ಹೊಸ ವರ್ಷದ ಹೊಸ್ತಿಲಲ್ಲಿ ನನ್ನ ಕನವರಿಕೆಗಳು…
December 31, 2008 at 4:17 am | In ಕನವರಿಕೆ | 10 CommentsTags: ಹೊಸ ವರ್ಷ
ಅರೆರೆ!! ಕಣ್ಣೆದುರೇ ತಪ್ಪಿಸ್ಕೊಳ್ತಿದಾನೆ ಕಳ್ಳ… ಹಿಡಿಯಲಿಕ್ಕಾಗೋಲ್ಲ:( ಈ ವರೆಗೆ ಅವನನ್ನ ಹಿಡಿದವರು, ತಡೆದವರು ಯಾರಾದರೂ ಇದ್ದಾರಾ? ನಮ್ಮ ದಿನದಿನದ ಆಯಸ್ಸನ್ನ ಕದ್ದು ಓಡುತ್ತಲೇ ಇರುವ ಇವನ ಬೆನ್ನು ಹತ್ತಿ ಗೆದ್ದವರು ಯಾರು? ಆಫೀಸಲ್ಲಿ ಹೊಸ ಡೈರಿ ಕೊಟ್ಟರು. ವರ್ಷ ಮುಗಿಯುತ್ತಿದೆ ಅಂದರು. ಮೊಬೈಲಿನ ತುಂಬ ಅಡ್ವಾನ್ಸ್ ಮೆಸೇಜುಗಳು… ೨೦೦೮ಕ್ಕೆ ಟಾಟಾ, ೨೦೦೯ಕ್ಕೆ ವೆಲ್ ಕಮ್! ಮೊನ್ನೆ ಮೊನ್ನೆ ಹೊಸ ವರ್ಷದ ಶುಭಾಶಯ ಹೇಳಿದ್ದ ನೆನಪು. ಏನೆಲ್ಲ ಆಗಿಹೋಯ್ತು ಈ ವರ್ಷದಲ್ಲಿ? ನಾನು ಹೆಚ್ಚು ಕಾಯಿಲೆ ಬೀಳಲಿಲ್ಲ (ಅಮ್ಮನ ಪ್ರಕಾರ ಶನಿ ಕಾಟ ಮುಗಿದಿತ್ತು!). ಸಮಾ ಊರೂರು ಸುತ್ತಾಡಿದೆ. ಜಗಳ ಕಮ್ಮಿ ಮಾಡಿದೆ. ಅಣ್ಣನ ಹತ್ತಿರ ಬಯ್ಸಿಕೊಂಡಿದ್ದು ವಿಪರೀತ. ನಾನೇನೂ ಚೌತಿಯ ದಿನ ಚಂದ್ರನ್ನ ನೋಡಿರಲಿಲ್ಲ. ಆದರೂ ವಾದ ವಿವಾದಗಳು ಬಂದು ಬಂದು ಸುತ್ತಿಕೊಂಡವು (ನಂಬಿ… ನನ್ನ ತಪ್ಪಿಲ್ಲ
). ನನ್ನದೊಂದು ಬುಕ್ಕು ಬಿಡುಗಡೆಯಾಯ್ತು. ಒಂದಲ್ಲ, ಎರಡು… ಮನೆ ಮೇಲೊಂದು ಮಂದಿರವಾಯ್ತು. ಒಳಗಿನ ಭಗವಂತ ಎಲ್ಲೋ ಪ್ರವಾಸ ಹೊರಟುಬಿಟ್ಟ. ಹುಡುಕಿ ತಂದು ಮತ್ತೆ ಕೂರಿಸಬೇಕು ಅವನನ್ನ. ಅವನಿಲ್ಲದೆ ಒಂದಷ್ಟು ಶತ್ರುಗಳ ಉದಯವಾಯ್ತು. ಮಗು ಮತ್ತಷ್ಟು ದೂರವಾಯ್ತು. ಬಿಡಿ, ಒಂದಷ್ಟು ಹೊಸ ಗೆಳೆಯರು ಸಿಕ್ಕರು. ಹಳೆ ಗೆಳೆಯರು ಹೊಸತಾದರು. ಒಂದೊಮ್ಮೆ ಮನಸ್ಸು ಉಯ್ಯಾಲೆಯಾಗಿ ತೂಗಿದ್ದು ನಿಜ. ಬದುಕು ಕಲಿಸಿದ ಪಾಠ ನೆನಪಿತ್ತು ಸಧ್ಯ! ಉಯ್ಯಾಲೆಯ ಸರಪಣಿಯನ್ನೇ ಬಿಚ್ಚಿ ಎತ್ತಿಟ್ಟೆ. ಹಾಯ್ಕು ಬರೆಯೋದು ಕಲಿತೆ. ಕಥೆ ಬರೆಯೋದು ಮರೆತೆ. ಕವಿತೆ ಅಂದರೇನು ಯೋಚಿಸುತ್ತ ಕುಳಿತೆ. ಎಷ್ಟೊಂದು ಬುಕ್ಕು ಓದಿದೆ! ಮತ್ತಷ್ಟು ಕೊಂಡು ಕಪಾಟಲ್ಲಿರಿಸಿದೆ. ಸಿಕ್ಕರೆಲ್ಲಾದರೂ ಕಾಲ ಕೊಂಡು ತರಬೇಕು. ಹಾಗೆಂದಾಗ ಯಾಕೋ ಹಿರಿಯರು ಬಿದ್ದುಬಿದ್ದು ನಕ್ಕರು!! ಬೊಗಸೆಯಲ್ಲಿರುವ ಜೊಳ್ಳು ಗಟ್ಟಿಗಳ ನಿರ್ಧಾರವಾಯ್ತು. ಜೊಳ್ಳನೆಲ್ಲ ಊದಿ ಹಾರಿಸಿಬಿಟ್ಟೆ. ದೇಶದಲ್ಲಿ ಮತ್ತೆ ಮತ್ತೆ ಸ್ಫೋಟಗಳಾದವು. ಒಂದಷ್ಟು ಅಮಾಯಕರ ಪ್ರಾಣ ಹೋಯ್ತು. ಹ್ಹ್! ನಾನಂತೂ ಬದುಕಿ ಉಳಿದೆ. ಕಳೆದ ವರ್ಷದಲ್ಲಿ ನಾನು ಒಂದು ಸಾರ್ತಿಯೂ ಕೋಗಿಲೆ ಹಾಡು ಕೇಳಲಿಲ್ಲ. ಮೈದಡವಿ ಮುದ್ದಾಡಲೊಂದೂ ಕರು ಕಾಣಿಸಲಿಲ್ಲ. ಕಾಲು ಕಾಲು ಸುತ್ತಿ ಬಂದ ಬೀದಿ ನಾಯಿ ಮರಿಗೆ ಯಾಕೋ ನಾನು ಊಟವೇ ಹಾಕಲಿಲ್ಲ. ಅಡುಗೆ ಮಾಡುವುದು ಜಾಣಮರೆವಾಯ್ತು. ಒಂದಷ್ಟು ತೂಕ ಇಳಿಯಿತು! ತಮ್ಮನ ಹೆಂಡತಿ ಬಾಣಂತನಕ್ಕೆ ಹೋಗಿ, ನನ್ನ ಕೈಗೆ ಸಿಕ್ಕ ಅವನ ತೂಕವನ್ನೂ ಇಳಿಸಿಬಿಟ್ಟೆ. ಮನೆಯ ಇಂಟರ್ ನೆಟ್ ತೆಗೆಸಿದೆ. ಬ್ಲಾಗ್ ಒಮ್ಮೆ ಮುಚ್ಚಿ, ಮತ್ತೆ ತೆರೆದೆ. ಒಂದಷ್ಟು ಜನರ ಗಂಟಲಲ್ಲಿ ಮುಳ್ಳು… ಪಾಪ, ಇನ್ನೂ ಒದ್ದಾಡ್ತಲೇ ಇದ್ದಾರೆ! ನನಗಂತೂ ಸಾಕಷ್ಟು ಅವಾರ್ಡುಗಳು ಬಂದವು. ಬೇಸರಪಡುತ್ತಾರೇನು? ಆಫೀಸಲ್ಲಿ ಕೆಲಸ ತನ್ನ ಪಾಡಿಗೆ ತಾನು. ವಾರಕ್ಕೊಮ್ಮೆ ಸಿ.ಡಿ ಹಾಕಿಕೊಂಡು ಸಿನೆಮಾ ನೋಡಿದೆ. ಟಾಕೀಸುಗಳ ಅಡ್ರೆಸ್ ಮರೆತುಹೋಗಿದೆ. ನೆಂಟರ ಮನೆಗಳದ್ದೂ… ಒಮ್ಮೆ ಹುಟ್ಟೂರಿಗೆ ಹೋಗಿಬಂದೆ. ದೊಡ್ಡಮ್ಮ, ಅತ್ತೆ, ಮಾವ, ಚಿಕ್ಕಪ್ಪ… ಸಂಬಂಧಗಳು ಮರೆತು ಹೋಗಿವೆ. ಚಿಕ್ಕಜ್ಜ ಇಲ್ಲವಾದಾಗ ಮುಖ ನೆನಪಾಗದೆ ದುಃಖಪಟ್ಟೆ. ಹೊಸತೊಂದಷ್ಟು ಹುಡುಗರು ಅಕ್ಕಾ ಅಂದಾಗ ಸಂಭ್ರಮಪಟ್ಟೆ. ಈ ಬಾರಿಯ ಹೆಚ್ಚಿನ ಭಾನುವಾರಗಳು ಹುರುಳಿಲ್ಲದೆ ಕಳೆದುಹೋಗಿದ್ದಕ್ಕೆ ಇನ್ನೂ ಬೇಸರವಿದೆ. ಮುಂದಿನ ದಿನಗಳು ಹೀಗೇ ಇರಬೇಕು ಅಂತ ನಿರ್ಧಾರ ಮಾಡಿ ವಿಧಿಗೆ ಚಾಲೆಂಜು ಹಾಕಿದೆ. ಬಹುಪಾಲು ಗೆದ್ದೆ. ಅಂವ ಪಾಪ ಅನ್ನಿಸಿ ಕೊಂಚ ಸೋತೆ.
ಇದೀಗ ಹೊಸ ವರ್ಷ. ಕಳ್ಳ! ಹೊಂಚುಹಾಕಿ ನಡೆಯುತ್ತಲೇ ಇದ್ದಾನೆ. ಮತ್ತೊಂದು ವರ್ಷ ನುಂಗುತ್ತಾನೆ. ನಿಂತಲ್ಲೆ ನಿಲ್ಲುತ್ತ ಸಾವಿನ ಬಾಗಿಲಿಗೆ ಹತ್ತಿರವಾಗುತ್ತೇವೆ. ನಡೆಯುತ್ತಲೇ ಇರುವವರು ಸತ್ತೂ ಉಳಿದುಹೋಗುತ್ತಾರಂತೆ. ನಡೆಯಬೇಕೆಂದು ಅಂದುಕೊಳ್ಳುತ್ತಿದ್ದೇನೆ. ಮಾಡಲೇಬೇಕೆಂದ ಕೆಲಸಗಳ ಪಟ್ಟಿ ಮಾಡಿಟ್ಟುಕೊಂಡಿದ್ದೇನೆ. ಮೋಸ ಹೋಗಬಾರದೆಂದು ಪಣ ತೊಟ್ಟಿದ್ದೇನೆ. ಮತ್ತಷ್ಟು ಗಟ್ಟಿಯಾಗಬೇಕೆಂದು, (ಬ್ಲಾಗೇಶ್ವರನ ಆಣೆಯಾಗಿ ಬ್ಲಾಗನ್ನಂತೂ ಮುಚ್ಚಲೇಬಾರದೆಂದು !
) ಕಾಲನಿಗೆ ಕದಿಯಲು ಬಿಡದೆ, ನನ್ನ ದಿನಗಳನ್ನ ನಾನೇ ಕಳೆಯಬೇಕೆಂದು ಪ್ರತಿಜ್ಞೆ ಮಾಡಿಕೊಂಡಿದೇನೆ. ಹಳೆಯ ಚೇತನಾ ಹೊಸ ಚೈತನ್ಯದೊಂದಿಗೆ ೨೦೦೯ನ್ನು ನೂರೆಂಟು ನಿರ್ಧಾರ, ಭರವಸೆಗಳೊಂದಿಗೆ ಸ್ವಾಗತಿಸುತ್ತಿದ್ದಾಳೆ. ನೀವೆಲ್ಲ ಹಾರೈಸುತ್ತೀರಲ್ಲವೆ?
ಎಲ್ಲರಿಗೂ… ಅಂದರೆ, ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಿಶಗಳು.
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ.
ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…
December 26, 2008 at 4:52 am | In ಕಥೆ ಥರ... | 16 CommentsTags: ಕಥೆ ಥರ...
“ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…” ಒಂದೇ ಸಮ ಬಡ್ಕೊಳ್ತಿತ್ತು ಫೋನು.
ಅದು ನೀನಿಲ್ಲದ ಮೊದಲ ಭಾನುವಾರ. ಈವರೆಗೆ ನೂರಿಪ್ಪತ್ತೆಂಟು ಭಾನುವಾರಗಳನ್ನ ನಾವು ಒಟ್ಟಿಗೆ ಕಳೆದಿದ್ದೆವು, ಒಮ್ಮೆಯೂ ತಪ್ಪದ ಹಾಗೆ. ನಾನು ಆರು ದಿನವೂ ಬರವಣಿಗೆಯ ಬದುಕಲ್ಲಿ ಹೈರಾಣಾಗಿರುತ್ತಿದ್ದೆ. ನೀನು ಮೀಸೆ ಬೆಳೆದ ಮಕ್ಕಳೆದುರು, ಪುಸ್ತಕದಲ್ಲಿರದ ಚರಿತ್ರೆಯ ಪಾಠವನ್ನೆಲ್ಲ ಹೇಳೋದ್ರಲ್ಲಿ ಸುಸ್ತು ಹೊಡೆದಿರುತ್ತಿದ್ದೆ.
ಹೌದಲ್ಲಾ!? ಪಾಠ ಮಾಡಯ್ಯಾ ಅಂದ್ರೆ ನೀನು ಪಾಠದಲ್ಲಿರದ್ದನ್ನೆಲ್ಲ ಹೇಳ್ತಾ ಮೈಮರೆತುಬಿಡ್ತಿದ್ದೆ. ಕ್ಯಾಂಪಸ್ಸಿನ ತುಂಬೆಲ್ಲ ’ಕ್ರಾಂತಿಕಾರಿ’ ಅನ್ನೋ ಪಟ್ಟ ನಿಂದಾಗಿತ್ತು. ಅದೆಷ್ಟು ಸಾರ್ತಿ ಪ್ರಿನ್ಸಿಯ ಕನ್ನಡಕ ನಿನ್ನ ಗುರಾಯಿಸಿತ್ತೋ?
ಬಿಡು. ಅದೀಗ ಮುಗಿದ ವಿಚಾರ. ಅವತ್ತೊಂದು ದಿನ ಕಾಲೇಜು ರಾಜಕೀಯದ ನೂರೆಂಟು ಹೊಟ್ಟೆಕಿಚ್ಚುಗಳಲ್ಲಿ ನನ್ನ- ನಿನ್ನ ಸಂಬಂಧದ ಬಣ್ಣ ಎರಚಿ, ನೀ ರಿಸೈನು ಮಾಡಿಬಂದೆ ನೋಡು, ಅವತ್ತಿಗೇ ಅದರ ಕಥೆ ಮುಗ್ದುಹೋಯ್ತು.
ಆಮೇಲೆ ನೀ ಭಾಷಣ- ಬರಹ ಅಂತ ಉಳಿದುಬಿಟ್ಟೆ. ಹೊಟ್ಟೆಪಾಡು ನಿಂಗ್ಯಾವತ್ತೂ ಮುಖ್ಯವಾಗಲೇ ಇಲ್ಲ! ಜೊತೆಜೊತೆಗೆ ನಮ್ಮಲ್ಲೊಂದು ಪ್ರಬುದ್ಧತೆ ಬೆಳೀತಾ ಹೋಯ್ತು.
ನಂಗನ್ನಿಸತ್ತೆ, ನಾವ್ಯಾವತ್ತೂ ಪ್ರೀತಿಸಲೇ ಇಲ್ಲ ಅಂತ. ಈವತ್ತು ಲೋಕ ಯಾವುದನ್ನ ಪ್ರೀತಿ ಅನ್ನುತ್ತಿದೆಯೋ, ಅಂಥದೊಂದು ಕೊಡು-ಕೊಳ್ಳುವಿಕೆಯ ಭಾವ ನಮ್ಮದಾಗಿರ್ಲಿಲ್ಲ. ಕೊನೆಗೂ ನಮ್ಮ ನಂಟಿಗೊಂದು ಹೆಸರು ಸೃಷ್ಟಿಯಾಗ್ಲೇ ಇಲ್ಲ.
ಇವೆಲ್ಲಾ ನೆನಪಾಗಿದ್ದು ನೀನಿಲ್ಲದ ಮೊದಲನೇ ಭಾನುವಾರ. ಬರೋಬ್ಬರಿ ನಾಲ್ಕು ವರ್ಷ ನನ್ನ ಈ ಸಂಭ್ರಮದ ರಜಾದಿನದಲ್ಲಿ ಶಾಮೀಲಾಗಿದ್ದ ನೀನು ಅವತ್ತು ಹೇಳದೇ ಕೇಳದೇ ಇಲ್ಲವಾಗಿಬಿಟ್ಟಿದ್ದೆ. ಹಿಂದಿನ ದಿನ ಹೋಟೆಲ್ಲಲ್ಲಿ ಕುಂತು ಮೃದುವಾಗಿ ಕೈತಟ್ಟುತ್ತಾ, “ಸಾಧನೆ ಮಾಡ್ಬೇಕು ಕಣೇ ನೀನು… ಸುಮ್ನೆ ಹೀಗೇ ಇದ್ದುಬಿಡೋದಲ್ಲ” ಅಂದಾಗಲೇ ನಂಗೇನೋ ಅನುಮಾನ. ನೀನೇನೋ ಮಸಲತ್ತು ನಡೆಸಿದ್ದೀ ಅಂತ… ಅದು ನಿಜವಾಗಿಹೋಗಿತ್ತು!
ಆಫೀಸೂ ಇಲ್ಲದ ಆ ದಿನವಿಡೀ ನಾನು ಮನೆಯ ದೂಳು ಹೊಡೆಯುತ್ತ ಉಳಿದುಬಿಟ್ಟೆ. ಮಧ್ಯೆ ಮಧ್ಯೆ ನಿನ್ನ ನಂಬರ್ ಒತ್ತುವುದು ನಡೆದೇ ಇತ್ತು. ಹಾಳು ಗಂಟಲಿನ ಹುಡುಗಿ! ಮತ್ತೆ ಮತ್ತೆ, ’ನೀವು ಕರೆ ಮಾಡಿದ ಚಂದಾದಾರ….’ ಅವತ್ತಿಂದ ನಾನೂ ಹುಚ್ಚಿಹಾಗೆ ಗಂಟೆಗೊಂದು ಸಾರ್ತಿ ನಿನಗೆ ಕಾಲ್ ಮಾಡ್ತಲೇ ಇದ್ದೀನಿ. ಆದರೂ ಅವಳು ಮಾತ್ರ ಹಾಗೆ ಬಡಕೊಳ್ಳೋದು ನಿಲ್ಲಿಸಿಲ್ಲ.
ಆವತ್ತು ನಾನು ಅಮ್ಮ ಸಾಯ್ತೀನಂದ್ರೂ ಕೇಳದೆ ನಿನ್ನ ಹಿಂದೆ ಬಂದುಬಿಟ್ಟಿದ್ದೆ. ಮದುವೆಯಾಗೋದು ನಮ್ಮ ಉದ್ದೇಶವಲ್ಲ ಅಂದಾಗಲಂತೂ ಅಪ್ಪ ಗಂಟಲು ಕಿತ್ತುಬರುವ ಹಾಗೆ ಕೂಗಾಡಿದ್ದ.
ಈವತ್ತಿಗೆ ನಾಲ್ಕು ತಿಂಗಳಾಯ್ತು, ನೀನು ವ್ಯಾಪ್ತಿಪ್ರದೇಶದ ಹೊರಗೆ ಹೋಗಿ. ಇಷ್ಟೂ ದಿನ ಮಾತಾಡದ ಅಪ್ಪ, ’ಏನು ಸಾಧಿಸಿದೆ ಮಗಳೇ ಅಂದರೆ, ಅಮ್ಮ, ’ನಿಂಗೆ ಇನ್ನು ಯಾರು ದಿಕ್ಕು?’ ಕೇಳ್ತಿದ್ದಾಳೆ. ಬರೀ ಇಂಥವೇ…. ಆದರೆ ನಾನು ಮಾತ್ರ ಈ ಪ್ರಶ್ನೆಯನ್ನ ಯಾವತ್ತೂ ಕೇಳಿಕೊಳ್ಳಲೇ ಇಲ್ಲ. ನಾ ನಿನ್ನ ಆಸರೆಗಾಗಿ ಅವಲಂಬಿಸಲಿಲ್ಲ. ನಿನ್ನ ಸಂಬಂಧದ ಸರ್ಟಿಫಿಕೇಟು ಹಿಡ್ಕೊಂಡು ಮೆರಿಯೋದೂ ನಂಗೆ ಬೇಕಿರಲಿಲ್ಲ. ನೀನು ಬೇಕು, ನಿನ್ನೊಡನಿರಬೇಕೆಂಬ ಅದೆಂಥದೋ ಉನ್ಮಾದವಷ್ಟೇ ನನ್ನಲ್ಲಿದ್ದದ್ದು. ಅದು, ಇವರ್ಯಾರಿಗೂ ಅರ್ಥವಾಗೋಲ್ಲ.
ನನಗೆ ಗೊತ್ತು. ನೀನು ಹಾಗೆ ಹೊರಟುಬಿಡಲು ಕಾರಣವೇನು ಅಂತ. ಬಿಡು. ಬಂದೂಕು ಹಿಡಿದು ಕಾಡಲ್ಲಿ ಮೈ ತರಚಿಕೊಂಡ್ರೆ ಕ್ರಾಂತಿಯಾಗೋಲ್ಲ! ನಿನಗೆ ನಾನು ಪಾಠ ಹೇಳ್ಬೇಕಾ? ಆದರ್ಶದ ಬೆನ್ನು ಹತ್ತಿದರೆ ಯಾವತ್ತೂ ಹೀಗೇ ಆಗೋದು…
ಈಗ ಪೇಪರ್ ನೋಡಿದೆ. ಕಾಡೊಳಗೆ ಎಸ್ ಟಿ ಎಫ್ ನುಗ್ಗಿಸ್ತಾರಂತೆ. ಯಾರ ಗುಂಡು ಯಾರ ಎದೆಗೋ? ಸುಮ್ಮನೆ ಕಾಡಬೇಡ. ನೀನು ಹಾಗೆಲ್ಲ ಇಲ್ಲವಾಗೋದು ನಂಗೆ ಬೇಕಿಲ್ಲ.
ಈಗ ನಿನ್ನ ಫೋಟೋ ನನ್ನ ಎದೆಯ ಮೇಲೆ. ನೀನು…. ಎದೆಯೊಳಗೆ. ಅಂದ ಹಾಗೆ ಇದು ನೀನಿಲ್ಲದ ಕೊನೆಯ ಭಾನುವಾರ. ಹಾಗೇ , ನನ್ನ ಕಟ್ಟಕಡೆಯದು ಕೂಡಾ. ನಾನೀಗ ಹೊರಟೆ.
ನೀನು ಕಾಡಲ್ಲಿ ಅಲೆದಿದ್ದು ಸಾಕು. ಇಲ್ಲೂ ಪರಿವರ್ತನೆಗಳಿಗೆ ಅವಕಾಶಗಳಿವೆ.
ಪ್ಲೀಸ್…. ಇನ್ನಾದರೂ ವ್ಯಾಪ್ತಿ ಪ್ರದೇಶದ ಒಳಗೆ ಬಾ…. ಪ್ರಾಮಿಸ್! ನಾನು ಇನ್ಯಾವತ್ತೂ (ಕರ) ಕರೆ ಮಾಡೋಲ್ಲ!!
ಮತ್ತೊಂದು ಸಿನೆಮಾ ಮತ್ತು ನನ್ನ ತಲೆಬಿಸಿ…
December 22, 2008 at 12:55 pm | In ಕನವರಿಕೆ | 6 CommentsTags: ಸಿನೆಮಾ
ಒಟ್ಟಾರೆ ಬಂಗಾಳದ ಪ್ರವಾಸ ಒಂದೆರಡು ಡಾಕ್ಯುಮೆಂಟರಿಗಳನ್ನೂ, ಮೂರ್ನಾಲ್ಕು ಪ್ರಶಸ್ತಿ ವಿಜೇತ ಸಿನೆಮಾಗಳನ್ನೂ ನೋಡಿದ ಅನುಭವ ಮೂಡಿಸಿತ್ತು. ಹೀಗಿರುವಾಗ ಮೊನ್ನೆ ಭಾನುವಾರ ‘ಹಾಗೆ ಸುಮ್ಮನೇ ಒಂದು ಮಸಾಲಾ ಸಿನೆಮಾ ನೋಡುವ’ ಅಂದುಕೊಂಡವಳಿಗೆ ತೋಚಿದ್ದು, ‘ರಬ್ ನೆ ಬನಾದಿ ಜೋಡಿ’.
ಪಕ್ಕಾ ಮಿಡಲ್ ಕ್ಲಾಸ್ ಪೋಸಿನ ಶಾರುಖ್ ಒಂದೇ ನೋಟಕ್ಕೆ ಸೆಳೆದುಬಿಟ್ಟ. ಅವನ ನಟನೆಯನ್ನ ಕಣ್ತುಂಬಿಸಿಕೊಳ್ಳುವ ಸಡಗರದಲ್ಲಿ ಹೀರೋಯಿನ್ನಿನ ಹೆಸರೂ ಯಾಕೋ ಗಮನಿಸಲಾರದೆ ಹೋದೆ ನಾನು. ಮುದ್ದಾಗಿದ್ದಳು ಹುಡುಗಿ. ಆದರೂ….
ಸಿನೆಮಾ ನೋಡಿದೆನಾ… ಯಾಕಾದರೂ ನೋಡಿದೆನೋ? ಒಳ್ಳೆ ‘ಭಾಮಿನಿ ಷಟ್ಪದಿ’ ಮತ್ತು ‘ಗಂಡಸ್ರ ಗೋಳು’ ಎರಡನ್ನೂ ಹದವಾಗಿ ಬೆರೆಸಿಕೊಂಡು ಅನುಭವಿಸಿದ ಹಾಗಾಯ್ತು ನನ್ನ ಪಾಡು. ಸುಮ್ಮನೆ ಕುಂತು ನೋಡಿದ್ದರೆ ಒಳ್ಳೆ ಸಿನಿಮಾನೇ. ಒಳ್ಳೆ ಅಂದ್ರೆ, ಒಂದ್ಸಲ ಖುಷಿಯಾಗಿ ನೋಡಬಹುದಾದ ಸಿನೆಮಾ. ಆದ್ರೆ ನನಗ್ಯಾಕೋ ಅದು ಒಂದಷ್ಟು ತಳಮಳಗಳನ್ನ ಹುಟ್ಟಿಹಾಕಿಬಿಡ್ತು. ಹೆಣ್ಣು ಮನಸ್ಸಿನ ಸಂಕೀರ್ಣತೆಯ ಬಗ್ಗೆ ಸೀರಿಯಸ್ಸಾಗಿ ತಿಳ್ಕೊಳ್ಬೇಕಲ್ಲಾ ಅನಿಸಿಬಿಡ್ತು. ಪಿಚ್ಚರಲ್ಲೇನೋ ಅವಳಿಗೆ ಅವನಲ್ಲಿ ‘ರಬ್’ ಕಂಡ, ಸರಿ ಹೋಯ್ತು…. ಕಾಣದೇ ಹೋಗಿದ್ದಿದ್ದರೆ?
‘ಪಿಚ್ಚರಿಗೆ ಬೇರೆ ಹೆಸರಿಡ್ತಿದ್ರು..’ ಅಂತ ತಿವಿಯಿತು ಒಳಮನಸ್ಸು.
~
ಸೂರಿ ತನ್ನನ್ನ ಮದುವೆಯಾಗಿ ‘ಎಹೆಸಾನ್’ ಮಾಡಿದಾನೆ ಅಂದುಕೊಳ್ತಲೇ ಉಪಕಾರದ ಭಾರಕ್ಕೆ ತಗ್ಗಿ, ಅವನನ್ನ ಪ್ರೀತಿಸಲಾಗದೆ ಹೋಗುವ ಹೆಣ್ಣುಮಗಳು, ಅವನನ್ನ ಗೌರವಿಸುವ, ಅನುಸರಿಸ್ಕೊಂಡುಹೋಗುವ ನಿರ್ಧಾರ ತೊಗೊಳ್ತಾಳಲ್ಲ, ಆಗ ಆಕೆಯದು ತ್ಯಾಗ ಅನಿಸಿಬಿಡುತ್ತೆ.
ಅವನು ಅಷ್ಟೆಲ್ಲ ಪ್ರೀತಿಸಿ ಅನುಕೂಲಗಳನ್ನ ಮಾಡಿಕೊಟ್ಟು, ಗೌರವದಿಂದ ನಡೆಸ್ಕೊಂಡರೂ ಆತ ಪ್ರೀತಿ ಪಡೆಯಲಾರದೆ ಹೋಗ್ತಾನಲ್ಲ, ಆಗ ಅವನ ಬಗ್ಗೆ ಪಾಪ ಅನಿಸುತ್ತ ಅವಳ ಬಗ್ಗೆ ಅಸಹನೆ ಶುರುವಾಗತ್ತೆ.
ಆದರೂ,
‘ರಾಜ್’ ಆಗಿ ಕಾಣಿಸಿಕೊಳ್ಳುವ ಸೂರಿಯ ಸಹವಾಸದಲ್ಲಿ ಅವಳು ಖುಷಿ ಪಡುವಾಗ ಅವಳ ಬಗ್ಗೆ ಜಿಗುಪ್ಸೆ ಯಾವ ಕಾರಣಕ್ಕೂ ಮೂಡೋದೇ ಇಲ್ಲ. ಪಾಪ, ಪ್ರೀತಿಗಾಗಿ ಎಶ್ಟು ಹಂಬಲಿಸಿದ್ದಾಳೆ! ಅನಿಸಿಬಿಡ್ತಿತ್ತು. ಅವಳಿಗೆ ಪ್ರೀತಿ ದಕ್ಕಿದಾಗ, ಅಮೃತ್ ಸರದ ಲೈಟುಕಂಬಗಳಲ್ಲಿ ‘ಐ ಲವ್ ಯೂ’ ಮೂಡಿಬಂದಾಗ ನನಗೇ ಸಂಭ್ರಮಿಸುವಂತಾಗಿಬಿಟ್ಟಿತ್ತು…
~
ಈ ಸಿನೆಮಾವನ್ನು ಮೂರ್ನಾಲ್ಕು ಬಗೆಯಿಂದ ನೋಡಬಹುದು. ಮನರಂಜನೆ, ಶಾರುಖ್ ಅಭಿನಯ, ಹೆಣ್ಣು ಮನಸ್ಸಿನ ಒಳತೋಟಿ ಮತ್ತು ಹಸು ಮನಸ್ಸಿನ ಗಂಡಸಿನ ತೊಳಲಾಟ…
ನನ್ನ ಆಯ್ಕೆ, ಹೆಣ್ಣಿನ ಒಳತೋಟಿಯೇ ಆಗಿತ್ತು. ಅದಕ್ಕೇ, ಕೊನೆಯಲ್ಲಿ ಸೂರಿಯೇ ರಾಜ್ ಎಂದು ಗೊತ್ತಾದಾಗ, ಯಾವುದೇ ಹಿಂಜರಿಕೆಯಿಲ್ಲದೆ ಆತನನ್ನು ಅವಳು ಸ್ವೀಕರಿಸಿದ್ದು ನನಗೆ ಅರಗಿಸ್ಕೊಳ್ಳಲಾಗಲಿಲ್ಲ. ರಾಜ್ ಒಬ್ಬ ಬೇರೆಯೇ ವ್ಯಕ್ತಿ. ಹಾಗಂತಲೇ ಅವಳು ಅಂದ್ಕೊಂಡು ಪ್ರೀತಿಸಿದ್ದಳು. ಅದು ಸೂರಿಯದೇ ನಟನೆ ಎಂದು ಮೊದಲೇ ಗೊತ್ತಾಗಿಹೋಗಿದ್ದರೆ ಅವಳ ಪ್ರತಿಕ್ರಿಯೆ ಹೇಗಿರುತ್ತಿತ್ತು?
ಅಂತಿಮವಾಗಿ, ತನ್ನ ಮೆಲೆ ತನ್ನ ಗಂಡನಿಗಿರುವ ಪ್ರೀತಿಯನ್ನ ಗೌರವಿಸಿ, ಮೆಚ್ಚಿ ಆಕೆ ಅವನ ತೆಕ್ಕೆ ಸೇರಿದಳೆಂದರೂ, ಆತ ಬೇರೆ ಯಾರೋ ಅಗಿದ್ದಿದ್ದರೆ ಎನ್ನುವ ಮುಜುಗರ, ರಾಜ್ ತನ್ನಿಂದ ಶಾಶ್ವತವಾಗಿ ಇಲ್ಲವಾಗಿಹೋದ ಸಂಕಟ ಅವಳನ್ನು ಕಾಡುವುದಿಲ್ಲವೇ?
~
ಹೀಗೇ ಆಗಿತ್ತು. ಒಂದಷ್ಟು ದಿನ ‘ಹನಿ’ ಎನ್ನುವ ಹುಡುಗಿ ನನಗೆ ಮೆಸೇಜ್ ಮಾಡ್ತಿದ್ದಳು. ಅದು ಯಾರು ಎಂದು ಗೊತ್ತಾಗುವವರೆಗೂ ಆಕೆ ಅನಾಮಧೇಯಳಾಗಿದ್ದವರೆಗೂ ನನಗೆ ಆಕೆಯ ಬಗ್ಗೆ ಕುತೂಹಲವಿತ್ತು. ನಿರಂತರ ಎಸ್ಸೆಮ್ಮೆಸ್ ಒಡನಾಟವಿತ್ತು. ಆದರೆ, ಆಕೆ ನನ್ನ ಕಸಿನ್ ಎಂದು ಬಯಲಾದ ಮೇಲೆ (ಅವಳ ರೂಮ್ ಮೇಟಿನ ನಂಬರಿಂದ ಮಾಡ್ತಿದ್ದಳು) ಆಸಕ್ತಿ ಕಡಿಮೆಯಾಯ್ತು. ಅವಳಲ್ಲೂ, ನನ್ನಲ್ಲೂ…
ತಾನ್ಯಾಗೆ, ಹೀಗೆ ಹುಚ್ಚುಚ್ಚಾಗಿ ತನ್ನನ್ನ ಪ್ರೀತಿಸುವವ ತನ್ನ ಪತಿಯಲ್ಲದ ಬೇರೆ ಯಾರೋ ಅನ್ನುವುದೇ ಥ್ರಿಲ್ ಆಗಿಸಿತ್ತೇ? ಎನ್ನುವ ಪ್ರಶ್ನೆ ಮೂಡಿದಾಗ ಸುಖಾ ಸುಮ್ಮನೆ ಈ ಘಟನೆ ಮನಸ್ಸಲ್ಲಿ ಹಾದು ಹೋಯ್ತು.
~
ಎಂಥದೋ ಒಂದು. ಸಿನೆಮಾ ಅನ್ನೋದು ನೋಡಿ ಮರೆಯಬೇಕಾದ ಸಂಗತಿ. ಅದನ್ನಿಟ್ಟುಕೊಂಡು ಸೆಮಿನಾರ್ ಮಾಡೋಕಾಗತ್ತಾ? ಗೆಳೆಯ ಗೊಣಗಿದ. ನನಗೆ ಹೇಳಲೇನೂ ತೋಚದೆ ಬಾಯಿ ಮುಚ್ಚಿಕೊಂಡೆ.
ಹೆಣ್ಣು ಮನಸ್ಸಿನ ಕಥೆಗಳು ನನಗೆ ಹೊಸತಲ್ಲವಾದರೂ, ಯಾಕೋ ಕಾಡುವಿಕೆ ಹೊಸತಾಗಿ ಕಾಣುತ್ತಿದೆ. ಕೊಂಚ ಹುಷಾರಾಗಿರಬೇಕು. ಏನಂತೀರಿ!?
ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!
December 19, 2008 at 8:18 am | In ನಿಮ್ಮೊಂದಿಗೆ | 14 CommentsTags: ಕಲ್ಕತ್ತಾ, ಪುರಿ, ಪ್ರವಾಸ
ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು.
ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ…. ಆಆಆಆಆ………. ಖ್ಷೀ…….
ಉಹ್… ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು!

ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು ಕೊಂಕಿರಲಿಲ್ಲ. ಗಂಗೆಯಲ್ಲಿ, ಸಮುದ್ರದಲ್ಲಿ ಹೊರಳಾಡಿ ಬಂದಿದ್ದರೂ ಮೂಗು ನೆಂದಿರಲಿಲ್ಲ! ಇಷ್ಟೂ ದಿನ ಕರಾವಳಿಯ ಧಗೆಯಲ್ಲಿ ( ಅಲ್ಲಿ ಚಳಿಗಾಲ ಅಂತ ಅಲ್ಲಿನವರೆಲ್ಲ ಶಾಲು ಹೊದೆಯುತ್ತಿದ್ದರು ಗೊತ್ತಾ?) ಬೆಂದು ಬಂದಾಗಲೂ ತೆಪ್ಪಗಿದ್ದ ನರ ನಾಡಿಗಳು ಬೆಂಗಳೂರಿನ ಧೂಳು ಗಾಳಿ ಹೊಕ್ಕುತ್ತಿದ್ದ ಹಾಗೆ ಹೇಗೆ ಎಗರಿಬಿದ್ದವು ನೋಡಿ!?
ಅಂತೂ ಸುಖಕರ ಪ್ರಯಾಣ ಮುಗಿಸಿ ಬಂದ ನಾನೀಗ ಹುಷಾರು ತಪ್ಪಿ, ಮೂಗೊರೆಸಿಕೊಳ್ಳುತ್ತ ಆಫೀಸಲ್ಲಿ ಕುಂತಿದ್ದೇನೆ. ಅಲ್ಲಿದ್ದಷ್ಟೂ ದಿನ ‘ಈಸ್ಟ್ ಆರ್ ವೆಸ್ಟ್, ಬೆಂಗ್ಳೂರ್ ಇಸ್ ದ ಬೆಸ್ಟ್’ ಅಂತ ಹಾಡುತ್ತಿದ್ದ ನನ್ನ ಬಗ್ಗೆಯೇ ಗಂಭೀರವಾಗಿ ಚಿಂತಿಸುತ್ತಾ….
ಕಲ್ಕತ್ತಾಗೆ ಹೋಗ್ತಿರೋದು ಇದು ಎರಡನೆ ಸಾರ್ತಿಯಾದರೂ ಡೀಟೇಲಾಗಿ ನೋಡುವ ಅವಕಾಶ ಸಿಕ್ಕಿದ್ದು ಇದೇ ಮೊದಲು. ಜನರ ಗಿಜಿಬಿಜಿ, ಕಂಬಳಿಹುಳದ ಹಾಗೆ ರಸ್ತೆ ಮಧ್ಯ ಒಡುವ ಟ್ರಾಮು, ಗಲೀಜುಮಯ ಗಲ್ಲಿಗಳು, ಅಗಲಗಲ ಬೊಟ್ಟಿನ- ತುಂಬು ಸಿಂಧೂರದ ಹೆಂಗಸರು, ಮುದ್ದಾದ ಹುಡುಗರ, ಸೊಗಸಾದ ಭಾಷೆ, ಆಹಾ! ರಸಗುಲ್ಲಾ!! ಯಾವ ಪುಣ್ಯಾತ್ಮರೋ, ‘ದೇಶ ನೋಡು, ಕೋಶ ಓದು’ ಅಂದವರು…. ಎಷ್ಟು ನಿಜದ ಮಾತು ಹೇಳಿದಾರಲ್ವ? ನಮ್ಮದೇ ದೇಶದ ಬೇರೆಯದೇ ಬಗೆಯ ಆಚಾರ ವಿಚಾರಗಳ ಜನರ ಸಹವಾಸ ಕಟ್ಟಿಕೊಡುವ ಅನುಭವವನ್ನ ಅನುಭವಿಸಿಯೇ ತೀರಬೇಕು.
ನನಗದ್ಯಾಕೋ ಬಂಗಾಳದ ಬಗೆಗೊಂಥರಾ ಆಕರ್ಷಣೆ. ಹಾಗಂತಲೇ ಕಳೆದ ವರ್ಷ ಬಂಗಾಲಿ ಓದಲು- ಬರೆಯಲು ಕಲಿತಿದ್ದೆ. ಚಿಕ್ಕ ಮಕ್ಕಳು ಹೊಸತಾಗಿ ಓದು ಕಲಿತಾಗ ಮಾಡ್ತಾರಲ್ಲ ಹಾಗೆ- ಬಂಗಾಳದ ಹಾದಿ ಬೀದಿ ಸುತ್ತುವಾಗ ಅಂಗಡಿ ಬೋರ್ಡುಗಳ ಹೆಸರನ್ನ ಓದಿದ್ದೇ ಓದಿದ್ದು! ಜೊತೇಲಿದ್ದವರೆಲ್ಲ ‘ಭಲೇ’ ಎನ್ನುವಾಗ ಬೀಗಿದ್ದೇ ಬೀಗಿದ್ದು!
ಓಹ್! ಕೆಲವೊಂದಷ್ಟು ಹಳ್ಳಿಗಳನ್ನ ಕಾಲ್ನಡಿಗೆಯಲ್ಲಿ ತಿರುಗಿದ್ದು, ಹಳ್ಳಿಗರ ಮನೆ ಹೊಕ್ಕು ಊಟ ಮಾಡಿದ್ದು, ಕಂಡ ಕಂಡ ಕೆರೆಯಲ್ಲಿ ಎಮ್ಮೆಗಳ ಹಾಗೆ ಹಾರಿದ್ದು, ನೊಣಗಳ ಸಾಮ್ರಾಜ್ಯದಂತಿದ್ದ ದಾರಿಬದಿ ಹೋಟೆಲುಗಳಲ್ಲಿ ಪರೋಟಾ ತಿಂದು ಚಪ್ಪರಿಸಿದ್ದು ಅವೆಲ್ಲ ಮಜವೇ ಮಜ. ಈ ಎಲ್ಲ ಮನರಂಜನೆಯನ್ನು ಹಿಂದಿಕ್ಕಿ ರಾಮ ಕೃಷ್ಣಾಶ್ರಮದ ತಂಪು ನನ್ನನಪ್ಪಿ ಮೈದಡವಿ ಕಳಿಸಿತಲ್ಲ, ಅದರ ನವಿರು ಹಾಗೇ ಉಳಿದಿದೆ ಇನ್ನೂ. ಸಧ್ಯದ ಮಟ್ಟಿಗಂತೂ ಪರಮಹಂಸರ ಚಿಂತನೆಗಳು ನನ್ನ ಕೆಲವು ಭ್ರಮೆಗಳನ್ನ ಅಲುಗಾಡಿಸಿವೆ. ಕೆಲವು ಆಲೋಚನೆಗಳನ್ನ ಗಟ್ಟಿಗೊಳಿಸಿವೆ. ಮನಸ್ಸೆಂಬ ಮಹಾಕೋತಿ ನಿಂತಲ್ಲಿ ಎಷ್ಟು ದಿನ ನಿಂತೀತೋ ಯಾರಿಗೆ ಗೊತ್ತು?
ನಾವು ಹೋಗಿದ್ದು ಬರೀ ಕಲ್ಕತ್ತೆಗಲ್ಲ, ಒರಿಸ್ಸಾದ ಪುರಿ ಗೂ ಹೋಗಿದ್ವಿ. ಯಾಕಾದ್ರೂ ಹೋದೆವೋ ಅನ್ನಿಸಿದ್ದು ಸುಳ್ಳಲ್ಲ. ಇದನ್ನ ಹೇಳಿಕೊಳ್ಳುವಾಗ ನಾಚಿಕೆಯಿಂದ ತಲೆ ತಗ್ಗಿಹೋಗಿದೆ. ಒಂಥರಾ ಉಸಿರುಕಟ್ಟಿದ ಅನುಭವ. ಮುಂದೆ ಕೂಡ ನಾನು ಈ ಪುರುಷೋತ್ತಮ ಕ್ಷೇತ್ರದ ಬಗ್ಗೆ ಮಾತಾಡುವಾಗ ಹೀಗೇ ಕುಗ್ಗಿಹೋಗುತ್ತೇನೆ. ಈ ಬಗ್ಗೆ ವಿವರವಾಗಿ ಹೇಳಿಕೊಳ್ಳುವೆ. ಅದಕ್ಕೆ ಮುನ್ನ, ಅಂತಹ ಪ್ರಾಮಾನಿಕತೆ ನನಗಿದೆಯಾ? ಯೋಚಿಸಬೇಕಿದೆ. ಪ್ರಸಾದ ಕ್ಷೇತ್ರದಲ್ಲಿ ಭಗವಂತನ ಹೆಸರಲ್ಲಿ ಪಂಡಾಗಳು ನಡೆಸುವ ಲೂಟಿ, ಅವರ ಪರಮ ಕೊಳಕುತನಗಳೆಲ್ಲ ಹಾಗೇ ಕಣ್ಮುಂದೆ ಹಾದು ಹೋಗುತ್ತಿದೆ.
ಹೀಗೆ ಮನಸ್ಸು ಕಸಿವಿಸಿಗೊಂಡು ‘ಇಲ್ಲಿ ಬರಲೇ ಬಾರದಿತ್ತು’ ಅಂದುಕೊಳ್ತಿದ್ದ ನಮಗೆ ಮತ್ತೆ ಸಾಂತ್ವನ ನೀಡಿದ್ದು ರಾಮಕೃಷ್ಣಾಶ್ರಮವೇ. ಅದು, ಭುವನೇಶ್ವರದಲ್ಲಿ. ಕೊನಾರ್ಕ್ ನಲ್ಲಿ ಮತ್ತಷ್ಟು ತಲೆ ಬೇಯಿಸಿಕೊಂಡು, ಅತ್ಯದ್ಭುತ ಸೂರ್ಯ ದೇಗುಲದ ಅಂದವನ್ನು ಸವಿಯುತ್ತ, ಜೊತೆಜೊತೆಗೇ ಅದರ ಅವಸ್ಥೆಗೆ ಮರಗುತ್ತಾ ‘ದೇವಾಲಯಗಳ ನಗರ’ ಹೊಕ್ಕ ನಮಗೆ ಮತ್ತಷ್ಟು ಆಘಾತ ಕಾದಿತ್ತು. ‘ಮಂದಿರವಲ್ಲೇ ಕಟ್ಟುವೆವು’ ಅಂತ ಬೊಬ್ಬೆ ಹೊಡೆಯುವವರನ್ನು ಒಮ್ಮೆ ಇಲ್ಲಿಗೆ ಕರೆತಂದು, ‘ಇರೋದನ್ನ ನೆಟ್ಟಗಿಟ್ಟುಕೊಳ್ಳಿ ಮೊದಲು’ಅಂತ ಹೇಳಬೇಕೆನಿಸಿತು. ಅದಕ್ಕೆ ಮುನ್ನ, ಆ ದೇವಾಲಯಗಳೆಲ್ಲ ಮುಜರಾಯಿಯದೋ, ಖಾಸಗಿ ಆಡಳಿತದ್ದೋ ಅಂತ ತಿಳಿಯಬೇಕು. ಸರ್ಕಾರವನ್ನು ಬಯ್ದುಕೊಳ್ಳುವ ತೆವಲಂತೂ ನನಗೆ ಇದ್ದೇ ಇದೆ. ಅದು ಸುಲಭ ಕೂಡ. ಆದರೆ, ಈ ದೇವಾಲಯಗಳೇನಾದರೂ ಖಾಸಗಿ ನಿರ್ವಹಣೆಗೆ ಒಳಪಟ್ಟಿದೆಯೆಂದಾದರೆ, ಅದನ್ನು ನಂಬಿ ಅರಗಿಸಿಕೊಳ್ಳುವುದು ಕಡು ಕಷ್ಟ.
ಇರಲಿ. ಹೀಗೆ ತಲೆ ಕೆಡಿಸಿಕೊಂಡು ಸುತ್ತುತ್ತಿದ್ದ ನಮಗೆ ಅಲ್ಲಿನ ಗುಹಾಂತರ ದೇವಾಲಯಗಳು ಖುಷಿ ಕೊಟ್ಟವು. ಧವಳಗಿರಿಯ ಬುದ್ಧ ಮೂರ್ತಿಗಳು ತಂಪೂಡಿದವು. ಭುವನೇಶ್ವರದ ರಾಮಕೃಷ್ಣಾಶ್ರಮದಲ್ಲಿ ಕಳೆದ ಮತ್ತೆರಡು ದಿನಗಳು ಶಾಂತಿ ತುಂಬಿದವು.
ಹೀಗೆ ಒಟ್ಟು ಬೇಲೂರು ಮಠ, ದಕ್ಷಿಣೇಶ್ವರ, ಜಯರಾಂಬಾಟಿ, ಕಾಮಾರಪುಕುರ ಎಂದೆಲ್ಲ ಆಶ್ರಮಗಳ ತೆಕ್ಕೆಯಲ್ಲಿ ಇದ್ದೆದ್ದು ಬಂದ ನನಗೆ-
ಈ ಆಫೀಸು, ಟ್ರಾಫಿಕ್ಕು, ಮನೆಯಲ್ಲಿ ಸತ್ತು ಬಿದ್ದಿದ್ದ ಜಿರಳೆಗಳು, ಬಾರದ ನಲ್ಲಿ ನೀರು, ಅಂಗಡಿ ಮುಚ್ಚಿರುವ ಧೋಬಿ, ಅಡುಗೆ ಮನೆಯ ಅನಿವಾರ್ಯತೆಗಳೆಲ್ಲ ಮುತ್ತಿಗೆ ಹಾಕಿ ಹೈರಾನು ಮಾಡ್ತಿವೆ. ಆದರೂ, ಎಷ್ಟು ಮಾತು ಉಳಿದು ಹೋಗಿವೆ!?
ಪ.ಬಂಗಾಳದ ರಾಜಕೀಯ, ಹಾಳು ಸುರಿಯುವ ಗಲ್ಲಿಗಳು, ಇಪ್ಪತ್ತು ದಶಕ ಹಿಂದಿರುವ ಊರುಗಳು, ಗ್ರಾಮೀಣ ಉತ್ಪನ್ನಗಳಿಗೆ ಅಲ್ಲಿ ದೊರೆಯುತ್ತಿರುವ ಪ್ರೋತ್ಸಾಹ- ನಮಗೆ ಮಾದರಿಯಾಗಬಲ್ಲ ಮತ್ತಷ್ಟು ಆ ಬಗೆಯ ಸಂಗತಿಗಳು…
ಭಗವಂತನಿಲ್ಲದ ದೇವಾಲಯಗಳು, ಧನದಾಹಿ- ಸೋಮಾರಿ ಪಂಡಾಗಳು, ಕೊನಾರ್ಕ್ ದೇವಾಲಯದ ವಿಸ್ಮಯ- ದುರವಸ್ಥೆ…
ಇವೆಲ್ಲದರ ನಡುವೆ, ಮರಳುವಾಗ ಟಿಕೆಟ್ ಕನ್ಫರ್ಮ್ ಆಗದೆ ಅನಿರೀಕ್ಷಿತವಾಗಿ ದೊರೆತ ರೈಲು ಪ್ರಯಾಣದ ರಂಜಕ ಅನುಭವಗಳು ಮತ್ತು ನನಗೆ ಸಿಕ್ಕ ಕಾದಂಬರಿಯ ಎಳೆ!
ಇವನ್ನೆಲ್ಲ ಹೇಳಲೇಬೇಕು, ಮುಂದೆಂದಾದರೂ…
ದಕ್ಷಿಣೇಶ್ವರ ಯಾತ್ರೆಗೆ…
December 4, 2008 at 9:03 am | In ನಿಮ್ಮೊಂದಿಗೆ | 11 CommentsTags: ದಕ್ಷಿಣೇಶ್ವರ, ಬೇಲೂರ್ ಮಠ
ಸಂಜೆಯಾಗಲು ತವಕಿಪುದು ಮನ
ದಕ್ಷಿಣೇಶ್ವರ ಯಾತ್ರೆಗೆ
ಪರಮಹಂಸರ ತೀರ್ಥವಾಣಿಯ
ಪಂಚ ಅಮೃತದ ಪಾತ್ರೆಗೆ… ( ಕುವೆಂಪು ರಚನೆ)
ಸಾಕಾಗಿದೆ. ಒಂದು ಹತ್ತು ದಿನ ತಣ್ಣಗೆ ನನ್ನ ನೆಚ್ಚಿನ ಸ್ಥಳದಲ್ಲಿ ಇದ್ದು ಬರ್ತೇನೆ. ಪರಮಹಂಸರು, ಶಾರದಾ ದೇವಿ, ವಿವೇಕಾನಂದರು ಓಡಾಡಿದ ಜಾಗಗಳನ್ನ ಕಣ್ತುಂಬಿಸಿಕೊಂಡು ಬರ್ತೇನೆ.
ಕುವೆಂಪು ಹಾಡಿದ್ದಂತೆ ಪ್ರತಿ ದಿನವೂ ಇದನ್ನು ನಾನು ಹಾಡುವವಳೇ. ಹಾಗೆಂದೇ ಮತ್ತೆ ಕೈಬೀಸಿ ಕರೆಯುತ್ತಿರುವ ದಕ್ಷಿಣೇಶ್ವರದತ್ತ ಪ್ರಯಾಣ. ನಾಳೆ ಹೊರಟಿದ್ದೇನೆ.
ಬಂದಮೇಲೆ, ಕುವೆಂಪು ಅವರ ಅಧ್ಯಾತ್ಮಿಕ ಆಸಕ್ತಿಯ ಬಗ್ಗೆ, ಅವರು ರಾಮಕೃಷ್ಣ ಆಶ್ರಮದಿಂದ ದೀಕ್ಷೆ ಪಡೆದಿದ್ದರ ಬಗ್ಗೆ, ವಿವೇಕಾನಂದರಿಂದ ಪ್ರೇರಿತರಾಗಿದ್ದುದರ ಬಗ್ಗೆ ಎಲ್ಲ ಮಾತನಾಡಬಹುದಲ್ಲ? ಆ ಬಗ್ಗೆ ತೇಜಸ್ವಿ ಮತ್ತು ದೇ.ಜ.ಗೌಡರ ಬರಹಗಳಲ್ಲಿ, ಸ್ವತಃ ಕುವೆಂಪು ಬರಹಗಳಲ್ಲಿ ಸಾಕಷ್ಟು ಮಾಹಿತಿ ಇದೆ. ವಿವೇಕಾನಂದರ ‘ಸಾಂಗ್ ಆಫ್ ಸನ್ಯಾಸಿನ್’ ಗೀತೆಯನ್ನು ಕುವೆಂಪು ಮೂಲಕ್ಕಿಂತಲೂ ಹೆಚ್ಚು ಪ್ರಖರವಾಗಿ ಕನ್ನಡದಲ್ಲಿ ಪುನರ್ನಿರೂಪಿಸಿದ್ದಾರೆ. “ಏಳು ಮೇಲೇಳು ಸಾಧುವೆ ಹಾಡು ಚಾಗಿಯ ಹಾಡನು; ಹಾಡಿನಿಂದೆಚ್ಚರಿಸು ಮಲಗಿಹ ನಮ್ಮ ಈ ತಾಯ್ನಾಡನು…” ಎಂಬ ವಿವೇಕಾನಂದರ ಕರೆ ಅದು.
ಇರಲಿ,
ಅವೆಲ್ಲ ಬಂದ ಮೇಲೆಯೂ ಮಾತಾಡಬಹುದಲ್ಲವೇ?
ಬರುವವರೆಗೂ,
ಬೈ…
ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ
ಹೀಗೊಂದು ಆಟದ ಪ್ರಸಂಗ…
December 4, 2008 at 8:47 am | In ತಂಗಳು | Leave a CommentTags: ಕಥೆ
ಥೈಯ್ಯ ಥೈಯ್ಯ ಥೈಯ್ಯ ತಾಂಗುಡಿತ ತಾಂಗುಡಿತ ಥೈ!
ನಾರೀ ಮಣಿಯೆ ಬಾರೇ… ಮಣಿಯೆ ಬಾರೇ… ಬಾ ಬಾರೇ…
ಛೀ! ಪಾಪಿ!! ಸರಿ ದೂರ…
ಬಾ ಬಾರೇ… ಮುಖ ತೋರೇ…
ದುರುಳ, ಸರಿ ದೂರ…!
ಕೀಚಕ ವಧೆ ಪ್ರಸಂಗ. ಮಂಜು ಭಾಗವತ ಗಂಟಲು ಕಿತ್ತುಕೊಂಡು ಹಾಡ್ತಿದ್ದ. ಶಾಮ ಪೂಜಾರಿಯ ಭರ್ಜರಿ ಕೀಚಕ ವೇಷ. ಅವನ ಕಾಕು, ಪಟ್ಟು, ಕುಣಿತ… ಅಬ್ಬ!
ಅವನೆದುರು ಸ್ತ್ರೀ ವೇಷದ ದಾಮೋದರ- ದಾಮೂ ಹುದುಗಿಹೋದಂತಿತ್ತು.
ದಾಮೂ ಪೀಚಲು ಹುಡುಗ. ದನಿಯೂ ಕೀರಲು. ಸ್ತ್ರೀ ವೇಷಕ್ಕೆ ಹೇಳಿ ಮಾಡಿಸಿದ ಸಪೂರ ಸಪೂರ ಕೈಕಾಲು. ಬಳಕು ಮೈಕಟ್ಟು. ಬಿಳಿ ಬಣ್ಣ. ಅವನು ಸೈರಂಧ್ರಿ ಪಾತ್ರ ಕಟ್ಟಿದರೆ ಎಲ್ಲರೂ ಅಂವನ್ನ ಬಾ ಬಾರೇ…. ಅಂತ ಹಾಡಿ ಛೇಢಿಸೋರೇ. ಅಷ್ಟು ಚೆಂದ.
ಶಾಮ ಪೂಜಾರಿ ಭಾರೀ ರಸಿಕ. ಮೇಳದ ಮಿಕ್ಕವರೆಲ್ಲ ಮನೆ ಮಠ ಅಂತ ಇದ್ದುಕೊಂಡಿದ್ದರೆ, ಶಾಮನಿಗೆ ಊರೆಲ್ಲಾ ಮನೆ- ಮಕ್ಕಳು!
ರಂಗದ ಮೇಲೆ ಭಾರೀ ಕುಣೀತ. ಅವನ ಒಂದೊಂದು ಪಟ್ಟಿಗೂ ದಾಮೂ ಧಸಧಸನೆ ಉಸಿರು ಬಿಡುತ್ತಿದ್ದ. ಬೆವರುಬೆವರಾಗುತ್ತಿದ್ದ.
ನಾರೀ ಮಣಿಯೆ ಬಾರೇ…
ಕೀಚಕ ಸೈರಂಧ್ರಿಗೆ ಮರುದಿನ ನರ್ತನ ಶಾಲೆಗೆ ಬರುವಂತೆ ಒತ್ತಾಯಿಸುತ್ತಿದ್ದ.
ಶಾಮ ದಾಮೂವಿಗೆ ಕೊಟ್ಟಿದ್ದ ದಿನದ ಗಡುವು ಅಂದಿಗೆ ಮುಗಿದಿತ್ತು. ಕುಣಿತದ ತೆವಲಿಗೆ ಬಿದ್ದು, ಮನೆ ಬಿಟ್ಟು ಬಂದಿದ್ದ ದಾಮೂ ಯಾವ ಕಾರಣಕ್ಕೂ ಮನೆಗಂತೂ ಹೋಗುವ ಹಾಗಿರಲಿಲ್ಲ.
ಶಾಮನ ಕೆಣಕುಗಣ್ಣು, ಅಸಹ್ಯದ ತುಟಿ, ಉಬ್ಬಿದ ಹೊಟ್ಟೆ, ಬೆವರು ನಾತ….
ಥೂ! ಅಳುವೇ ಬಂತು ದಾಮುವಿಗೆ ರಂಗದ ಮೇಲೂ.
ನನ್ನ ಐವರು ಪತಿಯರು ದೇವ ಗಂಧರ್ವರು. ಅವರಿಗೆ ಹೇಳಿದರೇ….
ಸೈರಂಧ್ರಿ ರೋಪು ಹೊಡೀತಿದ್ದಳು.
ಅವಳೊಳಗಿದ್ದ ದಾಮುವಿನ ತೊಳ್ಳೆ ನಡಗುತ್ತಿತ್ತು.
ಗಂಡಸು ಗಂಡಸೊಂದಿಗೇ…! ಇಶ್ಶೀ ಅದೆಂಥದು? ಅದು ಹೇಗೆ…?
ಅಂತೆಲ್ಲ ವಾಕರಿಸಿಕೊಂಡ.
ಭೀಮ ಸೈರಂಧ್ರಿಯನ್ನು ಸಂತೈಸುತ್ತಿದ್ದ… ದಾಮುವಿಗೆ ಯಾರು ದಿಕ್ಕು?
ಶಾಮ ಜೊಲ್ಲು ಸುರಿಸುತ್ತಿದ್ದ.
ಬೆಳಗು ಹರಿಯೋದೇ ಬೇಡ… ಹೀಗೇ, ಇಲ್ಲೇ, ರಂಗದ ಮೇಲೇ…
ಥೈಯ್ಯ ಥೈಯ್ಯ ಥೈಯ್ಯ….
ಮಂಗಳ. ಇನ್ನೇನು ಆಟ ಮುಗೀತು.
ದಾಮೂಗೆ ಅಮಂಗಳ. ಈಗ ಶುರುವಾಗಲಿದೆ ಅವನ ಪಾಲಿನ ದೊಡ್ಡಾಟ…
ಕೀಚಕ ಭೀಮನ ಕೈಲಿ ನೆಗೆದುಬಿದ್ದಿದ್ದ. ಶಾಮ- ದಾಮುವಿನ ಟೆಂಟಲ್ಲಿ ನಿಂತಿದ್ದ!
ನಿಶ್ಚಯ ಮಾಡಿಯೇ ಮೂಲೆಯಲ್ಲಿ ಕುಂತಿದ್ದ ದಾಮೂ ಧಿಗ್ಗಂತ ನೆಗೆದು ಶಾಮೂ ಕುತ್ತಿಗೆ ಗಿರಿದು ಹಿಡಿದ.
ಶಾಮನ ತಲೆ ತಿರುಗಹತ್ತಿತು. ಅಂವ ಕಕ್ಕಾಬಿಕ್ಕಿಯಾಗಿ ನೋಡ್ತಲೇ ವಿಲವಿಲಾಂತ ಬಿದ್ದವ ದಾಮೂ.
ಛೀ… ದುರುಳ. ನನ್ನ ಪತಿಯರು ದೇವ- ಗಂಧರ್ವರು!- ಅಂತೆಲ್ಲ ವಟವಟಿಸ್ತಿದ್ದ. ಭಿಮ ಬರಲಿಲ್ಲ? ಹಾಂ? ವಿಷ ನುಂಗಿದೆ, ವಿಷ!
ಹಹ್ಹಾ ನಗು ನಗಲು ಹೋದ ದಾಮೂ. ಬಾಯಲ್ಲಿ ಬುರಬುರ ನೊರೆ.
ಚಾಪೆಯ ಬದಿಯಲ್ಲಿ ವಿಷದ ಶೀಶೆ.
ನೂರು ಚಂಡೆ ಬಡಿದ ಸದ್ದು… ಶಾಮನ ಗಂಟಲಿನದ್ದು!
ಮೇಳಕ್ಕೆ ಮೇಳವನ್ನೇ ಎಬ್ಬಿಸಿದ. ಸಾರಾಯಿ ಮತ್ತು ಸರ್ರಂತ ಇಳಿದಿತ್ತು.
ಶಾಮ ಎಚ್ಚೆತ್ತ.
ಸರ್ಕಾರಿ ಆಸ್ಪತ್ರೆಯ ಮಂಚದ ಮೇಲೆ ಮಲಗಿದ್ದ ದಾಮುವಿನ ಪಕ್ಕದಲ್ಲವ ಮೂಸುಂಬಿ ಸುಲಿಯುತ್ತ ಕುಂತಿದ್ದ.
ದಾಮೂ ಸಾಯಲಿಲ್ಲ.
ಶಾಮನೂ ಬದುಕಿದ್ದ.
ಒಳಗಿನ ಕೀಚಕ ಮಾತ್ರ ಭೀಮ ಕೊಲ್ಲದೇ ನೆಗೆದುಬಿದ್ದಿದ್ದ.
ಆಟ ಮುಗಿದಿತ್ತು…
(November 22, 2007 at 2:58 am ರಂದು ಪೋಸ್ಟ್ ಮಾಡಿದ್ದ ಹಳೆ ಬರಹ)
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ…
December 4, 2008 at 8:39 am | In ತಂಗಳು | 2 CommentsTags: ಕವಿತೆ
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿ ಇದೆ
ಈ ಬೆಳಗನ್ನ ಬಲಿಕೊಡಲೇಕೆ ನಾನು?
ಎಷ್ಟೊಂದು ಕೆಲಸವಿದೆ,
ಕಳೆದ ಫೈಲು ಹುಡುಕಬೇಕು
ನನ್ನ ಜಾಯಮಾನ ಗೊತ್ತಲ್ಲ?
ಕಳಕೊಳ್ಳುತ್ತಲೇ ಇರುವುದು…
ನಿನ್ನನೆಲ್ಲಿ ಹುಡುಕಲಿ ಹೇಳು?
ನಿನ್ನ ಮುಖದವನೇ ಇದ್ದಾನೆ ಹೀಗೊಬ್ಬ,
ಅದೆ ಮಾತು, ಅದೆ ನಗು
ಅದೆ ಅದೇ ದೇಹ.
ಅದರೊಳಗೆ ನೀನಿದ್ದೆ,
ಎಲ್ಲಿ ಹೋದೆ!?
ಕಾಲಮೇಲೆ ನಿಲ್ಲುವ
ತವಕಕ್ಕೆ,
ಕಾಲು ಸೋತು ಹೋಗಿದೆ
ನನ್ನ ಹೊಕ್ಕುಕ್ಕಿಸುತ್ತಿದ್ದ ಪ್ರೀತಿ
ಸೊರಗಿ ಸೋಲಿಸುತಿದೆ ಯಾಕೆ?
ದಣಿದು ಬಂದ ಪ್ರತಿ ಸಂಜೆ
ತಪ್ಪದೆ ನಡೆಯುವ ಪಾರಾಯಣ,
ಮತ್ತವೇ ಹಳೆ ಪಟ್ಟಿ-
ನಾ ಮರೆತ ನಿನ್ನ ಕೆಲಸ,
“ಪ್ರೀತಿ ಕಡಿಮೆಯಾಗಿದೆ”,
ಇತ್ಯಾದಿ…
ನೀ ಮರೆತ ನಿನ್ನ ನೆನಪು
ಎಲ್ಲಿಂದ ಹೆಕ್ಕಿ ಕೊಡಲಿ?
ಬಿಡು
ಕೆಲಸವಿದೆ, ಫೈಲು ಹುಡುಕಬೇಕು…
ಅಲ್ಲದೆ,
ಆಫೀಸಲ್ಲಿ ಅತ್ತರೆ
ಅವರಿವರು ನೋಡುವ ನಾಚಿಕೆ ನನಗೆ.
ಹೇಗೂ
ದುಃಖಿಸಲಿಕ್ಕೆ ಇಡಿ ರಾತ್ರಿ ಬಾಕಿಯಿದೆ,
ನೀ ಗೊಣಗುತ್ತೀಯೆಂದು
ಇತ್ತೀಚೆಗೆ
ಬೆಡ್ ಲೈಟೂ ಹಾಕುತ್ತಿಲ್ಲ ನಾನು.
( March 13, 2008 at 7:44 am ರಂದು ಬ್ಲಾಗ್ ನಲ್ಲಿ ಹಾಕಿದ್ದು)
‘ದೇವರ ಮನಿ’ಯ ಎದೆಯಲ್ಲಿ ಕಾವ್ಯ, ಕೈಯಲ್ಲಿ ಕೋವಿ…
December 4, 2008 at 4:57 am | In ನಿಮ್ಮೊಂದಿಗೆ | 5 CommentsTags: ಭಯೋತ್ಪಾದನೆ
ಸಾಕಷ್ಟು ಜನ ಭಯೋತ್ಪಾದಕ ಕೃತ್ಯದ ಬಗ್ಗೆ ತಮ್ಮ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾಗಿದೆ. ಇದುವರೆಗೂ ಇವೆಲ್ಲವನ್ನು ಮೌನವಾಗಿ ನೋಡುತ್ತಿದ್ದ ಗೆಳೆಯ ಸಿದ್ದು ದೇವರಮನಿ ಮೊದಲ ಬಾರಿಗೆ ಲೇಖನ ಬರೆದಿದ್ದಾನೆ. ಸದಾ ಕವಿತೆ ಬರೆಯುವ ಈತ ಮೊದಲ ಬಾರಿಗೆ ಸಿಡಿದುಬಿದ್ದಿದ್ದಾನೆ. ಸಿದ್ದುವಿನಂಥ ಕವಿ ಹೃದಯ ಈ ದುರಂತಕ್ಕೆ ಸ್ಪಂದಿಸಿದ್ದು ಅಚ್ಚರಿಯೇನಲ್ಲ ಅಲ್ಲವೆ?
ಮುಂದಿನದನ್ನು, ಅವನ ಮಾತುಗಳಲ್ಲೆ ಕೇಳಿ…. ಸಿದ್ದುವಿನ ಬ್ಲಾಗ್: www.sidddevaramani.wordpress.com
ಕ್ಷಮಿಸಿ, ಎದೆಯಲ್ಲಿ ಕಾವ್ಯ ಕೈಯಲ್ಲಿ ಕೋವಿಯನ್ನಿಡಿದು ನಾನು ಷ೦ಡ ಸೂಳೇಮಕ್ಕಳು ಆಳುವ ನಾಡಿನಲ್ಲಿದ್ದೇನೆ!
ಹಲೋ ಕೇಳಿ…
ನಿಮ್ಮಗಳ ಬ್ಲಾಗ್ ನೋಡುತ್ತಿದ್ದೇನೆ ನಿಮ್ಮಗಳ ವಾದ..ಅಬಿಪ್ರಾಯ..ನಾನು ನಿಮ್ಮಷ್ಟು ತಿಳಿದವನಲ್ಲ ಎ೦ದೆನಿಸಿತು ಅದರೆ..ಮಾನವೀಯತೆ, ಜೀವನ್ ಪ್ರೀತಿ ಯ ಬಗ್ಗೆ ತಿಳಿದಿದೆ. ಈ ಉಗ್ರರ ವತ೯ನೆ, ಎನೂ ಅರಿಯದವರ ಸಾವು.. ದೇಶಕ್ಕೆ ಏನಾಗಿದೆ? ನಮ್ಮನಾಳುವವರು ಬುದ್ದಿಭ್ರಮಣೆಯಲ್ಲಿದ್ದಾರ? ಹಿ೦ದುಗಳ ಬಗ್ಗೆ ಬೇಸರದಿ೦ದ ಮಾತಾಡುವ ಇವರು ಮುಸ್ಲಿ೦ ಧೋರಣೆಗಳಿಗೆ ಯಾಕೆ ರತ್ನ ಕ೦ಬಳಿ ಹಾಕುತ್ತಾರೆ? ಜೊತೆಗಿದ್ದೇ ಕಾನೂನು ಬೇರೆ ಮಾಡಿದ ತೆವಲು ಯಾರದು? ” ಅಧಿಕಾರ ” ಅವರ ಮಾತನ್ನು ಕಟ್ಟಿಹಾಕುತ್ತದೆ. ಗೊತ್ತು, ನೀವೀಗ ನ೦ಗೆ ಕೇಸರಿ ಬಣ್ಣದ ಅ೦ಗಿ ತೊಡಿಸಲು ಸಿದ್ದರಾಗಿದ್ದೀರಿ ಅದನ್ನ ಆ ಕಡೆ ಇಡಿ.. ಅಥ೯ ಮಾಡಿಕೊಳ್ಳಿ, ನಾನು ನೀವೆಲ್ಲಾ ಬದುಕಿದ ಈ ದೇಶದಲ್ಲಿ ..ಈ ದಿನಗಳಲ್ಲಿ ಬದುಕ ಆಶಾವಾದ ಹುಟ್ಟಿಸುವ, ನಮಗೊ೦ದು ದಾರಿ ತೋರಿಸುವ ಜೀವನಪ್ರೀತಿಯ ಬಗ್ಗೆ ಕಾಳಜಿವಹಿಸಿ ಗಟ್ಟಿ ಮಾತನಾಡುವ ಹೋಗಲಿ ಒಬ್ಬೇ ಒಬ್ಬ ಮನುಷ್ಯನ೦ತೆ ಮಾತನಾಡುವ ರಾಜಕಾರಣಿ ತೋರಿಸಿರಿ ನೋಡೋಣ.. ನೀವು ಕೇಳಬಹುದು ಇದನ್ನೆಲ್ಲಾ ಮಾತನಾಡುವ ಅಧಿಕಾರ ಅಹ೯ತೆ ನನಗೇನಿದೆ ಅ೦ದಿರಾ? ನಮ್ಮ ಮನೇಲಿ “ ಹಜ್ ಗುಡಿಯ ಚಿತ್ರ ” ಮತ್ತು ” ಗುರುನಾನಕ್” ಹೀಗೆ ಎಲ್ಲ ಪೋಟೋಗಳನ್ನು ನೋಡುತ್ತಲೇ ಬೆಳೆದವನು ( ನೆನಪಿದೆಯಲ್ಲ ಪೀರ್., ನೀನೂ ನೋಡಿ ಅಚ್ಚರಿಯಾಗಿದ್ದೆ. ಸಾಕ್ಷಿಗೆ ಈಗ ಆ ಮನೆಯೇ ಇಲ್ಲ, ಮೊನ್ನೆ ಮುರಿಯಿತು) ನ೦ಗೆ ಇದು ಅವರ ದೇವರು.. ಇದು ಇವರ ದೇವರೆ೦ದು ಹೇಳದೆ ಕೇವಲ ಪ್ರೀತಿಯ ಸ೦ಕೇತಗಳಿವು ಎ೦ದು ನನಗೆ ಪರಿಚಯಿಸಿದ ನನ್ನಪ್ಪನ ನ೦ಬಿಕೆಗಳೆಲ್ಲ ಇದೀಗ ದಕ್ಕೆಯ ತೆಕ್ಕೆಯಲ್ಲಿವೆ ಎ೦ದನಿಸುವುದಿಲ್ಲವೆ?. ಅಪ್ಪ, ಹೆಗಲ ಮೇಲೆ ಕುಳ್ಳರಿಸಿಕೊ೦ಡು “ಇಡೀ ಜಗತ್ತು ನಮ್ಮದು” ಎ೦ದೇ ನನಗೆ ತೋರಿಸಿದ್ದ. ಆತ ಅಪ್ಪಿತಪ್ಪಿ ನನಗೆ ಒಬ್ಬೇಒಬ್ಬ ದೇವರ ಪರಿಚಯ ಮಾಡಿಸಲ್ಲಿಲ್ಲ.. ನಾನೆeನದರೂ ನಿಮ್ಮಗಳ ಒಳ್ಳೆಯ ಗೆಳೆಯ ಅನಿಸಿದರೆ ಅದು ನನ್ನಪ್ಪನ ಅನುಕರಣೆ ಅಷ್ಟೇ. ನ೦ಗೆ ಆಜಾ೦ ಎ೦ಬ ತಮ್ಮ.. ಅಲ್ತಾಫ್, ಲೈನ್ ಮ್ಯಾನ್ ಸಾಬ್ ಎ೦ಬ ಮಾವ.. ನಾಲ್ ಕಟ್ಟೋ ಸಾಬನೆ೦ಬ ಕಕ್ಕ ಇದ್ದಾರೆ.. “ಜಾತಿ” ಮದ್ಯಸ್ತಿಕೆ ವಹಿಸಿಲ್ಲ.
ಕಲಾಲ್, ಮೋಹನ್ ಸರ್, ಪೀರ್, ಆನ೦ದ್, ಅರುಣ್, ಮಹೇಶ್, ಗಾನಾ, ಟೀನಾ, ಸೃಜನ್, ಸತೀಶ್ ಪಾಟೀಲ್, ಜಗದಿ, ವಿಕ್ರಮ್, ಸಾಲಿ, ವೆ೦ಕಟರಮಣ ಗೌಡ, ಮಲ್ಲಿಕಾಜು೯ನಗೌಡ, ಗ್ರೀಶ್ಮ, ನಯನಿ, ಸುದನ್ವ, ನನಗೆ ಇನ್ನೂ ನಿಮ್ಮ೦ತೆ ಮಾತಾಡುತ್ತ ಕೂರಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ, ಯುದ್ದ ವಿರೋಧಿಸಿ ಕವನ ಬರೆದಿರಬಹುದು.. ಕಣ್ಣ ಕಾಮನ ಬಿಲ್ಲುವಿನ ಬಣ್ಣ ಇಟ್ಟ ನ೦ಬಿಕೆಗೆ ಕರಗಿದ೦ತಿದೆ.. ನಾನಿನ್ನು ಬರೆಯಲಾರೆ. ಎಲ್ಲರು ಬರವಣಿಗೆಯಲ್ಲಿ ಬುದ್ದಿವ೦ತರಿದ್ದೀರಿ ಹೇಳಿ, ದೇಶಕ್ಕೆ ಕುತ್ತು ಬ೦ದಾಗ ನಾನು ಕೋವಿಯನ್ನು ಬಳಸಬಲ್ಲೆ! . ಈ ರಾಜಕಾರಣಿ ಗಳಿಗೆ ಇ೦ತಿಷ್ಟು ವರುಷ ಸೈನಿಕನಾ ಗಿ ದುಡಿದು ಅಹ೯ತೆ ಗಳಿಸುವ೦ತಿದ್ದರೆ? ಬೇರೆ ದೇಶದಲ್ಲಿ ಯಾಕೆ ಈ ಬಾ೦ಬುಗಳು ಸ್ಪೋಟಿಸುವುದಿಲ್ಲ ? ಅಮಾಯಕರು, ಸೈನಿಕ ಸತ್ತಾಗ ಮರೆತಾದರು ಸರಿಯೇ ನಿಮ್ಮಕಣ್ಣು ತು೦ಬಿ ಬರುವುದಿಲ್ವ? ನನ್ನ ಮತ್ತು ಅಪ್ಪನ ನ೦ಬಿಕೆಗಳೆಲ್ಲಾ ಅಪರತಿಪರ ಆದವಲ್ಲ ಇದು ಯಾರ ಕಲ್ಪನೆಯ ಆದೇಶ ? ನನ್ನ ಯಾವ ಬಣ್ಣದ ಬಾವುಟಕ್ಕೆ ಹೋಲಿಸದೆ ನೋಡಿ.. ಯಾವದೋ ಪೂವ೯ಗ್ರಹ ಪೀಡಿತರ೦ತೆ ಕಾಣಿಸುವ ನಿಮ್ಮ ಮಾತುಗಳ ಬಗ್ಗೆ ನನ್ನ ಪಶ್ಚತಾಪವಿದೆ. ಇದೀಗ ಕೋವಿ ಹಿಡಿಯಲು ಹೊರಟ ಕೈಗಳು ನನ್ನವೆ.. ನನಗೆ ನೀವು ನನ್ನ ಕೋವಿಗೆ ಸಿಕ್ಕಿಸಬಹುದಾದ ಗುಲಾಬಿಯಬಗ್ಗೆಯಾಗಲಿ, ತರುವ ನಿಮ್ಮಗಳ ಬಗ್ಗೆಯಾಗಲಿ ಕಾಳಜಿ ವಹಿಸುವ ಜರೂರತ್ ಇಲ್ಲ.. ಹೆಚ್ಚೆ೦ದರೆ ನನಗೆ ಗು೦ಡುಗಳ ಜರೂರತ್ ಇದೆ.ನಮಗೊ೦ದು ನೆಮ್ಮದಿ ಕಟ್ಟಿಕೊಟ್ಟು ಸಾಯುವ ಸೈನಿಕನ ಕೋವಿ ಮತ್ತೆ ನನ್ನ ಕೈ ಸೇರಲಿ, ನಾನು ಸೈನಿಕನಾಗಬೇಕು. ಚುಕ್ಕಿಯಾದರೂ ಸರಿಯೇ ಈ ಬಾನ ಬೆಳಕಾಗಬೇಕು..
- ಸಿದ್ದು ದೇವರಮನಿ
`ಕಥೆ’ಯಾಗುವುದು ಮತ್ತು `ಕತೆ’ಯಾಗುವುದು….
December 3, 2008 at 7:53 am | In ತಂಗಳು | 1 CommentTags: ಕತೆ, ಕಥೆ
ಕನ್ನಡದ ರುಚಿಕಟ್ಟಾದ ಕತೆಗಾರ ಪೂರ್ಣಚಂದ್ರ ತೇಜಸ್ವಿಗೆ ಒಮ್ಮೆ ಅವರ ಕತೆಯ ಪಾತ್ರಗಳೇ ಜೀವಂತವಾಗಿ ಸಿಕ್ಕು ನಮ್ಮ ಬಗ್ಗೆ ಯಾಕೆ ಬರೆದಿರಿ ಅಂತ ಜಗಳ ಹೂಡಿ ಹೋಗಿದ್ದ ಅನುಭವವಾಗಿತ್ತಂತೆ. ’ಕರ್ವಾಲೋ’ ಕಾದಂಬರಿಯ ಎಂಗ್ಟ ಮತ್ತು ಕರಿಯ ಹನ್ನೆರಡು- ಹದಿಮೂರು ವರ್ಷಗಳ ನಂತರ ಬಂದು ವ್ಯಾಜ್ಯ ಹೂಡಿದ್ದನ್ನ ಅವರು ’ಪರಿಸರದ ಕತೆ’ಯಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿಗೆ ನನ್ನ ಗೆಳೆಯನಿಗೂ ಇಂಥದೇ ಅನುಭವ ಆಯಿತು. ಅಂವ ಬರೆದ ಸಾಮತಿಯನ್ನ ಸೀರಿಯಸ್ಸಾಗಿ ತೆಗೆದುಕೊಂಡ ಮಹಾಶಯರೊಬ್ಬರು ’ನನ್ನ ಕತೆ ಯಾಕೆ ಬರೆದೆ? ನಾನೇನೂ ಅಂಥವ ಅಲ್ಲ’ ಅಂತ ಪರಸ್ಪರ ವಿರುದ್ಧಾರ್ಥದ ಮಾತಾಡಿ ತಗೋಬಿಡು ವಾದ ಹೂಡಿದ್ದರು.
ಹೀಗೇ ನನ್ನನ್ನೂ ಒಂದಿಬ್ಬರು ’ನಮ್ಮ ಬಗ್ಗೆ ಬರೆದಿದ್ಯಂತೆ?’ ಅಂತ ವಿಚಾರಿಸಿದ್ದಿದೆ. ಆಗೆಲ್ಲ ನನಗೆ ಮಜವೋ ಮಜ ಅನಿಸತ್ತೆ. ಯಾಕೆಂದರೆ, ನಾನು ಅಂಥದ್ದೇನಾದರೂ ಬರೆದಾಗ ಯಾರುಯಾರೋ ಗುರುತು ಪರಿಚಯ ಇಲ್ಲದವರೆಲ್ಲ ’ಇದು ನನ್ನ ಕತೆ.’ ’ಇದು ನನ್ನ ಪರಿಚಿತರೊಬ್ಬರ ಕತೆ’ ಅಂದಿರ್ತಾರೆ! ಆಗೆಲ್ಲ ನಾನು”ಹಂಗಾರೆ ಎಲ್ರ ಮನೆ ಕತೆಯೂ ಒಂದೇಯ. ಎಲ್ರ ಮನೆ ಕಾವಲಿಯೂ ತೂತೇ!” ಅಂತ ನಿಸೂರಾಗೋದಿದೆ.
ಮ್… ಹಿಂಗೆ ಕತೆಯಾಗೋದ್ರಲ್ಲೂ ಒಂದು ಮಜ ಇದೆ. ಆದ್ರೆ, ಕತೆಯ ನಮ್ಮ ಪಾತ್ರ ಅನುಕಂಪ ತರಿಸಬಾರದಷ್ಟೆ. ಕೆಲವು ಸಾರ್ತಿ, ನಾವು ಆಗ ಹೊರಟಿದ್ದೇ ಒಂದು ಕಥೆಯಾದರೆ, ಅದು ಹಬ್ಬಿಕೊಳ್ಳುವ ಪರಿಯೇ ಬೇರೆ ರೀತಿಯದ್ದಾಗಿಬಿಡುತ್ತೆ.
ಹೀಗೊಂದು ಜಾನಪದ ಕತೆಯಿದೆ.
ಒಬ್ಬ ಬ್ರಾಹ್ಮಣ ನದಿಯಲ್ಲಿ ಅರ್ಘ್ಯ ಕೊಟ್ಟು ಆಚಮನ ಮಾಡುವಾಗ ಅವನ ಬಾಯಿಗೊಂದು ಬಿಳಿಯ ಯಾವುದೋ ಹಕ್ಕಿಯ ಸಣ್ಣ ಗರಿ ಹೋಗಿಬಿಡುತ್ತೆ. ಗಂಟಲಲ್ಲಿ ಗುಳುಗುಳು ಆಗಿ ಅಂವ ಕ್ಯಾಕರಿಸಿ ಉಗಿದಾಗ ಗಂಟಲಿಂದ ರೆಕ್ಕೆ ಹೊರ ಬಂದು ಬೀಳುತ್ತೆ. ಗಾಬರಿಯಿಂದ ಅಂವ ಮನೆಗೆ ಬಂದು ಹೆಂಡತಿ ಹತ್ತಿರ, “ಯಾರಿಗೂ ಹೇಳ್ಬೇಡ ಕಣೇ. ಇವತ್ತು ನಾನು ಉಗಿದಾಗ ಗಂಟಲಿಂದ ಬಿಳಿಯ ಪುಟಾಣಿ ರೆಕ್ಕೆ ಹೊರಬಿತ್ತು! ಏನು ಕರ್ಮವೋ, ಕೊಂಚ ಗೋಮೂತ್ರ ತೆಗೆದಿಡು. ಶುದ್ಧಿಯಾಗಿಬಿಡ್ತೀನಿ” ಅಂದ. ಅಂವ ಹೇಳಿದಂತೆ ಮಾಡಿ, ಒಂದು ರಾತ್ರಿಯಿಡೀ ಅವನ ಹೆಂಡತಿ ಗುಟ್ಟು ಬಚ್ಚಿಟ್ಟುಕೊಂಡು ಹೊರಳಾಡಿದಳು. ಮಾರನೇ ದಿನ ತಡೆಯಲಾರದೆ ನೆರೆ ಮನೆಯವಳ ಬಳಿ “ಯಾರಿಗೂ ಹೇಳಬೇಡ್ರೀ, ನನ್ನ ಗಂಡ ನೆನ್ನೆ ಉಗಿದಾಗ ಅವರ ಗಂಟಲಿಂದ ದೊಡ್ಡ ದೊಡ್ಡ ಕೊಕ್ಕರೆ ರೆಕ್ಕೆಗಳು ಹೊರಬಂದವಂತೆ!” ಅಂದಳು!!
ಸೈ. ಆ ಪಕ್ಕದ ಮನೆಯವಳೂ ಒಂದು ರಾತ್ರಿ ಹೊರಳಾಡಿ ತನ್ನ ವಾರಗಿತ್ತಿಯ ಹತ್ತಿರ ” ಏ, ಆ ಪಕ್ಕದ ಮನೆಯವಳ ಗಂಡ ತುಪ್ಪಿದಾಗ ಒಂದು ಕೊಕ್ಕರೆ ಮರಿ ಹೊರಬಂತಂತೆ!” ಅಂದಳು.
ಮುಗಿಯಿತು. ಮುಂದೆ ಅದು ದೊಡ್ಡದೊಂದು ಕೊಕ್ಕರೆಯಾಗಿ, ಕೊಕ್ಕರೆ ಹಿಂಡಾಗಿ, ಮತ್ತೆ ಸುತ್ತಿ ಬಳಸಿ ಬ್ರಾಹ್ಮಣನ ಕಿವಿ ತಲುಪುವ ಹೊತ್ತಿಗೆ ಅಂವ ಉಗಿದಾಗ ಗಂಟಲಿಂದ ಕೊಕ್ಕರೆಗಳು ಹಾರಿ ಹಾರಿ ಬರುತ್ತವಂತೆ ಎನ್ನುವವರೆಗೂ ಹರಡಿ ಹೋಗಿತ್ತು!
ಅದನ್ನು ಕಣ್ಣಾರೆ ಕಾಣಲು ಅವನ ಮನೆ ಮುಂದೆ ಊರ ಜನವೆಲ್ಲ ನೆರೆಯಿತು. ಆದರೆ ಬ್ರಾಹ್ಮಣನಿಂದ ಅಂಥದ್ದೇನೂ ವಿಶೇಷ ನಡೆಯದೇ ಹೋದದ್ದು ಬೇಸರ ತರಿಸಿ, ತಮ್ಮ ತಮ್ಮ ಕತೆಯನ್ನೇ ನೆಚ್ಚಿಕೊಂಡು, ಅದನ್ನೇ ಮೆಲುಕು ಹಾಕುತ್ತ ಹೊರಟುಹೋದರು. ಆವರೆಗೂ ’ಕಥಾ ನಾಯಕ’ನಾಗಿ ರೋಚಕತೆಯಿಂದ ಮೆರೆಯುತ್ತಿದ್ದ ಬ್ರಾಹ್ಮಣ, ಸತ್ಯ ಸಂಗತಿ ತಿಳಿಯುತ್ತಲೇ ಸಾಧಾರಣ ವ್ಯಕ್ತಿಯಾಗಿಹೋದ.
ಹೀಗೆ ಕಥೆಯಾಗುವ, ಕತೆಯಾಗಿಸುವ ಎರಡು ಕ್ಯಟಗರಿಗಳ ನಡುವೆ ಕಥೆ ಕಟ್ಟುವವರದೊಂದು ಕ್ಯಟಗರಿಯಿದೆ. ಅವರ ಕತೆಗೆ ತಳಹದಿಯೇ ಇರದು. ಇದ್ದರೂ, ಅದು ಮೂಲಕ್ಕೆ ಪೂರ್ಣವಾಗಿ ವಿರುದ್ಧವಾಗಿರುತ್ತದೆ.
ಒಮ್ಮೆ ಹೀಗೊಬ್ಬಳು ಹುಡುಗಿ ನನಗೆ ಪರಿಚಯವಾಗಿದ್ದಳು. ನಾಲ್ಕು ದಿನದ ಒಡನಾಟದಲ್ಲಿ ತುಂಬ ಹತ್ತಿರವಾಗಿದ್ದಳು. ಐದನೇ ದಿನ, ’ನಿನ್ನ ನೋಡಿದ್ರೆ ನನ್ನ ಅಕ್ಕನ ನೆನಪಾಗತ್ತೆ’ ಅಂತ ಅಳಲು ಶುರುವಿಟ್ಟಳು. ಅವಳ ಅಕ್ಕನಿಗೇನಾಗಿದೆ ಅಂತ ವಿಚಾರಿಸಿದೆ. ಅವಳ ಪ್ರಕಾರ, ಅವಳ ಅಕ್ಕನನ್ನ ಯಾರೋ ಕೊಲೆ ಮಾಡಿದ್ದರು. ಆಮೇಲೆ ಅದನ್ನ ಆತ್ಮಹತ್ಯೆ ಅಂತ ಮುಚ್ಚಿ ಹಾಕಲಾಯ್ತು. ಅದನ್ನೆಲ್ಲ ಹೇಳಿ, “ಯಾರಿಗೂ ಹೇಳಬೇಡ್ವೇ. ಸಂಕಟ ತಡಿಯೋಕಾಗದೆ ಹೇಳ್ದೆ. ಅವಳು ಸಾಯೋ ದಿನ ನೀ ಹಾಕಿದ ಥರದ್ದೇ ಚೂಡಿದಾರ ಹಾಕಿದ್ಲು.” ಅಂದಳು. ನಾನೂ ಸುಮ್ಮನಾದೆ.
ಆಕೆ ಹೊರಟು ಹೋಗಿ ವಾರ ಕಳೆದರೂ ಅವಳ ಅಕ್ಕನ ಕೊಲೆ ನನ್ನನ್ನು ಕಾಡ್ತಲೇ ಇತ್ತು. ನನ್ನ ಅನ್ಯಮನಸ್ಕತೆ ಕಂಡ ಗೆಳೆಯ ಏನು ಅಂತ ವಿಚಾರಿಸಿದ. ಆ ಹುಡುಗಿ ಪರಿಚಯವಾಗಿದ್ದು ಅವನಿಂದ್ಲೇ ಆದ್ದರಿಂದ ಅವಳು ಹೇಳಿದ ಕತೆ ಹೇಳಿದೆ. ಅಂವ ಬಾಯಿ ಕಟ್ಟಿದಹಾಗೆ ಸುಮ್ಮನುಳಿದುಬಿಟ್ಟ.
ಕೊನೆಗೆ ನೋಡಿದರೆ, ಅವಂಗೂ ಆ ಹುಡುಗಿ ಅದೇ ಕಥೆ ಹೇಳಿದ್ದಳು. ಯಾರಿಗೂ ಹೇಳಬೇಡ ಅಂದಿದ್ದಳು. ಅವರ ಮನೆಗೆ ಹೋದಾಗ ಅವನ ತಂಗಿಯನ್ನ ನೋಡಿ, ನನ್ನ ಅಕ್ಕ ಹೀಗೇ ಇದ್ಲು ಅಂದಿದ್ದಳು, ಸಾಯೋ ದಿನ ಆ ಥರದ್ದೇ ಚೂಡಿ ಹಾಕಿದ್ದಳು ಅಂತಲೂ ಹೇಳಿದ್ದಳು!!
ಆಮೇಲೆ ಅವಳ ಊರಿನ ಗೆಳೆಯರನ್ನ ವಿಚಾರಿಸಿದಾಗ ಅಸಲು ವಿಷಯ ತಿಳಿಯಿತು.
ಅವಳ ಅಕ್ಕ ಸತ್ತಿದ್ದು ನಿಜವೇ ಆಗಿತ್ತು. ಆದರೆ ಅವಳು ಹೇಳಿದ ಹಾಗೆ ಅದು ಕೊಲೆಯಾಗಿರಲಿಲ್ಲ. ಆಕೆ ಸಾಯುವ ಹಿಂದಿನ ದಿನ ಅಕ್ಕ- ತಂಗಿಗೆ ಏನೋ ವಿಷಯಕ್ಕೆ ರಾದ್ಧಾಂತವಾಗಿತ್ತಂತೆ. ತಂಗಿಯಿಂದ ಕೆಟ್ಟದಾಗಿ ಬೈಸಿಕೊಂಡ ಅಕ್ಕನ ಮನಸ್ಸು ತೀರಾ ನೊಂದುಹೋಗಿತ್ತಂತೆ. ಆಕೆ ಹೀಗೆ ’ನಾನು ಸಾಯುತ್ತಿದ್ದೇನೆ’ ಅಂತ ಬರೆದಿಟ್ಟೇ ಸತ್ತಿದ್ದಳಂತೆ. ಈ ತಂಗಿಗೆ ಆಮೇಲಾಮೇಲೆ ಗಿಲ್ಟು ಕಾಡಲು ಶುರುವಾಗಿ, ಅದು ಯಾರೋ ಮಾಡಿದ ಕೊಲೆ ಅಂತೆಲ್ಲ ಕತೆ ಕಟ್ಟಿಕೊಂಡು ತಿರುಗುತ್ತಿದ್ದಳು.
ಗೆಳೆಯರು, ಅವಳ ಉಸಾಬರಿಗೆ ಹೋಗಬೇಡಿ ಅಂದರು. ನಾನು ಮಾತ್ರ, ಅವಳಿಗೆ ಮಾನಸಿಕ ತೊಂದರೆ ಆಗಿರಬಹುದಾ ಅಂತ ಯೋಚಿಸುತ್ತ ಉಳಿದೆ.
ಕೆಲವೊಮ್ಮೆ ನನಗೆ ಈ ಕತೆ ಮತ್ತು ಕಥೆಯ ವ್ಯತ್ಯಾಸ ಕಾಡೋದಿದೆ. ವ್ಯಾಕರಣ ವಿದ್ವಾಂಸರು ಕೊಡೋ ಉತ್ತರಗಳು ಗಹನವಗಿರುತ್ತವಾದ್ದರಿಂದ ಅದರ ಗೋಜಿಗೆ ನಾನು ಹೋಗಿರಲಿಲ್ಲ.
ತದ್ದಲಸೆ ವಿನಾಯಕ ಭಟ್ಟರು ’ಸ್ವಾಹಾ’ ಕಥಾ ಸಂಕಲನದಲ್ಲಿ ’ಕಥೆ’ ಮತ್ತು ’ಕತೆ’ಯ ಬಗ್ಗೆ ಚೆನ್ನಾಗಿ ಬರೆದಿದ್ದಾರೆ. ಅವರು ಅಲ್ಲಿ ಹೇಳಿರುವ ಒಟ್ಟಾರೆ ಅರ್ಥ- ಎಂದೋ ನಡೆದಿದ್ದರ ನಿರೂಪಣೆ, ’ಕಥೆ’. ಹೀಗೇ ಯಾವುದೋ ಎಳೆಯ ಮೇಲೆ ಸುಮ್ಮಸುಮ್ಮನೆ ಹುಟ್ಟಿಸಿಕೊಂಡು ಹೆಣೆಯೋದು ’ಕತೆ’.
ಆದರೆ ಕೆಲವೊಮ್ಮೆ ಕಥೆಯೇ ರೆಕ್ಕೆ ಪುಕ್ಕ ಹಚ್ಚಿಕೊಂಡು ಕತೆಯಾಗಿಬಿಡೋದಿದೆ. ಆಗೆಲ್ಲ ಬದುಕಿನ ಗಾಂಭೀರ್ಯ ಲಘುತ್ವವನ್ನನುಭವಿಸಿ ಗೇಲಿಯ ವಸ್ತುವಾಗಿಬಿಡೋದಿದೆ. ಇದು ನಮ್ಮ ನಿಮ್ಮ ಜೀವನದಲ್ಲೂ ಸಾಕಷ್ಟು ಬಾರಿ ಅನುಭವಕ್ಕೆ ಬಂದಿರಬಹುದು.
ಹೀಗೇ, ಕೆಲವೊಮ್ಮೆ ’ಕಥೆ’ಯಾಗ ಹೊರಟವರು ’ಕತೆ’ಯಾಗಿಬಿಡುತ್ತಾರೆ. ಏನನ್ನೋ ಸಾಧಿಸ ಹೊರಟವರು ಜನರ ಬಾಯಿಗೆ ಬಿದ್ದು ಹಗುರಾಗಿಬಿಡುತ್ತಾರೆ.
ಅದಕ್ಕಿಂತ ದುರಂತ ಬೇರೊಂದಿಲ್ಲ. ಅಲ್ಲವೇ?
( ಇದು ಹಳೆಯ ಬರಹ. ಇದೇ ಬ್ಲಾಗಲ್ಲಿ ಬಹಳ ಹಿಂದೆ ಹಾಕಿದ್ದು. ಬ್ಲಾಗ್ ಡಿಲೀಟ್ ಮಾಡಿದ್ದೆನಲ್ಲ, ಅದಕ್ಕೆ ಮುಂಚೆ ಬರೆದಿದ್ದ ಕೆಲವನ್ನ ಮತ್ತೆ ಇಲ್ಲಿ ಹಾಕೋಣವೆನಿಸಿತು. ಗೆಳೆಯರಾದ ಗುರು ಮತ್ತು ವೀಣಾ ಕೊಟ್ಟ ಐಡಿಯಾದಂತೆ ಈ ತಂಗಳನ್ನು ಮತ್ತೆ ಬಡಿಸುತ್ತಿರುವೆ. ಇಷ್ಟವಾದ್ರೆ, ಅವ್ರಿಗೆ ಥ್ಯಾಂಕ್ಸ್ ಹೇಳಿ. ಇಲ್ಲವಾದ್ರೆ ಅವ್ರನ್ನೇ ಚೆನ್ನಾಗಿ ಬಯ್ಕೊಳಿ! )
ಕಪ್ಪು ಪಟ್ಟಿ- ಪ್ರತಿರೋಧ
December 2, 2008 at 4:46 am | In Uncategorized | 2 Commentsಬ್ಲಾಗ್ಗೆಳತಿ ನೀಲಾಂಜಲದ ಸೌಪರ್ಣಿಕಾ ಬಹಳ ಒಳ್ಳೆಯ ಸಲಹೆ ನೀಡಿದ್ದಾರೆ. ಭಯೋತ್ಪಾದಕರ ಅಟಾಟೋಪ ನಡೆದು ಎರಡು ದಿನಕ್ಕೆಲ್ಲ ಅದನ್ನು ಮರೆತುಬಿಡುವ ನಾವು ನಿರಂತರ ಎಚ್ಚರಿಕೆಯನ್ನು ಕಾಯ್ದಿಟ್ಟುಕೊಳ್ಳುವುದು ಅಗತ್ಯ. ಈ ನಿಟ್ಟಿನಲ್ಲಿ, ಸದಾ ನಮ್ಮ ಜವಾಬ್ದಾರಿಯನ್ನು ನೆನಪಿಟ್ಟುಕೊಳ್ಳಲು ಇದು ಅಗತ್ಯವೂ ಹೌದು.
ಸೌಪರ್ಣಿಕಾ ಅವರ ಸಲಹೆ ನನಗಿಷ್ಟವಾಗಿ, ನಾನು ಅದರಂತೆ ಮಾಡಿದ್ದೇನೆ. ನಿಮಗೂ ಹೌದೆನಿಸಿದಲ್ಲಿ, ಮಾಡಲೇನಡ್ಡಿ?
Blog at WordPress.com. | Theme: Pool by Borja Fernandez.
Entries and comments feeds.

