SAMSARAದ ಒಳಹೊರಗೆ….

October 30, 2009 at 5:39 pm | In ಸಿನೆಮಾ | 2 Comments
Tags: ,

” What is more important? To satisfy one thousand desires, or to conquer just one?”

“………. There are things we must unlearn inorder to learn………. There are things we must own to renounce them”

 ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.

ಕಾಲಕ್ಕೆ ಸದಾ ಓಡುವ ಕಾಲು.

ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?

ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ-  ” What is more important? To satisfy one thousand desires, or to conquer just one?”

~

samsara-a-review31

ಸನ್ಯಾಸ ವಸ್ತ್ರ ಬಿಚ್ಚಿ, ಬೋಳುತಲೆಯಲ್ಲಿ ಕೂದಲು ಬೆಳೆಸಿ, ಸಂಸಾರಿಗರ ಬಟ್ಟೆ ತೊಟ್ಟು ಹೆಂಡತಿಯನ್ನ ಕಟ್ಟಿಕೊಂಡಿರುತ್ತಾನೆ ಲಾಮಾ ಆಗಿದ್ದ ತಾಶಿ.

ಇದೀಗ ಸಂಸಾರಿಗರ ಬಟ್ಟೆ ಕಳಚುತ್ತಿದಾನೆ, ಅದೇ ಕೊಳದಲ್ಲಿ ಮೀಯುತ್ತಿದಾನೆ. ತಲೆ ಬೋಳಿಸಿಕೊಂಡು ಸನ್ಯಾಸಿಯಾದೆಂದುಕೊಳ್ಳುತಿದಾನೆ. ಅವನು ಮುಖ ನೋಡಿಕೊಳ್ತಿರುವ ಕನ್ನಡಿ ಒಡೆದಿದೆ. ಅದರ ಸಂಕೇತವೇನಿರಬಹುದು? ಹೇಳಿ ವಾಚ್ಯವಾಗಿಸಬಾರದಲ್ಲವ?

~

ನಡು ರಾತ್ರಿಯಲ್ಲಿ ಮಗನ ತಲೆ ನೇವರಿಸಿ, ಮನೆಬಿಟ್ಟು ಸಿದ್ಧಾರ್ಥನಂತೆ ಹೊರಟಿರುತ್ತಾನೆ ತಾಶಿ. ಆದರೆ ಪೇಮಾ ಯಶೋಧರೆಯಂತಲ್ಲ. ಕುದುರೆಯೇರಿ ಅವನೆದುರು ಬಂದೇ ಬರುತ್ತಾಳೆ. ಶತಮಾನಗಳ ಕಾಲದಿಂದ ಎಲ್ಲ ಸ್ತ್ರೀಸಂವೇದನೆಯ ಮನಸುಗಳು ಕೇಳಿದ ‘ಯಶೋಧರೆಯ ಪ್ರಶ್ನೆ’ಗಳನ್ನ ಕೇಳ್ತಾಳೆ.

ಬುದ್ಧನ ಹಾಗಲ್ಲ ತಾಶಿ. (ಬುದ್ಧನಾಗಿ ಅರಗಿಸಿಕೊಳ್ಳುವ ತಾಖತ್ತಿದ್ದರೆ ಮನೆ ಬಿಟ್ಟು ಹೋಗುವ ಎಲ್ಲ ಗಂಡಸರನ್ನೂ ಮಾಫ್ ಮಾಡಿಬಿಡಬಹುದಿತ್ತೇನೋ!?). ಅಂವ ಕಣ್ಣೀರಿಡ್ತಾನೆ. ನಾನೆಲ್ಲಿಗೆ ಸೇರಿದೇನೋ ಅಲ್ಲಿಗೇ ಬರ್ತೇನೆ, ನಿನ್ನ ಜತೆ ಬರ್ತೇನೆ ಅನ್ನುತಾನೆ. ಆದರೆ ಪೇಮಾ?  ‘ಸುಖಪ್ರಯಾಣ’ದ ಗಂಟನ್ನ ಅವನ ಮಡಿಲಿಗೆ ಹಾಕಿ ಹೊರಟುಹೋಗ್ತಾಳೆ.(ನನಗೆ ಸಖತ್ ಖುಷಿಯಾಗಿದ್ದು ಇವಾಗ್ಲೇ! ಅವನ ಬಗ್ಗೆ ಪಾಪ ಅನಿಸ್ತಾದ್ರೂ, ಅದು ಅನುಕಂಪ ಮಾತ್ರ. ಪೇಮಾಳ ಉತ್ತರ ಎಂಥ ದೊಡ್ಡ ಸಂದೇಶ!). ಸರಿ, ಇಂವ ಬಿಕ್ಕಿ ಬಿಕ್ಕಿ ಬಿಕ್ಕಿ…

~

ಸುಮಾರು ವರ್ಷಗಳ ಕೆಳಗೆ… ತಾಶಿ ಮೂರು ವರ್ಷ-ಮೂರು ತಿಂಗಳು-ಮೂರು ವಾರ-ಮೂರು ದಿನ ತಪಸ್ಸು ಮಾಡಿದ ನಂತರ ಬುದ್ಧ ವಿಹಾರಕ್ಕೆ ಒಯ್ಯಲ್ಪಡುತ್ತಿರ್ತಾನಲ್ಲ, ಆಗ ವಿಹಾರದ ಬಳಿಯ ಒಂದು ಬಂಡೆಗಲ್ಲಿನ ಮೇಲೆ ಓದಿರ್ತಾನೆ- “How can one prevent a drop of water from drying up?”

ಈಗ ಉತ್ತರ ಹುಡುಕುವ ಕಾಲ ಸನ್ನಿಹಿತ. ಪ್ರಶ್ನೆಯ ಬೆನ್ನಲ್ಲೆ ಉತ್ತರವಿದೆ. ಅಂದರೆ, ಬಂಡೆಗಲ್ಲಿನ ಹಿಂಭಾಗದಲ್ಲಿ… “By throwing it in to the sea”!

ತಾಶಿಗೆ ಅರ್ಥವಾಯ್ತಾ?

ನಮಗೆ?

ಇಲ್ಲಿ ಎರಡು ಅರ್ಥಗಳಿರಬಹುದು. “ಸಂಸಾರ ಸಾಗರದಲ್ಲಿ ಒಂದಾಗಿಹೋಗುವುದು” ಅಂತಲೂ, “ಪರಮಾರ್ಥದಲ್ಲಿ ಒಂದಾಗುವುದು (ಮೋಕ್ಷ))” ಅಂತಲೂ…

ಕೊನೆಯ ಬಗ್ಗೆ ನಮಗೆ ಸಿಗುವ ಹಿಂಟ್- ಮಾಗಿದ ಎಲೆಗಳ ಮರ (ಇದು ಚಿತ್ರದುದ್ದಕ್ಕೂ ವಿವಿಧ ಋತುಗಳನ್ನು ಸಂಕೇತಿಸುತ್ತ, ಪೂರಕ ಅರ್ಥಗಳನ್ನು ಕೊಡುತ್ತ ನಮಗೆ ಬಹಳ ಕಡೆ ಎದುರಾಗುತ್ತದೆ), ಮತ್ತು ಅವನು ಪ್ರವೇಶಿಸುವ ಮಾಗಿದ ಹಳದಿ ಎಲೆಗಳ ಕಾಡು. ಇದನ್ನು ನಾವು ತಾಶಿಯ ಮಾಗುವಿಕೆಯಾಗೂ ಅರ್ಥೈಸಿಕೊಳ್ಳಬಹುದು ಬೇಕಿದ್ದರೆ.

ಹಾ… ಸಿನೆಮಾದ ಶುರುವಲ್ಲಿ ಹದ್ದೊಂದು ಕುರಿಯ ತಲೆಮೇಲೆ ಕಲ್ಲು ಹೊತ್ತಾಕಿ ಜೀವ ತೆಗೆಯುವ ದೃಶ್ಯವಿದೆ. ತಾಶಿ ಬಂಡೆಗಲ್ಲಿನ ಬರಹವನ್ನೋದಿ ತಲೆ ಎತ್ತಿದಾಗ ಅದೇ ಹದ್ದು ಚಕ್ರಚಕ್ರ ತಿರುಗುತ್ತ ಹಾರಾಡುತ್ತ, ನಮ್ಮಿಂದ ಕಲ್ಲು ಬೀಳುವುದನ್ನೆ ಕಾಯುವ ಹಾಗೆ ಮಾಡುತ್ತದೆ.

but, sorry… ಅಲ್ಲಿಗೆ ಸಿನೆಮಾ ಮುಗಿಯುತ್ತದೆ!

 ಒಂದು ನೀತಿ ಕಥೆಯ ಹಾಗೆ ನೋಡಿ ನಮ್ಮ ಕೆಲಸ ಮುಂದುವರೆಸ್ಕೊಂಡು ಹೋಗಬೇಕಾದಂಥದಲ್ಲವಾ ಇದು? ಅಂದರೆ, ಸೀರಿಯಸ್ಸಾಗಿ ತೊಗೊಳ್ದೆ ನಮ್ಮ ಸಂಸಾರ, ಗೊಂದಲ, ಗೋಜಲು, ಸುಖ- ಸಂತೋಷ….?

~

ಕಣ್ಣಗಲಿಸಿ ಹೀರುವಂಥ ಛಾಯಾಗ್ರಹಣ, ಚೆಂದಚೆಂದದ ಲ್ಯಾಂಡ್‌ಸ್ಕೇಪುಗಳು, ಮುದ್ದು ಮುದ್ದಾದ ತಾಶಿ-ಪೇಮಾ, ಕೂಲ್ ಆಗಿ ನೋಡಿಸಿಕೊಂಡು ಹೋಗುವ ಎರಡು ಗಂಟೆಯ ಸಿನೆಮಾ- ಅದು SAMSARA.

ಈ ಸಿನೆಮಾ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದೆ. ಪೂರ್ವ ಪಶ್ಚಿಮವೆನ್ನದೆ ಎಲ್ಲ ಚಿತ್ರಪ್ರೇಮಿಗಳು ಇದನ್ನ ಮೆಚ್ಚಿಕೊಂಡಿದಾರೆ. ಬೇರೆ ಬೇರೆ ದೇಶಗಳ ಮಂದಿ ಒಂದು ತಂಡವಾಗಿ ಈ ಸಿನೆಮಾ ಮಾಡಿದಾರನ್ನೋದು ಇದರ ಖಾಸಿಯತ್ತುಗಳಲ್ಲೊಂದು.

2001ರ ಈ ಸಿನೆಮಾದ ಭಾಷೆ- ಟಿಬೆಟನ್ / ಲಡಾಖಿ

ನಿರ್ದೇಶಕ- ಪಾನ್ ನಲಿನ್

ಮುಖ್ಯ ಪಾತ್ರದಲ್ಲಿ- ಶಾನ್ ಕು (ತಾಶಿ), ಕ್ರಿಸ್ಟೀ ಚಂಗ್ (ಪೇಮಾ), ನೀಲೇಶಾ ಬಾವೋರಾ (ಸುಜಾತಾ)

~

ಈ SAMSARA ನನ್ನ ಯಾವ ಪರಿ ಹೊಕ್ಕುಕುಂತಿದೆ ಅನ್ನೋದು ಈ ಅಸ್ತವ್ಯಸ್ತ ಬರಹ ನೋಡಿದರೆ ಗೊತ್ತಾಗಬಹುದು. ಯಾವುದಕ್ಕೂ ಇದು, ನೀವು ಕೂಡ ಒಮ್ಮೆ ನೋಡಲೇಬೇಕಾದ ಸಿನೆಮಾ ಅನ್ನೋದು ನನ್ನ ಶಿಫಾರಸು.

 

ನಾವಡರ ಹೊಸ ಸಾಹಸ!

October 30, 2009 at 5:19 pm | In ನಿಮ್ಮೊಂದಿಗೆ | Leave a Comment
Tags: , ,

ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ… ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ.

ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ.

ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: www.chendemaddale.wordpress.com

 

……… ಇದಕ್ಕೆ ಕಾರಣವೇನಿರಬಹುದು?

October 28, 2009 at 3:31 pm | In ನಿಮ್ಮೊಂದಿಗೆ | 4 Comments
Tags: ,

‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ,  “ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ” . ಇದಕ್ಕೆ ಕಾರಣವೇನಿರಬಹುದು? 
ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ.

ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಾಗೂ ಇವಾವುದೂ ಹೆಣ್ಣಿಗೆ ಮಾತ್ರ ಸೀಮಿತವಲ್ಲದ ದೋಷಗಳೆಂಬುದನ್ನು ಮರೆಯಬಾರದು. ಈಗ ನನ್ನ ಅನಿಸಿಕೆಗಳು:

೧. ಹೆಣ್ಣು ತನ್ನ ಪ್ರತಿಯೊಂದಕ್ಕೂ ಗಂಡಸನ್ನೇ ಅವಲಂಬಿಸಬೇಕು ಅಂದುಕೊಂಡು ಆತನನ್ನು ಒಲಿಸಿಕೊಳ್ಳುವ ಯತ್ನವಾಗಿ, ದಬ್ಬಾಳಿಕೆ ಸಹಿಸುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವುದು, ಅದನ್ನೇ ತನ್ನ ಮುಂದಿನ ಪೀಳಿಗೆಗೂ ದಾಟಿಸುತ್ತಿರುವುದು…

೨. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಜತೆಗಾರ ಗಂಡಸಿನ ಇರುವಿಕೆ/ ಇಲ್ಲದಿರುವಿಕೆ, ಆತನೊಂದಿಗಿನ ಬಾಂಧವ್ಯಗಳನ್ನು ಅವಲಂಬಿಸಿರುವುದರಿಂದ, ಅದನ್ನು ಉಳಿಸಿಕೊಳ್ಳುವ ಯತ್ನ….

೩. ಮತ್ತೊಬ್ಬ ಹೆಣ್ಣನ್ನು ಛೀಕರಿಸುವ ಮೂಲಕ ಗಂಡಸಿನ (ಅದು ಗಂಡ, ಮಗ ಯಾರೇ ಆಗಿರಲಿ…) ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದು, ಆತನನ್ನು ಅಂಕೆಯಲ್ಲಿರಿಸಿಕೊಳ್ಳಲು ಬಯಸುವುದು, ತನ್ನ ಅಸುರಕ್ಷತಾಭಾವವನ್ನು ಹೋಗಲಾಡಿಸಿಕೊಳ್ಳಲು ಇತರರ ಗಮನವನ್ನು ಸೆಳೆಯಲಿಕ್ಕೆಂದೇ ಗಯ್ಯಾಳಿತನ ಬೆಳೆಸಿಕೊಳ್ಳುವುದು….

ಪರಿಹಾರವೇನಿರಬಹುದು?

೧. ಆರ್ಥಿಕ ಸುಭದ್ರತೆ
೨. ಹೆಚ್ಚು ಹೆಚ್ಚಾಗಿ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು, ಒಂದು ಸಂಘಟನೆಯಾಗಿ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವುದು
೩. ಭಾವನಾತ್ಮಕವಾಗಿ ಗಂಡಿನ ಮೇಲೆ ಅವಲಂಬಿಸಿದ್ದರೂ ಅದನ್ನು ದೌರ್ಬಲ್ಯವಾಗಿ ಮಾಡಿಕೊಳ್ಳದಿರುವುದು

ಹೀಗೇ ಒಂದಿಷ್ಟು….
ಈಗಲಾದರೂ ನಾವು ನಮ್ಮನ್ನು ಬರೀ ಮನೆವಾಳ್ತೆಗೆ ಸೀಮಿತಗೊಳಿಸಿಕೊಳ್ಳದೆ ಸಮಾಜಕ್ಕೂ ತೆರೆದುಕೊಂಡರೆ, ಸಂಘಟಿತರಾದರೆ, ಬಹುಶಃ ಈ ‘ಹೆಣ್ಣು- ಹೆಣ್ಣಿನ ಶೋಷಣೆ’ ಕಡಿಮೆಯಾಗುತ್ತ ಹೋಗಬಹುದೇನೋ?

ಗೆಳತಿ ಟೀನಾ ಒಮ್ಮೆ ಮಾತನಾಡುವಾಗ ಹೇಳಿದ್ದಳು. ಹೆಣ್ಣು ಸಾಂಸರಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ- ಈ ನಾಲ್ಕೂ ಸ್ತರಗಳಲ್ಲೂ ಶೋಷಣೆಗೊಳಗಾಗ್ತಾಳೆ ಅಂತ. ಅದು ಸರಿಯೆನಿಸಿತು. ನಾವು ಎಲ್ಲೀವರೆಗೂ ಸಂಸಾರವೇ ನಮ್ಮ ಮೊದಲ ಪ್ರಿಫರೆನ್ಸ್ ಅಂದುಕೊಳ್ತೀವೋ ಅಲ್ಲೀವರೆಗೂ ಈ ಶೋಷಣೆ ತಪ್ಪೋದಿಲ್ಲ. ನಾವು ಸಂಸಾರದ ಚೌಕಟ್ಟು ಮೀರಿ ಬೆಳೆದು ಸಮಾಜದ ಹೊಸ್ತಿಲಲ್ಲಿ ನಿಲ್ಬೇಕು. ನಮ್ಮ ಸಾಧ್ಯತೆಗಳನ್ನ ಇತರರಿಗೆ ಮನದಟ್ಟು ಮಾಡಿಸೋ ಮೊದಲು, ನಮ್ಮನ್ನು ನಾವು ಅರಿತುಕೊಳ್ಬೇಕು. ಸ್ನೇಹಿತರೊಬ್ಬರು ನನ್ನ ಯೋಚನೆಗಳ ಬಗ್ಗೆ ಅಭಿಪ್ರಾಯಪಟ್ಟಿರುವಂತೆ ಇದು ‘ರೊಮ್ಯಾಂಟಿಕ್’ ಮಟ್ಟಕ್ಕೆ ನಿಲ್ಲುವಂಥದಲ್ಲ. ಅವರು, ಹೆಣ್ಣು ಸಂಸಾರವನ್ನು, ಸಮಾಜವನ್ನು ಮೀರಬೇಕು, ಮೀರುತ್ತಾಳೆ ಅನ್ನುವ ನನ್ನ ಕಲ್ಪನೆಯನ್ನ ಹಾಗೆಂದಿರುವರು. ಇದು ತಮ್ಮ ಗಂಡು ಯೋಚನೆಯಲ್ಲವೆಂದೂ ಸ್ಪಷ್ಟಪಡಿಸಿದ್ದರು. ಆದರೆ, ಮೊದಲ ಬೇಲಿಯಾದ ಸಂಸಾರದ ನಿರ್ಬಂಧಗಳನ್ನು ಮೀರದೆ ಹೆಣ್ಣು ಮುಂದುವರೆಯೋದು ಹೇಗೆ? ನಾನು ಮೀರುವಿಕೆಯನ್ನು ‘ದ್ರೋಹ’ದ ಅರ್ಥದಲ್ಲಿ ಬಳಸುವುದಿಲ್ಲ. ಇದನ್ನು ಅರಿತುಕೊಂಡರೆ ಸಾಕು.

ಹೀಗೆ ಮೀರುವಿಕೆಯ ಮಾತು ಬಂದಾಗ ಇಸ್ಮತ್‌ರ ಕಥೆ ನೆನಪಾಗುತ್ತೆ. ಅವರದೊಂದು ಕಥೆಯಲ್ಲಿ ನಾಯಕಿ, ಕಪ್ಪುಕೀಳರಿಮೆಯ ಗಂಡ ತಾನೇ ದುಪಟ್ಟಾ ತೆರೆಯಲೆಂದು ಕಾದಿರುತ್ತಾಳೆ. ಅವನಾದರೋ ತನ್ನ ಕೀಳರಿಮೆಯನ್ನು ಮೆಟ್ಟಿನಿಲ್ಲಲು, ಆಕೆಗೇ ಅದನ್ನು ತೆಗೆದು ಮುಖ ತೋರುವಂತೆ ಆದೇಶಿಸುತ್ತಾನೆ. ಹಾಗೆ ಹೆಣ್ಣು ಮೊದಲ ಸಾರ್ತಿ ಗಂಡನಿಗೆ ಮುಖದೋರುವಾಗ ತಾನೇ ದುಪಟ್ಟಾ ತೆಗೆಯೋದು ಲಜ್ಜೆಗೇಡಿತನ ಅನ್ನುತ್ತದೆ ಸಂಪ್ರದಾಯ. ಅದಕ್ಕೇ ಅವಳು ತೆಗೆಯೋದಿಲ್ಲ. ಅವನ ದರ್ಪದ ಒಳಗುಟ್ಟು ಅವಳಿಗೆ ಗೊತ್ತಿದ್ದುದೂ ಅದಕ್ಕೆ ಕಾರಣವಾಗಿದ್ದಿರಬಹುದು. ಹೀಗೆ ಕೊನೆಯವರೆಗೂ ಅವಳು ತನ್ನ ದುಪಟ್ಟಾ ಅವನೆದುರು ತೆರೆಯೋದೇ ಇಲ್ಲ. ಅದಕ್ಕಾಗಿ ತಾನು ಸಂಸಾರ ಸುಖವನ್ನೇ ಕಳಕೊಳ್ಳಬೇಕಾಗಿ ಬಂದಾಗಲೂ ಸಹಾ. ಇಲ್ಲಿ ಇವಳ ಮೀರುವಿಕೆ- ಗಂಡನ ಆದೇಶದ ಮೀರುವಿಕೆ- ಅಂದರೆ ಸಾಮಾಜಿಕ ಕಟ್ಟುಪಾಡಿನ (ಗಂಡನ ಮಾತು ಕೇಳಬೇಕೆನ್ನುವ) ಮೀರುವಿಕೆ, ಸಂಪ್ರದಾಯದ ಚೌಕಟ್ಟಿನೊಳಗೇ ನಡೆದಿದೆ! ಈ ಕಥೆಯಲ್ಲಿ ಅವಳದು ಅತ್ಯಂತ ಡಿಗ್ನಿಫೈಡ್ ಆದ ಪ್ರತಿಭಟನೆ.

ನನ್ನ ಮಾತುಗಳಿಗೂ ಈ ಕಥೆಗೂ ಹೇಗೆ ಲಿಂಕ್ ಮಾಡಿಕೊಳ್ಳುವಿರೋ ಗೊತ್ತಿಲ್ಲ. ನನ್ನ ತಲೆಯೊಳಗಂತೂ ಇವೆಲ್ಲ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಎಳೆ ಹಿಡಿದೆಳೆದರೆ ಎಲ್ಲವೂ ಉರುಳಿ ಬರುತ್ತವೆ.

ಕೊನೆಯ ಮಾತಿನೊಂದಿಗೆ ಮುಗಿಸ್ತೇನೆ…
ಒಟ್ಟಾರೆ, ಎಲ್ಲೀವರೆಗೂ ಹೆಣ್ಣುಗಳು ಗಂಡಸಿನ ಕೃಪಾಪೋಷಣೆಗೆ ಒಳಗಾಗಿ ಬದುಕೋದೇ ತಮ್ಮ ಪರಮ ಧ್ಯೇಯವೆಂದುಕೊಳ್ತಾರೋ ಅಲ್ಲೀವರೆಗೂ ಹೆಣ್ಣಿಂದ ಹೆಣ್ಣಿನ ಶೋಷಣೆ ತಪ್ಪಿದ್ದಲ್ಲ. ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಂಡು ಬದುಕಿ, ಮುಂದಿನ ಪೀಳಿಗೆಗೂ ಅದನ್ನೇ ಕಲಿಸತೊಡಗಿದರೆ ಮಾತ್ರ ಇದೆಲ್ಲ ಪರಿಹಾರವಾಗಬಹುದೇನೋ ಅಂದುಕೊಳ್ತೇನೆ.

 

Blog at WordPress.com. | Theme: Pool by Borja Fernandez.
Entries and comments feeds.