ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ?

ನೂರೊಂದು ನೆನಪು ಎದೆಯಾಳದಿಂದ
ಹಾಡಾಗಿ ಬಂತು ಆನಂದದಿಂದ…

ಎಂಟು ವರ್ಷದ ಮಧು ಗಿಟಾರ್ ಬಾರಿಸ್ತಿರೋ ಹಾಗೆ ಪೋಸು ಕೊಟ್ಕೊಂಡು ಹಾಡ್ತಾ ಇದ್ರೆ, ಮುದ್ದಿಸಿ ಹಿಂಡಿ ಹಿಪ್ಪೆ ಮಾಡ್ಬಿಡ್ಬೇಕು ಅನಿಸ್ತಿತ್ತು.

ಅದೊಂದು ದೊಡ್ಡ ಮನೆತನ. ನೂರೆಂಟು ಕಚ್ಚಾಟ- ಕಿತ್ತಾಟಗಳ ನಡುವೆಯೂ ಆದಿ ಮನೆಯ ಭದ್ರ ತೇಪೆ. ಹಬ್ಬ ಹರಿದಿನ, ಮದುವೆ ಮುಂಜಿ ಅಂದ್ರೆ ಎಲ್ರೂ ಅಲ್ಲಿ ಸೇರಲೇಬೇಕು.
ಊರಗಲ ಹೊಳಪು ಕಣ್ಣೂ, ಮೂಗಿನ ತುದಿ ಮೇಲೆ ಕೋಪ, ಮೊಂಡು ವಾದ ಮತ್ತು ಅಗ್ದಿ ತಲೆ ಹರಟೆ- ಇವು ಆ ಮನೆತನದವರ ಬ್ರ್ಯಾಂಡು. ಅವರೆಲ್ಲರೂ ರಸಿಕ ಜನ. ಹಾಡು ಗೀಡು ಪಂಚಪ್ರಾಣ.

ಅಂಥ ಮನೆತನದ ಪುಟಾಣಿ ಪೋರ ಮಧು. ಅಪ್ಪ ಒಂದು ಕಾಲದ ಗಿಟಾರ್ ಮಾಸ್ಟರ್. ಮಧು ಹುಟ್ಟಿ ಬೆಳೆಯೋ ಹೊತ್ತಿಗೆ ಗಾಂಜಾ ಚರಸ್ ಅಂದ್ಕೊಂಡು, ಅಲ್ಲಿಲ್ಲಿ ದುಡ್ಡು ಕಳ್ಕೊಂಡು ಬೇಕಾರ್ ಆಗಿಬಿಟ್ಟಿದ್ದ. ಇದೀಗ ಆದಿಮನೆಗೆ ಬಂದ್ಕೊಂದು ಅದ್ಯಾವ್ದೋ ಹಳೆ ಜಾಗದ ವಿಷ್ಯದಲ್ಲಿ ಕ್ಯಾತೆ ತೆಕ್ಕೊಂಡು ಕುಂತಿದ್ದ. ಅಂಥಾ ಕುಟುಂಬಕ್ಕೆ ನಾನೊಬ್ಬ ಸೊಸೆಯಾಗಿದ್ದೆ.

ಮಧುಗೊಬ್ಬ ಅಕ್ಕ ಬೇರೆ ಇದ್ಲು. ಅವಳೋ, ಶುದ್ಧ ಅಮ್ಮನ ಬಾಲ. ಅಂತೂ ಇಂತೂ ಅತ್ತಿಗೆ ಹಿಡಿತದಲ್ಲಿ ಕುಂಟುತ್ತ ಸಾಗ್ತಿತ್ತು ಅವರ ಮನೆ.  ಮಕ್ಕಳ ಸ್ಕೂಲು, ಫೀಸು, ಸಾಮಾನು, ಸರಂಜಾಮುಗಳ ಹಡದಿಯಲ್ಲಿ ಹೈರಾಣಾಗಿ ಹೋಗ್ತಿದ್ದರವರು. ಸಾಲದ್ದಕ್ಕೆ ಕುಡುಕ ಗಂಡನ ಅವಾಂತರಗಳು ಬೇರೆ.

ಹೀಗೇ ಒಂದು ಫಂಕ್ಷನ್ನಿಗೆ ಆ ಕುಟುಂಬ ಆದಿಮನೆಗೆ ಬಂದಿತ್ತು. ಮನೆ ತುಂಬ ಜನ. ನಾನು ಆ ಕುಟುಂಬದ ಮಕ್ಕಳಿಗೆಲ್ಲ ಹೊಸಾ ಚಿಕ್ಕಮ್ಮ. ಸಹಜವಾಗೇ ಅವುಗಳ ಹಿಂಡು ನನ್ನ ಹಿಂದೆ ಮುಂದೆ. ಮಧೂನ ಅಪ್ಪ ಹಿಂದಿನ ದಿನ ಕೆಲಸದ ಮಂದಿಯೊಟ್ಟಿಗೆ ಕುಡಿದು ತೋಟದಲ್ಲಿ ಬಿದ್ದಿದ್ದ. ನಾಳಿನ ಸೀರೆ ಒದವೆಗಳ ಜಿಜ್ಞಾಸೆ ನಡೆಸಿದ್ದ ಹೆಂಗಸರ ನಡುವೆ ಕುಳಿತಿದ್ದ ಅತ್ತಿಗೆಗೆ ಹೆಳತೀರದ ಚಡಪಡಿಕೆ. ಇತ್ತ ನಾನು, ರಾತ್ರಿ ಹನ್ನೆರಡು ಮೀರುತ್ತ ಬಂದರೂ ಇಸ್ಪೀಟಾಡುತ್ತ ಕುಂತಿದ್ದ ಗಂಡನ ಮೇಲೆ ಸಿಟ್ಕೊಂಡು ರೂಮಿನ ತುಂಬಾ ಟೆಡ್ಡಿಬೇರುಗಳನ್ನ ಬಿಸಾಡಿಕೊಂಡು ಮೂಲೆಯಲ್ಲಿ ಕುಳಿತಿದ್ದೆ.
ಇರೋ ರಂಪಾಟಗಳ ಜತೆ ನನ್ನದು ಬೇರೆ ವಿಪರೀತ ಅನಿಸಿದ್ದಿರಬೇಕು ಅತ್ತೆಗೆ, ಚಿಕ್ಕಮ್ಮನ್ನ ಕರ್ಕೊಂಡು ಬಾ ಅಂತ ಮಧೂನ ಕಳಿಸಿದ್ದರು. ಅಂವ ಬಂದು ಬಾಗಿಲು ತೆಗೆದವನೇ, ರೂಮಿನ ಚೆಲ್ಲಾಪಿಲ್ಲಿ ನೋಡಿ ಗಾಬರಿಯಾಗಿಹೋದ. ಆಳಆಳದ ದನಿ ಅವನದು. ‘ಚಿಕ್ಕಮ್ಮ, ಗೊಂಬೆ ಜೋಡ್ಸಿಕೊಡ್ಲಾ?’ ಅಂದವನ ಕಣ್ಣಲ್ಲಿ ನನ್ನ ಬಗ್ಗೆ ‘ಅಯ್ಯೋ ಪಾಪ’ ಕಂಡಿತ್ತು!

~
ಅದು, ಪೂಜೆ ಪುನಸ್ಕಾರಗಳೆಲ್ಲ ಮುಗಿದ ಲೋಕಾಭಿರಾಮದ ಸಂಜೆ. ಮಕ್ಕಳು ಅಂಗಳದ ತುಂಬ ಚಾಟರ್ ಬಿಲ್ಲು, ಗಾಳಿಪಟ ಅಂತೆಲ್ಲ ಹಾರಾಡ್ತಿದ್ದವು. ಯಾರನ್ನೂ ಎನನ್ನೂ ಕೇಳಿ ಅಭ್ಯಾಸವಿಲ್ಲದ ಮಧು, ತನ್ನ ಕಸಿನ್ನುಗಳ ಸಂಪತ್ತನ್ನ ಕಡೆಗಣ್ಣಲ್ಲಿ ನೋಡುತ್ತ, ತನ್ನ ಬಳಿ ಇಲ್ಲದ್ದನ್ನು ಉದಾಸೀನದಿಂದಲೇ ನೋಡಲು ಪ್ರಯತ್ನ ಪಡುತ್ತ ಕುಳಿತಿದ್ದಿದು ಗೊತ್ತಾಗುತ್ತಿತ್ತು. ಅವನ ತಲೆ ನೇವರಿಸ್ತಾ ಕಾಡುಹರಟೆ ಹರಟುತ್ತಾ ಕೊನೆಗೂ ನಾನು ವಿಶ್ವಾಸ ಸಂಪಾದಿಸ್ಕೊಂಡೆ. ಮಗುವಿನ ಮನಸಲ್ಲಿ ಏನಿದೆ ಅಂತ ತಿಳೀಬೇಕಿತ್ತು ನಾನು. ನನ್ನ ಮಾತುಕತೆ ಅವಂಗೂ ಹಿತ ತಂದಿತೇನೋ, ಹಗೂರ ಕೇಳಿದ, “ಚಿಕ್ಕಮ್ಮಾ, ಚಾಟರ್ ಬಿಲ್ಲು ಬೇಕು. ಕೊಡಿಸ್ತೀರಾ?”

ಮುಸ್ಸಂಜೆಯಾಗುತ್ತ ಬಂದಿತ್ತು. ಇನ್ನು ಭಜನೆ ಮಾಡಿ ರಾತ್ರಿಯ ಇತರ ಕೆಲಸಗಳು ಶುರುವಾಗಬೇಕು. ನಾನು, “ಓಹೋ, ಎರಡು ಕೊಡಿಸ್ತೀನಿ. ಆದ್ರೆ, ನಾಳೆ ಬೆಳಗ್ಗೆ. ಸರೀನ?” ಅಂದೆ. ಮಧು ಮುಖ ಅಗಲವಾಯ್ತು. ಅವನನ್ನ ಹಗೇ ಎತ್ಕೊಂಡು ಹೋಗಿ ರೂಮಲ್ಲಿದ್ದ ಪೆನ್ನು ಪೆನ್ಸಿಲುಗಳನೆಲ್ಲ ಕವರಲ್ಲಿ ಹಾಕಿಕೊಟ್ಟು ಖುಷಿ ಪಟ್ಟೆ. ಕುಣಿಯುತ್ತ ಓಡಿ ಹೋದ ಹುಡುಗ.
ಆದರೆ,
ಆ ಖುಷಿಯ ಆಯಸ್ಸು ಹತ್ತೇ ನಿಮಿಷ. ಕುಡಿದು ಹೆಚ್ಚಾಗಿ ತೂರಾಡುತ್ತ ಬಂದ ಅವನಪ್ಪ, ಜಾಗದ ವಿಷಯಕ್ಕೆ ಪಂಚಾಯ್ತಿ ಶುರುವಿಟ್ಟ. ಮನೆ ಹುದುಗರು ದನಿ ಎತ್ತರಿಸಿದರು. ಅಂವ ತೋಳು ಮಡಚಿದ. ಗದ್ದಲ ಜೋರಾಯ್ತು. ನೆಂಟರಲ್ಲಿ ಎರಡು ಬಣವಾಯ್ತು. ನೋಡ ನೋಡ್ತಲೇ ಅಂವ ತನ್ನ ಹೆಂಡತಿ ಮಕ್ಕಳನ್ನ ದರದರ ಎಳ್ಕೊಂಡು ಹೊರಟೇಬಿಟ್ಟ. ಹೊರಟು, ದಾರಿ ತಿರುಗೋವರೆಗೂ ಮಧು ಹೆಜ್ಜೆ ತಡವರಿಸ್ತಲೇ ಇತ್ತು. ತೀರಾ ಹಾದಿ ತಿರುಗುವಾಗ ಒಂದ್ಸಲ ಹೊರಳಿ, ನನ್ನ ನೋಡಿದ, ಅಷ್ಟೇ.

~
ಎಲ್ಲ ಕಳೆದು ಮೂರ್ನಾಲ್ಕು ತಿಂಗಳಾಗಿರಬಹುದು. ಒಂದು ಕಪ್ಪು ಸಂಜೆ, ಫೋನು ಕರ್ಕಶವಾಗಿ ಬಡ್ಕೊಳ್ಳತೊಡಗಿತು. ಅತ್ತಲಿಂದ ಬಂದ ಸುದ್ದಿ ಇನ್ನೂ ವಿಕಾರವಾಗಿತ್ತು. ಮಧೂಗೆ ಬ್ಲಡ್ ಕ್ಯಾನ್ಸರ್! ಮಣಿಪಾಲಕ್ಕೆ ಅಡ್ಮಿಟ್ ಮಾಡಿದಾರಂತೆ…
ಮಧು ಮೈಯಲ್ಲಿನ ರಕ್ತ ಮೊಸರುಮೊಸರಾಗಿತ್ತು. ಎಂಟರ ಮಗು ನೋವಿಂದ ನರಳೋದನ್ನ ನೋಡಲಾಗದೆ ದೊಡ್ಡವರು ಮೂರ್ಛೆ ಹೋಗ್ತಿದ್ದರು. ಡಾಕ್ಟರ್ ಬೇರೆ, ‘ಮೊದ್ಲೇ ಕರ್ಕೊಂಡ್ ಬಂದಿದ್ರೆ ಏನಾದ್ರೂ ಮಾಡಬಹುದಿತ್ತು ಅಂದಂದು ಹೊಟ್ಟೆ ಉರಿಸ್ತಿದ್ದರು.

ಮಗುವಿನ ಮೈ- ಕೈಯೆಲ್ಲ ತೂತು ಮಾಡಿ ಪೈಪು ತೂರುತ್ತಿದ್ದರು. ಅತ್ತಿಗೆಗೆ ಬಹುಶಃ ಎದೆಯಲ್ಲಿ ಚೂರಿ ಹಾಕಿದಹಾಗೆ ಆಗ್ತಿತ್ತೇನೋ. ಮಾತು ಕಳಕೊಂಡು, ಕಣ್ಣೂ ಬತ್ತಿಸಿಕೊಂಡು ಮೂಲೆ ಹಿಡಿದುಬಿಟ್ಟಿದ್ದರು. ನಾಲ್ಕು ದಿನಗಳಲ್ಲಿ ಮಧು ಕಣ್ಮುಚ್ಚಿದ್ದ.
ಆದಿಮನೆಗೆ ಮಧುವಿನ ದೇಹ ತರಲಾಯ್ತು. ಆಡ್ತಿದ್ದ ಮಗೂನ ಬಿಳೀ ಬಟ್ಟೆಯಲ್ಲಿ ಸುತ್ತಿ ಮಲಗಿಸಿದ ಹಾಗಿತ್ತು. ಅವನ ದೇಹವನ್ನ ಹಿತ್ತಲ ಬ್ಯಾಣದ ದೊಡ್ಡ ಮಾವಿನಮರದ ಬುಡದಲ್ಲಿ ಹೂತಿದ್ದಾಯ್ತು.

ಮಧು ಅಪ್ಪ ಅವತ್ತು ಕುಡಿದಿರಲಿಲ್ಲ. ಸೀದಾ ಬಂದವ, ತುಂಬು ಬಸುರಿಯಾಗಿದ್ದ ನನಗೆ ಹೇಳಿದ, “ನೋಡು, ನಿಂಗೆ ಗಂಡುಮಗು ಹುಟ್ಟಿದ್ರೆ, ಮಧು ಅಂತಲೇ ಹೆಸರಿಡು ಆಯ್ತಾ?”
ಅಂವ ಹೇಳಿದ ಹಾಗೆ ನಂಗೆ ಗಂಡುಮಗುವೇ ಹುಟ್ಟಿತು. ಆದ್ರೆ, ಮಧು ಹೆಸರಿಡೋಕೆ ಧೈರ್ಯ ಸಾಲದೆ ಹೋಯ್ತು.

~
ಮೊನ್ನೆ ಆಚೀಚೆ ಮಕ್ಕಳು ಗೇರು ಉದುರಿಸ್ತಿದ್ರು. ಕೈಯಲ್ಲಿ ಚಾಟರ್ ಬಿಲ್ಲ. ಮಗ ಬಂದ. ಒಂದೇ ಸಮ, ಅಮ್ಮಾ, ಚಾಟರ್ ಬಿಲ್ಲು ಕೊಡ್ಸು ಅಂತ ದುಂಬಾಲುಬಿದ್ದ. ಅದಾಗಲೇ ಏಳು ವರ್ಷ ಕಳೆದಿತ್ತು. ನಾನೂ ಬಲಿತಿದ್ದೆ. ಮಕ್ಳು ಏನೇ ಕೇಳಿದ್ರೂ ಕೂಡ್ಲೇ ಕೊಡಿಸಿಬಿಡಬಾರ್ದು ಅಂತ ಬುಕ್ಕು ಓದಿ ಕಲ್ತುಕೊಂಡಿದ್ದೆ. ಬೊಬ್ಬೆ ಹೊಡೀತಿದ್ದ ಮಗನ್ನ ಸಮಾ ಬಯ್ದು ಅಟ್ಟಿಬಿಟ್ಟೆ.

ಆಗ ಇದ್ದಕ್ಕಿದ್ದ ಹಾಗೇ, ಆಳಆಳದ ದನಿಯೊಂದು ಎದ್ದು ಬಂತು… “ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ!?”
ಒಮ್ಮೆಗೆ ಬೆಚ್ಚಿಬಿದ್ದೆ. ಹುಚ್ಚಿ ಹಾಗೆ ಮಗುವನ್ನ ಕೂಗುತ್ತ ಹೊರಟವಳಿಗೆ ಅಂವ ಆಸುಪಾಸಲ್ಲೆಲ್ಲೂ ಕಾಣಲೇ ಇಲ್ಲ. ಕೆಟ್ಟ ಯೋಚನೆಗಳೆಲ್ಲ ಸಾಲುಗಟ್ಟಿ ನಿಂತುಬಿಟ್ಟಿದ್ದವು ಅದಾಗಲೇ. ಎದ್ದೂ ಬಿದ್ದೂ ಬ್ಯಾಣಕ್ಕೇ ಓಡಿತು ಕಾಲು.

ಅಲ್ಲಿ,
ಮಾವಿನ ಮರದ ಕೆಳಗೆ ನನ್ನ ಮಗು!
ಓರಗೆ ಹುಡುಗರೊಟ್ಟಿಗೆ ಕಾಯಿ ಉದುರಿಸೋದ್ರಲ್ಲಿ ಮುಳುಗಿಹೋಗಿತ್ತು… ಅದರ ಕೈಯ್ಯಲ್ಲಿ ಚಾಟರ್ ಬಿಲ್ಲು!

ನನ್ನ ಹೃದಯಕ್ಕೆ ಆ ಘಳಿಗೆಯಲ್ಲಿ ಮಧು, ನನ್ನ ಮಗನಾಗಿ ಬಂದಿದ್ದ. ಎದೆಯಾಳದಲ್ಲಿ ಹುದುಗಿಹೋಗಿದ್ದ ಅವನ ನೆನಪು ಕಣ್ಣಂಚಲ್ಲಿ ಮಿನುಗಿತ್ತು.

’ಕೊಕನಕ್ಕಿ’ ಯ ಹೆಸರು ಹುಡುಕುತ್ತಾ…

ಪ್ರಾಮಾಣಿಕವಾಗಿ ಹೇಳ್ತೀನಿ, ನನಗೊಂದು ದುರ್ಬುದ್ಧಿ ಇದೆ. ಅದು ಬಹುತೇಕರಿಗೆ ಇರಬಹುದಾದ ಮೋಸ್ಟ್ ಕಾಮನ್ ದುರ್ಬುದ್ಧಿಯೂ ಹೌದು. ಅದೇನು ಅಂತ ಈ ಲೇಖನ ಓದುವಾಗ ನಿಮ್ಗೆ ಗೊತ್ತಾಗತ್ತೆ.

ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ನಾ, ಅಚಾನಕ್ಕಾಗಿ ಒಬ್ಬಳನ್ನ ನೋಡಿದೆ. ಅದೇ ಮುಖ, ಅದೇ ನಗು, ಅದೇ ಉದ್ದದ ಕಾಲು… ಕೊಕನಕ್ಕಿ!!
ಇನ್ನೇನು, ನಾನು ಕೂಗೋದೊಂದು ಬಾಕಿ!

ಹೀಗೆ ನಂಗೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಯಾರ್ಯಾರೋ ಊರವರು ಕಾಣ್ತಿರ್ತಾರೆ. ಕೆಲವರಿಗೆ ನನ್ನ ಗುರುತು ಸಿಕ್ಕು, ನನಗೆ ಅವರದು ಸಿಗದೆ (ಅದರಲ್ಲೂ ಯಾರೋ ದೂರದ ನೆಂಟರದ್ದು) , ‘ಗಾಯತ್ರಿಗೆ  ಜಂಭ ಬಂದ್ಬಿಟ್ಟಿದೆ ಕಣೇ ಶೈಲಾ’ ಅಂತ ಅಮ್ಮನ ಹತ್ರ ದೂರು ಒಯ್ದಿರ್ತಾರೆ. ಅಮ್ಮ ಅಂತೂ ಸಿಕ್ಕಿದ್ದೇ ಚಾನ್ಸು ಅಂತ ‘ಅಯ್ಯೋ! ಈ ಅಪ್ಪ ಮಗ್ಳಿಬ್ರೂ ಒಂದೇ ಜಾತಿ. ಮನುಷ್ಯ ಮಾತ್ರದವರ ಗುರುತು ಸಿಗೋಲ್ಲ ಅವ್ರಿಗೆ!!’ ಅಂದುಬಿಟ್ಟಿರ್ತಾಳೆ.

ಅದೇನೇ ಇರಲಿ. ಹೀಗೆ ಮೊನ್ನೆ ಕೊಕನಕಿಯನ್ನ ನಾನು ನೋಡಿದ್ದು ಮತ್ತಷ್ಟು ಹಳೆ ನೆನಪುಗಳ ಭಂಡಾರದ ಕೀಲಿ ತೆರೆದಂತೆ ಆಗಿತ್ತು. ಗೊಂಬೆ ಹಬ್ಬಕ್ಕೆ ಭಾರತ ಮಾತೆಯ ಪುಟ್ಟದೊಂದು ಗೊಂಬೆ ಹುಡುಕುತ್ತ ನಿಂತಿದ್ದೆ ನಾನು. ಅಗೋ, ಅಲ್ಲಿ, ತನ್ನ ಕಾಲಿನಷ್ಟೆತ್ತರದ ಮಗನನ್ನ ‘ಮಂಡೆ ಸಮ ಇಜ್ಜ?’ ಅಂತೇನೋ ಗದರುತ್ತ ಅವಳು ನಿಂತಿದ್ದಳು. ನೋಡಿದ್ದೇ ತಡ, ಗೊಂಬೆ ಹುಡುಕೋ ಪ್ರೋಗ್ರಾಮನ್ನ ಪೋಸ್ಟ್ ಪೋನ್ ಮಾಡಿ ಕಣ್ಣುಗಳನ್ನ ಅವಳ ಹಿಂದೆ ಅಟ್ಟಿಬಿಟ್ಟೆ, ಅವಳು ಆ ಬೀದಿಯ ಇಳಿಜಾರಿನಲ್ಲಿ ಕಳೆದುಹೋಗುವವರೆಗೂ.

ಅರೆ! ಅವಳ ಹೆಸರೇನು!? ಇದ್ದಕ್ಕಿದ್ದ ಹಾಗೆ ತಲೆ ಕೆರೆತ ಶುರುವಾಯ್ತು. ಅವಳು ನನಗೆ ಅಷ್ಟೇನೂ ಪರಿಚಿತಳಲ್ಲದ ನನ್ನ ಸೀನಿಯರ್ರು. ಒಂಥರಾ ಗಂಡುಗಂಡು ದನಿ ಮಾಡ್ಕೊಂಡು ರ್ಯಾಗಿಂಗ್ ಮಾಡ್ಕೊಂಡು ಓಡಾಡ್ತಿದ್ದ ಆ ಹುಡುಗಿಯನ್ನ  ನಾವು ಹಿಂದಿನಿಂದ ಕೊಕನಕಿ ಅಂತ ಆಡಿಕೊಳ್ತಿದ್ವಿ. ಅವಳ ಊದ್ದದ ಕೊಕ್ಕರೆ ಕಾಲು ಅವಳಿಗೆ ಆ ಹೆಸರಿಡುವಂತೆ ಮಾಡಿತ್ತು. ತುಳುವಿನ ಕೊಕನಕ್ಕಿ, ಕನ್ನಡದಲ್ಲಿ ಕೊಕ್ಕರೆ.

ನಮಗೆ ಆಗೆಲ್ಲಾ (ಈಗಲೂ!) ಅದೊಂದು ಮೋಜು. ಅಡ್ಡ ಹೆಸರುಗಳನ್ನಿಡೋದು. ಇದು ಪ್ರೈಮರಿ ದಿನಗಳಿಂದಲೂ ಅಂಟಿಕೊಂಡ ಗೀಳು ಬಿಡಿ.

ಮೊಟ್ಟ ಮೊದಲು ನಾನು, ನನ್ನ ತಮ್ಮ ಇದನ್ನ ಪ್ರಯೋಗ ಮಾಡಿದ್ದು ಲಾರಾ ಟೀಚರಿನ ಮೇಲೆ. ಅವರ ಬಗ್ಗೆ ಮಾತಾಡುವಾಗೆಲ್ಲಾ ‘ಕುಳ್ಳಿ ಟೀಚರ್’ ಅಂದು, ಅದನ್ನ ಕೇಳಿಸ್ಕೊಂಡ ಕ್ಲಾಸ್ ಮೇಟು ನಮ್ಮನ್ನ ಬ್ಲ್ಯಾಕ್ ಮೇಲ್ ಮಾಡುವವರೆಗೂ ಸಂಗತಿ ಗಂಭೀರವಾಗಿತ್ತು.
ಸೂಸನ್ ಮೇರಿ ಟೀಚರು ಉದ್ದಕ್ಕಿದ್ರು. (ತಮ್ಮ ಅವರನ್ನ ಸೊಸೆ ಮೇರಿ ಅಂತಿದ್ದ!). ಅವರನ್ನ ಅಮಿತಾಬ್ಬಚ್ಚನ್ ಅಂತ ಕರೀತಿದ್ವಿ. ಅಮ್ಮ ಪೆಟ್ಟು ಕೊಟ್ಟಿದ್ಳು. :(
ಆದರೆ ಹೀಗೆ ಟೀಚರ್ ಗಳಿಗೆ ಹೆಸರಿಡೋದು ಅತಿರೇಕಕ್ಕೆ ಹೋಗಿ ಅಮ್ಮ ಸಮಾ ಬಾರಿಸಿದ್ದು, ನಾವು ಮಾಸ್ಟರೊಬ್ಬರಿಗೆ ಚಾರ್ ಕೋಲ್ ಅಂತ ಹೆಸರಿಟ್ಟಾಗ. ಕರೀ ಕಪ್ಪಗಿದ್ದ ಸೈನ್ಸ್ ಮಾಸ್ತರು ಯಾವಾಗಲೂ ನೋಟ್ಸ್ ತೋರಿಸು ಅಂತಾರೆ ಅಂತ ನಮಗೆಲ್ಲ ಕೋಪ. ನನಗಾದರೋ, ನೋಟ್ಸ್ ಬರೆಯೋದಂದರೇನು ಅನ್ನೋದೇ ಗೊತ್ತಿರಲಿಲ್ಲ. ಸಾಲದ್ದಕ್ಕೆ, ಅವರು ಹೊಡೀತಿದ್ದರು ಕೂಡ.  ಕಿತಾಪತಿಗಳಿಲ್ಲ ಲೀಡರ್ ಆಗಿದ್ದ ನನ್ನನ್ನ ಮುಂದಿಟ್ಟುಕೊಂಡು ಸಭೆ ನಡೆಸಿದ ಗೆಳತಿಯರು, ನಾನು ಹೆಕ್ಕಿ ತೆಗೆದ ಚಾರ್‍ ಕೋಲ್ ಹೆಸರನ್ನು ಸರ್ವಾನುಮತದಿಂದ ಅಂಗೀಕರಿಸಿದ್ದರು.
ಹೀಗೇ ಒಬ್ಬ ಗೆಳತಿ ಮನೆಗೆ ಬಂದಾಗ ಚಾರ್ ಕೋಲಿನ ಸಂಗತಿ ಬಂದು, ಅಮ್ಮ ಕಿವಿಗೊಟ್ಟು ಕೇಳಿ ನನ್ನನ್ನ ಬಡಿದು, ಅವಳನ್ನ ಬಯ್ದು, ಅವರಮ್ಮನಿಗೂ ಚಾಡಿ ಹೇಳಿಬಿಟ್ಟಿದ್ದಳು! ಆಗ ನಾನು ಹೈಸ್ಕೂಲು.
ಸಂಜೆ ನನ್ನನ್ನ ತೊಡೆಮೇಲೆ ಕೂರಿಸ್ಕೊಂಡ ಅಮ್ಮ, ಗುರುಗಳಿಗೆ ಗೌರವ ಕೊಡಬೇಕು ಇತ್ಯಾದಿ ಪಾಠ ಹೇಳಿದ್ದಳು. ಅವತ್ತೇ ಕೊನೆ. ನಾನು ಟೀಚರ್ ಗಳಿಗೆ ಅಡ್ಡ ಹೆಸರಿಡೋದು ಬಿಟ್ಟುಬಿಟ್ಟೆ.

ಆದರೇನು? ಊರಲ್ಲಿ ಬೇರೆ ಜನರೂ ಇದಾರಲ್ಲ?
ಮೀನು ಇಲಾಖೆಯಲ್ಲಿ ಕೆಲಸ ಮಾಡುವ ಮಂಜುನಾಥರ ಹೆಂಡತಿ ನಮ್ಮ ಬಯಲ್ಲಿ ಮೀನ್ ಮಂಜಿಯಾಗಿದ್ದರು. (ಅವರು ನಮಗೆ ಪೇರಳೆ ಹಣ್ಣು ‘ಕದಿಯಲು’ ಬಿಡ್ತಿರಲಿಲ್ಲ :( ). ಗೊಬ್ಬರದ ಪರ್ಬುಗಳು ನಮ್ಮ ಹಾಳು ಬಾಯಲ್ಲಿ ‘ಸೆಗಣಿ ಪರ್ಬು’ ಆಗಿದ್ದರೆ, ವೆಂಕಟ ರಮಣ ದೇವಸ್ಥಾನದ ಭಟ್ಟರು ‘ಬಾಂಡ್ಲೆ ಭಟ್ಟರು’ ಆಗಿಬಿಟ್ಟಿದ್ದರು.

ಕೆಲವೊಮ್ಮೆ ಪುಸ್ತಕದ, ಟೀವಿಯ ಕ್ಯಾರೆಕ್ಟರುಗಳೂ ನಮ್ಮ ನಾಮಕರಣದ ಕಷ್ಟ ನೀಗಿಸಲು ಸಹಕರಿಸ್ತಿದ್ದವು. ಅದ್ಯಾಕೋ ಪಕಕ್ದ ಮನೆ ಪಾಂಡಣ್ಣನ್ನ ‘ಬಾಲು’ ಅಂತಲೂ, ಕೆಳಗಿನ ಬೀದಿಯ ಬೆನ್ನಿಯನ್ನ ‘ಬಗೀರಾ’ ಅಂತಲೂ, ಎಸ್ಟೇಟಿನ ಶರೀಫರನ್ನ ‘ಶೇರ್ ಖಾನ್’ ಅಂತಲೂ, ಪೀಚಲು ಹುಡುಗ ವಿನ್ನುವನ್ನ ‘ಮೋಗ್ಲಿ’ ಅಂತಲೂ ಕರೀತಿದ್ದೆವು. ಇವೆಲ್ಲ ಜಂಗಲ್ ಬುಕ್ಕಿನ ರೋಲುಗಳು ಅಂತ ಪ್ರತ್ಯೇಕ ಹೇಳಬೇಕಿಲ್ಲ ತಾನೆ?
ಕೀರಲು ದನಿಯ ರೇಣುಕೆಯನ್ನ ನಾನು ಈಗಲೂ ಪೀಂಚಲು ಅಂತಲೇ ಕರೆಯೋದು. ನಾನು ಹಾಗೆ ಹೇಳೋದನ್ನ ಕೇಳಿ ಕೇಳಿ ಉಳಿದವರೂ ಕಾರಣ ಗೊತ್ತಿಲ್ಲದೆ ಹಾಗೇ ಶುರುಹಚ್ಚಿಕೊಂಡು ಅವರೆಲ್ಲರ ಬಾಯಲ್ಲೂ ಪೀಂಚಲು ಅನ್ನೋ ಹೆಸರೇ ನಿಂತುಬಿಟ್ಟಿದೆ. ಪೀಂಚಲು, ಮಲೆಗಳಲ್ಲಿ ಮದುಮಗಳು ಕಾದಂಬರಿಯ ಒಂದು ಪಾತ್ರ.

ಆಗ – ನಾನು ಟೀಚರ್ ಗಳಿಗೆ ಹಾಗೆಲ್ಲ ಹೆಸರಿಟ್ಟು ಕರೆಯೋದನ್ನ ನಿಲ್ಲಿಸಿಬಿಟ್ಟೆ ಅಂತ ಹೇಳಿದ್ನಲ್ಲ? ಆದ್ರೆ ಕಾಲೇಜಿಗೆ ಬಂದ್ಮೇಲೆ ಸ್ವಲ್ಪ ತಪ್ಪಬೇಕಾದ ಪ್ರಸಂಗ ಬಂದುಬಿಡ್ತು. ನಮ್ಮ ಲೆಚ್ಚರರ್ ಒಬ್ರನ್ನ ಇಡೀ ಕಾಲೇಜಿಗೆ ಕಾಲೇಜೇ ‘ಪಾಂಡು’ ಅಂತ ಕರೀತಿತ್ತು. ನಾನೊಬ್ಬಳು ಅವರ ಸರಿ ಹೆಸರು ಹಿಡಿದು ಹೇಳಿದರೆ ಅವರಿಗೆ ಸುಲಭಕ್ಕೆ ತಲೆಗೆ ಹೋಗ್ತಿರಲಿಲ್ಲ. ಹೀಗಾಗಿ ನಾನೂ ಪಾಂಡು ಅನ್ನೋದನ್ನೇ ರೂಢಿಸ್ಕೊಂಡ್ ಬಿಟ್ಟಿದ್ದೆ.

ಮತ್ತೊಂದು ದಿನ, ನಾನು ವಿಪರೀತ ಹಸಿವಾಯ್ತು ಅಂತ ಇಂಗ್ಲಿಶ್ ಪೀರಿಯಡ್ ಬಂಕ್ ಮಾಡಿ ಕ್ಯಾಂಟೀನಿಗೆ ಹೋಗಿ ಕುಂತಿದ್ದೆ. ಅದನ್ನ ನಮ್ಮ ಲಚ್ಚರರ್ರು ನೋಡಿಬಿಟ್ಟರು. ಆಮೇಲೆ ನನಗಿಂತ ಒಂದೇ ವರ್ಷ ಸೀನಿಯರಾಗಿದ್ದ ನನ್ನಣ್ಣನ ಹತ್ರ ಹೇಳಿಬಿಟ್ಟರು. ಅವತ್ತಿಂದ ಅನಿವಾರ್ಯವಾಗಿ ನಾನು ಅವರನ್ನ ‘ಕಾರ್ಟೂನ್’ ಅಂತ ಕರೀಬೇಕಾಯ್ತು. (ಯಾಕೇಂದ್ರೆ ಅವ್ರು ಕಾರ್ಟೂನ್ ಬರೀತಿದ್ರು). ಆಮೇಲೆ ಅದು ನನ್ನ ಫ್ರೆಂಡ್ಸಿಗೂ ಇಷ್ಟವಾಗಿ, ಅವರೆಲ್ಲರೂ ಹಾಗೇ ಕರೆಯೋಕೆ ಶುರು ಮಾಡಿದ್ದು ಖಂಡಿತ ನನ್ನ ತಪ್ಪಲ್ಲ ಅಲ್ವಾ?

ಹೀಗೇ ನಾನು- ತಮ್ಮ ಸೇರಿ ಇಟ್ಟ ಹೆಸರುಗಳು, ಗೆಳತಿಯರೊಟ್ಟಿಗೆ ಇಟ್ಟ ಹೆಸರುಗಳು ಸಾಕಷ್ಟಿವೆ. ಜಿಡ್ಡು,  ಎಪ್ಡು, ಬೋರ್ ವೆಲ್, ಟಿನ್, ಮೊಳೆ, ಕಾಳು, ಡಬ್ಬ, ಕಾಂಗ್ರೆಸ್, ತುರುಚಿಗಿಡ, ತಬಲ, ಕೆಸ, ಮುಂಗೇರಿ ಲಾಲ್, ಫಟೀಚರ್, ಕ್ರೇಜಿ ಕರ್ನಲ್, ಡೆಡ್ಲಿ, ಕರ್ಮ ವೀರ (ಇದು- ಯಾವಾಗಲೂ ‘ಕರ್ಮ’ ಅಂತಿದ್ದ ನಮ್ಮ ಮಾವನಿಗೆ ಇಟ್ಟಿದ್ದಿದ್ದು!), ಜಲ್ಮೇಪಿ ದೊಡ್ಡಮ್ಮ, ಮೂತಿ ಮುರ್ಕಿ, ತುರೇಮಣೆ (ಸ್ಸಾರಿ…), ಗಾಂಧಿ, ಆಜಾದ್, ಬಿಳಿ ಜಿರಳೆ…. ಹೀಗೇ…

ಕೊನೆಯದಾಗಿ, ಅಣ್ಣನ ಸ್ನೇಹಿತ ಒಬ್ಬ ಇದ್ದ. ಅವನದು ಕೋಲು ಕೋಲು ಮೈ. ನಾನು ಅವಂಗೆ ಕೋಲ ಮಹರ್ಷಿ ಅಂತ ಹೆಸರಿಟ್ಟಿದ್ದೆ. ನಮ್ಮ ನಮ್ಮ ಮಾತಲ್ಲಿ ಮಹರ್ಷಿ ಕಳೆದು ಬರೀ ಕೋಲ ಉಳೀತು. ಕೋಲ ಅನ್ನುತ್ತ ಅನ್ನುತ್ತ ಅದಕ್ಕೆ ಕೋಕಾ ಸೇರಿ ‘ಅವನೆಲ್ಲಿ? ಕೋಕಾ ಕೋಲ?’ ಅನ್ನುವವರೆಗೆ ಬಂತು. ಕೊನೆಯಲ್ಲಿ ಕೋಲ ಹೋಗಿ ’ಕೋಕ್ಸ್’ ಉಳೀತು. ಅವನ ಬಗ್ಗೆ ಮಾತಾಡುವಾಗ ನಾವಿವತ್ತು ‘ಕೋಕ್ಸ್’ ಅಂತಲೆ ಮತಾಡೋದು! ಮೊನ್ನೆ ಇದಕ್ಕೆ ಕಾರಣ ಹುಡುಕುವಾಗಲೇ ನನಗೆ ನಾನಿಟ್ಟ ಮೂಲ ಹೆಸರು ಹೊಳೆದಿದ್ದು!
~
ಭಾರತ ಮಾತೆಯ ಶೋಧದಲ್ಲಿ ತೊಡಗಿರ್ವಾಗಲೇ ನನ್ನ ತಲೇಲಿ ಇವೆಲ್ಲ ಹಣಕಿ, ಒಬ್ಬೊಬ್ಬಳೆ ನಗಾಡಿಕೊಳ್ಳುವ ಹಾಗೆ ಮಾಡಿ ಓಡಿಹೋದವು.
ಅಷ್ಟಾದರೂ, ಅದಕ್ಕೆ ಕಾರಣಳಾದ ಕೊಕನಕಿಯ ನಿಜವಾದ ಹೆಸರು ನೆನಪಾಗಲಿಲ್ಲ.
ಒಂಥರಾ ಕಡಿತ ಶುರುವಾಯ್ತು! ತಮ್ಮನಿಗೆ ಕಾಲ್ ಮಾಡಿದೆ. ಪಾಪ ಅದ್ಯಾವ ವಯರನ್ನ ಹಲ್ಲಲ್ಲಿ ಕಚ್ಚಿಕೊಂಡು ಒದ್ದಾಡ್ತಿದ್ದನೋ, ಫೋನ್ ಕಟ್ ಮಾಡಿದ. ನಾನು ಮತ್ತೆ ಮಾಡಿದ. ರಿಸೀವ್ ಮಾಡಿದವನೇ, ‘ಏಣೇ ಅಷ್ಟ್ ಅರ್ಜೆಂಟು!?’ ಅಂತ ರೇಗಿದ.
ನಾನು ‘ಕೊಕನಕಿಯನ್ನ ನೋಡಿದೆ ಕಣೋ!’ ಅಂತ ಸಂಭ್ರಮಿಸಿದೆ. ಅಂವ ಎದುರಿಗಿದ್ದಿದ್ದರೆ ಕೊಂದೇಬಿಡ್ತಿದ್ದನೇನೋ? ‘ಆರತಿ ಎತ್ಬೇಕಿತ್ತು’ ಅಂತ ಬಯ್ದು ಫೋನ್ ಕಟ್ ಮಾಡಿದ.

ನಾನು ಉರ್ರ್ ಅಂದುಕೊಂಡು ಮನೆಗೆ ಹೋಗಿ ಓದುತ್ತ ಕುಳಿತಿದ್ದಾಗ ಅವನ ಫೋನು ಬಂತು.  “ಸಾರಿ, ಬ್ಯುಸಿ ಇದ್ದೆ”  ಅಂತ ಪಾಲಿಶ್ ಮಾಡಿಕೊಂಡೇ ಕೊಕನಕಿ ಬಗ್ಗೆ ವಿಚಾರಿಸಿದ. ಅವಳ ನಿಜ ಹೆಸರು ಏನು ಅಂತ ಐದು ನಿಮಿಷ ಯೋಚನೆ ಮಾಡಿ, ‘ಇವ್ಳನ್ನ ಬಿಡೋಕೆ ಊರಿಗ್ ಹೋಗ್ತೀನಲ್ಲ, ಪತ್ತೆ ಮಾಡ್ಕೊಂಡ್ ಬರ್ತೀನಿ ಬಿಡು’ ಅಂದು ಸಮಾಧಾನ ಮಾಡಿದ.

ಅಂದಹಾಗೆ, ಕೊಕನಕಿ ನನ್ನನ್ನ ಅಲ್ಲಿ ನೋಡಿದ್ದಳಾ?  ನೋಡಿ ಗುರುತು ಸಿಕ್ಕಿದ್ದಿದ್ದರೆ, ‘ಅರೆ! ಲಿಲ್ಲಿಪುಟ್!!’ ಅಂದ್ಕೊಂಡಿದ್ದಾಳು…
ಹೌದು… ನಂಗೊತ್ತು…
ಅವ್ರೆಲ್ಲಾ ಐದಡಿ ಸೊನ್ನೆ ಇಂಚಿನ ನನ್ನನ್ನ ‘ಲಿಲ್ಲಿಪುಟ್’  ಅಂತ ಕರೀತಿದ್ರು!

ಕೌಲೇದುರ್ಗದ ಕಥೆ

ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ ಇರೋದ್ರಿಂದ ಪ್ರವಾಸ ಕೂಡ ಸುಲಭವಲ್ಲ.

ಇರಲಿ. ಕವಲೇದುರ್ಗ ಓದಿ, ಹೇಗನಿಸಿತು ಹೇಳಿ. ಪ್ರವಾಸ ಕಥನ ಹಳೆ ನೆನಪಿನ ಆಧಾರದ ಮೇಲೆ ಬರೀಬಹುದಾ? ಹೇಳಿ. ನನಗೆ ನಿಮ್ಮ ಸಲಹೆ ಬೇಕು.

ಣ್ಣ ಸೈಕಲ್ಲೊರೆಸಿಟ್ಟುಕೊಂಡು ಬ್ಯಾಟು ಬಾಲು ಕ್ಯಾರಿಯರ್ರಿಗೆ ಸೆಕ್ಕಿಸಿ ತಯಾರಾಗಿ ನಿಂತಿದ್ದ. ಐದಲ್ಲ, ಹತ್ತಲ್ಲ, ಬರೋಬ್ಬರಿ ಇಪ್ಪತ್ತು ಕಿಲೋಮೀಟರು ದೂರ ಅಂವ ಸೈಕಲ್ಲಲ್ಲಿ ಹೊರಟಿದ್ದಕ್ಕೆ ಅಪ್ಪ ರೇಗಾಡಲು ಶುರುವಿಟ್ಟಿದ್ದರು.

‘ಹೆಣಾ ಹೊರಲಿಕ್ಕೆ ಹೋಗ್ತಾನಂತೇನು ಅಂವ ನಗರಕ್ಕೆ?’

‘ಇಲ್ಲ, ಕ್ರಿಕೆಟ್ ಆಡಕ್ಕೆ’ಅಪ್ಪನ ಕೂಗಿಗೆ ಅಣ್ಣ ಹೊಸಿಲ ಮೇಲೆ ನಿಂತು ತಣ್ಣಗೆ ಉತ್ತರಿಸಿದ್ದ.

‘ಹೈದರಾಲಿ ಧೋಕಾ ಮಾಡಿ ನಗರ ಸಂಸ್ಥಾನದ ಮ್ಯಾಲ ಏರಿ ಬಂದಾಗ, ಭಾಳ ದೊಡ್ ಯುದ್ಧ ಆತು. ಮನೆ ಮನೆ, ಕೇರಿಕೇರಿಯಿಂದ ಯುವಕ್ರು, ಮುದುಕ್ರು ಅನ್ದೆ ಎಲ್ರೂ ದಂಡಿಗೆದ್ರು. ಯುದ್ಧದಾಗ್ ಎಷ್ಟ್ ಮಂದಿ ಸತ್ರು ಅಂದ್ರ… ಸತ್ ಸೈನಿಕರ ಹೆಣಾ ಹೊರ್ಲಿಕ್ಕೂ ಹೊರಗಿಂದ ಜನಾನ್ ಕರೆಸ್ಬೇಕಾತು!’ಮಲೆನಾಡಿಗರದಲ್ಲದ ಭಾಷೆಯಲ್ಲಿ ಮಹತ್ತಿನ ಮಠದ ಬಳಿ ಇದ್ದೊಬ್ಬ ಅಯ್ಯ, ಸಂಜಯನ ಕಣ್ಣು ಮಾಡ್ಕೊಂಡು ಏನನ್ನೋ ಕಾಣ್ತಿರೋರ ಹಾಗೆ ಹೇಳ್ತಲೇ ಹೋದರು.durga1.jpg

‘ಕಾವಲು ದುರ್ಗ.’ ಅದು ಹೈದರಾಲಿ ಇಟ್ಟ ಹೆಸರು. ಹೆಣಾ ಹೊರಲಿಕ್ಕೂ ದಿಕ್ಕಿಲ್ಲದ ಹಾಗೆ ನಗರದ ಗಂಡಸರು ವೀರ ಮರಣ ಕಂಡಾಗ ಆತ ತನ್ನ ಸೈನ್ಯವನ್ನು ಅಲ್ಲಿಗೆ ತಂದು, ದುರ್ಗದ ಕೋಟೆಯಲ್ಲಿ ಕಾವಲಿಗಿರಿಸಿದ್ದ. ಕೌಲೇದುರ್ಗ ಅಂತಲೇ ಕರೆಸ್ಕೊಳ್ತಿದ್ದ ಕೋಟೆಯನ್ನ ಕಾವಲು ದುರ್ಗ ಅಂತ ಕರೆದ. ಆದರೇನಂತೆ? ಇವತ್ತಿಗೂ ಜನರ ಬಾಯಿಗೆ ಅದು, ಕೌಲೇದುರ್ಗವೇ. 

 ಆದರೆ ದುರ್ಗಕ್ಕೆ ಹೊಂದಿಕೊಂಡಿದ್ದ ನಗರ ಮಾತ್ರ ಇತ್ತೀಚಿನ ಎಲ್ಲ ಮಲೆನಾಡಿನ ಹಳ್ಳಿಗಳ ಹಾಗೆ ಯುವಕರನ್ನ ಪಟ್ಟಣಗಳಿಗೆ ಅಟ್ಟುತ್ತ, ಬಿದ್ದುಹೋದ ಅಡಿಕೆ ರೇಟಿಗೆ ಹಲುಬುತ್ತ, ಕೈಕೊಟ್ಟ ಶುಂಠಿ, ಉರುಳಾದ ವೆನಿಲ್ಲಾಗಳನ್ನ ಶಪಿಸ್ತಾ, ಮುಟ್ಟುನಿಂತ ಹೆಂಗಸಿನ ಹಾಗೆ ವಟಗುಟ್ಟುತ್ತ ನಿಂತಿದೆ. ಇಂಥಾ ನಗರವಲ್ಲದ ನಗರಕ್ಕೆ ಸೈಕಲ್ಲು ತುಳ್ಕೊಂಡು ಹೋದ ಅಣ್ಣ, ನೆಟ್ಟಾನೇರ ಮನೆಗೆ ಬಂದನಾ? ಇಲ್ಲ. ಅಂವ ಸುತ್ತಾಡಿ ಬಂದು ಬಾಗಿಲು ತಟ್ಟೋ ಹೊತ್ತಿಗೆ ಒಂದೂವರೆ ದಶಕದ ಹಿಂದಿನ ರಾತ್ರಿ ಒಂಭತ್ತು ಗಂಟೆ! ಹಾಗೆ ಬಂದವನ ಮೈ-ಕೈ ಎಲ್ಲ ಕೆಸರು ಕೆಸರು. ಮುಖ-ಮೂತಿ ತರಚು. ‘ತೆಗ್ದಾ ನನ್ ಮಗ ಮರ್ಯಾದೆಯ. ಯಾರ್ ಹತ್ರವೋ ಕಿತ್ತಾಡ್ಕಂಡು ಬಂದಾನ್ನೋಡು…’ ಅಣ್ಣನ ಗಾಯಕ್ಕೆ ಅಪ್ಪನ ಉಪ್ಪು. ತಗೋ! ಶುರುವಾಯ್ತು ಹೈದರಾಲಿ ಯುದ್ಧ!! ಅಮ್ಮ, ವೀರಮ್ಮಾಜಿಯ ಹಾಗೆ ನಡುವೆ ನುಗ್ಗಿ, ಅಪ್ಪನ ಬಲಕ್ಕೆ ಸೋತು ಹೈರಾಣಾದಳು.

ವೀರಮ್ಮಾಜಿ, ಕೆಳದಿ ಸಂಸ್ಥಾನದ ಕೊನೆಯ ರಾಣಿ. ಹೈದರಾಲಿಯನ್ನ ಧೈರ್ಯದಿಂದ ಎದುರಿಸಿ, ಕೊನೆಗೆ ಕೌಲೇದುರ್ಗದ ಕೋಟೆಯಲ್ಲಿ ರಕ್ಷಣೆಯಲ್ಲಿ ಆಶ್ರಯ ಪಡೆದಿದ್ದಳು. ಹೈದರ್ ಆ ಕೋಟೆಯನ್ನ ವಶಪಡಿಸಿಕೊಂಡಿದ್ದು ಅವಳಿಂದ್ಲೇ. ಇವಳಿಗೂ ಹಿಂದೆ, ಕೆಳದಿಯರಾಣಿ ಚೆನ್ನಮ್ಮಾಜಿ ಇದೇ ಕೋಟೆಯಲ್ಲಿಯೇ ಪಟ್ಟಾಭಿಷಿಕ್ತಳಾಗಿದ್ದಳು. ಉಧೋ ಅಂತ ನಡೆದೂ ನಡೆದೂ ದುರ್ಗ ಹತ್ತುತ್ತ ಎಂಥದೋ ಸಾಹಸ ಮಾಡುತ್ತಿದ್ದೇವನ್ನೋ ಹಮ್ಮಿಗೆ ಬಿದ್ದಿದ್ದ ನಮಗೆ, ಇದೇ ಕಾಡುಕೋಟೆಯೊಳಗೆ ಖಡ್ಗ ಹಿಡಿದು ಕಾದಾಡಿದ ಹೆಣ್ಣುಮಕ್ಕಳ ಕಥೆ ಕೇಳಿ ಮುಖ ಮುಚ್ಚಿಕೊಳ್ಳುವಷ್ಟು ನಾಚಿಕೆಯಾಯ್ತು. ಇದರಿಂದ ಇನ್ನೂ ಬೀಗಿದ ಅಯ್ಯ, ಅವರ ಹೋರಾಟದ ಕಥೆಯನ್ನು ಎಳೆಳೆಯಾಗಿ ಬಿಚ್ಚಿಟ್ಟರು.

ಹಾಗೆ ಅವತ್ತು ಅಣ್ಣ ರಗಳೆ ಎಬ್ಬಿಸಿ ಹೋಗಿಬಂದಿದ್ದನಲ್ಲ, ಬಂದು ಬಯ್ಸಿಕೊಂಡವ ಹಾಸಿಗೆ ಮೇಲೆ ಕುಂತು ಉಡಾಫೆ ಕಣ್ಣು ಎಸೀತಾ ಹೇಳಿದ್ದ. ಹೆಂಗೆ ಛಾಕಾಛಕಾ ಹತ್ತಿಳಿದ್ವಿ ಗೊತ್ತಾ ದುರ್ಗಾನ? ಕ್ರಿಕೆಟ್ಟಿನ ನೆವದಲ್ಲಿ ಹಾಳು ಹುಡುಗರು ನಿಧಿ ಹುಡುಕಲಿಕ್ಕೆ ಹೋಗಿದ್ದರು!

ಇವತ್ತಿಗೂ ನಗರದಲ್ಲಿ ಮನೆ ಕಟ್ಟುವಾಗ, ಬಾವಿ ತೋಡುವಾಗ ಬಂಗಾರ ಸಿಗುತ್ತಲೇ ಇರತ್ತಂತೆ. ಹಳೆ ಮನೆ ಗೋಡೇಲಿ, ಫೌಂಡೇಷನ್ನಲ್ಲಿ ಚಿನ್ನದ ನಾಣ್ಯ ಮುಚ್ಚಿಡ್ತಿದ್ದರಂತೆ! ಕೇಳಿದ್ದಕ್ಕೆ ಅಯ್ಯ ನಕ್ಕರು. ಅಷ್ಟೇ.

ಈ ಕೌಲೇ ದುರ್ಗ ಇರೋದು ತೀರ್ಥಹಳ್ಳಿಯಿಂದ ೨೦ ಕಿಲೋಮೀಟರು ದೂರದಲ್ಲಿ. ಸಹಜವಾಗೇ ದುರ್ಗಮವಾದ, ಕಡಿದಾದ ಬೆಟ್ಟಗುಡ್ಡಗಳ ಸ್ಥಳ ಇದು. ಈ ದುರ್ಗದ ಕೆಳಗಿರೋ ’ಕೌಲೆ’ ಅನ್ನುವ ಹಳ್ಳಿಯಿಂದಾಗಿಯೇ ಅದಕ್ಕೆ ಕೌಲೇದುರ್ಗ ಅನ್ನೋ ಹೆಸರು ಬಂದಿದ್ದು. ಪುರಾಣೇತಿಹಾಸದ ಕಾಲದಲ್ಲಿ ಇಲ್ಲಿನ ಅರಣ್ಯಗಳನ್ನ ’ಕಾಮ್ಯಕ ವನ’ ಅಂತ ಕರೆಯಲಾಗ್ತಿತ್ತಂತೆ. ಅಂದಹಾಗೆ, ಕೌಲೇದುರ್ಗವನ್ನ ಕೆಲವು ಶಾಸನಗಳಲ್ಲಿ ’ಭುವನಗಿರಿದುರ್ಗ’ ಅಂತಲೂ ಕರೆಯಲಾಗಿದೆ.  ಇದು, ಕೆಳದಿಯ ಅರಸರು ಇಟ್ಟ ಹೆಸರು.

ಅಂದ ಹಾಗೆ, ಮೊದಲ ಬಾರಿಗೆ ಕೌಲೇದುರ್ಗದ ಮೇಲೊಂದು ಕೋಟೆ ಕಟ್ಟಿಸಿದ್ದು ಬೆಳಗುತ್ತಿ ನಾಡಿನ ಪಾಳೇಗಾರರು. ನಂತರ ಅದು ಕೌಲೆ ಗ್ರಾಮಾಧಿಕಾರಿಗಳಾದ ತೊಲೆತಮ್ಮ-ಮುಂಡಿಗೆ ತಮ್ಮ ಅನ್ನುವ ಸಹೋದರ ಸ್ವಾಧೀನಕ್ಕೆ ಬಂದು, ಅವರು ಕೋಟೆಯನ್ನ ಮತ್ತಷ್ಟು ಭದ್ರಪಡಿಸಿದರು. ಇದು, ಪಾಳೇಗಾರರಿಂದ ವಿಜಯನಗರದ ಕೈಗೆ, ಅವರ ನಂತರದ ಅರಾಜಕತೆಯ ಕಾಲದಲ್ಲಿ ಕೆಳದಿ ಅರಸರ ಕೈಗೆ, ಅವರಿಂದ ಹೈದರನ ವಶಕ್ಕೆ, ಅವನ ಮಗ ಟಿಪ್ಪುವಿನಿಂದ ಆಂಗ್ಲರ ತೆಕ್ಕೆಗೆ ದಾಟಿ ದಾಟಿ, ಭಾರತದೊಡನೆ ತಾನೂ ಸ್ವತಂತ್ರವಾಯ್ತು.

ಕೌಲೇದುರ್ಗ ಕೋಟೆ, ಚಿತ್ರದುರ್ಗದ ಕೋಟೆಯಂತೇ ಏಳು ಸುತ್ತಿನದು. ಸುರಕ್ಷತೆ ಮಾತ್ರವಲ್ಲ ನಿರ್ಮಾಣದ ದೃಷ್ಟಿಯಿಂದಲೂ ಭರ್ಜರಿಯಾಗಿ ಕಾಣುತ್ತದೆ ಇದು. ಶಿಥಿಲಾವಸ್ಥೆಯಲ್ಲಿದ್ದರೂ ತನ್ನ ಇತಿಹಾಸವನ್ನ ಹೇಳುವ ಹಠದಿಂದ ತ್ರಾಣ ಹಿಡಿದು ನಿಂತಿರುವ ಇದರ ಹೆಬ್ಬಾಗಿಲಿನ ಒಳ ಹೊಕ್ಕುತ್ತಿದ್ದ ಹಾಗೇ ರುದ್ರ ರಮಣೀಯ ಲೋಕವೊಂದು ನಮ್ಮೆದುರು ತೆರೆದುಕೊಳ್ಳುತ್ತೆ. ದುರ್ಗದ ಬೆಟ್ಟಕ್ಕೆ ಹೋಗುವಾಗ ನಮಗೆ ಮೊದಲು ಸಿಗೋದು ಮಹಾಮಹತ್ತಿನ ಮಠ. ಕೌಲೇದುರ್ಗದ ಇತಿಹಾಸಕ್ಕೂ, ಮಠಕ್ಕೂ , ಕೆಳದಿ ಸಂಸ್ಥಾನಕ್ಕೂ ಬಹಳ ಹಿಂದಿನ ನಂಟು. 

ದುರ್ಗದ ಕಥೆ ಹೇಳೋದೆಂದರೆ, ಮಹತ್ತಿನ ಮಠದವರಿಗೆ ಎಲ್ಲಿಲ್ಲದ ಹುರುಪು. ಅಲ್ಲಿನ ಸ್ವಾಮೀಜಿ, ಕೌಲೇದುರ್ಗದ ಇತಿಹಾಸದ ಮೇಲೆ ಬೆಳಕುಚೆಲ್ಲುವಂಥ ಕಾರ್ಯಕ್ರಮಗಳನ್ನ ನಿರಂತರವಾಗಿ ಹಮ್ಮಿಕೊಳ್ತಿರ್ತಾರೆ.ಈ ಮಠ ದಾಟಿ ಮುಂದೆ ಬಂದರೆ, ಗ್ರಾಮದ ಸುತ್ತ ಇರೋ ರಕ್ಷಣಾಗೋಡೆಗಳನ್ನ ನೋಡಬಹುದು. ಇವು ಕೂಡ ಈಗಲೋ ಆಗಲೋ ಅಂತ ಮೃತ್ಯುಂಜಯ ಜಪ ಮಾಡ್ತಾ ತಮ್ಮ ಪಾಳಿಗೆ ಕಾದು ಕುಂತಿವೆ. ದುರ್ಗದ ಸುತ್ತಲೂ ಹರಡಿನಿಂತ ಕರಿಕಲ್ಲಿನ ಗೋಡೆಗಳು ಒನಕೆಗಾತ್ರದ ಮಲೆಮಳೆಗೆ ಸವಾಲು ಹಾಕೋಹಾಗೆ ಇಪ್ಪತ್ತೈದು-ಮೂವತ್ತು ಅಡಿ ಎತ್ತರಕ್ಕೆ ಎದೆಯುಬ್ಬಿಸಿ ನಿಂತಿವೆ. ಆದರೂ ಎಷ್ಟೂ ಅಂತ ತಡೆದಾವು? ಶತಶತಮಾನಗಳ ಪೆಟ್ಟು, ಕಗ್ಗಲ್ಲನ್ನೂ ಮೆದುವಾಗಿಸುತ್ತ ನಡೆದಿದೆ.shikharesvarada-hebbagilu.jpgಇಲ್ಲಿಂದ ಮುಂದೆ, ಉರುಟು ಕಲ್ಲುಗಳ ಏರುದಾರಿ. ಹೀಗೇ ಹತ್ತುತ್ತ ಹೆಚ್ಚೂಕಡಿಮೆ ಒಂದು ಕಿಲೋಮೀಟರ್ ದೂರ ಬಂದರೆ, ಕೋಟೆಯ ಮೊದಲ ಸುತ್ತಿನ ಹೆಬ್ಬಾಗಿಲು ಬಾಯಿ ಕಳ್ಕೊಂಡು ಸ್ವಾಗತಕ್ಕೆ ಸಜ್ಜಾಗಿ ನಿಂತಿರುತ್ತೆ.

ಈ ಹೆಬ್ಬಾಗಿಲ ಮುಂದೊಂದು ಜಗಲಿ, ಕಾವಲುಗಾರರ ಗೂಡು. ಹೀಗೇ… ಒಂದು, ಎರಡು, ಮೂರು, ನಾಲ್ಕು, ಐದನೇ ಸುತ್ತಿನವರೆಗೂ ತಲೆ ಎತ್ತಿ ನಿಂತಿರುವ ಹೆಬ್ಬಾಗಿಲುಗಳು. ಈ ಕೋಟೆ ಕೈಚಾಚಿ ನಿಂತ ಹಾದಿಯುದ್ದಕ್ಕೂ ದಟ್ಟ ಕಾಡು, ಹಚ್ಚ ಹಸಿರು. ಇದರ ನಡುವಲ್ಲಿ ಕುದುರೆ, ಆನೆ, ಪದಾತಿದಳಗಳಿಗೆ ಸಾಗಲು ಸುಲಭವಾಗುವಂತೆ ದುಂಡುಕಲ್ಲಿನ ಏರು ರಸ್ತೆ.

ಮೂರನೇ ಸುತ್ತಿನ ಹೆಬ್ಬಾಗಿಲ ಮುಂದೊಂದು ನಗಾರಿ ಕಟ್ಟೆ. ಆಗೆಲ್ಲ ಯುದ್ಧಕ್ಕೆ ಮುಂಚೆ, ಅಥವಾ ಅಪಾಯ ಸೂಚನೆ ನೀಡಲಿಕ್ಕಾಗಿ ನಗಾರಿ ಬಡಿತಿದ್ದದ್ದು ಎಲ್ಲರಿಗೂ ಗೊತ್ತೇ ಇದೆ. ಇನ್ನು, ನಾಲ್ಕನೇ ಸುತ್ತಿನ ನಂತರ ಕೊಂಚ ಸುಗಮ ಹಾದಿ. ಮೂರು ಮತ್ತು ನಾಲ್ಕನೇ ಸುತ್ತುಗಳ ನಡುವೆ ಒಂದಷ್ಟು ದೂರ ಮೆಟ್ಟಿಲುಗಳೂ ಇವೆ.ಐದನೇ ಸುತ್ತಿನ ಹೆಬ್ಬಾಗಿಲು ದಾಟಿ ಬಂದ್ರೆ, ಸೀದಾ ಅರಮನೆ ಅಂಗಳದಲ್ಲಿ ಬಂದು ನಿಲ್ತೀವಿ. ಈ ಅರಮನೆಯ ಹತ್ತಿರವೇ ಒಂದು ತೋಪುಖಾನೆ ಇದೆ. ಬಲ ಭಾಗದಲ್ಲಿ ಸ್ವಲ್ಪ ಮೇಲೇರಿ ಹೋದ್ರೆ,  ಶಿಖರೇಶ್ವರ ದೇವಸ್ಥಾನ ಸಿಗುತ್ತೆ. ಇಲ್ಲಿಂದ ಸೂರ್ಯಾಸ್ತ ನೋಡಲಿಕ್ಕೆ ಬಲು ಸೊಗಸು. ಹೀಗೇ ಇನ್ನಷ್ಟು ದೇವಾಲಯಗಳನ್ನ ನಾವು ಕೋಟೆಯುದ್ದಕ್ಕೂ  ನೋಡಬಹುದು.

 ಆದ್ರೆ, ಇಷ್ಟೆಲ್ಲ ನಿರ್ಮಾಣಗಳಾಗಿದ್ದು ಮೂಲ ನಿರ್ಮಾಣಕಾರರಿಂದಲ್ಲ, ಕೆಳದಿಯ ಅರಸರಿಂದ. ಅದರಲ್ಲೂ ಹದಿನಾರನೆಯ ಶತಮಾನದಲ್ಲಿ ಆಳಿದ ವೆಂಕಟಪ್ಪ ನಾಯಕನಿಂದ. ಈತ, ಪಾಳೆಯಗಾರರಿಂದ ಈ ಕೋಟೆಯನ್ನು ಗೆದ್ದುಕೊಂಡಿದ್ದ. ಅಂದಿನ ಆಳರಸರಿಗೆ ಈ ದುರ್ಗಮ ಸುಂದರಿಯೊಂದು ವೀರಪಣ! ವೆಂಕಟಪ್ಪ ನಾಯಕ ಬಹಳ ಬುದ್ಧಿವಂತ ಅರಸ. ಬೆಟ್ಟದ ಮೇಲೆ ನೀರು ಸಂಗ್ರಹಿಸೋ ತೊಟ್ಟಿಗಳನ್ನ ಕಟ್ಟಿಸಿ, ಅಲ್ಲಿಂದ ಕಾಲುವೆ ಮೂಲಕ ಅದು ದೇವಸ್ಥಾನಕ್ಕೆ, ಅರಮನೆಗೆ ಹರಿದು ಬರುವಂತೆ ಏರ್ಪಾಟು ಮಾಡಿಸಿದ್ದ. ಕೋಟೆಯ ಹೊರಗೆ ಅಗ್ರಹಾರ ಕಟ್ಟಿಸಿ, ಅಲ್ಲೊಂದು ಸಮುದಾಯ ಭವನ ಕಟ್ಟಿಸಿದ್ದ. ಅದೇ ಕಲ್ಯಾಣ ಮಹಲ್. ಇದೊಂದು ಅತಿ ಸುಂದರವಾದ ಕಟ್ಟಡವಾಗಿದ್ದು, ಇಂದು ಅದರ ಅವಶೇಷಗಳನ್ನಷ್ಟೆ ನೋಡಬಹುದು.

ಇವಷ್ಟೇ ಅಲ್ಲದೆ, ಈ ದುರ್ಗದ ಒಡಲಲ್ಲಿ ಇನ್ನೂ ಸಾಕಷ್ಟು ದೇವಸ್ಥಾನಗಳು, ಶಾಸನಗಳು, ಸಮಾಧಿಗಳು ಇವೆ. ಕೋಟೆಯ ಹೊರಗೆ, ಅಂದಿನ ಅರಸರು, ಕಿಲ್ಲೇದಾರರು ಕಟ್ಟಿಸಿದ ಕೆರೆಗಳಿದ್ದು, ಅವು ಇಂದಿಗೂ ಉಪಯುಕ್ತವಾಗಿವೆ. ಹೀಗೇ ದುರ್ಗದ ಅಚ್ಚರಿಗಳನ್ನ ನಮ್ಮೆದುರು ಕಾಣಿಸುತ್ತ ನಡೆದ ಅಯ್ಯ, ಅದು ಕೆಳದಿ ಅರಸರ ಟಂಕಸಾಲೆಗೂ ಜಾಗ ನೀಡಿತ್ತೆಂದು ಹೇಳಿದರು. ಆದರೆ, ಅದು ಇಂಥದ್ದೇ ಜಾಗದಲ್ಲಿ ಎಂದೇನೂ ನಿರ್ದಿಷ್ಟವಾಗಿ ತೋರಿಸದೇ, ಆ ಬಗ್ಗೆ ಶಾಸನಗಳಲ್ಲಿ ಹೇಳಲಾಗಿದೆ ಅಂತ ಮಾತಿನ ದಾಖಲೆ ಒದಗಿಸಿದಾಗ, ನಮಗೂ ಇದ್ದಿರಬಹುದು ಅನಿಸಿತು.

 ಇಳಿ ಸಂಜೆಯಾಗಿತ್ತು. ನಾವೀಗ ದುರ್ಗದ ತುತ್ತ ತುದಿಯಲ್ಲಿ. ಏಳುಸುತ್ತಿನ ಕೋಟೆ ಅಮಾಯಕವಾಗಿ ಬಿದ್ದುಕೊಂಡಿತ್ತು. ಯುದ್ಧದ, ರಹಸ್ಯದ, ಪಿತೂರಿಯ, ಸೈನಿಕತನದಲ್ಲಿ ಉಶ್ ಉಶ್ ಆಗಿಹೋದ ಅದೆಷ್ಟೋ ಪ್ರೇಮಗಾಥೆಗಳ, ವಿರಹದುರಿಯ ಕೊಲ್ಯಾಜಿನಂತೆ ಕಂಡಿತು.ಎಡಕ್ಕೆ ತಿರುಗಿದರೆ, ಉರಿದು, ಉರಿಸಿ, ಬೇಯಿಸಿ ಸಾಕಾದ ಸೂರ್ಯ, ತಣ್ಣಗಾಗಲು ಹವಣಿಸ್ತ ಸಮುದ್ರಕ್ಕೆ ಜಾರಲು ಸಜ್ಜಾಗುತ್ತಿದ್ದ. ಇನ್ನೂ ಅಳಿದುಳಿದ ಕೆಂಪು ಕಕ್ಕುತ್ತಲೇ ಇದ್ದ.

 ಆಗುಂಬೆಯಲ್ಲಿ ನಿಂತಾಗ ಖುಶಿ ಕೊಡುವ, ಕವನ ಹುಟ್ಟಿಸುವ ಸೂರ್ಯಾಸ್ತ, ಇಲ್ಲಿ ನೆತ್ತರುಗುಳುತ್ತಿರೋ ಹಾಗೆ ಕಾಣಿಸ್ತಿತ್ತು. ಸೂತಕದ ವಾಸನೆ ಗವ್ವನೆ ಅಡರತೊಡಗಿತು. ಯಾರೋ ಕಳ್ಳು ಕಾಯಿಸಲು ಶುರುವಿಟ್ಟಿದ್ದರು. ಕಥೆ ಹೇಳುತ್ತ ಗಕ್ಕನೆ ನಿಂತ ಅಯ್ಯ, ಸೇವಕರ ವಂಚನೆಯಿಂದ ಸತ್ತ ಕೆಳದಿಯ ಸೋಮಶೇಖರನಾಯಕನ ಪುನರವತಾರದ ಹಾಗೆ, ಏನನ್ನೋ ನೆನೆಯುತ್ತ, ಕಲ್ಲುಕಲ್ಲನ್ನೂ ತಬ್ಬಿಕೊಳ್ಳುತ್ತ, ಗೊಣಗುತ್ತ ಉಳಿದುಬಿಟ್ಟರು.

ಅರೆ! ಅಪ್ಪ ಇವತ್ತು ನಗರಕ್ಕೆ ಹೋಗ್ತೀವಿ ಅಂದಾಗ ಹೆಣಾ ಹೊರಲಿಕ್ಕಾ? ಅಂತ ಕೇಳಲೇ ಇಲ್ಲ! ಆದರೂ ಮನಸ್ಸು ಹೆಣಭಾರವಾಗಿತ್ತು. ದುರ್ಗದ ಭವ್ಯತೆಯ ಹಿಂದಿನ ನರಳುವಿಕೆಗಳು ಕಥೆಯಾಗಿ ಅಲ್ಲಿ ಕುಂತುಬಿಟ್ಟಿತ್ತು. 

ಕೌಲೇ ದುರ್ಗಕ್ಕೆ ಹೋಗುವವರಿಗೆ ಸೂಚನೆ-ಈ ಕವಲೇ ದುರ್ಗಕ್ಕೆ ಹೋಗೋದು ಬಹಳ ಸುಲಭ. ರಾಜ್ಯದ ಬಹುತೇಕ ಪ್ರಮುಖ ನಗರಗಳಿಂದ ಶಿವಮೊಗ್ಗೆಗೆ ಬಸ್ ಸೌಕರ್ಯವಿದ್ದೇ ಇದೆ. ಅಲ್ಲಿಂದ ತೀರ್ಥಹಳ್ಳಿಗೆ ಕೇವಲ ೬೦ ಕಿಲೋಮೀಟರು. ಅಲ್ಲಿಂದ ಕವಲೇದುರ್ಗಕ್ಕೆ ಕೇವಲ ೧೬ ಕಿಲೋಮೀಟರು. ಹದಿನೈದಿಪ್ಪತ್ತು ನಿಮಿಷದ ಪ್ರಯಾಣವಷ್ಟೆ. ತೀರ್ಥಹಳ್ಳಿಯಿಂದ ಗಂಟೆಗೊಂದರಂತೆ ಬಸ್ಸುಗಳೂ ದೊರೆಯುತ್ತವೆ.ಸಮುದ್ರ ಮಟ್ಟದಿಂದ ೫೦೫೬ ಅಡಿ ಎತ್ತರವಿರುವ ದುರ್ಗಕ್ಕೆ ಚಳಿಗಾಲದಲ್ಲಿ ಭೇಟಿಕೊಡುವವರು ಸೂಕ್ತ ವ್ಯವಸ್ಥೆಯೊಂದಿಗೆ ಹೊರಡುವುದೊಳಿತು. ಮಳೆಗಾಲದಲ್ಲಿ ಚಾರಣದ ಸಾಹಸ ಬೇಡ ಅನ್ನೋದು ಸಲಹೆ. ಅದನ್ನ ಮೀರೋದು ಚಾರಣಿಗರ ಹುಮ್ಮಸ್ಸು! ಅಂದಹಾಗೆ, ಕವಲೇದುರ್ಗ ಒಂದು ರುದ್ರ ರಮಣೀಯ ಸ್ಥಳ. ಗುಂಪಾಗಿ ಹೋಗುವುದು ಉಚಿತ. ದಯವಿಟ್ಟು ತಿಂಡಿ ತೀರ್ಥ (ಎಲ್ಲ ಬಗೆಯ) ಕೊಂಡೊಯ್ದ ಪ್ಲಾಸ್ಟಿಕ್ ಕಂಟೈನರ್ ಗಳನ್ನು ಅಲ್ಲೇ ಬಿಸುಟು ತಣ್ಣಗೆ ಮಲಗಿರುವ ನಿಸರ್ಗಕ್ಕೆ ಧಕ್ಕೆ ತರಬಾರದಾಗಿ ವಿನಂತಿ.

(ಚಿತ್ರಗಳು-ವಿನಾಯಕ ಗುಜ್ಜಾರ್, ತೀರ್ಥಹಳ್ಳಿ)

ಭೀಮೇಶ್ವರನ ಭಂಡಾರ ಮತ್ತು “ಎಲ್ಲ ಕರಗಿ ಕರಗಿ ಕರಗಿ…”

ಉಜ್ವಲಾ, ಕಿಶೋರಿ, ಗಿರಿಧಾರಿ… ಮೂವರೂ ಒಬ್ಬರ ಹಿಂದೊಬ್ಬರು ಸೊಂಯ್ ಸೊಂಯ್ ಅಂತ ಓಡೋಡಿ ಬಂದು ನನ್ನ ಡೆಸ್ಕಿನ ಕೆಳಗೆ ಬಚ್ಚಿಟ್ಟುಕೊಳ್ಳಲು ಪೈಪೋಟಿ ಶುರುವಿಟ್ಟರು. ಯಾಕೋ ಬೆಳಗಿಂದಲೂ ‘ಇವತ್ತು ಶನಿವಾರ’ ಅನ್ನುವ ಭ್ರಮೆಯಲ್ಲಿದ್ದ ನನಗೆ ಇನ್ನೇನು ಅದು ಖಚಿತವಾಗ್ಬೇಕು, ನನ್ನ ಕಲೀಗು, ‘ಯಾಕೆ? ಸ್ಕೂಲ್ ಬಿಟ್ ಬಿಟ್ರ?’ ಕೇಳೇಬಿಟ್ಟರು.
ಆ ಮಕ್ಕಳಲ್ಲಿ ಇಬ್ಬರು ‘ಎಕ್ಲಿಪ್ಸಿಗೆ ಹಾಲಿಡೇ’ ಅಂತ ನುಲಿದರೆ, ಉಜ್ವಲಾ ‘ಇವತ್ತೂ… ಅಮವಾಸ್ಯಾ’ ಅಂತ ಗಿಳಿಯ ಹಾಗೆ ಉಲಿದಳು.

~

ಅಮವಾಸ್ಯೆ?
ಈ ಪುಟಾಣಿಗೆ ಗ್ರಹಣದ ಸಂಗತಿ ಗೊತ್ತಿಲ್ವೇನೋ, ಅದಕ್ಕೇ ಹೀಗೆ ಹೇಳ್ತಿದೆ ಅಂತ ತಿಳಿದೆ.
ಲೀಸರಿನಲ್ಲಿ ಕೆಳಗೆ ಹಾಡುತ್ತ- ಕುಣಿಯುತ್ತ ಉನ್ಮತ್ತರಾಗಿದ್ದ ಭಕ್ತರನ್ನ ನೋಡುತ್ತ ಮೈಮರೆತಿದ್ದೆವು. ಜತೆಯಲ್ಲಿದ್ದವಳು ಏನೋ ಜ್ಞಾನೋದಯವಾದವರ ಹಾಗೆ “ನನ್ ಮಗಂಗೆ ಇವತ್ತು ಹಾಫ್ ಡೇ. ಭೀಮನ್ ಅಮವಾಸ್ಯೆ ಅಂತೆ!? ನಿಮ್ ಬ್ರಾಹ್ಮಿನ್ಸಲ್ಲಿ ಮಾಡ್ತೀರಲ್ವಾ ಅದ್ನ?”
ಭೀಮನ ಅಮಾವಾಸ್ಯೆ?
ಮೈಮೇಲೆ ತಣ್ಣೀರು ಚೆಲ್ಲಿದ ಹಾಗಾಯ್ತು ಒಮ್ಮೆಗೆ!
ಮೊಬೈಲು ಕೈಗೆ ಬಂದಮೇಲೆ ಬಹುಶಃ ಕ್ಯಾಲೆಂದರು ನೋಡಿದ್ದೇ ಇಲ್ಲ ನಾನು! ಪಂಚಾಂಗ ಬಿಡಿ, ದೂರದ ಮಾತು.
ಕಳೆದೆರಡು ವರ್ಷ ಮೇಲಿನ ಮನೆಯ ಘಮಘಮದಿಂದಲಾದ್ರೂ ಹಬ್ಬ- ಹುಣ್ಣೀಮೆ ತಿಳೀತಿತ್ತು. ಈ ಸಾರ್ತಿ ಅದೂ ಇಲ್ಲ. ಓನರಜ್ಜ ಇಲ್ಲವಾದ ಸೂತಕ ಅವರ ಮನೆಯಲ್ಲಿ…
ಆದ್ರೂ, ಭೀಮನ ಅಮವಾಸ್ಯೆ…

ಬಿಡಿ. ಅದೇನೂ ನಾನು ಆಚರಿಸೋ ಅಂತ ಹಬ್ಬವಲ್ಲ. ಅದಕ್ಕಷ್ಟು ಪ್ರಾಮುಖ್ಯತೆಯೂ ಇಲ್ಲ.
ಊರ ಕಡೆ ‘ನಾವು’ ಅದ್ನ ಭೀಮನ ಅಮಾವಸ್ಯೆ ಅಂತ ಆಚರಿಸಿದ್ರೆ, ‘ಬೇರೆಯವ್ರು’ ಅದ್ನ ಕೊಡೆ ಅಮಾವಾಸ್ಯೆ ಅಂತ ಕರ್ದು, ಕಹೀ ಔಷಧಿ ಕುಡಿದು ಸೆಲೆಬ್ರೇಟ್ ಮಾಡ್ತಿದ್ರು.
ಆದ್ರೆ ನಾನು ಅನ್ನೋ ನಂಗೆ ಈ ಗಣೇಶನ ಹಬ್ಬಕ್ಕಿಂತ ಸ್ವರ್ಣ ಗೌರೀವ್ರತ, ದೀಪಾವಳಿಗಿಂತ ತುಳಸೀ ಪೂಜೆ, ದೊಡ್ಡ ದೊಡ್ಡ ಹಬ್ಬಗಳಿಗಿಂತ ನಾಗರ ಚೌತಿ- ಪಂಚಮಿ, ಭೀಮನ ಅಮಾವಾಸ್ಯೆ, ಸಿರಿಯಾಳ ಷಷ್ಟಿ ಇವುಗಳೇ ಬಹಳ ಇಷ್ಟದ ಹಬ್ಬಗಳಾಗಿಬಿಡ್ತಿದ್ವು.

ಭೀಮನ ಅಮಾವಾಸ್ಯೆ…
ಆಸು ಪಾಸಲ್ಲಿದ್ದ ದೊಡ್ಡಮ್ಮ, ಮಾವನ ಮನೆಗಳಲ್ಲಿ ಹಸೀ ಭಂಡಾರ ಮಾಡಿ ಅಣ್ಣಂದಿರು ಒಡೀತಿದ್ರೆ, ನಮ್ಮನೇಲಿ ಅಮ್ಮ ಕರಿದ ಪೂರಿ ಹಾಗಿನ ಭಂಡಾರ ಮಾಡ್ತಿದ್ಲು!
ಅವರ ಮನೆಗಳಲ್ಲಿ ಭಂಡಾರ ಒಡೆದ ಅಣ್ಣ ತಮ್ಮಂದಿರಿಗೆ ಅಕ್ಕ- ತಂಗಿಯರು ದಕ್ಷಿಣೆ ಕೊಡಲಿಕ್ಕಿದ್ರೆ, ನಮ್ಮನೇಲಿ ಅವರೇ ನಂಗೆ ಕೊಡ್ಬೇಕು!
ಇಷ್ಟರ ಮಧ್ಯೆ ಜ್ಯೋತಿರ್ಭೀಮೇಶ್ವರ ವ್ರತ ಅನ್ನೋ ವ್ರತ ಅವತ್ತು. ಕೈಗೆ ಮಲ್ಲಿಗೆ ಹೂ ಸಿಗಿಸಿದ ಅರಿಷಿಣ ದಾರ ಕಟ್ಕೊಂಡು ಚೆಂದ ಚೆಂದದ ಹೂಗಳಿಂದ ಈಶ್ವರನ ಪೂಜೆ ಮಾಡೋದಿತ್ತು ಆಗೆಲ್ಲಾ.
ಆಹಾ! ಆ ಅರಿಷಿಣ ಒದ್ದೆಗೆ ಕ್ದಡಿಕೊಂಡು ಬೆಳ್ಳನೆ ಕೈತುಂಬ ಹರಿದು, ಅದೆಂಥದೋ ಬಣ್ಣ ಬಣ್ಣ! ಜತೆಗೆ, ಪೂಜೆ ಮಾಡಿ ಕೇಳಿಕೊಂಡ ‘ಒಳ್ಳೇ ಗಂಡನ’ ಕನಸು! ಮೊದಲೇ ಮಳೆಗಾಲ… ಅಪರೂಪಕ್ಕೆ ಹೂ ಮುಡಿದು ಕಾಲೇಜಿಗೆ…. ಓಹ್! ಯಾವ ಯಾವ ಹಿಂದೀ ಹಡುಗಳೋ, ಸಾಲುಗಟ್ಟಿ ನಿಲ್ತಿದ್ವು.

ಈ ಭೀಮನ ಅಮವಾಸ್ಯೆ ಮಾಡಿದ ಸಂಜೆ ವ್ರತ ಕಲಶದ ವಿಸರ್ಜನೆ ಮಾಡಲಿಕ್ಕಿತ್ತು. ಆಗ ಅಮ್ಮ ವ್ರತ ಕಥೆಯನ್ನು ರಾಗವಾಗಿ ಓದಿ ಹೇಳ್ತಿದ್ಲು. ಎಲ್ಲ ಮುಗಿದು ಪ್ರಸಾದದ ನೆವದಲ್ಲಿ ತಿಂಡಿ- ತೀರ್ಥ ಮುಗಿಸಿದ ಮೇಲೆ ತಲೆ ಹರಟೆ ಪ್ರಶ್ನೆಗಳನ್ನ ಕೇಳಿ ಬೈಸಿಕೊಳ್ಳೋದಿತ್ತು ನಾನು.

ವ್ರತದ ಕಥೆ…
ಈ ಕಥೆಯಲ್ಲಿ ಒಬ್ಬ ಬದ ಹುಡುಗಿಯನ್ನ ಸತ್ತ ರಾಜಕುಮಾರನ ಕಳೇವರದ ಜತೆ ಮದುವೆ ಮಾಡಿಕೊಡಲಾಗುತ್ತೆ. ಇಲ್ಲಿ ಮೊದಲೇ ಹುಡುಗಿ ಹಣೇಲಿ ಹಾಗಿತ್ತು… ಅವರೂ ಅನುಕೂಲಸ್ಥರೇ… ಇತ್ಯಾದಿ ಪಾಠಾಂತರಗಳಿವೆ. ಹಾ! ಹೀಗೆ ಮದುವೆ ಮಾಡಿದ್ರೆ ರಾಜ ಕುಮಾರ ಬದುಕಿ ಬರುವನೆಂಬ ಅಶರೀರ ವಾಣಿಯೂ ಮೊಳಗಿದ್ದಿರಬೇಕು!
ಮದುವೆ ಮುಗಿದ ಸಂಜೆ ಮದುಮಗಳನ್ನ ಸ್ಮಶಾನದಲ್ಲೇ ಬಿಟ್ಟು ಎಲ್ರೂ ಹೊರಟುಹೋಗ್ತಾರೆ. ಜೋರು ಮಳೆ ಬೇರೆ. ಹರೆಯದ ಹುಡುಗಿಗೆ ಭಯವೋ ಭಯ. ಆ ರಾತ್ರಿ ಪೂರ್ತಿ ಶಿವನ ಪೂಜೆಯಲ್ಲಿ ಕಳೆಯೋ ಹುಡುಗಿ ಮಾರನೆ ಬೆಳ್ಸುತ್ತ ಸ್ಮಶಾನಗ್ಗೆ ಮರಳಲ್ಲಿ ಶಿವ ಲಿಂಗ ಮಾಡಿ ಮತ್ತೆ ಪೂಜಿಸಿ, ಮರಳಲ್ಲೇ ಭಂಡಾರ ಮಾಡಿ ‘ಇದನ್ನ ಒಡೀಲಿಕ್ಕೆ ಬಾ ತಂದೇ… ಶಿವನೇ…’ ಅಂತ ಮೊರೆಯಿಡ್ತಾಳೆ. ಭೀಮೇಶ್ವರ ಬಂದು ಭಂಡಾರ ಒಡೆದು, ‘ತಂಗೀ, ಏನು ವರ ಬೇಕು?’ ಅಂತ ಕೇಳ್ತಾನೆ. ಯಥಾ ಪ್ರಕಾರ, ಗಂಡನ ಪ್ರಾಣ!

ಸರಿ. ರಾಜ ಕುಮಾರ ‘ನಿದ್ದೆಯಿಂದ ಎದ್ದ ಹಾಗೆ’ ಎದ್ದು ಬರ್ತಾನೆ. ಅವನಿಗೆ ತಾನು ಸತ್ತು ಹೋಗಿದ್ದೆ ಅಂತ ಗೊತ್ತೇ ಇರೋದಿಲ್ಲ. ಸುತ್ತ ಸ್ಮಶಾನ, ಎದುರಲ್ಲಿ ಸುಂದರಿ! ಅಂವ ‘ಇದ್ಯಾವುದೋ ಪಿಶಾಚಿ ಇರಬೇಕು’ ಅಂತ ಗಾಬರಿಯಾಗಿ ಅವಳನ್ನ ಹೀಯಾಳಿಸಿ ಓಡಿ ಹೋಗ್ತಾನೆ.
ಪಾಪ…ಇಲ್ಲಿ ಈ ಹುಡುಗಿ…
ಮತ್ತೆ ಅದೂ ಇದೂ ಆಗಿ, ರಾಜಕುಮಾರನ ಅಪ್ಪ ಅಮ್ಮ ಬೇರೆ ಹುಡುಗಿ ಮದ್ವೆ ಮಾಡಿಸ್ಲಿಕ್ಕೆ ಸಂಚು ಹೂಡಿ, ಆ ಹೊತ್ತಿಗೆ ಈಕೆ ಮತ್ತೆ ಶಿವನನ್ನ ಒಲಿಸ್ಕೊಂಡು ಅವನಿಂದ್ಲೇ ಸಾಕ್ಷಿ ಹೇಳಿಸಿ…
ಅಂತೂ ಎಲ್ಲವೂ ಸುಖಾಂತ್ಯ.
ರಾಜ ಕುಮಾರ, ಅವನ ಹೆಂಡ್ತಿ ನೂರ್ಕಾಲ ಸುಖವಾಗಿ ಬಾಳ್ತಾರೆ.

~
ಮದುವೆಯಾದ ಮೇಲೆ ಒಂಭತ್ತು ವರ್ಷ ಈ ವ್ರತ ಮಾಡೋದಿದೆ. ಮಾಡಿ, ಕೊನೆಯಲ್ಲಿ ಅಷ್ಟೂ ವರ್ಷ ಭಂಡಾರ ಒಡೆದ ಅಣ್ಣ- ತಮ್ಮಂದಿರಿಗೆ ದೀಪದ ಕಂಬ ಉಡುಗೊರೆ ಕೊಡಬೇಕು. ಹೀಗೇ ಏನೇನೋ…
ಅರಿಷಿನಕೆನ್ನೆಯ ಗಲಗಲದ ಹೆಣ್ಣುಗಳು ಅವೆಲ್ಲವನ್ನೂ ಮಾಡ್ತಾರೆ. ಗಂಡಂದಿರ ಜತೆ ಗುದ್ದಾಡಿ ತವರಿಗೆ ಉಡುಗೊರೆ ಕಳಿಸಿ ಬೀಗ್ತಾರೆ. ತಮ್ಮ ಹೆಣ್ಣುಮಕ್ಕಳನ್ನ ಕೂರಿಸ್ಕೊಂಡು ವ್ರತ ಕಥೆ ಹೇಳ್ತಾರೆ.

~

ಊರಲ್ಲಿ ಆಷಾಡದ ಮಳೆ ಜೋರು. ಎಲ್ಲ ಕರಗಿ ಕರಗಿ ಹೋಗ್ತಿದೆ.
ಮೂವತ್ತು ವರ್ಷಗಳೂ ಕರಗಿ ಹೋದವು. ಆ ಏಳು ವರ್ಷಗಳೂ, ಈ ನಾಲ್ಕು ವರ್ಷಗಳೂ…
ಭಂಡಾರವೂ ಕರಗಿ, ಅಮಾವಾಸ್ಯೆಯೂ ಕರಗಿ, ಭೀಮೇಶ್ವರನೂ ಕರಗಿ ಕರಗಿ…

ಕೊನೆಯಲ್ಲೇನು ಉಳಿಯಬಹುದು? ನಾನೇನು ಉಳಿಸಿ ಕರಗಬಹುದು?