಅಂತ ಬೊಬ್ಬೆ ಹೊಡೆಯುವವರನ್ನು ಒಮ್ಮೆ ಇಲ್ಲಿಗೆ ಕರೆತಂದು, ‘ಇರೋದನ್ನ ನೆಟ್ಟಗಿಟ್ಟುಕೊಳ್ಳಿ ಮೊದಲು’ಅಂತ ಹೇಳಬೇಕೆನಿಸಿತು. ಅದಕ್ಕೆ ಮುನ್ನ, ಆ ದೇವಾಲಯಗಳೆಲ್ಲ ಮುಜರಾಯಿಯದೋ, ಖಾಸಗಿ ಆಡಳಿತದ್ದೋ ಅಂತ ತಿಳಿಯಬೇಕು. ಸರ್ಕಾರವನ್ನು ಬಯ್ದುಕೊಳ್ಳುವ ತೆವಲಂತೂ ನನಗೆ ಇದ್ದೇ ಇದೆ. ಅದು ಸುಲಭ ಕೂಡ. ಆದರೆ, ಈ ದೇವಾಲಯಗಳೇನಾದರೂ ಖಾಸಗಿ ನಿರ್ವಹಣೆಗೆ ಒಳಪಟ್ಟಿದೆಯೆಂದಾದರೆ, ಅದನ್ನು ನಂಬಿ ಅರಗಿಸಿಕೊಳ್ಳುವುದು ಕಡು ಕಷ್ಟ.
ಇರಲಿ. ಹೀಗೆ ತಲೆ ಕೆಡಿಸಿಕೊಂಡು ಸುತ್ತುತ್ತಿದ್ದ ನಮಗೆ ಅಲ್ಲಿನ ಗುಹಾಂತರ ದೇವಾಲಯಗಳು ಖುಷಿ ಕೊಟ್ಟವು. ಧವಳಗಿರಿಯ ಬುದ್ಧ ಮೂರ್ತಿಗಳು ತಂಪೂಡಿದವು. ಭುವನೇಶ್ವರದ ರಾಮಕೃಷ್ಣಾಶ್ರಮದಲ್ಲಿ ಕಳೆದ ಮತ್ತೆರಡು ದಿನಗಳು ಶಾಂತಿ ತುಂಬಿದವು.
ಹೀಗೆ ಒಟ್ಟು ಬೇಲೂರು ಮಠ, ದಕ್ಷಿಣೇಶ್ವರ, ಜಯರಾಂಬಾಟಿ, ಕಾಮಾರಪುಕುರ ಎಂದೆಲ್ಲ ಆಶ್ರಮಗಳ ತೆಕ್ಕೆಯಲ್ಲಿ ಇದ್ದೆದ್ದು ಬಂದ ನನಗೆ-
ಈ ಆಫೀಸು, ಟ್ರಾಫಿಕ್ಕು, ಮನೆಯಲ್ಲಿ ಸತ್ತು ಬಿದ್ದಿದ್ದ ಜಿರಳೆಗಳು, ಬಾರದ ನಲ್ಲಿ ನೀರು, ಅಂಗಡಿ ಮುಚ್ಚಿರುವ ಧೋಬಿ, ಅಡುಗೆ ಮನೆಯ ಅನಿವಾರ್ಯತೆಗಳೆಲ್ಲ ಮುತ್ತಿಗೆ ಹಾಕಿ ಹೈರಾನು ಮಾಡ್ತಿವೆ. ಆದರೂ, ಎಷ್ಟು ಮಾತು ಉಳಿದು ಹೋಗಿವೆ!?
ಪ.ಬಂಗಾಳದ ರಾಜಕೀಯ, ಹಾಳು ಸುರಿಯುವ ಗಲ್ಲಿಗಳು, ಇಪ್ಪತ್ತು ದಶಕ ಹಿಂದಿರುವ ಊರುಗಳು, ಗ್ರಾಮೀಣ ಉತ್ಪನ್ನಗಳಿಗೆ ಅಲ್ಲಿ ದೊರೆಯುತ್ತಿರುವ ಪ್ರೋತ್ಸಾಹ- ನಮಗೆ ಮಾದರಿಯಾಗಬಲ್ಲ ಮತ್ತಷ್ಟು ಆ ಬಗೆಯ ಸಂಗತಿಗಳು…
ಭಗವಂತನಿಲ್ಲದ ದೇವಾಲಯಗಳು, ಧನದಾಹಿ- ಸೋಮಾರಿ ಪಂಡಾಗಳು, ಕೊನಾರ್ಕ್ ದೇವಾಲಯದ ವಿಸ್ಮಯ- ದುರವಸ್ಥೆ…
ಇವೆಲ್ಲದರ ನಡುವೆ, ಮರಳುವಾಗ ಟಿಕೆಟ್ ಕನ್ಫರ್ಮ್ ಆಗದೆ ಅನಿರೀಕ್ಷಿತವಾಗಿ ದೊರೆತ ರೈಲು ಪ್ರಯಾಣದ ರಂಜಕ ಅನುಭವಗಳು ಮತ್ತು ನನಗೆ ಸಿಕ್ಕ ಕಾದಂಬರಿಯ ಎಳೆ!
ಇವನ್ನೆಲ್ಲ ಹೇಳಲೇಬೇಕು, ಮುಂದೆಂದಾದರೂ…
ಕೌಲೇದುರ್ಗದ ಕಥೆ
September 16, 2008 at 5:04 am | In ನೆನಪು | 5 CommentsTags: ಕೌಲೇದುರ್ಗ, ಚಾರಣ, ಪ್ರವಾಸ
ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ ಇರೋದ್ರಿಂದ ಪ್ರವಾಸ ಕೂಡ ಸುಲಭವಲ್ಲ.
ಇರಲಿ. ಕವಲೇದುರ್ಗ ಓದಿ, ಹೇಗನಿಸಿತು ಹೇಳಿ. ಪ್ರವಾಸ ಕಥನ ಹಳೆ ನೆನಪಿನ ಆಧಾರದ ಮೇಲೆ ಬರೀಬಹುದಾ? ಹೇಳಿ. ನನಗೆ ನಿಮ್ಮ ಸಲಹೆ ಬೇಕು.
ಅಣ್ಣ ಸೈಕಲ್ಲೊರೆಸಿಟ್ಟುಕೊಂಡು ಬ್ಯಾಟು ಬಾಲು ಕ್ಯಾರಿಯರ್ರಿಗೆ ಸೆಕ್ಕಿಸಿ ತಯಾರಾಗಿ ನಿಂತಿದ್ದ. ಐದಲ್ಲ, ಹತ್ತಲ್ಲ, ಬರೋಬ್ಬರಿ ಇಪ್ಪತ್ತು ಕಿಲೋಮೀಟರು ದೂರ ಅಂವ ಸೈಕಲ್ಲಲ್ಲಿ ಹೊರಟಿದ್ದಕ್ಕೆ ಅಪ್ಪ ರೇಗಾಡಲು ಶುರುವಿಟ್ಟಿದ್ದರು.
‘ಹೆಣಾ ಹೊರಲಿಕ್ಕೆ ಹೋಗ್ತಾನಂತೇನು ಅಂವ ನಗರಕ್ಕೆ?’
‘ಇಲ್ಲ, ಕ್ರಿಕೆಟ್ ಆಡಕ್ಕೆ’ಅಪ್ಪನ ಕೂಗಿಗೆ ಅಣ್ಣ ಹೊಸಿಲ ಮೇಲೆ ನಿಂತು ತಣ್ಣಗೆ ಉತ್ತರಿಸಿದ್ದ.
‘ಹೈದರಾಲಿ ಧೋಕಾ ಮಾಡಿ ನಗರ ಸಂಸ್ಥಾನದ ಮ್ಯಾಲ ಏರಿ ಬಂದಾಗ, ಭಾಳ ದೊಡ್ ಯುದ್ಧ ಆತು. ಮನೆ ಮನೆ, ಕೇರಿಕೇರಿಯಿಂದ ಯುವಕ್ರು, ಮುದುಕ್ರು ಅನ್ದೆ ಎಲ್ರೂ ದಂಡಿಗೆದ್ರು. ಯುದ್ಧದಾಗ್ ಎಷ್ಟ್ ಮಂದಿ ಸತ್ರು ಅಂದ್ರ… ಸತ್ ಸೈನಿಕರ ಹೆಣಾ ಹೊರ್ಲಿಕ್ಕೂ ಹೊರಗಿಂದ ಜನಾನ್ ಕರೆಸ್ಬೇಕಾತು!’ಮಲೆನಾಡಿಗರದಲ್ಲದ ಭಾಷೆಯಲ್ಲಿ ಮಹತ್ತಿನ ಮಠದ ಬಳಿ ಇದ್ದೊಬ್ಬ ಅಯ್ಯ, ಸಂಜಯನ ಕಣ್ಣು ಮಾಡ್ಕೊಂಡು ಏನನ್ನೋ ಕಾಣ್ತಿರೋರ ಹಾಗೆ ಹೇಳ್ತಲೇ ಹೋದರು.
‘ಕಾವಲು ದುರ್ಗ.’ ಅದು ಹೈದರಾಲಿ ಇಟ್ಟ ಹೆಸರು. ಹೆಣಾ ಹೊರಲಿಕ್ಕೂ ದಿಕ್ಕಿಲ್ಲದ ಹಾಗೆ ನಗರದ ಗಂಡಸರು ವೀರ ಮರಣ ಕಂಡಾಗ ಆತ ತನ್ನ ಸೈನ್ಯವನ್ನು ಅಲ್ಲಿಗೆ ತಂದು, ದುರ್ಗದ ಕೋಟೆಯಲ್ಲಿ ಕಾವಲಿಗಿರಿಸಿದ್ದ. ಕೌಲೇದುರ್ಗ ಅಂತಲೇ ಕರೆಸ್ಕೊಳ್ತಿದ್ದ ಕೋಟೆಯನ್ನ ಕಾವಲು ದುರ್ಗ ಅಂತ ಕರೆದ. ಆದರೇನಂತೆ? ಇವತ್ತಿಗೂ ಜನರ ಬಾಯಿಗೆ ಅದು, ಕೌಲೇದುರ್ಗವೇ.
ಆದರೆ ದುರ್ಗಕ್ಕೆ ಹೊಂದಿಕೊಂಡಿದ್ದ ನಗರ ಮಾತ್ರ ಇತ್ತೀಚಿನ ಎಲ್ಲ ಮಲೆನಾಡಿನ ಹಳ್ಳಿಗಳ ಹಾಗೆ ಯುವಕರನ್ನ ಪಟ್ಟಣಗಳಿಗೆ ಅಟ್ಟುತ್ತ, ಬಿದ್ದುಹೋದ ಅಡಿಕೆ ರೇಟಿಗೆ ಹಲುಬುತ್ತ, ಕೈಕೊಟ್ಟ ಶುಂಠಿ, ಉರುಳಾದ ವೆನಿಲ್ಲಾಗಳನ್ನ ಶಪಿಸ್ತಾ, ಮುಟ್ಟುನಿಂತ ಹೆಂಗಸಿನ ಹಾಗೆ ವಟಗುಟ್ಟುತ್ತ ನಿಂತಿದೆ. ಇಂಥಾ ನಗರವಲ್ಲದ ನಗರಕ್ಕೆ ಸೈಕಲ್ಲು ತುಳ್ಕೊಂಡು ಹೋದ ಅಣ್ಣ, ನೆಟ್ಟಾನೇರ ಮನೆಗೆ ಬಂದನಾ? ಇಲ್ಲ. ಅಂವ ಸುತ್ತಾಡಿ ಬಂದು ಬಾಗಿಲು ತಟ್ಟೋ ಹೊತ್ತಿಗೆ ಒಂದೂವರೆ ದಶಕದ ಹಿಂದಿನ ರಾತ್ರಿ ಒಂಭತ್ತು ಗಂಟೆ! ಹಾಗೆ ಬಂದವನ ಮೈ-ಕೈ ಎಲ್ಲ ಕೆಸರು ಕೆಸರು. ಮುಖ-ಮೂತಿ ತರಚು. ‘ತೆಗ್ದಾ ನನ್ ಮಗ ಮರ್ಯಾದೆಯ. ಯಾರ್ ಹತ್ರವೋ ಕಿತ್ತಾಡ್ಕಂಡು ಬಂದಾನ್ನೋಡು…’ ಅಣ್ಣನ ಗಾಯಕ್ಕೆ ಅಪ್ಪನ ಉಪ್ಪು. ತಗೋ! ಶುರುವಾಯ್ತು ಹೈದರಾಲಿ ಯುದ್ಧ!! ಅಮ್ಮ, ವೀರಮ್ಮಾಜಿಯ ಹಾಗೆ ನಡುವೆ ನುಗ್ಗಿ, ಅಪ್ಪನ ಬಲಕ್ಕೆ ಸೋತು ಹೈರಾಣಾದಳು.
ವೀರಮ್ಮಾಜಿ, ಕೆಳದಿ ಸಂಸ್ಥಾನದ ಕೊನೆಯ ರಾಣಿ. ಹೈದರಾಲಿಯನ್ನ ಧೈರ್ಯದಿಂದ ಎದುರಿಸಿ, ಕೊನೆಗೆ ಕೌಲೇದುರ್ಗದ ಕೋಟೆಯಲ್ಲಿ ರಕ್ಷಣೆಯಲ್ಲಿ ಆಶ್ರಯ ಪಡೆದಿದ್ದಳು. ಹೈದರ್ ಆ ಕೋಟೆಯನ್ನ ವಶಪಡಿಸಿಕೊಂಡಿದ್ದು ಅವಳಿಂದ್ಲೇ. ಇವಳಿಗೂ ಹಿಂದೆ, ಕೆಳದಿಯರಾಣಿ ಚೆನ್ನಮ್ಮಾಜಿ ಇದೇ ಕೋಟೆಯಲ್ಲಿಯೇ ಪಟ್ಟಾಭಿಷಿಕ್ತಳಾಗಿದ್ದಳು. ಉಧೋ ಅಂತ ನಡೆದೂ ನಡೆದೂ ದುರ್ಗ ಹತ್ತುತ್ತ ಎಂಥದೋ ಸಾಹಸ ಮಾಡುತ್ತಿದ್ದೇವನ್ನೋ ಹಮ್ಮಿಗೆ ಬಿದ್ದಿದ್ದ ನಮಗೆ, ಇದೇ ಕಾಡುಕೋಟೆಯೊಳಗೆ ಖಡ್ಗ ಹಿಡಿದು ಕಾದಾಡಿದ ಹೆಣ್ಣುಮಕ್ಕಳ ಕಥೆ ಕೇಳಿ ಮುಖ ಮುಚ್ಚಿಕೊಳ್ಳುವಷ್ಟು ನಾಚಿಕೆಯಾಯ್ತು. ಇದರಿಂದ ಇನ್ನೂ ಬೀಗಿದ ಅಯ್ಯ, ಅವರ ಹೋರಾಟದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಟ್ಟರು.
ಹಾಗೆ ಅವತ್ತು ಅಣ್ಣ ರಗಳೆ ಎಬ್ಬಿಸಿ ಹೋಗಿಬಂದಿದ್ದನಲ್ಲ, ಬಂದು ಬಯ್ಸಿಕೊಂಡವ ಹಾಸಿಗೆ ಮೇಲೆ ಕುಂತು ಉಡಾಫೆ ಕಣ್ಣು ಎಸೀತಾ ಹೇಳಿದ್ದ. ಹೆಂಗೆ ಛಾಕಾಛಕಾ ಹತ್ತಿಳಿದ್ವಿ ಗೊತ್ತಾ ದುರ್ಗಾನ? ಕ್ರಿಕೆಟ್ಟಿನ ನೆವದಲ್ಲಿ ಹಾಳು ಹುಡುಗರು ನಿಧಿ ಹುಡುಕಲಿಕ್ಕೆ ಹೋಗಿದ್ದರು!
ಇವತ್ತಿಗೂ ನಗರದಲ್ಲಿ ಮನೆ ಕಟ್ಟುವಾಗ, ಬಾವಿ ತೋಡುವಾಗ ಬಂಗಾರ ಸಿಗುತ್ತಲೇ ಇರತ್ತಂತೆ. ಹಳೆ ಮನೆ ಗೋಡೇಲಿ, ಫೌಂಡೇಷನ್ನಲ್ಲಿ ಚಿನ್ನದ ನಾಣ್ಯ ಮುಚ್ಚಿಡ್ತಿದ್ದರಂತೆ! ಕೇಳಿದ್ದಕ್ಕೆ ಅಯ್ಯ ನಕ್ಕರು. ಅಷ್ಟೇ.
ಈ ಕೌಲೇ ದುರ್ಗ ಇರೋದು ತೀರ್ಥಹಳ್ಳಿಯಿಂದ ೨೦ ಕಿಲೋಮೀಟರು ದೂರದಲ್ಲಿ. ಸಹಜವಾಗೇ ದುರ್ಗಮವಾದ, ಕಡಿದಾದ ಬೆಟ್ಟಗುಡ್ಡಗಳ ಸ್ಥಳ ಇದು. ಈ ದುರ್ಗದ ಕೆಳಗಿರೋ ’ಕೌಲೆ’ ಅನ್ನುವ ಹಳ್ಳಿಯಿಂದಾಗಿಯೇ ಅದಕ್ಕೆ ಕೌಲೇದುರ್ಗ ಅನ್ನೋ ಹೆಸರು ಬಂದಿದ್ದು. ಪುರಾಣೇತಿಹಾಸದ ಕಾಲದಲ್ಲಿ ಇಲ್ಲಿನ ಅರಣ್ಯಗಳನ್ನ ’ಕಾಮ್ಯಕ ವನ’ ಅಂತ ಕರೆಯಲಾಗ್ತಿತ್ತಂತೆ. ಅಂದಹಾಗೆ, ಕೌಲೇದುರ್ಗವನ್ನ ಕೆಲವು ಶಾಸನಗಳಲ್ಲಿ ’ಭುವನಗಿರಿದುರ್ಗ’ ಅಂತಲೂ ಕರೆಯಲಾಗಿದೆ. ಇದು, ಕೆಳದಿಯ ಅರಸರು ಇಟ್ಟ ಹೆಸರು.
ಅಂದ ಹಾಗೆ, ಮೊದಲ ಬಾರಿಗೆ ಕೌಲೇದುರ್ಗದ ಮೇಲೊಂದು ಕೋಟೆ ಕಟ್ಟಿಸಿದ್ದು ಬೆಳಗುತ್ತಿ ನಾಡಿನ ಪಾಳೇಗಾರರು. ನಂತರ ಅದು ಕೌಲೆ ಗ್ರಾಮಾಧಿಕಾರಿಗಳಾದ ತೊಲೆತಮ್ಮ-ಮುಂಡಿಗೆ ತಮ್ಮ ಅನ್ನುವ ಸಹೋದರ ಸ್ವಾಧೀನಕ್ಕೆ ಬಂದು, ಅವರು ಕೋಟೆಯನ್ನ ಮತ್ತಷ್ಟು ಭದ್ರಪಡಿಸಿದರು. ಇದು, ಪಾಳೇಗಾರರಿಂದ ವಿಜಯನಗರದ ಕೈಗೆ, ಅವರ ನಂತರದ ಅರಾಜಕತೆಯ ಕಾಲದಲ್ಲಿ ಕೆಳದಿ ಅರಸರ ಕೈಗೆ, ಅವರಿಂದ ಹೈದರನ ವಶಕ್ಕೆ, ಅವನ ಮಗ ಟಿಪ್ಪುವಿನಿಂದ ಆಂಗ್ಲರ ತೆಕ್ಕೆಗೆ ದಾಟಿ ದಾಟಿ, ಭಾರತದೊಡನೆ ತಾನೂ ಸ್ವತಂತ್ರವಾಯ್ತು.
ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು. ಸುರಕ್ಷತೆ ಮಾತ್ರವಲ್ಲ ನಿರ್ಮಾಣದ ದೃಷ್ಟಿಯಿಂದಲೂ ಭರ್ಜರಿಯಾಗಿ ಕಾಣುತ್ತದೆ ಇದು. ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ. ದುರ್ಗದ ಬೆಟ್ಟಕ್ಕೆ ಹೋಗುವಾಗ ನಮಗೆ ಮೊದಲು ಸಿಗೋದು ಮಹಾಮಹತ್ತಿನ ಮಠ. ಕೌಲೇದುರ್ಗದ ಇತಿಹಾಸಕ್ಕೂ, ಮಠಕ್ಕೂ , ಕೆಳದಿ ಸಂಸ್ಥಾನಕ್ಕೂ ಬಹಳ ಹಿಂದಿನ ನಂಟು.
ದುರ್ಗದ ಕಥೆ ಹೇಳೋದೆಂದರೆ, ಮಹತ್ತಿನ ಮಠದವರಿಗೆ ಎಲ್ಲಿಲ್ಲದ ಹುರುಪು. ಅಲ್ಲಿನ ಸ್ವಾಮೀಜಿ, ಕೌಲೇದುರ್ಗದ ಇತಿಹಾಸದ ಮೇಲೆ ಬೆಳಕುಚೆಲ್ಲುವಂಥ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ತಿರ್ತಾರೆ.ಈ ಮಠ ದಾಟಿ ಮುಂದೆ ಬಂದರೆ, ಗ್ರಾಮದ ಸುತ್ತ ಇರೋ ರಕ್ಷಣಾಗೋಡೆಗಳನ್ನ ನೋಡಬಹುದು. ಇವು ಕೂಡ ಈಗಲೋ ಆಗಲೋ ಅಂತ ಮೃತ್ಯುಂಜಯ ಜಪ ಮಾಡ್ತಾ ತಮ್ಮ ಪಾಳಿಗೆ ಕಾದು ಕುಂತಿವೆ. ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆಮಳೆಗೆ ಸವಾಲು ಹಾಕೋಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ.
ಇಲ್ಲಿಂದ ಮುಂದೆ, ಉರುಟು ಕಲ್ಲುಗಳ ಏರುದಾರಿ. ಹೀಗೇ ಹತ್ತುತ್ತ ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಬಂದರೆ, ಕೋಟೆಯ ಮೊದಲ ಸುತ್ತಿನ ಹೆಬ್ಬಾಗಿಲು ಬಾಯಿ ಕಳ್ಕೊಂಡು ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತೆ.
ಈ ಹೆಬ್ಬಾಗಿಲ ಮುಂದೊಂದು ಜಗಲಿ, ಕಾವಲುಗಾರರ ಗೂಡು. ಹೀಗೇ… ಒಂದು, ಎರಡು, ಮೂರು, ನಾಲ್ಕು, ಐದನೇ ಸುತ್ತಿನವರೆಗೂ ತಲೆ ಎತ್ತಿ ನಿಂತಿರುವ ಹೆಬ್ಬಾಗಿಲುಗಳು. ಈ ಕೋಟೆ ಕೈಚಾಚಿ ನಿಂತ ಹಾದಿಯುದ್ದಕ್ಕೂ ದಟ್ಟ ಕಾಡು, ಹಚ್ಚ ಹಸಿರು. ಇದರ ನಡುವಲ್ಲಿ ಕುದುರೆ, ಆನೆ, ಪದಾತಿದಳಗಳಿಗೆ ಸಾಗಲು ಸುಲಭವಾಗುವಂತೆ ದುಂಡುಕಲ್ಲಿನ ಏರು ರಸ್ತೆ.
ಮೂರನೇ ಸುತ್ತಿನ ಹೆಬ್ಬಾಗಿಲ ಮುಂದೊಂದು ನಗಾರಿ ಕಟ್ಟೆ. ಆಗೆಲ್ಲ ಯುದ್ಧಕ್ಕೆ ಮುಂಚೆ, ಅಥವಾ ಅಪಾಯ ಸೂಚನೆ ನೀಡಲಿಕ್ಕಾಗಿ ನಗಾರಿ ಬಡಿತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು, ನಾಲ್ಕನೇ ಸುತ್ತಿನ ನಂತರ ಕೊಂಚ ಸುಗಮ ಹಾದಿ. ಮೂರು ಮತ್ತು ನಾಲ್ಕನೇ ಸುತ್ತುಗಳ ನಡುವೆ ಒಂದಷ್ಟು ದೂರ ಮೆಟ್ಟಿಲುಗಳೂ ಇವೆ.ಐದನೇ ಸುತ್ತಿನ ಹೆಬ್ಬಾಗಿಲು ದಾಟಿ ಬಂದ್ರೆ, ಸೀದಾ ಅರಮನೆ ಅಂಗಳದಲ್ಲಿ ಬಂದು ನಿಲ್ತೀವಿ. ಈ ಅರಮನೆಯ ಹತ್ತಿರವೇ ಒಂದು ತೋಪುಖಾನೆ ಇದೆ. ಬಲ ಭಾಗದಲ್ಲಿ ಸ್ವಲ್ಪ ಮೇಲೇರಿ ಹೋದ್ರೆ, ಶಿಖರೇಶ್ವರ ದೇವಸ್ಥಾನ ಸಿಗುತ್ತೆ. ಇಲ್ಲಿಂದ ಸೂರ್ಯಾಸ್ತ ನೋಡಲಿಕ್ಕೆ ಬಲು ಸೊಗಸು. ಹೀಗೇ ಇನ್ನಷ್ಟು ದೇವಾಲಯಗಳನ್ನ ನಾವು ಕೋಟೆಯುದ್ದಕ್ಕೂ ನೋಡಬಹುದು.
ಆದ್ರೆ, ಇಷ್ಟೆಲ್ಲ ನಿರ್ಮಾಣಗಳಾಗಿದ್ದು ಮೂಲ ನಿರ್ಮಾಣಕಾರರಿಂದಲ್ಲ, ಕೆಳದಿಯ ಅರಸರಿಂದ. ಅದರಲ್ಲೂ ಹದಿನಾರನೆಯ ಶತಮಾನದಲ್ಲಿ ಆಳಿದ ವೆಂಕಟಪ್ಪ ನಾಯಕನಿಂದ. ಈತ, ಪಾಳೆಯಗಾರರಿಂದ ಈ ಕೋಟೆಯನ್ನು ಗೆದ್ದುಕೊಂಡಿದ್ದ. ಅಂದಿನ ಆಳರಸರಿಗೆ ಈ ದುರ್ಗಮ ಸುಂದರಿಯೊಂದು ವೀರಪಣ! ವೆಂಕಟಪ್ಪ ನಾಯಕ ಬಹಳ ಬುದ್ಧಿವಂತ ಅರಸ. ಬೆಟ್ಟದ ಮೇಲೆ ನೀರು ಸಂಗ್ರಹಿಸೋ ತೊಟ್ಟಿಗಳನ್ನ ಕಟ್ಟಿಸಿ, ಅಲ್ಲಿಂದ ಕಾಲುವೆ ಮೂಲಕ ಅದು ದೇವಸ್ಥಾನಕ್ಕೆ, ಅರಮನೆಗೆ ಹರಿದು ಬರುವಂತೆ ಏರ್ಪಾಟು ಮಾಡಿಸಿದ್ದ. ಕೋಟೆಯ ಹೊರಗೆ ಅಗ್ರಹಾರ ಕಟ್ಟಿಸಿ, ಅಲ್ಲೊಂದು ಸಮುದಾಯ ಭವನ ಕಟ್ಟಿಸಿದ್ದ. ಅದೇ ಕಲ್ಯಾಣ ಮಹಲ್. ಇದೊಂದು ಅತಿ ಸುಂದರವಾದ ಕಟ್ಟಡವಾಗಿದ್ದು, ಇಂದು ಅದರ ಅವಶೇಷಗಳನ್ನಷ್ಟೆ ನೋಡಬಹುದು.
ಇವಷ್ಟೇ ಅಲ್ಲದೆ, ಈ ದುರ್ಗದ ಒಡಲಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳು, ಶಾಸನಗಳು, ಸಮಾಧಿಗಳು ಇವೆ. ಕೋಟೆಯ ಹೊರಗೆ, ಅಂದಿನ ಅರಸರು, ಕಿಲ್ಲೇದಾರರು ಕಟ್ಟಿಸಿದ ಕೆರೆಗಳಿದ್ದು, ಅವು ಇಂದಿಗೂ ಉಪಯುಕ್ತವಾಗಿವೆ. ಹೀಗೇ ದುರ್ಗದ ಅಚ್ಚರಿಗಳನ್ನ ನಮ್ಮೆದುರು ಕಾಣಿಸುತ್ತ ನಡೆದ ಅಯ್ಯ, ಅದು ಕೆಳದಿ ಅರಸರ ಟಂಕಸಾಲೆಗೂ ಜಾಗ ನೀಡಿತ್ತೆಂದು ಹೇಳಿದರು. ಆದರೆ, ಅದು ಇಂಥದ್ದೇ ಜಾಗದಲ್ಲಿ ಎಂದೇನೂ ನಿರ್ದಿಷ್ಟವಾಗಿ ತೋರಿಸದೇ, ಆ ಬಗ್ಗೆ ಶಾಸನಗಳಲ್ಲಿ ಹೇಳಲಾಗಿದೆ ಅಂತ ಮಾತಿನ ದಾಖಲೆ ಒದಗಿಸಿದಾಗ, ನಮಗೂ ಇದ್ದಿರಬಹುದು ಅನಿಸಿತು.
ಇಳಿ ಸಂಜೆಯಾಗಿತ್ತು. ನಾವೀಗ ದುರ್ಗದ ತುತ್ತ ತುದಿಯಲ್ಲಿ. ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲ್ಯಾಜಿನಂತೆ ಕಂಡಿತು.ಎಡಕ್ಕೆ ತಿರುಗಿದರೆ, ಉರಿದು, ಉರಿಸಿ, ಬೇಯಿಸಿ ಸಾಕಾದ ಸೂರ್ಯ, ತಣ್ಣಗಾಗಲು ಹವಣಿಸ್ತ ಸಮುದ್ರಕ್ಕೆ ಜಾರಲು ಸಜ್ಜಾಗುತ್ತಿದ್ದ. ಇನ್ನೂ ಅಳಿದುಳಿದ ಕೆಂಪು ಕಕ್ಕುತ್ತಲೇ ಇದ್ದ.
ಆಗುಂಬೆಯಲ್ಲಿ ನಿಂತಾಗ ಖುಶಿ ಕೊಡುವ, ಕವನ ಹುಟ್ಟಿಸುವ ಸೂರ್ಯಾಸ್ತ, ಇಲ್ಲಿ ನೆತ್ತರುಗುಳುತ್ತಿರೋ ಹಾಗೆ ಕಾಣಿಸ್ತಿತ್ತು. ಸೂತಕದ ವಾಸನೆ ಗವ್ವನೆ ಅಡರತೊಡಗಿತು. ಯಾರೋ ಕಳ್ಳು ಕಾಯಿಸಲು ಶುರುವಿಟ್ಟಿದ್ದರು. ಕಥೆ ಹೇಳುತ್ತ ಗಕ್ಕನೆ ನಿಂತ ಅಯ್ಯ, ಸೇವಕರ ವಂಚನೆಯಿಂದ ಸತ್ತ ಕೆಳದಿಯ ಸೋಮಶೇಖರನಾಯಕನ ಪುನರವತಾರದ ಹಾಗೆ, ಏನನ್ನೋ ನೆನೆಯುತ್ತ, ಕಲ್ಲುಕಲ್ಲನ್ನೂ ತಬ್ಬಿಕೊಳ್ಳುತ್ತ, ಗೊಣಗುತ್ತ ಉಳಿದುಬಿಟ್ಟರು.
ಅರೆ! ಅಪ್ಪ ಇವತ್ತು ನಗರಕ್ಕೆ ಹೋಗ್ತೀವಿ ಅಂದಾಗ ಹೆಣಾ ಹೊರಲಿಕ್ಕಾ? ಅಂತ ಕೇಳಲೇ ಇಲ್ಲ! ಆದರೂ ಮನಸ್ಸು ಹೆಣಭಾರವಾಗಿತ್ತು. ದುರ್ಗದ ಭವ್ಯತೆಯ ಹಿಂದಿನ ನರಳುವಿಕೆಗಳು ಕಥೆಯಾಗಿ ಅಲ್ಲಿ ಕುಂತುಬಿಟ್ಟಿತ್ತು.
ಕೌಲೇ ದುರ್ಗಕ್ಕೆ ಹೋಗುವವರಿಗೆ ಸೂಚನೆ-ಈ ಕವಲೇ ದುರ್ಗಕ್ಕೆ ಹೋಗೋದು ಬಹಳ ಸುಲಭ. ರಾಜ್ಯದ ಬಹುತೇಕ ಪ್ರಮುಖ ನಗರಗಳಿಂದ ಶಿವಮೊಗ್ಗೆಗೆ ಬಸ್ ಸೌಕರ್ಯವಿದ್ದೇ ಇದೆ. ಅಲ್ಲಿಂದ ತೀರ್ಥಹಳ್ಳಿಗೆ ಕೇವಲ ೬೦ ಕಿಲೋಮೀಟರು. ಅಲ್ಲಿಂದ ಕವಲೇದುರ್ಗಕ್ಕೆ ಕೇವಲ ೧೬ ಕಿಲೋಮೀಟರು. ಹದಿನೈದಿಪ್ಪತ್ತು ನಿಮಿಷದ ಪ್ರಯಾಣವಷ್ಟೆ. ತೀರ್ಥಹಳ್ಳಿಯಿಂದ ಗಂಟೆಗೊಂದರಂತೆ ಬಸ್ಸುಗಳೂ ದೊರೆಯುತ್ತವೆ.ಸಮುದ್ರ ಮಟ್ಟದಿಂದ ೫೦೫೬ ಅಡಿ ಎತ್ತರವಿರುವ ದುರ್ಗಕ್ಕೆ ಚಳಿಗಾಲದಲ್ಲಿ ಭೇಟಿಕೊಡುವವರು ಸೂಕ್ತ ವ್ಯವಸ್ಥೆಯೊಂದಿಗೆ ಹೊರಡುವುದೊಳಿತು. ಮಳೆಗಾಲದಲ್ಲಿ ಚಾರಣದ ಸಾಹಸ ಬೇಡ ಅನ್ನೋದು ಸಲಹೆ. ಅದನ್ನ ಮೀರೋದು ಚಾರಣಿಗರ ಹುಮ್ಮಸ್ಸು! ಅಂದಹಾಗೆ, ಕವಲೇದುರ್ಗ ಒಂದು ರುದ್ರ ರಮಣೀಯ ಸ್ಥಳ. ಗುಂಪಾಗಿ ಹೋಗುವುದು ಉಚಿತ. ದಯವಿಟ್ಟು ತಿಂಡಿ ತೀರ್ಥ (ಎಲ್ಲ ಬಗೆಯ) ಕೊಂಡೊಯ್ದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಅಲ್ಲೇ ಬಿಸುಟು ತಣ್ಣಗೆ ಮಲಗಿರುವ ನಿಸರ್ಗಕ್ಕೆ ಧಕ್ಕೆ ತರಬಾರದಾಗಿ ವಿನಂತಿ.
(ಚಿತ್ರಗಳು-ವಿನಾಯಕ ಗುಜ್ಜಾರ್, ತೀರ್ಥಹಳ್ಳಿ)
Blog at WordPress.com. | Theme: Pool by Borja Fernandez.
Entries and comments feeds.