ಕಥೆಯ ದಿನದಲ್ಲೊಂದು ಬೆಳಗು
January 8, 2009 at 10:05 am | In ಕಥೆ ಥರ... | 3 CommentsTags: ಕಥೆ, ಕಥೆ ಥರ...
ಕೌಸಲ್ಯಾ ಸುಪ್ರಜಾ ರಾಮ
ಪೂರ್ವಾ ಸಂಧ್ಯಾ ಪ್ರವರ್ತತೇ…
ಬಡ್ಕೊಳ್ತಲೇ ಇದೆ ಅಲರಾಮು. ಈ ಹೊಸ ಹ್ಯಾಂಡ್ ಸೆಟ್ ಕೊಂಡಾಗಿಂದ ಇದನ್ನೇ ಅಲರಾಮ್ ಟೋನ್ ಮಾಡ್ಕೊಂಡಿದಾನೆ. ಬೆಳಬೆಳಗಿನ ಸುಪ್ರಭಾತ ಕೇಳುವಾಗೆಲ್ಲ ಅವನಿಗೆ ಐದು ಗಂಟೆಗೆ ಎದ್ದು ಬಾಗಿಲಿಗೆ ನೀರು ಹಾಕ್ತಿದ್ದ ಅಮ್ಮನ ನೆನಪು. ಇತ್ತೀಚೆಗೆ ಅವನು ಅಮ್ಮನ್ನ ನೆನೆಸ್ಕೊಳ್ಳೋದು ಜಾಸ್ತಿಯಾಗಿದೆ.
ಅಲಾರಮ್ಮು ಸ್ನೂಜ್ ಮಾಡಿ ಮತ್ತೈದು ನಿಮಿಷ ಹೊರಳಾಡಿದವನು ಏಳಲೇಬೇಕಾದ ಅನಿವಾರ್‍ಯತೆಗೆ ಗೊಣಗುತ್ತಲೇ ಎದ್ದು ಕುಂತ. ಚಳಿಗಾಲ ಬೇರೆ. ತಾನೆದ್ದ ಅದೆಷ್ಟೋ ಹೊತ್ತಿನ ಮೇಲೆ ಕಾಣಿಸ್ಕೊಳ್ತಾನೆ ಸೂರ್ಯ. ಸೂರ್ಯನ ಮೇಲೆ ಹರಿಹಾಯುತ್ತ ಬಾತ್ ರೂಮಿಗೆ ಹೋದವ ಕನ್ನಡಿ ನೋಡಿ ತಲೆ ಚಚ್ಚಿಕೊಂಡ. ಗಲ್ಲದ ಮೇಲೆ ನಾಲ್ಕು ಕೂದಲು ಕಾಣುವ ಹಾಗಿಲ್ಲ, ಬಾಸ್ ಅನಿಸ್ಕೊಂಡವ ಭಾಗವತ ಬೋಧನೆ ಶುರು ಮಾಡಿಬಿಡ್ತಾನೆ!
ಪರಪರನೆ ಕೆನ್ನೆ ಕೆರಕೊಂಡು, ಹಲ್ಲುಜ್ಜಿ ಹೊರಬಂದ. ನೀರು ಕಾಯುವುದರೊಳಗೆ ತಿಂಡಿ ಮಾಡ್ಕೊಳ್ಳಬೇಕು. ಅಮ್ಮ ರವೆ ಇಡ್ಲಿಯ ಮಿಕ್ಸ್ ಮಾಡಿ ಕಳ್ಸಿದಾಳೆ. ಮೊಸರಿಗೆ ಹಾಕಿ ಕಲಸಿ ಬೇಯಿಸ್ಕೊಂಡರಾಯ್ತು.
ಡಬ್ಬಿಯ ಮುಚ್ಚಳ ತೆಗೆದವನ ಮೂಗಿಗೆ ಕರಿಬೇವಿನ ಘಮ ಮುತ್ತಿಕ್ಕಿತು. ಹದವಾಗಿ ಹುರಿದ ಗೋಡಂಬಿ ಚೂರುಗಳು, ಕಡಲೆಬೇಳೆ, ಒಣಮೆಣಸು… ಅಮ್ಮ ಶ್ರದ್ಧೆಯಿಂದ ಮಾಡಿ ಒತ್ತೊತ್ತಿ ತುಂಬಿ ಕಳಿಸಿದ್ದಳು, ಅಪ್ಪನ ಕಣ್ತಪ್ಪಿಸಿ.
ಅಪ್ಪ! ದೂರದೂರಲ್ಲಿ ನಿಂತೂ ಅವಂಗೆ ಕಾಲ್ನಡುಕ. ಅಪ್ಪನಿಗಿಂತ ಎತ್ತರ ಬೆಳೆದಿದ್ದಾನೆ. ಒಂದೆರಡು ಸಾರ್ತಿ ಇಬ್ಬರಿಗೂ ಹೊಯ್ ಕೈ ಕೂಡ ಆಗಿಬಿಟ್ಟಿದೆ. ಆದರೂ, ಅಪ್ಪ ಅಂದರೆ ನಡುಕ.
ಇದೇ ಅಪ್ಪ ತನ್ನ ಡಿಗ್ರಿ ಮುಗಿದು ಒಂದು ತಿಂಗಳು ಮನೇಲಿ ಕುಂತಗ ಹಂಗಿಸ್ತಿದ್ದುದು. ತಾನು ಎಲೆಕ್ಟ್ರಿಕ್ ಕೆಲಸ ಹಿಡಿದು ದಾರಿಯ ಲೈಟುಕಂಬ ಹತ್ತಿ ರಿಪೇರಿ ಮಾಡ್ತಿದ್ದಾಗ ನೋಡಿ ಕೆಂಡಾಮಂಡಲವಾಗಿ ಕೂಗಾಡಿದ್ದುದು. ಅವನ ಮರ್ಯಾದೆ ಬೀದೀಲಿ ಹರಾಜಾಗಿತ್ತಂತೆ ಅವತ್ತು! ಇದೇ ಅಪ್ಪನೇ ತಾನು ದೋಸೆ ತಿನ್ನುವಾಗ ಹೊರಗೆ ಕುಂತು ಲೆಕ್ಕವಿಡುತ್ತಿದ್ದುದು. ಕೂತು ನಿಂತಲ್ಲೆಲ್ಲ ತಪ್ಪು ಹುಡುಹುಡುಕಿ ಹೈರಾಣು ಮಾಡ್ತಿದ್ದುದು ಇದೇ ಅಪ್ಪನೇ. ಅವನೇ ತನ್ನ ವಿಷಯ ತೆಗೆದು ಅಮ್ಮನ ಗಂಟಲಲ್ಲಿ ನೀರೂ ಇಳಿಯದ ಹಾಗೆ ಕಾಡ್ತಿದ್ದುದು.
ಇಷ್ಟೆಲ್ಲಾ ಆದರೂ ಈಗ ಅವನಿಗೆ ಅಪ್ಪನ ಮೇಲೇನೂ ಕೋಪವಿಲ್ಲ. ಅಂವ ಅಷ್ಟೆಲ್ಲ ಮಾಡದೆ ಹೋಗಿದ್ದರೆ ತಾನಾದರೂ ಮನೆಬಿಟ್ಟು ಓಡಿಬರ್ತಿದ್ದನಾ? ಇವತ್ತು ಐರನ್ ಮಾಡಿದ ಬಟ್ಟೆ ತೊಟ್ಟು, ಶೂ ಹಾಕಿ, ಬೈಕಲ್ಲಿ ಕೆಲಸಕ್ಕೆ ಹೋಗ್ತಿದ್ದನಾ?
ಬೈಕು! ಅವನು ಮನೆಬಿಟ್ಟು ಓಡಿಬರಲಿಕ್ಕೆ ಕಾರಣ ಅಪ್ಪ ಮಾತ್ರ ಅಲ್ಲ. ಅವಳೂ ಕೂಡ. ಎಲೆಕ್ಟ್ರಿಕ್ ಕೆಲಸ ಕೈಹತ್ತಿ ನಾಲ್ಕು ಕಾಸಾದಾಗ ಚೂಡಿದಾರ ಕೊಡಿಸಿ ಮದುವೆಯ ಮಾತಾಡಿದ್ದ. “ಮನೇಲಿ ಬಂದು ಏನೂಂತ ಕೇಳ್ತೀಯೋ? ನಿನ್ ಹತ್ರ ಒಂದು ಬೈಕೂ ಇಲ್ಲ!?” ಅಂದುಬಿಟ್ಟಿದ್ದಳು. ಇತ್ತ, ಜೀವಮಾನವಿಡೀ ದುಡಿದು ಕೂಡಿಟ್ಟ ಹಣದಲ್ಲಿ ಚೆಂದದ ಮನೆ ಕಟ್ಟಿಕೊಂಡಿದ್ದ ಅಪ್ಪ, “ಇದೇ ಊರಲ್ಲಿದ್ರೆ ನಿಂಗ್ಯಾರೂ ಹೆಣ್ಣು ಕೊಡೋದಿಲ್ಲ ತಿಳ್ಕಾ” ಅಂತ ಪ್ರವಾದ ನುಡಿದಿದ್ದ. ಒಬ್ಬೊಬ್ಬರೇ ಕಸಿನ್ನುಗಳ ಮದುವೆಯಾಗುತ್ತಿದ್ದ ಹಾಗೆ ಅಮ್ಮನೂ ಚಡಪಡಿಸತೊದಗಿದ್ದಳು. ಇಂವ ಅವರೆಲ್ಲರಿಗಿಂತ ಏಳೆಂಟು ವರ್ಷ ಚಿಕ್ಕವನೆಂದು ಯಾರೂ ಯೋಚಿಸಲೇ ಇಲ್ಲ!
ಹಾಗಂತ ಅವನಮ್ಮನಿಗೆ ಗೊತ್ತಿದೆ… ಈಗಲೂ ಅಂವ ಮನೆಗೆ ಹೋದಾಗಲೊಮ್ಮೆ ತಲೆ ನೇವರಿಸಿ ಗಲ್ಲ ಹಿಂಡುತ್ತಾಳೆ. ಇವಂಗೇನೂ ಅದರಿಂದ ಸಂಕೋಚವಾಗೋದಿಲ್ಲ. ಊರಲ್ಲಿದ್ದಷ್ಟೂ ದಿನ ‘ಅಮ್ಮನ ಬಾಲ’ ಅಂತಲೇ ಕರೆಸಿಕೊಳ್ತಿದ್ದನಲ್ಲವೆ?
ಸ್ಟೌವ್ ಆರಿಸಿ ಅಮ್ಮನ ನೆನಪಲ್ಲಿ ಕಣ್ಣೊರೆಸ್ಕೊಂಡವ ಸ್ನಾನ ಮುಗಿಸಿ ಬಂದ. ಹಿತವಾದ ಘಮ ಬೀರುತ್ತ ಇಡ್ಲಿ ಹಬೆಯಾಡುತ್ತಿತ್ತು. ತಿಂದು ಹೊರಟ. ವಾಪಸು ಬರುವ ಹೊತ್ತಿಗೆ ಒಂಟಿತನ ಬಾಗಿಲಲ್ಲೆ ಕಾದು ನಿಂತಿರುತ್ತದೆ! ನೆನೆಸಿಕೊಂಡು ನಕ್ಕ. ‘ಬೈಕೂ ಇಲ್ವಲ್ಲೋ?’ ಅಂದಿದ್ದ ಹುಡುಗಿಯ ಗಂಡನ ಬಳಿ ಕಾರಿದೆ. ತಾನು ಕಾರ್ ಕೊಳ್ಳುವುದು ಯಾವಾಗಲೋ? ಚಿಂತಿಸುತ್ತ ಬೈಕ್ ಸ್ಟಾರ್ಟ್ ಮಾಡಿದ.
‘ಅಮ್ಮಾ, ನಿನ್ನ ಎದೆಯಾಳದಲ್ಲಿ…’ ಫೋನ್ ರಿಂಗಾಯ್ತು. ಟೋನಿನಲ್ಲೇ ಇದು ಅಮ್ಮನ ಕಾಲ್ ಎಂದು ಪತ್ತೆಹಚ್ಚಿದವ ರಿಸೀವ್ ಮಾಡಿದ.
ಆಚೆಯಿಂದ ಅಮ್ಮ ಸೊರಗುಟ್ಟುತ್ತಿದ್ದಳು. “ಅಪ್ಪಂಗೆ ಸೀರಿಯಸ್ ಕಣೋ, ಅಡ್ಮಿಟ್ ಮಾಡಿದೀನಿ” ಅಂದು ಬಿಕ್ಕತೊಡಗಿದಳು….
ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…
December 26, 2008 at 4:52 am | In ಕಥೆ ಥರ... | 16 CommentsTags: ಕಥೆ ಥರ...
“ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಒಂದೇ ಸಮ ಬಡ್ಕೊಳ್ತಿತ್ತು ಫೋನು.
ಅದು ನೀನಿಲ್ಲದ ಮೊದಲ ಭಾನುವಾರ. ಈವರೆಗೆ ನೂರಿಪ್ಪತ್ತೆಂಟು ಭಾನುವಾರಗಳನ್ನ ನಾವು ಒಟ್ಟಿಗೆ ಕಳೆದಿದ್ದೆವು, ಒಮ್ಮೆಯೂ ತಪ್ಪದ ಹಾಗೆ. ನಾನು ಆರು ದಿನವೂ ಬರವಣಿಗೆಯ ಬದುಕಲ್ಲಿ ಹೈರಾಣಾಗಿರುತ್ತಿದ್ದೆ. ನೀನು ಮೀಸೆ ಬೆಳೆದ ಮಕ್ಕಳೆದುರು, ಪುಸ್ತಕದಲ್ಲಿರದ ಚರಿತ್ರೆಯ ಪಾಠವನ್ನೆಲ್ಲ ಹೇಳೋದ್ರಲ್ಲಿ ಸುಸ್ತು ಹೊಡೆದಿರುತ್ತಿದ್ದೆ.
ಹೌದಲ್ಲಾ!? ಪಾಠ ಮಾಡಯ್ಯಾ ಅಂದ್ರೆ ನೀನು ಪಾಠದಲ್ಲಿರದ್ದನ್ನೆಲ್ಲ ಹೇಳ್ತಾ ಮೈಮರೆತುಬಿಡ್ತಿದ್ದೆ. ಕ್ಯಾಂಪಸ್ಸಿನ ತುಂಬೆಲ್ಲ ’ಕ್ರಾಂತಿಕಾರಿ’ ಅನ್ನೋ ಪಟ್ಟ ನಿಂದಾಗಿತ್ತು. ಅದೆಷ್ಟು ಸಾರ್ತಿ ಪ್ರಿನ್ಸಿಯ ಕನ್ನಡಕ ನಿನ್ನ ಗುರಾಯಿಸಿತ್ತೋ?
ಬಿಡು. ಅದೀಗ ಮುಗಿದ ವಿಚಾರ. ಅವತ್ತೊಂದು ದಿನ ಕಾಲೇಜು ರಾಜಕೀಯದ ನೂರೆಂಟು ಹೊಟ್ಟೆಕಿಚ್ಚುಗಳಲ್ಲಿ ನನ್ನ- ನಿನ್ನ ಸಂಬಂಧದ ಬಣ್ಣ ಎರಚಿ, ನೀ ರಿಸೈನು ಮಾಡಿಬಂದೆ ನೋಡು, ಅವತ್ತಿಗೇ ಅದರ ಕಥೆ ಮುಗ್ದುಹೋಯ್ತು.
ಆಮೇಲೆ ನೀ ಭಾಷಣ- ಬರಹ ಅಂತ ಉಳಿದುಬಿಟ್ಟೆ. ಹೊಟ್ಟೆಪಾಡು ನಿಂಗ್ಯಾವತ್ತೂ ಮುಖ್ಯವಾಗಲೇ ಇಲ್ಲ! ಜೊತೆಜೊತೆಗೆ ನಮ್ಮಲ್ಲೊಂದು ಪ್ರಬುದ್ಧತೆ ಬೆಳೀತಾ ಹೋಯ್ತು.
ನಂಗನ್ನಿಸತ್ತೆ, ನಾವ್ಯಾವತ್ತೂ ಪ್ರೀತಿಸಲೇ ಇಲ್ಲ ಅಂತ. ಈವತ್ತು ಲೋಕ ಯಾವುದನ್ನ ಪ್ರೀತಿ ಅನ್ನುತ್ತಿದೆಯೋ, ಅಂಥದೊಂದು ಕೊಡು-ಕೊಳ್ಳುವಿಕೆಯ ಭಾವ ನಮ್ಮದಾಗಿರ್ಲಿಲ್ಲ. ಕೊನೆಗೂ ನಮ್ಮ ನಂಟಿಗೊಂದು ಹೆಸರು ಸೃಷ್ಟಿಯಾಗ್ಲೇ ಇಲ್ಲ.
ಇವೆಲ್ಲಾ ನೆನಪಾಗಿದ್ದು ನೀನಿಲ್ಲದ ಮೊದಲನೇ ಭಾನುವಾರ. ಬರೋಬ್ಬರಿ ನಾಲ್ಕು ವರ್ಷ ನನ್ನ ಈ ಸಂಭ್ರಮದ ರಜಾದಿನದಲ್ಲಿ ಶಾಮೀಲಾಗಿದ್ದ ನೀನು ಅವತ್ತು ಹೇಳದೇ ಕೇಳದೇ ಇಲ್ಲವಾಗಿಬಿಟ್ಟಿದ್ದೆ. ಹಿಂದಿನ ದಿನ ಹೋಟೆಲ್ಲಲ್ಲಿ ಕುಂತು ಮೃದುವಾಗಿ ಕೈತಟ್ಟುತ್ತಾ, “ಸಾಧನೆ ಮಾಡ್ಬೇಕು ಕಣೇ ನೀನು… ಸುಮ್ನೆ ಹೀಗೇ ಇದ್ದುಬಿಡೋದಲ್ಲ” ಅಂದಾಗಲೇ ನಂಗೇನೋ ಅನುಮಾನ. ನೀನೇನೋ ಮಸಲತ್ತು ನಡೆಸಿದ್ದೀ ಅಂತ… ಅದು ನಿಜವಾಗಿಹೋಗಿತ್ತು!
ಆಫೀಸೂ ಇಲ್ಲದ ಆ ದಿನವಿಡೀ ನಾನು ಮನೆಯ ದೂಳು ಹೊಡೆಯುತ್ತ ಉಳಿದುಬಿಟ್ಟೆ. ಮಧ್ಯೆ ಮಧ್ಯೆ ನಿನ್ನ ನಂಬರ್ ಒತ್ತುವುದು ನಡೆದೇ ಇತ್ತು. ಹಾಳು ಗಂಟಲಿನ ಹುಡುಗಿ! ಮತ್ತೆ ಮತ್ತೆ, ’ನೀವು ಕರೆ ಮಾಡಿದ ಚಂದಾದಾರ….’ ಅವತ್ತಿಂದ ನಾನೂ ಹುಚ್ಚಿಹಾಗೆ ಗಂಟೆಗೊಂದು ಸಾರ್ತಿ ನಿನಗೆ ಕಾಲ್ ಮಾಡ್ತಲೇ ಇದ್ದೀನಿ. ಆದರೂ ಅವಳು ಮಾತ್ರ ಹಾಗೆ ಬಡಕೊಳ್ಳೋದು ನಿಲ್ಲಿಸಿಲ್ಲ.
ಆವತ್ತು ನಾನು ಅಮ್ಮ ಸಾಯ್ತೀನಂದ್ರೂ ಕೇಳದೆ ನಿನ್ನ ಹಿಂದೆ ಬಂದುಬಿಟ್ಟಿದ್ದೆ. ಮದುವೆಯಾಗೋದು ನಮ್ಮ ಉದ್ದೇಶವಲ್ಲ ಅಂದಾಗಲಂತೂ ಅಪ್ಪ ಗಂಟಲು ಕಿತ್ತುಬರುವ ಹಾಗೆ ಕೂಗಾಡಿದ್ದ.
ಈವತ್ತಿಗೆ ನಾಲ್ಕು ತಿಂಗಳಾಯ್ತು, ನೀನು ವ್ಯಾಪ್ತಿಪ್ರದೇಶದ ಹೊರಗೆ ಹೋಗಿ. ಇಷ್ಟೂ ದಿನ ಮಾತಾಡದ ಅಪ್ಪ, ’ಏನು ಸಾಧಿಸಿದೆ ಮಗಳೇ ಅಂದರೆ, ಅಮ್ಮ, ’ನಿಂಗೆ ಇನ್ನು ಯಾರು ದಿಕ್ಕು?’ ಕೇಳ್ತಿದ್ದಾಳೆ. ಬರೀ ಇಂಥವೇ…. ಆದರೆ ನಾನು ಮಾತ್ರ ಈ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲ. ನಾ ನಿನ್ನ ಆಸರೆಗಾಗಿ ಅವಲಂಬಿಸಲಿಲ್ಲ. ನಿನ್ನ ಸಂಬಂಧದ ಸರ್ಟಿಫಿಕೇಟು ಹಿಡ್ಕೊಂಡು ಮೆರಿಯೋದೂ ನಂಗೆ ಬೇಕಿರಲಿಲ್ಲ. ನೀನು ಬೇಕು, ನಿನ್ನೊಡನಿರಬೇಕೆಂಬ ಅದೆಂಥದೋ ಉನ್ಮಾದವಷ್ಟೇ ನನ್ನಲ್ಲಿದ್ದದ್ದು. ಅದು, ಇವರ್ಯಾರಿಗೂ ಅರ್ಥವಾಗೋಲ್ಲ.
ನನಗೆ ಗೊತ್ತು. ನೀನು ಹಾಗೆ ಹೊರಟುಬಿಡಲು ಕಾರಣವೇನು ಅಂತ. ಬಿಡು. ಬಂದೂಕು ಹಿಡಿದು ಕಾಡಲ್ಲಿ ಮೈ ತರಚಿಕೊಂಡ್ರೆ ಕ್ರಾಂತಿಯಾಗೋಲ್ಲ! ನಿನಗೆ ನಾನು ಪಾಠ ಹೇಳ್ಬೇಕಾ? ಆದರ್ಶದ ಬೆನ್ನು ಹತ್ತಿದರೆ ಯಾವತ್ತೂ ಹೀಗೇ ಆಗೋದು…
ಈಗ ಪೇಪರ್ ನೋಡಿದೆ. ಕಾಡೊಳಗೆ ಎಸ್ ಟಿ ಎಫ್ ನುಗ್ಗಿಸ್ತಾರಂತೆ. ಯಾರ ಗುಂಡು ಯಾರ ಎದೆಗೋ? ಸುಮ್ಮನೆ ಕಾಡಬೇಡ. ನೀನು ಹಾಗೆಲ್ಲ ಇಲ್ಲವಾಗೋದು ನಂಗೆ ಬೇಕಿಲ್ಲ.
ಈಗ ನಿನ್ನ ಫೋಟೋ ನನ್ನ ಎದೆಯ ಮೇಲೆ. ನೀನು…. ಎದೆಯೊಳಗೆ. ಅಂದ ಹಾಗೆ ಇದು ನೀನಿಲ್ಲದ ಕೊನೆಯ ಭಾನುವಾರ. ಹಾಗೇ , ನನ್ನ ಕಟ್ಟಕಡೆಯದು ಕೂಡಾ. ನಾನೀಗ ಹೊರಟೆ.
ನೀನು ಕಾಡಲ್ಲಿ ಅಲೆದಿದ್ದು ಸಾಕು. ಇಲ್ಲೂ ಪರಿವರ್ತನೆಗಳಿಗೆ ಅವಕಾಶಗಳಿವೆ.
ಪ್ಲೀಸ್…. ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…. ಪ್ರಾಮಿಸ್! ನಾನು ಇನ್ಯಾವತ್ತೂ (ಕರ) ಕರೆ ಮಾಡೋಲ್ಲ!!
Blog at WordPress.com. | Theme: Pool by Borja Fernandez.
Entries and comments feeds.