ಕಥೆಯ ದಿನದಲ್ಲೊಂದು ಬೆಳಗು

January 8, 2009 at 10:05 am | In ಕಥೆ ಥರ... | 3 Comments
Tags: ,

ಕೌಸಲ್ಯಾ ಸುಪ್ರಜಾ ರಾಮ
ಪೂರ್ವಾ ಸಂಧ್ಯಾ ಪ್ರವರ್ತತೇ…
ಬಡ್ಕೊಳ್ತಲೇ ಇದೆ ಅಲರಾಮು. ಈ ಹೊಸ ಹ್ಯಾಂಡ್ ಸೆಟ್ ಕೊಂಡಾಗಿಂದ ಇದನ್ನೇ ಅಲರಾಮ್ ಟೋನ್ ಮಾಡ್ಕೊಂಡಿದಾನೆ. ಬೆಳಬೆಳಗಿನ ಸುಪ್ರಭಾತ ಕೇಳುವಾಗೆಲ್ಲ ಅವನಿಗೆ ಐದು ಗಂಟೆಗೆ ಎದ್ದು ಬಾಗಿಲಿಗೆ ನೀರು ಹಾಕ್ತಿದ್ದ ಅಮ್ಮನ ನೆನಪು. ಇತ್ತೀಚೆಗೆ ಅವನು ಅಮ್ಮನ್ನ ನೆನೆಸ್ಕೊಳ್ಳೋದು ಜಾಸ್ತಿಯಾಗಿದೆ.

ಅಲಾರಮ್ಮು ಸ್ನೂಜ್ ಮಾಡಿ ಮತ್ತೈದು ನಿಮಿಷ ಹೊರಳಾಡಿದವನು ಏಳಲೇಬೇಕಾದ ಅನಿವಾರ್‍ಯತೆಗೆ ಗೊಣಗುತ್ತಲೇ ಎದ್ದು ಕುಂತ. ಚಳಿಗಾಲ ಬೇರೆ. ತಾನೆದ್ದ ಅದೆಷ್ಟೋ ಹೊತ್ತಿನ ಮೇಲೆ ಕಾಣಿಸ್ಕೊಳ್ತಾನೆ ಸೂರ್ಯ. ಸೂರ್ಯನ ಮೇಲೆ ಹರಿಹಾಯುತ್ತ ಬಾತ್ ರೂಮಿಗೆ ಹೋದವ ಕನ್ನಡಿ ನೋಡಿ ತಲೆ ಚಚ್ಚಿಕೊಂಡ. ಗಲ್ಲದ ಮೇಲೆ ನಾಲ್ಕು ಕೂದಲು ಕಾಣುವ ಹಾಗಿಲ್ಲ, ಬಾಸ್ ಅನಿಸ್ಕೊಂಡವ ಭಾಗವತ ಬೋಧನೆ ಶುರು ಮಾಡಿಬಿಡ್ತಾನೆ!
ಪರಪರನೆ ಕೆನ್ನೆ ಕೆರಕೊಂಡು, ಹಲ್ಲುಜ್ಜಿ ಹೊರಬಂದ. ನೀರು ಕಾಯುವುದರೊಳಗೆ ತಿಂಡಿ ಮಾಡ್ಕೊಳ್ಳಬೇಕು. ಅಮ್ಮ ರವೆ ಇಡ್ಲಿಯ ಮಿಕ್ಸ್ ಮಾಡಿ ಕಳ್ಸಿದಾಳೆ. ಮೊಸರಿಗೆ ಹಾಕಿ ಕಲಸಿ ಬೇಯಿಸ್ಕೊಂಡರಾಯ್ತು.

ಡಬ್ಬಿಯ ಮುಚ್ಚಳ ತೆಗೆದವನ ಮೂಗಿಗೆ ಕರಿಬೇವಿನ ಘಮ ಮುತ್ತಿಕ್ಕಿತು. ಹದವಾಗಿ ಹುರಿದ ಗೋಡಂಬಿ ಚೂರುಗಳು, ಕಡಲೆಬೇಳೆ, ಒಣಮೆಣಸು… ಅಮ್ಮ ಶ್ರದ್ಧೆಯಿಂದ ಮಾಡಿ ಒತ್ತೊತ್ತಿ ತುಂಬಿ ಕಳಿಸಿದ್ದಳು, ಅಪ್ಪನ ಕಣ್ತಪ್ಪಿಸಿ.
ಅಪ್ಪ! ದೂರದೂರಲ್ಲಿ ನಿಂತೂ ಅವಂಗೆ ಕಾಲ್ನಡುಕ. ಅಪ್ಪನಿಗಿಂತ ಎತ್ತರ ಬೆಳೆದಿದ್ದಾನೆ. ಒಂದೆರಡು ಸಾರ್ತಿ ಇಬ್ಬರಿಗೂ ಹೊಯ್ ಕೈ ಕೂಡ ಆಗಿಬಿಟ್ಟಿದೆ. ಆದರೂ, ಅಪ್ಪ ಅಂದರೆ ನಡುಕ.

ಇದೇ ಅಪ್ಪ ತನ್ನ ಡಿಗ್ರಿ ಮುಗಿದು ಒಂದು ತಿಂಗಳು ಮನೇಲಿ ಕುಂತಗ ಹಂಗಿಸ್ತಿದ್ದುದು. ತಾನು ಎಲೆಕ್ಟ್ರಿಕ್ ಕೆಲಸ ಹಿಡಿದು ದಾರಿಯ ಲೈಟುಕಂಬ ಹತ್ತಿ ರಿಪೇರಿ ಮಾಡ್ತಿದ್ದಾಗ ನೋಡಿ ಕೆಂಡಾಮಂಡಲವಾಗಿ ಕೂಗಾಡಿದ್ದುದು. ಅವನ ಮರ್ಯಾದೆ ಬೀದೀಲಿ ಹರಾಜಾಗಿತ್ತಂತೆ ಅವತ್ತು! ಇದೇ ಅಪ್ಪನೇ ತಾನು ದೋಸೆ ತಿನ್ನುವಾಗ ಹೊರಗೆ ಕುಂತು ಲೆಕ್ಕವಿಡುತ್ತಿದ್ದುದು. ಕೂತು ನಿಂತಲ್ಲೆಲ್ಲ ತಪ್ಪು ಹುಡುಹುಡುಕಿ ಹೈರಾಣು ಮಾಡ್ತಿದ್ದುದು ಇದೇ ಅಪ್ಪನೇ. ಅವನೇ ತನ್ನ ವಿಷಯ ತೆಗೆದು ಅಮ್ಮನ ಗಂಟಲಲ್ಲಿ ನೀರೂ ಇಳಿಯದ ಹಾಗೆ ಕಾಡ್ತಿದ್ದುದು.
ಇಷ್ಟೆಲ್ಲಾ ಆದರೂ ಈಗ ಅವನಿಗೆ ಅಪ್ಪನ ಮೇಲೇನೂ ಕೋಪವಿಲ್ಲ. ಅಂವ ಅಷ್ಟೆಲ್ಲ ಮಾಡದೆ ಹೋಗಿದ್ದರೆ ತಾನಾದರೂ ಮನೆಬಿಟ್ಟು ಓಡಿಬರ್ತಿದ್ದನಾ? ಇವತ್ತು ಐರನ್ ಮಾಡಿದ ಬಟ್ಟೆ ತೊಟ್ಟು, ಶೂ ಹಾಕಿ, ಬೈಕಲ್ಲಿ ಕೆಲಸಕ್ಕೆ ಹೋಗ್ತಿದ್ದನಾ?

ಬೈಕು! ಅವನು ಮನೆಬಿಟ್ಟು ಓಡಿಬರಲಿಕ್ಕೆ ಕಾರಣ ಅಪ್ಪ ಮಾತ್ರ ಅಲ್ಲ. ಅವಳೂ ಕೂಡ. ಎಲೆಕ್ಟ್ರಿಕ್ ಕೆಲಸ ಕೈಹತ್ತಿ ನಾಲ್ಕು ಕಾಸಾದಾಗ ಚೂಡಿದಾರ ಕೊಡಿಸಿ ಮದುವೆಯ ಮಾತಾಡಿದ್ದ. “ಮನೇಲಿ ಬಂದು ಏನೂಂತ ಕೇಳ್ತೀಯೋ? ನಿನ್ ಹತ್ರ ಒಂದು ಬೈಕೂ ಇಲ್ಲ!?” ಅಂದುಬಿಟ್ಟಿದ್ದಳು. ಇತ್ತ, ಜೀವಮಾನವಿಡೀ ದುಡಿದು ಕೂಡಿಟ್ಟ ಹಣದಲ್ಲಿ ಚೆಂದದ ಮನೆ ಕಟ್ಟಿಕೊಂಡಿದ್ದ ಅಪ್ಪ, “ಇದೇ ಊರಲ್ಲಿದ್ರೆ ನಿಂಗ್ಯಾರೂ ಹೆಣ್ಣು ಕೊಡೋದಿಲ್ಲ ತಿಳ್ಕಾ” ಅಂತ ಪ್ರವಾದ ನುಡಿದಿದ್ದ. ಒಬ್ಬೊಬ್ಬರೇ ಕಸಿನ್ನುಗಳ ಮದುವೆಯಾಗುತ್ತಿದ್ದ ಹಾಗೆ ಅಮ್ಮನೂ ಚಡಪಡಿಸತೊದಗಿದ್ದಳು. ಇಂವ ಅವರೆಲ್ಲರಿಗಿಂತ ಏಳೆಂಟು ವರ್ಷ ಚಿಕ್ಕವನೆಂದು ಯಾರೂ ಯೋಚಿಸಲೇ ಇಲ್ಲ!
ಹಾಗಂತ ಅವನಮ್ಮನಿಗೆ ಗೊತ್ತಿದೆ… ಈಗಲೂ ಅಂವ ಮನೆಗೆ ಹೋದಾಗಲೊಮ್ಮೆ ತಲೆ ನೇವರಿಸಿ ಗಲ್ಲ ಹಿಂಡುತ್ತಾಳೆ. ಇವಂಗೇನೂ ಅದರಿಂದ ಸಂಕೋಚವಾಗೋದಿಲ್ಲ. ಊರಲ್ಲಿದ್ದಷ್ಟೂ ದಿನ ‘ಅಮ್ಮನ ಬಾಲ’ ಅಂತಲೇ ಕರೆಸಿಕೊಳ್ತಿದ್ದನಲ್ಲವೆ?

ಸ್ಟೌವ್ ಆರಿಸಿ ಅಮ್ಮನ ನೆನಪಲ್ಲಿ ಕಣ್ಣೊರೆಸ್ಕೊಂಡವ ಸ್ನಾನ ಮುಗಿಸಿ ಬಂದ. ಹಿತವಾದ ಘಮ ಬೀರುತ್ತ ಇಡ್ಲಿ ಹಬೆಯಾಡುತ್ತಿತ್ತು. ತಿಂದು ಹೊರಟ. ವಾಪಸು ಬರುವ ಹೊತ್ತಿಗೆ ಒಂಟಿತನ ಬಾಗಿಲಲ್ಲೆ ಕಾದು ನಿಂತಿರುತ್ತದೆ! ನೆನೆಸಿಕೊಂಡು ನಕ್ಕ. ‘ಬೈಕೂ ಇಲ್ವಲ್ಲೋ?’ ಅಂದಿದ್ದ ಹುಡುಗಿಯ ಗಂಡನ ಬಳಿ ಕಾರಿದೆ. ತಾನು ಕಾರ್ ಕೊಳ್ಳುವುದು ಯಾವಾಗಲೋ? ಚಿಂತಿಸುತ್ತ ಬೈಕ್ ಸ್ಟಾರ್ಟ್ ಮಾಡಿದ.
‘ಅಮ್ಮಾ, ನಿನ್ನ ಎದೆಯಾಳದಲ್ಲಿ…’ ಫೋನ್ ರಿಂಗಾಯ್ತು. ಟೋನಿನಲ್ಲೇ ಇದು ಅಮ್ಮನ ಕಾಲ್ ಎಂದು ಪತ್ತೆಹಚ್ಚಿದವ ರಿಸೀವ್ ಮಾಡಿದ.
ಆಚೆಯಿಂದ ಅಮ್ಮ ಸೊರಗುಟ್ಟುತ್ತಿದ್ದಳು. “ಅಪ್ಪಂಗೆ ಸೀರಿಯಸ್ ಕಣೋ, ಅಡ್ಮಿಟ್ ಮಾಡಿದೀನಿ” ಅಂದು ಬಿಕ್ಕತೊಡಗಿದಳು….

ಹೀಗೊಂದು ಆಟದ ಪ್ರಸಂಗ…

December 4, 2008 at 8:47 am | In ತಂಗಳು | Leave a Comment
Tags:

 

ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ!
ನಾರೀ ಮಣಿಯೆ ಬಾರೇಮಣಿಯೆ ಬಾರೇಬಾ ಬಾರೇ

ಛೀ! ಪಾಪಿ!! ಸರಿ ದೂರ

ಬಾ ಬಾರೇಮುಖ ತೋರೇ

ದುರುಳ, ಸರಿ ದೂರ…!

ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತಅಬ್ಬ!
ಅವನೆದುರು ಸ್ತ್ರೀ ವೇಷದ ದಾಮೋದರ- ದಾಮೂ ಹುದುಗಿಹೋದಂತಿತ್ತು
.
ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ ವೇಷಕ್ಕೆ ಹೇಳಿ ಮಾಡಿಸಿದ ಸಪೂರ ಸಪೂರ ಕೈಕಾಲು. ಬಳಕು ಮೈಕಟ್ಟು. ಬಿಳಿ ಬಣ್ಣ. ಅವನು ಸೈರಂಧ್ರಿ ಪಾತ್ರ ಕಟ್ಟಿದರೆ ಎಲ್ಲರೂ ಅಂವನ್ನ  ಬಾ ಬಾರೇ…. ಅಂತ ಹಾಡಿ ಛೇಢಿಸೋರೇ. ಅಷ್ಟು ಚೆಂದ.

ಶಾಮ ಪೂಜಾರಿ ಭಾರೀ ರಸಿಕ. ಮೇಳದ ಮಿಕ್ಕವರೆಲ್ಲ ಮನೆ ಮಠ ಅಂತ ಇದ್ದುಕೊಂಡಿದ್ದರೆ, ಶಾಮನಿಗೆ ಊರೆಲ್ಲಾ ಮನೆ- ಮಕ್ಕಳು!
ರಂಗದ ಮೇಲೆ ಭಾರೀ ಕುಣೀತ. ಅವನ ಒಂದೊಂದು ಪಟ್ಟಿಗೂ ದಾಮೂ ಧಸಧಸನೆ ಉಸಿರು ಬಿಡುತ್ತಿದ್ದ. ಬೆವರುಬೆವರಾಗುತ್ತಿದ್ದ.

ನಾರೀ ಮಣಿಯೆ ಬಾರೇ
ಕೀಚಕ ಸೈರಂಧ್ರಿಗೆ ಮರುದಿನ ನರ್ತನ ಶಾಲೆಗೆ ಬರುವಂತೆ ಒತ್ತಾಯಿಸುತ್ತಿದ್ದ
.
ಶಾಮ ದಾಮೂವಿಗೆ ಕೊಟ್ಟಿದ್ದ ದಿನದ ಗಡುವು ಅಂದಿಗೆ ಮುಗಿದಿತ್ತು. ಕುಣಿತದ ತೆವಲಿಗೆ ಬಿದ್ದು, ಮನೆ ಬಿಟ್ಟು ಬಂದಿದ್ದ ದಾಮೂ ಯಾವ ಕಾರಣಕ್ಕೂ ಮನೆಗಂತೂ ಹೋಗುವ ಹಾಗಿರಲಿಲ್ಲ
.
ಶಾಮನ ಕೆಣಕುಗಣ್ಣು, ಅಸಹ್ಯದ ತುಟಿ, ಉಬ್ಬಿದ ಹೊಟ್ಟೆ, ಬೆವರು ನಾತ
….
ಥೂ! ಅಳುವೇ ಬಂತು ದಾಮುವಿಗೆ ರಂಗದ ಮೇಲೂ.

ನನ್ನ ಐವರು ಪತಿಯರು ದೇವ ಗಂಧರ್ವರು. ಅವರಿಗೆ ಹೇಳಿದರೇ….
ಸೈರಂಧ್ರಿ ರೋಪು ಹೊಡೀತಿದ್ದಳು
.
ಅವಳೊಳಗಿದ್ದ ದಾಮುವಿನ ತೊಳ್ಳೆ ನಡಗುತ್ತಿತ್ತು
.
ಗಂಡಸು ಗಂಡಸೊಂದಿಗೇ…! ಇಶ್ಶೀ ಅದೆಂಥದು? ಅದು ಹೇಗೆ
…?
ಅಂತೆಲ್ಲ ವಾಕರಿಸಿಕೊಂಡ
.
ಭೀಮ ಸೈರಂಧ್ರಿಯನ್ನು ಸಂತೈಸುತ್ತಿದ್ದದಾಮುವಿಗೆ ಯಾರು ದಿಕ್ಕು
?
ಶಾಮ ಜೊಲ್ಲು ಸುರಿಸುತ್ತಿದ್ದ
.
ಬೆಳಗು ಹರಿಯೋದೇ ಬೇಡಹೀಗೇ, ಇಲ್ಲೇ, ರಂಗದ ಮೇಲೇ

ಥೈಯ್ಯ ಥೈಯ್ಯ ಥೈಯ್ಯ
….
ಮಂಗಳ. ಇನ್ನೇನು ಆಟ ಮುಗೀತು.

ದಾಮೂಗೆ ಅಮಂಗಳ. ಈಗ ಶುರುವಾಗಲಿದೆ ಅವನ ಪಾಲಿನ ದೊಡ್ಡಾಟ
ಕೀಚಕ ಭೀಮನ ಕೈಲಿ ನೆಗೆದುಬಿದ್ದಿದ್ದ. ಶಾಮ- ದಾಮುವಿನ ಟೆಂಟಲ್ಲಿ ನಿಂತಿದ್ದ
!
ನಿಶ್ಚಯ ಮಾಡಿಯೇ ಮೂಲೆಯಲ್ಲಿ ಕುಂತಿದ್ದ ದಾಮೂ ಧಿಗ್ಗಂತ ನೆಗೆದು ಶಾಮೂ ಕುತ್ತಿಗೆ ಗಿರಿದು ಹಿಡಿದ
.
ಶಾಮನ ತಲೆ ತಿರುಗಹತ್ತಿತು. ಅಂವ ಕಕ್ಕಾಬಿಕ್ಕಿಯಾಗಿ ನೋಡ್ತಲೇ ವಿಲವಿಲಾಂತ ಬಿದ್ದವ ದಾಮೂ.

ಛೀದುರುಳ. ನನ್ನ ಪತಿಯರು ದೇವ- ಗಂಧರ್ವರು!- ಅಂತೆಲ್ಲ ವಟವಟಿಸ್ತಿದ್ದ. ಭಿಮ ಬರಲಿಲ್ಲ? ಹಾಂ? ವಿಷ ನುಂಗಿದೆ, ವಿಷ!
ಹಹ್ಹಾ ನಗು ನಗಲು ಹೋದ ದಾಮೂ. ಬಾಯಲ್ಲಿ ಬುರಬುರ ನೊರೆ
.
ಚಾಪೆಯ ಬದಿಯಲ್ಲಿ ವಿಷದ ಶೀಶೆ.

ನೂರು ಚಂಡೆ ಬಡಿದ ಸದ್ದುಶಾಮನ ಗಂಟಲಿನದ್ದು!
ಮೇಳಕ್ಕೆ ಮೇಳವನ್ನೇ ಎಬ್ಬಿಸಿದ. ಸಾರಾಯಿ ಮತ್ತು ಸರ್ರಂತ ಇಳಿದಿತ್ತು.

ಶಾಮ ಎಚ್ಚೆತ್ತ.
ಸರ್ಕಾರಿ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ದಾಮುವಿನ ಪಕ್ಕದಲ್ಲವ ಮೂಸುಂಬಿ ಸುಲಿಯುತ್ತ ಕುಂತಿದ್ದ.

ದಾಮೂ ಸಾಯಲಿಲ್ಲ.
ಶಾಮನೂ ಬದುಕಿದ್ದ
.
ಒಳಗಿನ ಕೀಚಕ ಮಾತ್ರ ಭೀಮ ಕೊಲ್ಲದೇ ನೆಗೆದುಬಿದ್ದಿದ್ದ
.
ಆಟ ಮುಗಿದಿತ್ತು

 (November 22, 2007 at 2:58 am ರಂದು ಪೋಸ್ಟ್ ಮಾಡಿದ್ದ ಹಳೆ ಬರಹ)

 

`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….

December 3, 2008 at 7:53 am | In ತಂಗಳು | 1 Comment
Tags: ,

ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು  ವ್ಯಾಜ್ಯ ಹೂಡಿದ್ದನ್ನ ಅವರುಪರಿಸರದ ಕತೆಯಲ್ಲಿ  ಬರೆದುಕೊಂಡಿದ್ದಾರೆ.

ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರುನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲಅಂತ ಪರಸ್ಪರ ವಿರುದ್ಧಾರ್ಥದ ಮಾತಾಡಿ ತಗೋಬಿಡು ವಾದ ಹೂಡಿದ್ದರು.
ಹೀಗೇ ನನ್ನನ್ನೂ ಒಂದಿಬ್ಬರುನಮ್ಮ ಬಗ್ಗೆ ಬರೆದಿದ್ಯಂತೆ?’ ಅಂತ ವಿಚಾರಿಸಿದ್ದಿದೆ. ಆಗೆಲ್ಲ ನನಗೆ ಮಜವೋ ಮಜ ಅನಿಸತ್ತೆ. ಯಾಕೆಂದರೆ, ನಾನು ಅಂಥದ್ದೇನಾದರೂ ಬರೆದಾಗ ಯಾರುಯಾರೋ ಗುರುತು ಪರಿಚಯ ಇಲ್ಲದವರೆಲ್ಲಇದು ನನ್ನ ಕತೆ.’ ’ಇದು ನನ್ನ ಪರಿಚಿತರೊಬ್ಬರ ಕತೆಅಂದಿರ್ತಾರೆ! ಆಗೆಲ್ಲ ನಾನುಹಂಗಾರೆ ಎಲ್ರ ಮನೆ ಕತೆಯೂ ಒಂದೇಯ. ಎಲ್ರ ಮನೆ ಕಾವಲಿಯೂ ತೂತೇ!” ಅಂತ ನಿಸೂರಾಗೋದಿದೆ
.
ಮ್ಹಿಂಗೆ ಕತೆಯಾಗೋದ್ರಲ್ಲೂ ಒಂದು ಮಜ ಇದೆ. ಆದ್ರೆ, ಕತೆಯ ನಮ್ಮ ಪಾತ್ರ ಅನುಕಂಪ ತರಿಸಬಾರದಷ್ಟೆ. ಕೆಲವು ಸಾರ್ತಿ, ನಾವು ಆಗ ಹೊರಟಿದ್ದೇ ಒಂದು ಕಥೆಯಾದರೆ, ಅದು ಹಬ್ಬಿಕೊಳ್ಳುವ ಪರಿಯೇ ಬೇರೆ ರೀತಿಯದ್ದಾಗಿಬಿಡುತ್ತೆ.

                     the_storyteller

ಹೀಗೊಂದು ಜಾನಪದ ಕತೆಯಿದೆ.
ಒಬ್ಬ ಬ್ರಾಹ್ಮಣ ನದಿಯಲ್ಲಿ ಅರ್ಘ್ಯ ಕೊಟ್ಟು ಆಚಮನ ಮಾಡುವಾಗ ಅವನ ಬಾಯಿಗೊಂದು ಬಿಳಿಯ ಯಾವುದೋ ಹಕ್ಕಿಯ ಸಣ್ಣ ಗರಿ ಹೋಗಿಬಿಡುತ್ತೆ. ಗಂಟಲಲ್ಲಿ ಗುಳುಗುಳು ಆಗಿ ಅಂವ ಕ್ಯಾಕರಿಸಿ ಉಗಿದಾಗ ಗಂಟಲಿಂದ ರೆಕ್ಕೆ ಹೊರ ಬಂದು ಬೀಳುತ್ತೆ. ಗಾಬರಿಯಿಂದ ಅಂವ ಮನೆಗೆ ಬಂದು ಹೆಂಡತಿ ಹತ್ತಿರ, “ಯಾರಿಗೂ ಹೇಳ್ಬೇಡ ಕಣೇ. ಇವತ್ತು ನಾನು ಉಗಿದಾಗ ಗಂಟಲಿಂದ ಬಿಳಿಯ ಪುಟಾಣಿ ರೆಕ್ಕೆ ಹೊರಬಿತ್ತು! ಏನು ಕರ್ಮವೋ, ಕೊಂಚ ಗೋಮೂತ್ರ ತೆಗೆದಿಡು. ಶುದ್ಧಿಯಾಗಿಬಿಡ್ತೀನಿಅಂದ. ಅಂವ ಹೇಳಿದಂತೆ ಮಾಡಿ, ಒಂದು ರಾತ್ರಿಯಿಡೀ ಅವನ ಹೆಂಡತಿ ಗುಟ್ಟು ಬಚ್ಚಿಟ್ಟುಕೊಂಡು ಹೊರಳಾಡಿದಳುಮಾರನೇ ದಿನ ತಡೆಯಲಾರದೆ ನೆರೆ ಮನೆಯವಳ ಬಳಿಯಾರಿಗೂ ಹೇಳಬೇಡ್ರೀ, ನನ್ನ ಗಂಡ ನೆನ್ನೆ ಉಗಿದಾಗ ಅವರ ಗಂಟಲಿಂದ ದೊಡ್ಡ ದೊಡ್ಡ ಕೊಕ್ಕರೆ ರೆಕ್ಕೆಗಳು  ಹೊರಬಂದವಂತೆ!” ಅಂದಳು
!!
ಸೈ. ಪಕ್ಕದ ಮನೆಯವಳೂ ಒಂದು ರಾತ್ರಿ ಹೊರಳಾಡಿ ತನ್ನ ವಾರಗಿತ್ತಿಯ ಹತ್ತಿರ, ಪಕ್ಕದ ಮನೆಯವಳ ಗಂಡ ತುಪ್ಪಿದಾಗ ಒಂದು ಕೊಕ್ಕರೆ ಮರಿ ಹೊರಬಂತಂತೆ!” ಅಂದಳು
.
ಮುಗಿಯಿತು. ಮುಂದೆ ಅದು ದೊಡ್ಡದೊಂದು ಕೊಕ್ಕರೆಯಾಗಿ, ಕೊಕ್ಕರೆ ಹಿಂಡಾಗಿ, ಮತ್ತೆ ಸುತ್ತಿ ಬಳಸಿ ಬ್ರಾಹ್ಮಣನ ಕಿವಿ ತಲುಪುವ ಹೊತ್ತಿಗೆ ಅಂವ ಉಗಿದಾಗ ಗಂಟಲಿಂದ ಕೊಕ್ಕರೆಗಳು ಹಾರಿ ಹಾರಿ ಬರುತ್ತವಂತೆ ಎನ್ನುವವರೆಗೂ ಹರಡಿ ಹೋಗಿತ್ತು
!
ಅದನ್ನು ಕಣ್ಣಾರೆ ಕಾಣಲು ಅವನ ಮನೆ ಮುಂದೆ ಊರ ಜನವೆಲ್ಲ ನೆರೆಯಿತು. ಆದರೆ ಬ್ರಾಹ್ಮಣನಿಂದ ಅಂಥದ್ದೇನೂ ವಿಶೇಷ ನಡೆಯದೇ ಹೋದದ್ದು ಬೇಸರ ತರಿಸಿ, ತಮ್ಮ ತಮ್ಮ ಕತೆಯನ್ನೇ ನೆಚ್ಚಿಕೊಂಡು, ಅದನ್ನೇ ಮೆಲುಕು ಹಾಕುತ್ತ ಹೊರಟುಹೋದರು. ಆವರೆಗೂಕಥಾ ನಾಯಕನಾಗಿ ರೋಚಕತೆಯಿಂದ ಮೆರೆಯುತ್ತಿದ್ದ ಬ್ರಾಹ್ಮಣ, ಸತ್ಯ ಸಂಗತಿ ತಿಳಿಯುತ್ತಲೇ ಸಾಧಾರಣ ವ್ಯಕ್ತಿಯಾಗಿಹೋದ.

ಹೀಗೆ ಕಥೆಯಾಗುವ, ಕತೆಯಾಗಿಸುವ  ಎರಡು ಕ್ಯಟಗರಿಗಳ ನಡುವೆ ಕಥೆ ಕಟ್ಟುವವರದೊಂದು ಕ್ಯಟಗರಿಯಿದೆ. ಅವರ ಕತೆಗೆ ತಳಹದಿಯೇ ಇರದು. ಇದ್ದರೂ, ಅದು ಮೂಲಕ್ಕೆ ಪೂರ್ಣವಾಗಿ ವಿರುದ್ಧವಾಗಿರುತ್ತದೆ.
ಒಮ್ಮೆ ಹೀಗೊಬ್ಬಳು ಹುಡುಗಿ ನನಗೆ ಪರಿಚಯವಾಗಿದ್ದಳು. ನಾಲ್ಕು ದಿನದ ಒಡನಾಟದಲ್ಲಿ ತುಂಬ ಹತ್ತಿರವಾಗಿದ್ದಳು. ಐದನೇ ದಿನ, ’ನಿನ್ನ ನೋಡಿದ್ರೆ ನನ್ನ ಅಕ್ಕನ ನೆನಪಾಗತ್ತೆಅಂತ ಅಳಲು ಶುರುವಿಟ್ಟಳು. ಅವಳ ಅಕ್ಕನಿಗೇನಾಗಿದೆ ಅಂತ ವಿಚಾರಿಸಿದೆ. ಅವಳ ಪ್ರಕಾರ, ಅವಳ ಅಕ್ಕನನ್ನ ಯಾರೋ ಕೊಲೆ ಮಾಡಿದ್ದರು. ಆಮೇಲೆ ಅದನ್ನ ಆತ್ಮಹತ್ಯೆ ಅಂತ ಮುಚ್ಚಿ ಹಾಕಲಾಯ್ತುಅದನ್ನೆಲ್ಲ ಹೇಳಿ, “ಯಾರಿಗೂ ಹೇಳಬೇಡ್ವೇ. ಸಂಕಟ ತಡಿಯೋಕಾಗದೆ ಹೇಳ್ದೆ. ಅವಳು ಸಾಯೋ ದಿನ ನೀ ಹಾಕಿದ ಥರದ್ದೇ ಚೂಡಿದಾರ ಹಾಕಿದ್ಲು.” ಅಂದಳು. ನಾನೂ ಸುಮ್ಮನಾದೆ.

ಆಕೆ ಹೊರಟು ಹೋಗಿ ವಾರ ಕಳೆದರೂ ಅವಳ ಅಕ್ಕನ ಕೊಲೆ ನನ್ನನ್ನು ಕಾಡ್ತಲೇ ಇತ್ತು. ನನ್ನ ಅನ್ಯಮನಸ್ಕತೆ ಕಂಡ ಗೆಳೆಯ ಏನು ಅಂತ ವಿಚಾರಿಸಿದ. ಹುಡುಗಿ ಪರಿಚಯವಾಗಿದ್ದು ಅವನಿಂದ್ಲೇ ಆದ್ದರಿಂದ ಅವಳು ಹೇಳಿದ ಕತೆ ಹೇಳಿದೆ. ಅಂವ ಬಾಯಿ ಕಟ್ಟಿದಹಾಗೆ ಸುಮ್ಮನುಳಿದುಬಿಟ್ಟ.
ಕೊನೆಗೆ ನೋಡಿದರೆ, ಅವಂಗೂ ಹುಡುಗಿ ಅದೇ ಕಥೆ ಹೇಳಿದ್ದಳು. ಯಾರಿಗೂ ಹೇಳಬೇಡ ಅಂದಿದ್ದಳು. ಅವರ ಮನೆಗೆ ಹೋದಾಗ ಅವನ ತಂಗಿಯನ್ನ ನೋಡಿ, ನನ್ನ ಅಕ್ಕ ಹೀಗೇ ಇದ್ಲು ಅಂದಿದ್ದಳು, ಸಾಯೋ ದಿನ ಥರದ್ದೇ ಚೂಡಿ ಹಾಕಿದ್ದಳು ಅಂತಲೂ ಹೇಳಿದ್ದಳು
!!
ಆಮೇಲೆ ಅವಳ ಊರಿನ ಗೆಳೆಯರನ್ನ ವಿಚಾರಿಸಿದಾಗ ಅಸಲು ವಿಷಯ ತಿಳಿಯಿತು
.
ಅವಳ ಅಕ್ಕ ಸತ್ತಿದ್ದು ನಿಜವೇ ಆಗಿತ್ತು. ಆದರೆ ಅವಳು ಹೇಳಿದ ಹಾಗೆ ಅದು ಕೊಲೆಯಾಗಿರಲಿಲ್ಲ. ಆಕೆ ಸಾಯುವ ಹಿಂದಿನ ದಿನ ಅಕ್ಕ- ತಂಗಿಗೆ ಏನೋ ವಿಷಯಕ್ಕೆ ರಾದ್ಧಾಂತವಾಗಿತ್ತಂತೆ. ತಂಗಿಯಿಂದ ಕೆಟ್ಟದಾಗಿ ಬೈಸಿಕೊಂಡ ಅಕ್ಕನ ಮನಸ್ಸು ತೀರಾ ನೊಂದುಹೋಗಿತ್ತಂತೆ. ಆಕೆ ಹೀಗೆನಾನು ಸಾಯುತ್ತಿದ್ದೇನೆಅಂತ ಬರೆದಿಟ್ಟೇ ಸತ್ತಿದ್ದಳಂತೆ. ತಂಗಿಗೆ ಆಮೇಲಾಮೇಲೆ ಗಿಲ್ಟು ಕಾಡಲು ಶುರುವಾಗಿ, ಅದು ಯಾರೋ ಮಾಡಿದ ಕೊಲೆ ಅಂತೆಲ್ಲ ಕತೆ ಕಟ್ಟಿಕೊಂಡು ತಿರುಗುತ್ತಿದ್ದಳು
.
ಗೆಳೆಯರು, ಅವಳ ಉಸಾಬರಿಗೆ ಹೋಗಬೇಡಿ  ಅಂದರು. ನಾನು ಮಾತ್ರ, ಅವಳಿಗೆ ಮಾನಸಿಕ ತೊಂದರೆ ಆಗಿರಬಹುದಾ ಅಂತ ಯೋಚಿಸುತ್ತ ಉಳಿದೆ.

ಕೆಲವೊಮ್ಮೆ ನನಗೆ ಕತೆ ಮತ್ತು ಕಥೆಯ ವ್ಯತ್ಯಾಸ ಕಾಡೋದಿದೆ. ವ್ಯಾಕರಣ ವಿದ್ವಾಂಸರು ಕೊಡೋ ಉತ್ತರಗಳು ಗಹನವಗಿರುತ್ತವಾದ್ದರಿಂದ ಅದರ ಗೋಜಿಗೆ ನಾನು ಹೋಗಿರಲಿಲ್ಲ.

ತದ್ದಲಸೆ ವಿನಾಯಕ ಭಟ್ಟರುಸ್ವಾಹಾಕಥಾ ಸಂಕಲನದಲ್ಲಿಕಥೆಮತ್ತುಕತೆ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಅವರು ಅಲ್ಲಿ ಹೇಳಿರುವ ಒಟ್ಟಾರೆ ಅರ್ಥ- ಎಂದೋ ನಡೆದಿದ್ದರ ನಿರೂಪಣೆ, ’ಕಥೆ’. ಹೀಗೇ ಯಾವುದೋ ಎಳೆಯ ಮೇಲೆ ಸುಮ್ಮಸುಮ್ಮನೆ ಹುಟ್ಟಿಸಿಕೊಂಡು ಹೆಣೆಯೋದು  ’ಕತೆ’.
ಆದರೆ ಕೆಲವೊಮ್ಮೆ ಕಥೆಯೇ ರೆಕ್ಕೆ ಪುಕ್ಕ ಹಚ್ಚಿಕೊಂಡು ಕತೆಯಾಗಿಬಿಡೋದಿದೆ. ಆಗೆಲ್ಲ ಬದುಕಿನ ಗಾಂಭೀರ್ಯ ಲಘುತ್ವವನ್ನನುಭವಿಸಿ ಗೇಲಿಯ ವಸ್ತುವಾಗಿಬಿಡೋದಿದೆಇದು ನಮ್ಮ ನಿಮ್ಮ ಜೀವನದಲ್ಲೂ ಸಾಕಷ್ಟು ಬಾರಿ ಅನುಭವಕ್ಕೆ ಬಂದಿರಬಹುದು
.
ಹೀಗೇ, ಕೆಲವೊಮ್ಮೆಕಥೆಯಾಗ ಹೊರಟವರುಕತೆಯಾಗಿಬಿಡುತ್ತಾರೆ. ಏನನ್ನೋ ಸಾಧಿಸ ಹೊರಟವರು ಜನರ ಬಾಯಿಗೆ ಬಿದ್ದು ಹಗುರಾಗಿಬಿಡುತ್ತಾರೆ
.
ಅದಕ್ಕಿಂತ ದುರಂತ ಬೇರೊಂದಿಲ್ಲ. ಅಲ್ಲವೇ?

( ಇದು ಹಳೆಯ ಬರಹ. ಇದೇ ಬ್ಲಾಗಲ್ಲಿ ಬಹಳ ಹಿಂದೆ ಹಾಕಿದ್ದು. ಬ್ಲಾಗ್ ಡಿಲೀಟ್ ಮಾಡಿದ್ದೆನಲ್ಲ, ಅದಕ್ಕೆ ಮುಂಚೆ ಬರೆದಿದ್ದ ಕೆಲವನ್ನ ಮತ್ತೆ ಇಲ್ಲಿ ಹಾಕೋಣವೆನಿಸಿತು. ಗೆಳೆಯರಾದ ಗುರು ಮತ್ತು ವೀಣಾ ಕೊಟ್ಟ ಐಡಿಯಾದಂತೆ ಈ ತಂಗಳನ್ನು ಮತ್ತೆ ಬಡಿಸುತ್ತಿರುವೆ. ಇಷ್ಟವಾದ್ರೆ, ಅವ್ರಿಗೆ ಥ್ಯಾಂಕ್ಸ್ ಹೇಳಿ. ಇಲ್ಲವಾದ್ರೆ ಅವ್ರನ್ನೇ ಚೆನ್ನಾಗಿ ಬಯ್ಕೊಳಿ! )

Blog at WordPress.com. | Theme: Pool by Borja Fernandez.
Entries and comments feeds.