ವಿದ್ರೋಹದ ನವಿರಲ್ಲಿ ಉತ್ಸವದ ನೆನಪು

‘ನಿನಗೆ ನನ್ ಬಗ್ಗೆ ಕೋಪ ಬರೋದಿಲ್ವಾ?’
ತನ್ನನ್ನ ಒಡಹುಟ್ಟಿದ ಅಕ್ಕನ ಹಾಗೆ ಆದರಿಸ್ತಾ ಮನೆಯಲ್ಲಿಟ್ಟುಕೊಂಡಿದ್ದ ಅದಿತಿಯನ್ನ ನೋಡಿ ವಸಂತಸೇನೆಗೆ ಅಶ್ಚರ್ಯ. ಅದು ಹೇಗಾದ್ರೂ ಒಬ್ಬ ಹೆಂಡತಿ ತನ್ನ ಗಂಡನ ಪ್ರೇಯಸೀನ ಸಹಿಸ್ಕೊಳ್ಳಬಲ್ಲಳು?
‘ಕೋಪಾನಾ? ಖಂಡಿತಾ ಇಲ್ಲ. ಇನ್ನೂ ಹೇಳಬೇಕಂದ್ರೆ, ನೀವು ಅವರ ಬದುಕಿನಲ್ಲಿ ಬಂದಿರೋದ್ರಿಂದ ನನಗೆ ಮತ್ತಷ್ಟು ಒಳ್ಳೇದೇ ಆಗಿದೆ’ ಅವಳು ತುಸುವೇ ನಾಚಿ ಕಿಲಗುಟ್ಟುತ್ತಾಳೆ.
ವಸಂತಸೇನೆಯ ಹುಬ್ಬು ಮೇಲೇರುತ್ತದೆ. ‘ಯಾಕೆ? ಹೇಗೆ ಹಾಗೆ!?’
‘ಅವರು… ಈಗೀಗ ನನ್ನ ತುಂಬಾ ಪ್ರೀತಿಸ್ತಾರೆ. ಅವರ ವರಸೆಗಳೂ ಬದಲಾಗಿವೆ!’ ಅದಿತಿ ಪೂರಾ ನಾಚಿ ಕೆಂಪಡರಿಹೋಗಿದ್ದಾಳೆ. ನಿಲುವಿನಲ್ಲಿ ಪ್ರಣಯದ ಘಮ ತೂರಿ ಬರುತ್ತಿದೆ.
ಅದಿತಿಯ ಇಂಥ ಉತ್ತರಕ್ಕೆ ವಸಂತಸೇನಾ ಹೇಗೆ ಪ್ರತಿಕ್ರಿಯಿಸಿದ್ದಳೋ? ರೇಖಾಳ ಮುಖಭಾವ ನೆನಪಾಗುತ್ತಿಲ್ಲ. ಅನುರಾಧಾ ಪಟೇಲಳ ಬಟ್ಟಲು ಕಂಗಳ ನೋಟ ನೆಲಕ್ಕೆ ತೂಗು ಬೀಳುತ್ತ ಜೋಕಾಲಿಯಾಡಿದ್ದು ನೆನಪಿದೆ. ಇಡಿಯ ‘ಉತ್ಸವ್’ ಸಿನೆಮಾದಲ್ಲಿ ನೆನಪಿಡಬೇಕಾದ ನೂರು ಸಂಗತಿಗಳಿದ್ದದ್ದು ನಿಜ. ಆ ನನ್ನ ಬಾಲ್ಯಕ್ಕೆ ತಟ್ಟಿ ನಿಂತುಬಿಟ್ಟಿದ್ದು ಈ ಒಂದು ಸನ್ನಿವೇಶವೇ ಯಾಕೋ!?
ಇದರ ಜತೆಗೆ ನೆನಪಿರೋ ಮತ್ತೊಂದೇ ಒಂದು ತುಣುಕು, ಕೊನೆಯಲ್ಲಿ ಒಂಟಿಗಳಾಗುವ ವಸಂತ ಸೇನಾ ತಾನು ಅಲ್ಲೀತನಕ ನಿರಾಕರಿಸ್ತಾ ಬಂದಿದ್ದ ಸಂಸ್ಥಾನಕ(?)ನಿಗೆ ಬಾಗಿಲು ತೆರೆಯೋದು. ಈ ದೃಶ್ಯ ಕಣ್ಕಟ್ಟಿದರೆ, ಅದು ಮತ್ತೊಂದೇ ಕಥೆಗೆ ಎಳೆಯಾಗುತ್ತೆ.
ಭಾಸ ‘ಚಾರುದತ್ತ’ವೆಂಬ ನಾಟಕ ಬರೆದ. ಆಮೇಲಿನ ಶೂದ್ರಕನೂ ಅದೇ ಎಳೆಯಿಟ್ಟುಕೊಂಡು ‘ಮೃಚ್ಛಕಟಿಕ’ ಬರೆದ. ಕಾರ್ನಾಡರು ಅವೆರಡನ್ನೂ ಹದವಾಗಿ ಸೇರಿಸಿ ‘ಉತ್ಸವ್’ ಸಿನಿಮಾ ಮಾಡಿದರು. ಚಾರುದತ್ತನೆಂಬ ಸಂಗೀತಗಾರ, ಅದಿತಿ ಎಂಬ ಅವನ ಹೆಂಡತಿ, ವಸಂತಸೇನೆಯೆಂಬ- ಆಸ್ಥಾನ ನರ್ತಕಿಯೂ ಆಗಿದ್ದ ಸುಂದರಿ ಅವನ ಪ್ರೇಯಸಿ. ಸಿನೆಮಾದ ತಿರುಳು- ಹರಹುಗಳೆಲ್ಲ ಬೇರೆಯೇ ಇವೆ. ನನ್ನ ಪಾಲಿಗೆ ಮಾತ್ರ ಉತ್ಸವ್ ಸಿನೆಮಾ, ವಸಂತಸೇನೆ- ಅದಿತಿಯರ ಸಂಭಾಷಣೆಯೇ.
~
ಜೋಗಿ ಒಂದುಕಡೆ ಬರೆದಿದ್ದರು, ವಂಚಿಸುವ ಹೆಂಡತಿ, ಗಂಡನ ಜತೆ ಹೆಚ್ಚು ಪ್ರೀತಿಯಿಂದ ನಡೆದುಕೊಳ್ತಾಳೆ ಅನ್ನುವ ಅರ್ಥದ ಸಾಲುಗಳನ್ನ. ಅದನ್ನ ಓದಿದಾಗ ನೆನಪಾಗಿದ್ದು ಚಾರುದತ್ತನೇ. ವಂಚನೆಗೆ ಗಂಡು ಹೆಣ್ಣು ಅನ್ನೋದಿಲ್ಲ. ಡಿಆರ್ ಬರೆದಿದ್ದರಂತೆ ಶರ್ಮರ ಪುಸ್ತಕದ ಮುನ್ನುಡಿಯಲ್ಲಿ-’ರಮ್ಯ ಉಲ್ಲಂಘನೆಗಳನ್ನ ಮಾಡದಷ್ಟು ಅರಸಿಕನೇನಲ್ಲ ಇವನು’ ಅಂತ. ಹಾಗೆ… ಕೆಲವೊಂದು ರಮ್ಯ ಉಲ್ಲಂಘನೆಗಳು ಗಂಡು- ಹೆಣ್ಣುಗಳ ನಡತೆಯಲ್ಲಿ ಕಾಣುತ್ತವೆ. ಉಹು… ಬಚ್ಚಿಟ್ಟುಕೊಂಡಿರ್ತವೆ. ಚಾರುದತ್ತನ ಪ್ರೇಮವೂ ಅಂಥದೊಂದು ಉಲ್ಲಂಘನೆಯೇ ಆಗಿತ್ತು. ಅದಕ್ಕೇ ಅವನ ಹೆಂಡತಿ ಅದನ್ನ ಒಪ್ಪಿ-ಸಹಿಸ್ಕೊಳ್ಳಲು ಸಾಧ್ಯವಾಗಿತ್ತು ಅನ್ನಿಸುತ್ತೆ. ಈ ಕ್ಷಣದಲ್ಲೇ ನನಗೆ ಅನ್ನಿಸಿದ್ದು- ‘ವ್ಯಾಮೋಹವಾಗದ ವಿದ್ರೋಹ ಕೆಲವು ಸಾರ್ತಿ ಒಳ್ಲೆಯದನ್ನೇ ಮಾಡುತ್ತೆ’ ಅಂತ. ಅದಿತಿಯ ದಾಂಪತ್ಯ ಪ್ರಣಯ ರಂಗೇರಿದ್ದು ಒಳ್ಳೆಯದೇ ಅಲ್ಲವೆ? ಜತೆಗೆ, ತಾನು ಎಷ್ಟೆಂದರೂ ಅವನ ಹೆಂಡತಿ ಅನ್ನುವ ಹೆಚ್ಚುಗಾರಿಕೆಯ ಹೆಮ್ಮೆ ಅವಳಿಗೆ. ಆ ಹೆಚ್ಚುಗಾರಿಕೆ ಪದರಗಟ್ಟುವಂತಾಗಿದ್ದು ವಸಂತ ಸೇನೆಯ ಬರುವಿಕೆಯಿಂದಲೇ ಅಲ್ಲವೆ?
ಆದರೆ, ಅವಳ ಹೆಮ್ಮೆಯಿಂದ ವಸಂತಸೇನೆಗಾದ ಅನುಭವ… ಓಹ್, ನನಗೆ ಆ ಪಾತ್ರವನ್ನ ಮಾಡಿದ್ದ ರೇಖಾಳ ಪ್ರತಿಕ್ರಿಯೆ ನೆನಪಾಗ್ತಿಲ್ಲ. ಕಾರ್ನಾಡರ ಮನಸಲ್ಲಿ ಏನಿತ್ತೋ, ಅದು ಹಾಗೇ ಹೊಮ್ಮಿರುತ್ತೆ ಅಂತ ಗೊತ್ತು. ಭಾಸನಾಗಲೀ ಶೂದ್ರಕನಾಗಲೀ ಯಾವ ಮಾತು ಕೊಟ್ಟಿದ್ದರು ಅವಳಿಗೆ? ಕುತೂಹಲ… ಅದಕ್ಕಿಂತ, ಸ್ವತಃ ವಸಂತಸೇನೆಯೇ ಇದ್ದು,ಈ ಮಾತು ನಡೆದಿದ್ದರೆ ಅವಳ ಮುಖದಲ್ಲಿ ಯಾವ ಬಣ್ಣ ಇರುತ್ತಿತ್ತು!? ಯೋಚನೆ…
~
ಗೆಳತಿಯೊಬ್ಬಳು ಅಂತಃಪುರದಲ್ಲಿ (ಅದೊಂದು ನಮ್ಮ ಹೆಣ್ಹೆಣ್ಣು ಮಕ್ಕಳ ಫೇಸ್ ಬುಕ್ ತಾಣ) ಕೇಳ್ತಾಳೆ, ‘ಮದ್ವೆಯಾದ ಮೇಲೂ ಹೆಣ್ಮಕ್ಕಳಿಗೆ ಕ್ರಶ್ ಆಗತ್ತಾ?’ ಎಷ್ಟು ಜನ ತೆರೆಯಾಚೆಗೂ ಪ್ರಾಮಾಣಿಕರಾಗಿರ್ತಾರೋ? ಎಲ್ಲಾ ಸಲವೂ ಅಂಥ ಪ್ರಾಮಾಣಿಕತೆ ಒಳ್ಳೇದಲ್ಲ ಅನ್ನೋದು ನಿಜ- ಅದು ಬೇರೆ ಮಾತು.
ಆದರೆ ಈ ಪ್ರಶ್ನೆ ತಟ್ಟಿಹಾರಿಸೋ ಅಂಥದ್ದಲ್ಲ. ಹೌದು, ಕ್ರಶ್ ಆಗೋದಕ್ಕೆ ಮದುವೆಗೆ ಮುಂಚೆ- ನಂತರ ಅನ್ನೋ ಯಾವ ಅಂತರವೂ ಇರೋದಿಲ್ಲ. ಅದು ಯಾರ ಬಗೆಗಾದರೂ ಉಂಟಾಗಬಹುದು. ಅದೊಂದು ರಮ್ಯ ಉಲ್ಲಂಘನೆ (ಕಾಪಿ ಡೀಆರ್). ಅದೊಂದು ನಿರುಪದ್ರವಿ ವಿದ್ರೋಹ. ಕ್ರಶ್ ಬಗ್ಗೆ ಯಾವ ವ್ಯಾಮೋಹವೂ ಇರೋದಿಲ್ಲ. ಅದೊಂದು ಕನಸಿನ ಲೋಕವಷ್ಟೆ. ಮೆಚ್ಚುಗೆಯ ಮಾಯಕ. ಆದರೆ ಈ ಕ್ರಶ್ ಬಗ್ಗೆ ಚಿಕ್ಕದೊಂದು ಗಿಲ್ಟ್ ಹುಟ್ಟಿಕೊಳ್ಳದೆ ಇರಲಾರದು. ಆ ಗಿಲ್ಟ್ ಅನ್ನು ಮೀರಲಿಕ್ಕೇನೆ ಸಂಗಾತಿಯ ಮೇಲಿನ ಕಾಳಜಿ ಹೆಚ್ಚಾಗೋದು,ಪ್ರೀತಿ ಮತ್ತಷ್ಟು ಉಕ್ಕಿ ಹರಿಯೋದು. ಅದಕ್ಕೇ ಹೇಳಿದ್ದು, ಇಂಥಾ ವಿದ್ರೋಹದಿಂದ ಕೆಲವು ಸಾರ್ತಿ ಒಳ್ಳೇದೇ ಅಗತ್ತೆ ಅಂತ. ಜೋಗಿಯ ಮಾತು ಲಿಂಗಾತೀತವಾದರೆ- ಇಲ್ಲಿ ಖಂಡಿತ ಸಲ್ಲುತ್ತೆ.
~
ಕೊನೆ ಮಾತು: ಹಾಗಂತ ಒತ್ತಾಯದಿಂದ ವಿದ್ರೋಹವನ್ನೋ (ರಮ್ಯ) ಉಲ್ಲಂಘನೆಯನ್ನೋ ಮಾಡಬೇಕೆಂದಿಲ್ಲ! ಎಲ್ಲ ಗಂಡಂದಿರೂ ಚಾರುದತ್ತನಂತೆ, ಹೆಂಡತಿಯರು ಅದಿತಿಯಂತೆ ಇರೋದಿಲ್ಲ. ಹಾಗೇನೇ ವಸಂತಸೇನೆಯಂತೆ ಪ್ರೇಯಸಿಯರು ಕೂಡಾ….

ಅಶ್ವಯುಜ ಶುಕ್ಲ ಮಾನವಮಿ ಬರಲೆಂದು…

ಟೆರೇಸಿನ ಮೇಲೆ ಒಣಹಾಕಿದ ಹಪ್ಪಳದ ವಾಸನೆಯಂತೆ ಬಿಸಿಲು. ಏನೋ ಒಥರಾ ಮಂಕು ಕವಿದ ಹಾಗೆ. ಆ ಭಾದ್ರಪದವೇ ಹಾಗಿತ್ತು. ಕೊನೆಯದರ್ಧ, ಶೂನ್ಯಮಾಸ. ಮುಗಿದ ಮಳೆ, ಶುರುವಾಗದ ಚಳಿ, ಒಳ್ಳೆ ಕೆಲಸಕ್ಕೆಲ್ಲ ಅಜ್ಜ-ಅಜ್ಜಿಯರ ಕತ್ತರಿ.  ಚರ್ಮ ಬೇರೆ ಬೇಸಿಗೆಯೇನೋ ಅಂತೆಲ್ಲ ಗಲಿಬಿಲಿಯಾಗಿ ಒಡೆದುಕುಂತಿತ್ತು. ಹಾವಿನ ಚರ್ಮದ ಹಾಗೆ. ಮುಟ್ಟಿದರೆ ಹೊಟ್ಟೇಳುತ್ತಿದ್ದ ಮೈಯನ್ನ ನೋಡಿ ಚಿತ್ತಿ ವಾಚಾಮಗೋಚರ ಬಯ್ದಿದ್ದಳು.

ಬಹಳ ಕಾವ್ಯಾತ್ಮಕವಾಗಿ ಬಯ್ತಾಳೆ ಚಿತ್ರಾ. ನನ್ನ, ‘ಶಕುಂತಲೆ ಹಾಗೆ ಕುಂತಿದೀಯಲ್ಲೆ, ನಿನ್ ಉಂಗುರ ಮೀನು ನುಂಗಿಲ್ಲ, ಯಾವ್ದೋ ದೊಡ್ಡ ತಿಮಿಂಗಿಲವೇ ಎತ್ತಾಕಿಕೊಂಡು ಹೋಗಿದೆ!’ ಅಂದು ನಗಿಸಿದಳು. ಆದರೆ ನನ್ನೊಳಗೆ ಮತ್ತೂ ಗಾಬರಿ. ಅಂವ ದಷ್ಯಂತನ ಹಾಗೆ ನನ್ನ ಮರೆತು ಹೋದ್ರೆ!? ಹೊಟ್ಟೇಲಿ ಮಗುವೂ ಇಲ್ಲ, ಡಿಎನ್‌ಎ ಪರೀಕ್ಷೆಯಾದರೂ ಮಾಡಿಸಲಿಕ್ಕೆ!

ಆದರೆ, ನಿಜಕ್ಕೆ ನನ್ನ ದುಮ್ಮಾನ ಉಂಗುರ ಕಳೆದುಹೋಗಿದ್ದಕ್ಕಲ್ಲ. ದೂರ ದೇಶಕ್ಕೆ ಹೋದ ಮಹರಾಯ ಫೋನ್ ಮಾಡುತ್ತಿಲ್ಲ ಅನ್ನೋದಾಗಿತ್ತು. ನನಗೆ ಇದು ಓದಿನ ಕೊನೆಯ ವರ್ಷ. ಏನೆಲ್ಲಾ ಪ್ಲ್ಯಾನ್ ಇದೆ. ತಿಂಗಳಾದರೆ ಕ್ಯಾಂಪಸ್ ಸೆಲೆಕ್ಷನ್ನಿಗೆ ಬರ್ತಾರೆ. ಅದಕ್ಕೆ ಬೇರೆ ತಯಾರಿ ಮಾಡ್ಕೋಬೇಕು… ಛಿ! ಅವನೆಥ ಹಾಳು ಹುಡುಗ!?

~

ಅವತ್ತಿನ ಸುಡು ಮೂಡನ್ನ ನೆನೆಸಿಕೊಳ್ತ ಕುಳಿತಿದ್ದಾಗ ಇಲ್ಲಿ ಹುಡುಗರಿಬ್ಬರ ಹಾಡು. ಮನೆಗೆ ಬಂದಾಗಲೇ ಈ ಎಲ್ಲ ಬಣ್ಣಗಳನ್ನ ಕಾಣಲು ಸಧ್ಯ. ಅಲ್ಲೂ- ಹಾಸ್ಟೆಲಿನಲ್ಲೂ ನಿತ್ಯ ಹೋಳಿಯೇ. ಆದರೆ ಬಣ್ಣಗಳೆಲ್ಲ ಈಗ ಕುಂತಿದ್ದು ಮರೆಯಾಗುವ ಚಿಟ್ಟೆಯ ರೆಕ್ಕೆಗಳಂಥವು.

ಇಲ್ಲಿ, ಹುಡುಗರಿಬ್ಬರ ಕೈಲಿ ಬಣ್ಣದ ಕೋಲು, ಅದಕ್ಕೆ ಕುಚ್ಚು. ರಾಗವಾಗಿ ಹೇಳ್ತಿರುವ ಪದ್ಯ ಅದೇ… ‘ಅಶ್ವಯುಜ ಶುದಧ ಮಾನವಮಿ ಬರಲೆಂದು… ಲೇಸಾಗಿ ಹರಸಿದೆವು ಬಾಲಕರು ಬಂದು… ನಾರಾಯಣಾ ನಮೋ…’

ಹುಣಸೆ ಬೀಜದಗಲದ ಹಲ್ಲು ಬಿಟ್ಟುಕೊಂಡು, ಕಪ್ಪು ದಾರದ ಉಡಿದಾರದಲ್ಲಿ ಚಡ್ಡಿಯನ್ನ ಬಿಗಿ ಮಾಡಿಕೊಂಡು ಚೂರು ಸೊರಗುಟ್ಟುತ್ತ ಹಾಡ್ತಿರುವ ಮಕ್ಕಳು ಮುದ್ದು ಉಕ್ಕಿಸ್ತಿದ್ದರು. ಅಮ್ಮ ವರನ್ನ ಕರೆದು ತಿಂಡಿ, ದಕ್ಷಿಣೆ ಕೊಟ್ಟಳು. ನನ್ನ ರೇಜಿಗೆಗೆ ಅವಳ ಮೇಲೆ ರೇಗಾಡಿಕೊಂಡು ಟೆರೇಸಿಗೆ ಹೋಗಿದ್ದೆ ನಾನು. ಹುಡುಗರನ್ನ ಮಾತಾಡಿಸ್ವಾಗ ನನ್ನೇ ನೋಡ್ತಿದ್ದಳು. ಸಿಟ್ೀನ ಚರಟ ಹುಡುಕುತ್ತಿದ್ದಳಾ?

ಹುಡುಗರ ಹಾರೈಕೆ ಬೆನ್ನಿಗೇ ಅವರ ಮನೆಯಿಂದ ಫೋನು. ದಸರೆಯ ದಿನ ನಿಶ್ಚಿತಾರ್ಥ! ನನ್ನ ಕಸಿವಿಸಿಯೆಲ್ಲ ಒಟ್ಟಿಗೇ, ‘ನಾರಾಯಣಾ…. ನಮೋ ನಾರಾಯಣಾ!!’

(ಇದು ಏನು ಅಂತ ಸದ್ಯದಲ್ಲೇ ಹೇಳ್ತೀನಿ )