‘ಸ್ತ್ರೀವಾದ’ ಅಂದರೆ ಹಾದರದ ಮೊತ್ತವೇ ಭೈರಪ್ಪ ಸರ್?

ಬಳೆ ಇಲ್ಲದ, ಸರವಿಲ್ಲದ, ಹಣೆಗಿಲ್ಲದ, ಕ್ರಿಶ್ಚಿಯನ್ನರ ಥರವೋ ಮುಸಲ್ಮಾನರ ಥರವೋ ವಿಧವೆಯ ಥರವೋ ಕಾಣುವ ಹೆಂಗಸರೆಲ್ಲ ಸೂತಕದವರು. ಅವರು ಕೊನೆಪಕ್ಷ ಕಾಮವನ್ನು ಪ್ರಚೋದಿಸಲಿಕ್ಕೂ ನಾಲಾಯಖ್ಖಾದವರು. ಅವರು ಹೆಚ್ಚೂಕಡಿಮೆ ಹೆಂಗಸು ಜಾತಿಗಿಂತ ಹೊರಗೆ. ಅವರೆಲ್ಲ ಸ್ತ್ರೀವಾದಿಗಳು. ಶೋಷಣೆಯ ಪುಕಾರುಗಳನ್ನು ಸುಖಾಸುಮ್ಮನೆ ಹಬ್ಬಿಸಿ ಗಂಡಸಿನ ಬದುಕನ್ನು ಮೂರಾಬಟ್ಟೆ ಮಾಡಲೆಂದೇ ಹುಟ್ಟಿಕೊಂಡವರು. ನಿಮಗ್ಗೊತ್ತಾ? ಅವರು ಗಂಡನ್ನ, ಗಂಡಸರನ್ನ ಏಕವಚನದಲ್ಲೆ ಕರೀತಾರೆ! ಇದು ಸಂಸ್ಕೃತಿಗೆ ಹೊಂದುತ್ತದೆಯೇ? ಇವತ್ತಿನ ಭಾರತದ ಸಂಸಾರಗಳು ಇಂಥ ಮಹಿಳಾವಾದಿ ಹೆಂಗಸರಿಂದಲೇ ‘ಪುಡಿಪುಡಿ’ ಆಗಿಹೋಗ್ತಿದೆ….
ಇಂಥದೊಂದು ಪರಮಸಂಕಟದಿಂದ ಭೈರಪ್ಪನವರು ಬರೆದ ಕಾದಂಬರಿಯ ಹೆಸರು ‘ಕವಲು’. ಪುಟ ತೆರೆದ ಶುರುವಲ್ಲೇ ಅವರ ಫರ್ಮಾನು ಇದೆ, ‘ಸಮಕಾಲೀನ ಜೀವನಕ್ಕೆ ಕನ್ನಡಿಯಾಗಿರುವ ಕಾದಂಬರಿ ಇದು’ ಅಂತ. ಅಂದಮೇಲೆ ಇಡಿ ಕಾದಂಬರಿಯನ್ನು ಇವತ್ತಿಗೆ ಹೊಂದಿಸ್ಕೊಂಡೇ ಓದಬೇಕಾಗ್ತದೆ. ಹೆಂಗಸರು ಎಷ್ಟೆಲ್ಲ ಅನ್ಯಾಯ ಮಾಡ್ತಾರಲ್ಲವೆ? ಅದರಲ್ಲೂ ಬಳೆ-ಸರ ಹಾಕದ, ಕುಂಕುಮವಿಡದ, ಓದು-ಬರೆದು ಮಾಡಿಕೊಂಡಿರುವವರಂತೂ ಹಾದರಗಿತ್ತಿಯರೇ! ಓದು ಬರಹದ ಮಾತು ಬಂದಾಗಲೇ ಹೇಳಿಬಿಡಬೇಕು… ‘ಓದಿಕೊಂಡ ಗಂಡಸರು ಹೆಂಗಸಂತಾಗ್ತಾರೆ ಮತ್ತು ಓದಿಕೊಂಡ ಹೆಂಗಸರು ಗಂಡಸಂತಾಗ್ತಾರೆ’. ಇದು ಭೈರಪ್ಪನವರ ಹೊಸ ಸಂಶೋಧನೆ. ಅದಕ್ಕೇ ಅಪಘಾತದಿಂದ ಮಾನಸಿಕ ಸ್ವಾಸ್ಥ್ಯ ಕಳಕೊಳ್ಳುವ ಮಗಳು ವತ್ಸಲೆ ಬಗ್ಗೆ ‘ಓದು ಬರಹ ಕಲಿಸೋದೇನೂ ಬ್ಯಾಡ. ಮನೆ ಕೆಲ್ಸ ಹೇಳ್ಕೊಡ್ತೀನಿ ಒಂದೊಂದೇ’ ಅನ್ನುವ ಮಾತು ಹೊರಡುವುದು. ವೈಯಕ್ತಿಕವಾಗಿ ನನಗೆ, ಭೈರಪ್ಪಮವರಲ್ಲಿರುವ ವೈರುಧ್ಯದ ಬಗ್ಗೆ ಅಚ್ಚರಿಯಾಗುತ್ತೆ. ವತ್ಸಲೆಯ ಅಮ್ಮ ಜಯಂತಿ ಇಂಜಿನಿಯರ್ರು. ಓದಿಯೂ ಹೆಂಗಸಾಗಿ ಉಳಿದಿದ್ದವಳು. ಉದ್ದ ಜಡೆ, ಅದರ ತುಂಬ ಹೂವ… ಇಳೆ ಮತ್ತು ಮಂಗಳೆ ವಿಷಯದಲ್ಲಿ ಕಾರಿಕೊಳ್ಳುವಾಗ ಅವರು ಓದಿದವರು ಅನ್ನುವ ಫ್ಯಾಕ್ಟ್ ಅನ್ನು ಆಕ್ಷೇಪಣೆಯ ಹಾಗೆ ತೋರಿಸಿರೋದ್ಯಾಕೆ!?  ಅವರು ‘ನಾರೀಮಣಿಯರ’ ಥರ ಅಲಂಕರಿಸಿಕೊಳ್ಳೋಲ್ಲವೆಂದೇ?
ಮತ್ತೊಂದು ವಿಷಯ, ಹಣೆಗಿಣೆಗೆ ಇಡದೆ ಅಲಂಕರಿಸಿಕೊಳ್ಳದ ಮಾತ್ರಕ್ಕೆ ಆಕೆಯನ್ನು ವಿಜಾತೀಯಳಂತೆ ಕಳಾಹೀನವಾಗಿ ಕಾಣುತ್ತಾಳೆ ಎಂದು ಪಾತ್ರಗಳ ಬಾಯಿಂದ ಹೇಳಿಸಿದ್ದಾರೆ, ಆಕ್ಷೇಪಣೆಯ ಧಾಟಿಯಲ್ಲಿ.ಮ್ ಇತರ ಜಾತಿಯ ಹೆಣ್ಣುಮಕ್ಕಳ ಬಗ್ಗೆ ಈ ತಾತ್ಸಾರ ಯಾಕೋ ಕಾಣೆ! ಅವರನ್ನು ಏನೆಂದು ಬಿಂಬಿಸಲು ಹೊರಟಿದ್ದಾರೆ?
ಭೈರಪ್ಪ ಅದ್ಭುತ ಕಾದಂಬರಿಕಾರರು, ಎರಡು ಮಾತಿಲ್ಲ. ಅದರಿಂದಲೇ ಈ ಇಡೀ ಕಾದಂಬರಿಯಲ್ಲಿ ಅವರ ವಿಚಾರವನ್ನು ಪ್ರತ್ಯೇಕಿಸದ ಹಾಗೆ ‘ಅದು ಪಾತ್ರದ ಮನಸ್ಥಿತಿ’ಯಷ್ಟೆ ಎಂಬ ಸಮಜಾಯಿಷಿಗೆ ಅವಕಾಶವಿಟ್ಟುಕೊಂಡು ಅದನ್ನ ಹೆಣೆದಿದ್ದಾರೆ. ಇಳಾ ಮತ್ತು ಮಂಗಳೆಯ ಪಾತ್ರಗಳ ಹಿಕಮತ್ತುಗಳು ಕೋಪ ತರಿಸುವುದು ನಿಜ. ಆ ಕಾರಣ ಮುಂದಿಟ್ಟುಕೊಂಡು ಹೆಂಡತಿಯ ಕೆರಿಯರ್ ಹಕ್ಕನ್ನು ನಿರಾಕರಿಸುವ ವಿನಯಚಂದ್ರನ ಬಗೆಗಾಗಲೀ ಕಟ್ಟುಬೀಳದೆ ದೇಹಬಾಧೆ ತೀರಿದರೆ ತೀರಲಿ ಅನ್ನುವ ಮನಸ್ಥಿತಿಯಿಂದ ನೌಕರಳನ್ನು ಹಾಸಿಗೆಗೆಳೆಯುವ ಜಯಕುಮಾರನ ಬಗೆಗಾಗಲೀ, ನನ್ನ ಹೆಂಡತೀನ ನಾನು ಗೌರವಿಸ್ತೀನಿ, ಪ್ರೀತಿಸ್ತೀನಿ, ಅವಳಿಗೇ ಡೈವೋರ್ಸ್ ಕೊಡು ಅಂತಾಳೆ ಅಂತ ಬಯ್ಕೊಳ್ಳುವ ಮಂತ್ರಿಯ ಬಗೆಗಾಗಲೀ ಅನುಕಂಪ ತಾಳಿದರೆ ಅದರಷ್ಟು ಅಸಹ್ಯ ಯಾವುದೂ ಇರುವುದಿಲ್ಲ. ಆದರೆ, ಆ ಎಲ್ಲ ಗಂಡಸರ ಬಗೆಗೆ ಅನುಕಂಪ ತರಿಸುವ ಮತ್ತು ‘ಸಮಕಾಲೀನ ಭಾರತದ ಮಹಿಳಾವಾದಿಗಳ’ ಬಗ್ಗೆ ತಾತ್ಸಾರ ಮೂಡಿಸುವ ಕೆಲಸವನ್ನು ಭೈರಪ್ಪನವರ ಬರಹ ಸಮರ್ಥವಾಗಿ ಮಾಡುತ್ತದೆ! ‘ಕವಲು ದಾರಿ ಹಿಡಿಯುತ್ತಿರುವ ಮೌಲ್ಯಗಳನ್ನು ಹೃದಯ ಕಲಕುವಂತೆ ಶೋಧಿಸುವ’ ಕೃತಿ ಅನ್ನುತ್ತಾ ಭಾರತದ ಹೆಣ್ಣುಮಕ್ಕಳ ಮಾನ ಹರಾಜಿಟ್ಟಿದ್ದು ಸಾಲದೇ ಅಮೆರಿಕೆಯ ಟ್ರೇಸಿ ಮತ್ತು ಲಿಂಡ್ಸೆಯರನ್ನೂ ಬೀದಿಗೆಳೆದಿದ್ದಾರೆ. ಮಹಿಳಾವಾದವನ್ನು ಜರಿಯುವ ಭರದಲ್ಲಿ ಹೆಣ್ಣಿನ ಕಡೆಯವರು ವರದಕ್ಷಿಣೆಯ ವಾಗ್ದಾನ ಮಾಡಿದ್ದನ್ನೇ ತಪ್ಪು (ಕೇಶವನ ಮಗಳ ಮದುವೆ ಸಂಗತಿ) ಎಂದು ಹೇಳುವಾಗಲಂತೂ ವಾಕರಿಕೆ ಬರುತ್ತದೆ. ಅಷ್ಟು ದುಡ್ಡನ್ನು ನಾಚಿಕೆಬಿಟ್ಟು ಕೇಳುವ ವರನ ಬಗ್ಗೆ ಏನೂ ಆಡಬಾರದೆ? ಇದು ಏನನ್ನು ಹೇಳುತ್ತದೆ? ‘ಕರೆವೆಣ್ಣನ್ನು ಕರೆಸ್ಕೊಂಡು ಜೈಲು ಸೇರಿದವರ ಸಾಕ್ಷಿ ಪೋಲಿಸರು ಒಪ್ತಾರೆಯೇ?’ ಎನ್ನುವಂಥ ಅತ್ತಿಗೆಯ ಮಾತು ಕೂಡ ಜಯಕುಮಾರನ ಬಗ್ಗೆ ಅನುಕಂಪ ಹುಟ್ಟಿಸುವ ಧಾಟಿಯಲ್ಲಿ, ಆಕೆಯ ಬಗ್ಗೆ ತಿರಸ್ಕಾರ ಬರುವ ರೀತಿಯಲ್ಲಿ ರಚಿಸಿರುವುದರ ಉದ್ದೇಶವಾದರೂ ಏನು?
ಹೆಣ್ಣುಮಕ್ಕಳು ತಮ್ಮ ಸಮುದಾಯಕ್ಕಾಗಿ ಹಿಂದೆಂದೂ ಇಲ್ಲದ ಒಗ್ಗಟ್ಟಿನಲ್ಲಿ ದನಿ ಎತ್ತುತ್ತಿರುವುದು ದಬ್ಬಾಳಿಕೆ ಮನೋಭಾವದ ಗಂಡಸರ ಅಹಮ್ಮಿಗೆ ಎಷ್ಟರಮಟ್ಟಿಗೆ ಘಾಸಿ ಕೊಟ್ಟಿದೆ ಅನ್ನುವುದನ್ನು ‘ಕವಲು’ ಸಮರ್ಥವಾಗಿ ತಿಳಿಸಿಕೊಡುತ್ತದೆ. ಇಲ್ಲಿನ ಪ್ರತಿಯೊಬ್ಬ ಸ್ತ್ರೀವಾದಿಯ ಚಿತ್ರ ಕೆತ್ತುವಾಗಲೂ ತನ್ನ ಅಹಮ್ಮಿಗಾದ ಪೆಟ್ಟಿನ ಸೇಡು ತೀರಿಸಿಕೊಳ್ಳುವ ವಿಕೃತಿ ದಟ್ಟವಾಗಿ ಕಾಣುತ್ತದೆ.  ರಾಷ್ಟ್ರಮಟ್ಟದ ಚಳವಳಿಗಾರ್ತಿ ಸರಾಫಳನ್ನು ಲೆಸ್ಬಿಯನ್ನಾಗಿ ತೋರಿಸುವ ಮೂಲಕ ತಮ್ಮ ವಿಕೃತ ಚಿಂತನೆಯ ಪೀಕ್ ಗೆ ಹೋಗಿದ್ದಾರೆ ಅನ್ನಬಹುದು. ಇಷ್ಟಕ್ಕೂ ಲೆಸ್ಬಿಯನ್ನಾದರೆ ಏನಾಯ್ತು? ‘ಆಕೆಗೆ ಕಳಕಳಿ ಇರೋದು ಮುಖ್ಯ’ ಅಂತ ಸಮರ್ಥಿಸಿಕೊಳ್ಳುವ ಜನಸಂಖ್ಯೆ ಕಡಿಮೆ ಇರೋದ್ರಿಂದ ಈ ಪಾಯಿಂಟ್ ಸಮರ್ಪಕವಾಗಿ ಓದುಗರ ತುಟಿಯಂಚಲ್ಲಿ ವ್ಯಂಗ್ಯದ ಕೊಂಕು ಮೂಡಿಸುತ್ತೆ.
ಹೆಣ್ಣನ್ನು ಲೈಂಗಿಕ ಅಭೀಪ್ಸೆಯ ದಾಸಿಯನ್ನಾಗಿ ಚಿತ್ರಿಸಿರುವ ಕಾದಂಬರಿಕಾರರ ರೀತಿ ಅಸಹ್ಯವನ್ನಲ್ಲದೆ ಮತ್ತೇನನ್ನೂ ಮೂಡಿಸುವುದಿಲ್ಲ. ಮತ್ತಿದನ್ನು ‘ಭಾರತೀಯ ಸಮಾಜದಲ್ಲಿ…’ ಇತ್ಯಾದಿ ಮುತ್ತುದುರಿಸಿ ಮತ್ತಷ್ಟು ಅಸಹ್ಯ ತರಿಸಿದ್ದಾರೆ. ಈ ಸ್ಟೇಟ್ಮೆಂಟ್ ಇಲ್ಲದೆ ಹೋಗಿದ್ದರೆ ಇಷ್ಟೆಲ್ಲ ಮನಸಿಗೆ ಕಸಿವಿಸಿಯಾಗ್ತಿರಲಿಲ್ಲವೇನೋ?
ಭೈರಪ್ಪನವರನ್ನೇ ನೇರವಾಗಿ ಕೇಳಬಹುದಾದರೆ, ಮಹಿಳಾವಾದ ಅಂದರೆ ಏನಂದ್ಕೊಂಡಿದೀರಿ ತಾವು? ಇಡೀ ಕಾದಂಬರಿಯಲ್ಲಿ ಸಮಾಜ ಮುಖಿಯಾಗಿರುವ ಅಥವಾ ಚಳುವಳಿಯಲ್ಲಿ ತೊಡಗಿರುವ ಯಾವೊಬ್ಬ ಹೆಣ್ಣೂ ನಿಮ್ಮ ಕಣ್ಣಿಗೆ ಒಳ್ಳೆಯವಳಾಗಿ ಯಾಕೆ ಕಾಣದೆಹೋದಳು? ಫೆಮಿನಿಸ್ಟ್‌ಗಳ ಸ್ನೇಹ ಮಾಡಬಹುದು ಹೊರತು ಮದುವೆಯಾಗಬಾರದು ಅನ್ನುವ ನಿಮ್ಮ ಪ್ರಭಾಕರನ ಸ್ಟೇಟ್‌ಮೆಂಟೇ ಪುರುಷನ ಅಹಂಕಾರದ ಧೋರಣೆಯನ್ನ ಬಿಂಬಿಸುತ್ತೆ ಅಲ್ವೆ? ಜನರಲೈಸ್ ಮಾಡುತ್ತಿಲ್ಲ. ‘ನಿಮ್ಮ ಮನಸ್ಥಿತಿಯನ್ನ’ ಎಂದಾದರೂ ಓದಿಕೊಳ್ಳಬಹುದು.  ಹೋಗಲಿ, ಈ ಕೃತಿ, ಇವತ್ತಿನ ತಲೆಮಾರಿನ ಓದುಗರಿಗೂ ಸೇರುವಂಥದು. ಅವರಿಗಾಗಿ ಯಾವ ಹೊಸತನ್ನು ನೀಡಿದ್ದೀರಿ ಕವಲಿನ ಮೂಲಕ ಎಂದು ಕೇಳಬಹುದೇ? ಮತ್ತದೆ ಅದೇ ಉದ್ಯೋಗಸ್ಥ ಮಹಿಳೆ ಕದ್ದು ಬಸಿರಾಗುವುದು, ಅದರ ಸುತ್ತ ಹೆಣೆದುಕೊಳ್ಳುವ ತೊಳಲಾಟ, ದೂರ ಸರಿಯುತ್ತ ಹತ್ತಿರಾಗುವ ತಿರುವುಗಳು…. ಕೊನೆಗೆ, ಯಾರೋ ಒಬ್ಬರಿಗೆ ಹೂ ಮುಡಿಸಿ (ಅಕ್ಷರಶಃ ಹೂವಿಟ್ಟು!) ‘ಸಾಂಸ್ಕೃತಿಕ ಮೌಲ್ಯವನ್ನ ಎತ್ತಿಹಿಡಿಯೋದು’! ಕವಲಿನಲ್ಲಿರುವ ಹೊಸತೆಂದರೆ, ಕಾದಂಬರಿಯ ತುಂಬೆಲ್ಲ ಹಾದರದ ವಾಸನೆಯೇ ತುಂಬಿರುವುದು. ಅವರಿವರು ನಮ್ಮ ಸಂಸ್ಕೃತಿಯ ಬಗ್ಗೆ ಸಲ್ಲದ್ದು ಬರೆದು ಯುವಜನರಲ್ಲಿ ತಪ್ಪು ಅಭಿಪ್ರಾಯ ಬಿತ್ತುತ್ತಿದ್ದಾರೆ ಎಂದು ಹೇಳುವ ನಿಮಗೆ ನೀವೂ ಅದನ್ನೇ ಮಾಡುತ್ತಿದ್ದೀರಿ ಎಂದು ಅನಿಸದೆ ಹೋಗಿದ್ದು ವಿಪರ್ಯಾಸ.
ಲೈಂಗಿಕ ಸ್ವಾತಂತ್ರ್ಯವನ್ನು ಗೌರವಿಸುವ ಹೆಣ್ಣು ಪರಮ ಅನೈತಿಕ, ನೀಚಳು ಮತ್ತು ಬೇರೆಹೆಮಳೆಂಬ ನಿಮ್ಮ ಅಕ್ಷರ ಬಿಂಬ ಈ ಹೊತ್ತೂ ಮೈ ನಡುಗಿಸುತ್ತಿದೆ.
ಭೈರಪ್ಪ ಅವರೇ, ನೀವೊಬ್ಬ ಯಶಸ್ವೀ ಕಾದಂಬರಿಕಾರರಿರಬಹುದು. ಆದರೆ, ಬಟ್ಟೆಯಲ್ಲಿ, ಅಲಂಕಾರದಲ್ಲಿ, ಯೋನಿ ಪಾವಿತ್ರ್ಯೀಕರಣದ ಮಾನದಂಡದಲ್ಲಿ, ಅವಳ ದನಿಯ ಅಬ್ಬರದಲ್ಲಿ ಅವಳ ಅಸ್ತಿತ್ವವನ್ನು ಪ್ರಶ್ನಿಸುತ್ತಾ ತುಚ್ಛೀಕರಿಸುತ್ತಾ ಬರೆಯುವಿರಾದರೆ, ಸಾಮಾನ್ಯ ಓದುಗಳಾದ ನನ್ನ ವಿರೋಧವೂ ನಿಮಗಿದೆ. ಬಟ್ಟೆ ಯಾವುದೇ ತೊಟ್ಟು, ಹಣೆಬೊಟ್ಟು ಕಳಚಿಟ್ಟರೂ ತುಡಿಯಬಲ್ಲ ಅಂತಃಕರಣ ಹೆಣ್ಣು ಜಾತಿಯದು. ಇಷ್ಟು ನಿಮಗೆ ಯಾವತ್ತು ಅರಿವಾಗ್ತದೆಯೋ ಅವತ್ತು ಬೆಡ್ ರೂಮಿನಾಚೆಗೂ ಲೋಕ ಇರುವುದನ್ನು ಕಾಣುವಿರಿ. ಮತ್ತು ಆ ಲೋಕದಲ್ಲಿ ಹೆಣ್ಣು ದಿನದಿನವೂ ಸಾಯುತ್ತಿರುವುದನ್ನು. ಇಷ್ಟೆಲ್ಲ ಓದು-ಬರಹ ಕಲಿತ ಗಂಡಸರು ಹೆಂಗಸರಾಗುತ್ತಾ ನಡೆದಿದ್ದರೂ ಭಾರತದಲ್ಲಿ ಅತ್ಯಾಚಾರ, ಹೆಣ್ಣುಭ್ರೂಣ ಹತ್ಯೆ ಮತ್ತು ವರದಕ್ಷಿಣೆ ಸಾವುಗಳ ಸಂಖ್ಯೆ ತನ್ನ ‘ಎತ್ತರ’ ಕಾಯ್ದುಕೊಂಡಿರುವುದನ್ನೂ…
ಹಾಗಂತ ಈ ಸಮಸ್ಯೆಗಳನ್ನೇ ‘ಭಾರತೀಯ ಸಮಾಜದ ಸಮಕಾಲೀನ ಜೀವನ’ ಅನ್ನುವ ದಾರ್ಷ್ಟ್ಯಕ್ಕೆ ನಾನು ಬಾಯಿಹಾಕಲಾರೆ. ಹಿರಿಯರಾದ ತಮ್ಮಲ್ಲೂ ಇದೇ ಅರಿಕೆ.
(ಜುಲೈ 18ರ ಭಾನುವಾರದಂದು ಕನ್ನಡಪ್ರಭದಲ್ಲಿ ಪ್ರಕಟಿತ)

ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…

ಚಂದಿರ  * ಚಂದಿರ

ನಾನು ಗಂಡಾಗಿ ಹುಟ್ಟಿದ್ದರ ಅಹಂಕಾರ ನನಗೆ ಖಂಡಿತ ಇತ್ತು. ಹಾಗಂತ ಹೆಣ್ಣುಮಕ್ಕಳಿಲ್ಲದ ನಮ್ಮ ಮನೆಯಲ್ಲಿ ನಾನೇ ಮಗನೂ ಮಗಳೂ ಆಗಿದ್ದೆ. ರಂಗೋಲಿ ಹಾಕೋದು, ಅಮ್ಮ ಮನೆ ಕ್ಲೀನು ಮಾಡುವಾಗ ಸಹಾಯಕ್ಕೆ ನಿಲ್ಲೋದು, ಅವಳ ಪೂಜೆ ಪುನಸ್ಕಾರಗಳಿಗೆ ಅಣಿ ಮಾಡ್ಕೊಡೋದು…
ನನಗದೆಷ್ಟು ದೇವರನಾಮಗಳು ಬಾಯಿಗೆ ಬರ್ತಿದ್ದವೆಂದರೆ, ನಮ್ಮ ಮನೆಗೆ ಬಂದುಹೋಗುವ ಆಂಟಿಯರೆಲ್ಲ “ಈ ಹುಡ್ಗನ್ನ ನೋಡಾದ್ರೂ ಕಲ್ತುಕೊಳ್ಳಿ” ಅಂತ ತಮ್ಮ ಹೆಣ್ಣುಮಕ್ಕಳ ಮೂತಿ ತಿವೀತಿದ್ದರು!
ಇದರ ಜೊತೆಗೆ ಓದಿನಲ್ಲಿ, ಆಟದಲ್ಲಿ ಎಲ್ಲಾದರಲ್ಲೂ ಮುಂದು. ನಮ್ಮಪ್ಪ ಅಮ್ಮನಿಗೆ ನಾನಂದರೆ ವಿಪರೀತ ಹೆಮ್ಮೆ.

ಆದರೆ, ನನ್ನ ಕಾಲೇಜಿನ ದಿನಗಳು ಮುಗಿದವು ನೋಡಿ… ಆಗ ಶುರುವಾಯ್ತು ಅಸಲಿ ಜೀವನ. ಡಿಗ್ರಿ ಮುಗಿಸಿದ ನಾನು ಕ್ಲಾಸಿಫೈಡುಗಳಲ್ಲಿ ಮುಳುಗಿಹೋದೆ. ಗುರುತು ಮಾಡಿಟ್ಟುಕೊಂಡ ವಿಳಾಸಗಳನ್ನ ಹುಡುಕಿಕೊಂಡು ಅಲೆದೆ. ಆದರೇನು? ನಾನು ಇಂಟರ್ವ್ಯೂಗೆ ಹಾಜರಾಗುವ ಹೊತ್ತಿಗೆ ‘ಕೆಲಸ ಖಾಲಿ ಇಲ್ಲ’ ಬೋರ್ಡು ನೇತಾಡತೊಡಗುತ್ತಿತ್ತು. ರಿಸೆಪ್ಷನ್ ಕೆಲಸ, ಟೆಲಿ ಮಾರ್ಕೆಟಿಂಗು, ಡಿಟಿಪಿ… ಊಹೂಂ! “ಅವೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ” ಅಂದುಬಿಡ್ತಿದ್ದರು. ಯಾಕೆ? ಟೆಲಿ ಮಾರ್ಕೆಟಿಂಗಲ್ಲೂ ನಾವು ಬೇಡ್ವಾ? ಅಂದ್ರೆ, ಕಾಲ್ ರಿಸೀವ್ ಮಾಡಿದವರಿಗೆ ಹೆಣ್ಣುದನಿ ಕೇಳಿದರೆ ಖುಷಿಯಾಗತ್ತೆ ಅನ್ನುವ ಉತ್ತರ!
ಇನ್ನು ಮಾಹಿತಿ, ದೂರು ವಿಭಾಗಗಳು? ಯಾರು ಉತ್ತರ ಕೊಟ್ಟರೇನು? ಸಮಸ್ಯೆ ಪರಿಹಾರವಾದ್ರೆ ಸಾಕಲ್ಲ? ಇಲ್ಲ…  ಹಾಗಲ್ವಂತೆ ಅದು. ಹೆಣ್ಣಿನ ದನಿ, ಕೇಳುಗರ ಕೋಪ ತಣಿಸುತ್ತಂತೆ. ಅದರಲ್ಲೊಂದು ಮಾದಕತೆ ಇರತ್ತಂತೆ!

ನಾನು ಅಲೆಯುತ್ತ ಅಲೆಯುತ್ತ ಕಾಲ ಕಳೆದಿದ್ದೊಂದೇ ಬಂತು. ಕೆಲಸ ಮಾತ್ರ ಸಿಗಲೇ ಇಲ್ಲ. ಈಗ ಅಪ್ಪನಿಗೂ ಅಸಹನೆ ಶುರುವಾಗಿತ್ತು. ಅರಿಶಿಣ ಕುಂಕುಮಕ್ಕೆ ಬರುವ ಅಂಟಿಯರು ‘ನಮ್ ಮಗ್ಳಿಗೆ ಬಿಪಿಓ ದಲ್ಲಿ ಕೆಲ್ಸ’ ಅಂದಾಗಲೆಲ್ಲ ಅಮ್ಮನ ಮುಖ ಸಣ್ಣಗಾಗ್ತಿತ್ತು. ನಾನು ಅಲ್ಲಿಗೆ ಮತ್ತೆ ಮತ್ತೆ  ಎಡತಾಕಿದ್ದು, ಅವರು ಹೆಣ್ಣುಗಳಿಗೆ ಮೊದಲ ಆದ್ಯತೆ ಅಂದಿದ್ದು, ಎಲ್ಲಾ ವಿವರಿಸಿ ಹೇಳಿದರೂ ಅವಳಿಗೆ ಅರ್ಥವಾಗಲೇ ಇಲ್ಲ.
ನಾನು ಮಾತ್ರ ಹತಾಶನಾಗದೆ ನನ್ನ ಹುಡುಕಾಟ ಮುಂದುವರಿಸಿದ್ದೆ.

ಈ ಬಾರಿ ಟೀವಿ ಕಛೇರಿಯೆದುರು ನಿಂತಿದ್ದೆ. ನನ್ನ ನಿರರ್ಗಳ ಮಾತು, ಶೈಲಿ, ಹಾಡುಗಾರಿಕೆಗಳು ನನಗೆ ಕೆಲಸ ಕೊಡಿಸಿಕೊಡಬಹುದೆಂಬ ಭರವಸೆ ಇತ್ತು. ಅಲ್ಲಿ ನಿರೂಪಣೆಗಾಗಿ ಸಂದರ್ಶನ ನಡೆಸಿದ್ದರು. ನಾನು ನೋದಲು ಚೆಂದವಿದ್ದೇನೆ ಅಂತಿದ್ರು ಎಲ್ಲರೂ.
ಸರಿ. ಸ್ಕ್ರೀನ್ ಟೆಸ್ಟ್ ಮುಗಿಯಿತು. ನಮ್ಮ ಮಂಜ ಮಾವ ಆ ಟೀವಿ ಚಾನೆಲ್ಲಿನ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಾರೆ. ಅವರೇ ಸ್ಟುಡಿಯೋಗೆಲ್ಲ ಕರೆದುಕೊಂಡುಹೋದರು.
ನಾನಂತೂ ಚೂರೂ ಭಯವಿಲ್ಲದೆ ಕ್ಯಾಮೆರಾದೆದುರು ನಿಂತೆ. ಡೈರೆಕ್ಟರು ಪೀಚು ಹುಡುಗ. “ನಾನು ಹೇಳಿದಾಗ ಮಾತಾಡು, ಸನ್ನೆ ಮಾಡಿದಾಗ ನಿಲ್ಲಿಸು” ಅಂದ.

ನಾನು ಶುರು ಹಚ್ಚಿಕೊಮ್ಡೆ. “ವೀಕ್ಷಕರೇ, ನಿಮಗೆಲ್ಲ ಮುಟ್ಟಿದರೆ ಮುನಿ ಕಾರ್ಯಕ್ರಮಕ್ಕೆ ಸ್ವಾಗತ. ನಾವಿವತ್ತು ನಾರಿ ಮುನಿದರೆ ಮಾರಿ ಅನ್ನೋ ಟಾಪಿಕ್ ಚರ್ಚಿಸೋಣ. ಯಾರ್ ಚೆನ್ನಾಗಿ ಒಲೀತಾರೋ, ಯಾರ್ ಚೆನ್ನಾಗಿ ಮುನೀತಾರೋ ಅವರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾಣ. ಬನ್ನಿ ಹಾಗಿದ್ರೆ, ಮೊದಲ ಕಾಲರ್ ಯಾರು ನೋಡೋಣ…”
ಅರಳುಹುರಿದಹಾಗೆ ಮಾತಾಡ್ತಾ ಸಾಗಿದೆ. ಡೈರೆಕ್ಟರು ‘ಕಟ್’ ಹೆಳೋದು ಮರೆತು ನಿಂತಿದ್ದ.
ವಿಶ್ವಾಸ ಬಂದಹಾಗಾಗಿ ‘ನಂಗೆ ಹಾಡ್ಲಿಕ್ಕೂ ಬರತ್ತೆ’ ಅಂದು ಹಾಡಿ ತೋರಿಸಿದೆ. ಲೈಟ್ ಬಾಯ್ ಗಳಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೈಕು ತೆಗೀಲಿಕ್ಕೆ ಬಂದ ಹುಡುಗ ಕೂದ ‘ಚೆನಾಗಿ ಮಾತಾಡಿದ್ರಿ ಸಾರ್’ ಅಂದ. ನಾನು ಕೆಲಸ ಸಿಕ್ಕೇ ಬಿಡ್ತು ಅಂತ ನಿರಾಳವಾದೆ.

ಸ್ಟುಡಿಯೋ ಹೊರಗೆ ಬರೋ ವೇಳೆಗೆ ಡೈರೆಕ್ಟರು ಮಾತಾಡ್ತಿದ್ದದ್ದು ಕೇಳಿಸ್ತು. ‘ಸಾರ್, ಇವ್ನು ಹುಡುಗಿಯಾಗಿದ್ದಿದ್ರೆ ಮಜಾನೇ ಬೇರೆ ಇರ್ತಿತ್ತು ಸಾರ್. ಸಖತ್ ಪ್ರೋಗ್ರಾಮ್ ಮಾಡಬಹುದಿತ್ತು!”
ನನ್ನ ತಲೆ ಮೇಲೆ ತಣ್ಣೀರು ಸುರಿದಹಾಗಾಯ್ತು.

ಹೊರಗೆ ಬರುವಾಗ ನೋಡಿದೆ. ಟೀವಿಯಲ್ಲಿ ತುಂಡುಲಂಗದ ಹುಡುಗಿ “ಬನ್ನಿ, ಹಿಂದಿನ ನೇರ ಪ್ರಸಾರದಲ್ಲಿ ನಾವು ನೀವು ಒಸ ಹಾಟ ಹಾಡೋಣ” ಅಂತಿದ್ಲು! ಅಸಹ್ಯವಾಯ್ತು.
“ಛೆ! ನಾನೂ ಹುಡ್ಗಿಯಾಗಿ ಹುಟ್ಬೇಕಿತ್ತು”
ಹಾಗಂತ ಮೊದಲ ಬಾರಿಗೆ ಅನ್ನಿಸ್ತು.