ಅಂಡ್, ದ ಆರ್ಗ್ಯುಮೆಂಟ್ ಕಂಟಿನ್ಯೂಸ್….

November 27, 2008 at 10:59 am | In Uncategorized | 4 Comments

ನೀಲಾಂಜಲ

“ಸಹನೆಗೂ ಮಿತಿ ಇದೆ” !!!
ಇದೆ ಮಾತು ಕೇಳಿ ಅವರು ಜಿಹಾದ್ ಗೆ ಇಳಿದಿದ್ದಲ್ಲವೇ??
“ಹೇಗೆ ಸಾಯಬಾರದೆಂದು ಬಯಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ” !!
ನಾವು ಅವರಂತೆ ಬಂದುಕು ಕೈಯಲ್ಲಿ ಹಿಡಿಯಬೇಕೆ ?
ಇದೆ ರೀತಿ ರಕ್ತದ ಹೊಳೆ ಹರಿಸಬೇಕೆ?
ಹೇಳಿ ಚೇತನಾ

ಚೇತನಾ

ನೀಲಾಂಜಲ,
‘ಜಿಹಾದ್’ ಎನ್ನುವ ಧರ್ಮ ಯುದ್ಧ ಶುರುವಾಗಿದ್ದು ಸಹನೆಯ ಮಿತಿ ಮೀರಿ ಅಲ್ಲ. ‘ಜಿಹಾದ್’ ಶುದ್ಧ ಧಾರ್ಮಿಕ ನೆಲೆಗಟ್ಟಿನ, ಯುದ್ಧ ಎಂದು ಹೇಳಿಕೊಳ್ಳುವ ಅತಿಕ್ರಮಣ. ಇದು ನಿಮಗೂ ಗೊತ್ತಿದೆ ಎಂದುಕೊಳ್ಳುತ್ತೇನೆ.
ಭಾರತದ ಮೇಲೆ ಮುಸ್ಲಿಮರ ಆಕ್ರಮಣಗಳು ಮತ್ತು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ; ಭಾರತೀಯರು ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಸಿದ ಆಕ್ರಮಣಗಳು ಮತ್ತು ಹಿಂದೂಗಳ ಮೇಲೆ ಮುಸ್ಲಿಮರ ದೌರ್ಜನ್ಯ – ಇವುಗಳ ಅನುಪಾತವನ್ನು ಲೆಕ್ಕ ಹಾಕಿ ಹೇಳಿ.
ಇಷ್ಟಕ್ಕೂ, ‘ಸಹನೆಗೂ ಮಿತಿ ಇದೆ’ ಎನ್ನುವ ವಾಕ್ಯ ನನ್ನ ಪ್ರತಿಕ್ರಿಯೆಗೆ ಸಂಬಂಧಿಸಿದ್ದು. ಇದರರ್ಥ, ನಾನು ದನಿಯೆತ್ತದೆ ಉಳಿಯುವುದಿಲ್ಲ ಎಂದೇ ಹೊರತು, ಬಂದೂಕು ಹಿಡಿಯುತ್ತೇನೆ ಎಂದಲ್ಲ. ನಾನು ರಕ್ತದ ಹೊಳೆ ಹರಿಸಬೇಕೆನ್ನುತ್ತೇನೆಂದು ಹೇಗೆ ಊಹಿಸಿದಿರಿ? ಇದು ಸರಿಯೇ?

ಹರೀಶ್

ನಾವು ‘ಎ ವೆಡ್ನಸ್ ಡೇ’ ತರ ಶುರುಮಾಡ್ಬೇಕೇನೋ.. ಭಾರತದಲ್ಲಿ ಹುಟ್ಟಿ ಮೋಸ ಹೋದಿವಾ ಅ೦ತ ಕಾಣ್ತಾ ಇದೆ.

ನೀಲಾಂಜಲ

ಚೇತನಾ,
-ಮುಸ್ಲಿಮರ ಆಕ್ರಮಣಗಳು!!??
ನನಗೆ ಗೊತ್ತಿರುವ ಹಾಗೆ;
ಆಕ್ರಮಣಗಳು ನಡೆದದ್ದು ಲೂಟಿ ಮಾಡಲಿಕ್ಕೆ, ಸಾಮ್ರಾಜ್ಯ ವಿಸ್ತರಿಸುವುದಕ್ಕೆ,
ಮೊಗಲ್ ರು ಬರುವುದಕ್ಕೆ ಮುಂಚೇನೂ ನಮ್ಮ ರಾಜರುಗಳು ಪರ ರಾಜ್ಯದ ಮೇಲೆ ದಂಡೆತ್ತಿ ಹೋಗುತ್ತಿದ್ದರು. ಎಲ್ಲರೂ ಒಂದೇ ದೇಶವೆಂಬ ಬ್ಯಾನರ್ ಅಡಿ ಯಾವತ್ತೂ ಇರಲಿಲ್ಲ.ಆಗ ‘ಹಿಂದೂ ರಾಜರು’ಎನ್ನುವ concept ಇರಲಿಲ್ಲ ಅನ್ದುಕೊಳ್ಳುತ್ತೇನೆ. ಏನಿದ್ದರೂ ರಾಜವಂಶಗಳ ನಡುವೆ ಯುದ್ಢಗಳಿರುತ್ತಿತ್ತು.ಮೊಗಲ್ ರಿಗೆ “ಹಿಂದೂ” ರಾಜರ ಬೆಂಬಲ ಇತ್ತಲ್ಲವೇ?ಇತಿಹಾಸವನ್ನು ಇವತ್ತು ಓದಬೇಕಾದರೆ ಮುಸ್ಲಿಮ್ ರಾಜರು -ಹಿಂದೂ ರಾಜರು ಎಂದು ವಿಂಗಡಿಸುತ್ತೇವೆ. ರಾಜನಾದವನು ತನ್ನ ಧರ್ಮವನ್ನು ಇತರರ ಮೇಲೆ ಹೇರುವುದೂ ಆಗಿನ ಪದ್ಧತಿಯಾಗಿತ್ತೇನೊ?
-ಭಾರತೀಯರು (ಹಿಂದೂ +ಮುಸ್ಲಿಮ್+ ಇತರೆ) ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಸಿದ ಆಕ್ರಮಣಗಳು??
ಈ ಎರಡು concept ನನಗೆ ಸರಿ ಕಾಣುವುದಿಲ್ಲ. ಬಿಡಿಸಿ ಹೇಳಿದರೆ ಅನುಪಾತ ಹುಡುಕುವ ಗೋಜಿಗೆ ಹೋಗುತ್ತೇನೆ.

Shree

Chetana, U have started supporting a dangerous trend in society… we all have lost the good sensitive writer in you. Feeling sad.

ನೀಲಾಂಜಲ

“ಸಹನೆಗೂ ಮಿತಿ ಇದೆ” !!!
ಇದೆ ಮಾತು ಕೇಳಿ ಅವರು ಜಿಹಾದ್ ಗೆ ಇಳಿದಿದ್ದಲ್ಲವೇ??
ಅಷ್ಟು ಸಣ್ಣ ವಯಸ್ಸಿನ ಹುಡುಗರು ಕೈಯಲ್ಲಿ ಕೇವಲ ಜಿಹಾದ ಅಂದಾಕ್ಷಣ ಬಂದುಕು ಎತ್ತುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರಿಗೆ ಕಾಶ್ಮೀರದಲ್ಲಿ ಮುಸೀಮ್ ರ ಮೇಲೆ ನಡೆಯುವ ದೌರ್ಜನ್ಯ, ನಮ್ಮಲ್ಲೇ ಕೋಮು ಗಲಭೆಯಾದಾಗ ಅವರ ಮೇಲೆ ನಡೆದ ಹಿಂಸೆ, ಕೇವಲ ಮುಸ್ಲಿಮ್ ಎಂದು ಅವರನ್ನು ದೇಶದ್ರೋಹಿಗಳನ್ತೆ ನೋಡುವ ಜನರು…..etc. ಈ ಎಲ್ಲರ ಕತೆಯನ್ನು ಅತಿ ರಂಜಿತವಾಗಿ ಹೇಳಿ “ಸಹನೆಗೂ ಮಿತಿ ಇದೆ ” ಎಂದು ಹೇಳಿ ಅವರ ತಲೆ ತಿರುಗಿಸುತ್ತಾರೆ ಅಂದುಕೊಂಡಿದ್ದೇನೆ. (ಇಲ್ಲಿ ಕಾಶ್ಮೀರ ಮತ್ತು ಕೋಮು ಗಲಭೆಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗಿಲ್ಲ ಎಂದು ನಾನು ಹೇಳುತ್ತಿಲ್ಲ )

ಚೇತನಾ ನಿಮ್ಮ ಬರಹಕ್ಕೆ ತುಂಬಾ ತಾಕತ್ತಿದೆ. ಮೇಲಿನ ಬರಹ ಓದಿ ನನಗೆ ಅನ್ನಿಸಿದ್ದನ್ನು ನಿಮಗೆ ಕೇಳಿದೆ. ನೀವು ಬಂದುಕು ಹಿಡಿಯುತ್ತಿಲ್ಲ ಎಂದು ಸಮಾಧಾನವಾಯಿತು. ಹಾಗೆ ನೀವು ಮುಸ್ಲಿಮರ ಮೇಲೆ ದನಿಯೆತ್ತಿದ್ದೋ ಅಥವಾ ಭಯೋತ್ಪಾದನೆಯ ಮೇಲೋ ಎಂದು ತಿಳಿಸಿ. ಎರಡನೆಯದಕ್ಕಾದರೆ ನನ್ನ ಬೆಂಬಲವಿದೆ. )

ಚೇತನಾ

ನೀಲಾಂಜಲ,
ಆಕ್ರಮಣಕಾರರು ಕೇವಲ ಲೂಟಿ ಮಾಡಿ ಹೋಗಿದ್ದಿದ್ದರೆ ಅದನ್ನು ಅನ್ಯ ದೇಶೀಯರ ಆಕ್ರಮಣ ಅಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ, ಆಕ್ರಮಣದ ನಂತರ ಮತಾಂತರ ನಡೆಯಿತಲ್ಲ, ದೇವಾಲಯಗಳ ಲೂಟಿಯೊಡನೆ ಆಕ್ರಮಣ ಕೊನೆಗೊಳ್ಳದೆ ದೇವತೆಗಳ ವಿಗ್ರಹ ಛಿದ್ರಗೊಳಿಸುವ ಕೆಲಸ ನಡೆಯಿತಲ್ಲ, ಅವು ಆಕ್ರಮಣವನ್ನು ‘ಮುಸ್ಲಿಮ್’ ಆಕ್ರಮಣ ಎನ್ನುವ ಹಣೆಪಟ್ಟಿ ಹೊತ್ತುಕೊಳ್ಳುವಂತೆ ಮಾಡಿತು. ಚರ್ಚಿಗೆ ಕಲ್ಲು ಹೊಡೆಯುವುದು ಹೇಗೆ ‘ಹಿಂದೂ’ ಪುಂಡಾಟಿಕೆಯೆನಿಸುವುದೋ, ಅದೇ ರೀತಿಯಲ್ಲಿ.

‘ಮುಸ್ಲಿಮ್’ ಎಂದ ಕೂಡಲೆ ದೇಶದ್ರೋಹಿಗಳಂತೆ ನೋಡುವ ಲಿಸ್ಟಿನಲ್ಲಿ ನಾನಂತೂ ಇಲ್ಲ. ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ, ಅವರ ಮೇಲೆ ಹೊರಿಸಲಾಗುತ್ತಿರುವ ಆರೋಪಗಳ ವಿರುದ್ಧ ದನಿಯೆತ್ತಿದ ಮಾತ್ರಕ್ಕೆ ನಾನು ಖಡಾಖಂಡಿತವಾಗಿ ಮುಸ್ಲಿಮ್ ವಿರೋಧಿ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ.

ಕಾಶ್ಮೀರದ ವಿಷಯ ಹೇಳುವಾಗ, ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಹೇಳಿ, ಮುಸ್ಲಿಮರ ಮೇಲೂ ನಡೆದಿಲ್ಲ ಎಂದಲ್ಲ ಎನ್ನುವ ವಾಕ್ಯ ಸೇರಿಸುವುದೇ ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ. ಜನ ಸಂಖ್ಯಾ ಪ್ರಮಾಣದ ದೃಷ್ಟಿಯಿಂದ ಈ ಮಾತು.

ನನ್ನ ದನಿ ಏನಿದ್ದರೂ ಭಯೋತ್ಪಾದನೆಯ ವಿರುದ್ಧ. ಮಾಲೇಗಾಂವ್ ಸ್ಫೋಟದಲ್ಲಿ ಹಿಂದೂಗಳ ಕೈವಾಡ ಸಾಬೀತಾದಾಗ ಹೊಟ್ಟೆ ಉರಿದು ಹೋಗಿತ್ತು. ಭಯೋತ್ಪಾದಕ ಮುಖ್ಯಸ್ಥರನ್ನೇ ಅವರು ಕೊಂದುಹಾಕಿದ್ದರೆ, ಖಂಡಿತ ಬೇಸರಪಡುತ್ತಿರಲಿಲ್ಲ. ಇಲ್ಲಿ ಸತ್ತವರು ಅಮಾಯಕರಾಗಿದ್ದರು. ಮತ್ತು ಹಾಗೆ ಪ್ರಾರ್ಥನಾ ಸ್ಥಳದಲ್ಲಿ ಕೊಲ್ಲುವುದು ಅಮಾನವೀಯ. ನನ್ನ ಪಾಲಿಗೆ ನಕ್ಸಲೈಟರು ಮಾಡುವ ಕೊಲೆಯೂ, ಮೂಲಭೂತವಾದಿಗಳು, ಕೋಮುವಾದಿಗಳು ಮಾಡುವ ಕೊಲೆಗಳೂ, ಒಬ್ಬ ಆಸೆಬುರುಕ ಕೊಲೆಗಾರನು ಮಡುವ ಕೊಲೆಯೂ – ಎಲ್ಲವೂ ಒಂದೇ.
ಆದರೆ, ಸತ್ತ ಮನೆಯಲ್ಲಿ ಗಳ ಹಿಡಿಯುವಂತೆ ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜನರ ತಲೆ ಹಾಳು ಮಾಡುತ್ತಾರಲ್ಲ, ಅದಕ್ಕೆ ನನ್ನ ವಿರೋಧವಿದೆ.

ಯಾಕೆ ಇಂಥದೊಂದು ಘಟನೆಯಾದಾಗ ಅದರ ಆರೋಪಿಗಳನ್ನು ಹಿಡಿದು ಗಲ್ಲುಶಿಕ್ಷೆ ವಿಧಿಸಬಾರದು? ಅಮಾಯಕರನ್ನು ಕೊಂದ ಪಾಪಿಗಳಿಗೆ ಯಾಕೆ ಶಿಕ್ಷೆ ಕೊಡಲಗುತ್ತಿಲ್ಲ? ಹೀಗೆ ಮಾಡಿದರೆ ಜನ ಸಾಮಾನ್ಯರಿಗೆ, ನಮ್ಮ ಜೊತೆ ಸರ್ಕಾರ ರಕ್ಷಣೆಗಿದೆ ಅನ್ನುವ ಫೀಲಿಂಗ್ ಬರುವುದಿಲ್ಲವೆ? ಅಫ್ಜಲ್ ಗುರುವಿಗೆ ಯಾಕೆ ಶಿಕ್ಷೆಯಾಗಿಲ್ಲ? ಧಾರಾ ಸಿಂಗ್ ಗೆ ಮಾತ್ರ ಯಾಕೆ?ಈ ಪ್ರಶ್ನೆ ಕೇಳಿದಾಕ್ಷಣ ನೀವು ನಾನು ಧಾರಾ ಪರ ಮಾತನಾದುತ್ತಿರುವೆನೆಂದು ಆರೋಪಿಸುವಿರೇ ಹೊರತು, ಅಫ್ಜಲ್ ಗುರುವಿನ ದೇಶದ್ರೋಹದ ವಿರುದ್ಧ ಎಂದು ತಿಳಿಯುವ ಗೋಜಿಗೇ ಹೋಗುವುದಿಲ್ಲ. ಯಾಕೆ ಹೀಗೆ?

ಯಾಕೆ ಇತ್ತೀಚಿನ ಸ್ಫೋಟಗಳಲ್ಲಿ ಬಾಂಗ್ಲ ದೇಶೀಯರ ಹೆಸರು ಕೇಳಿ ಬರುತ್ತಿದೆ? ಇದಕ್ಕೆ ರಾಜಕಾರಣ ಹೊಣೆಯಲ್ಲ, ಅದರಲ್ಲೂ ತುಷ್ಟೀಕರಣದ- ವೋಟ್ ಬ್ಯಾಂಕ್ ರಾಜಕಾರಣ ಹೊಣೆಯಲ್ಲ ಎಂದು ಹೇಗೆ ಹೇಳುತ್ತೀರಿ?

ಜೀವನ ಪ್ರೀತಿಯ ಯಾರಿಗೂ ಈ ಬಗೆಯ ಸಾವು ಸಹನೆಯಾಗುವುದಿಲ್ಲ. ಮತ್ತೆ ಮತ್ತೆ ನಾನು ಮುಸ್ಲಿಮ್ ವಿರೋಧಿಯಲ್ಲ ಎಂದು ಹೇಳಿಕೊಳ್ಳಬೇಕಾದ ನನ್ನ ದುಃಸ್ಥಿತಿಗೆ ಹಿಂದೂ ಪರ ಮಾತನಾಡುವವರೆಲ್ಲರೂ ಕೋಮುವಾದಿಗಳು ಎನ್ನುವ ಸಂಕುಚಿತ ಗ್ರಹಿಕೆಯೇ ಕಾರಣವೇನೋ? ಇರಲಿ. ನನಗೇನೂ ಸಮಸ್ಯೆಯಿಲ್ಲ. ಎಷ್ಟೆಂದು ಸಮಜಯಿಷಿ ಕೊಡುತ್ತ ಉಳಿಯಲಿ?

ನೀವು, ಭಯೋತ್ಪಾದನೆಯ ವಿರುದ್ಧದ ದನಿಗೆ ಬೆಂಬಲ ನೀಡುವೆ ಎಂದು ಹೇಳಿದ್ದೀರಲ್ಲ, ಅದೇ ಸಮಾಧಾನ. ಧನ್ಯವಾದ.
ದಯವಿಟ್ಟು, ಅಪಾರ್ಥ ಬೇಡ.

ಹರೀಶ್,

ನಮಗೆ ರೇಜಿಗೆ ಇರಬೇಕಾಗಿರೋದು ಸೋಗಿನ ರಾಜಕಾರಣಿಗಳ ಮೇಲೆ ಹೊರತು ಪ್ರಜಾಪ್ರಭುತ್ವದ ಮೇಲಲ್ಲ. ಕಾನೂನಿನ ಮೇಲೂ ಅಲ್ಲ. ಎ ವೆಡ್ನೆಸ್ ಡೇ ಸಿನೆಮಾ ನೋಡಿ ಸಮಾಧಾನ ಪಡಲಷ್ಟೇ ಹೊರತು ಪ್ರ್ಯಾಕ್ಟಿಕಲ್ ಆಗಿ ಮಾಡುವಂಥದಲ್ಲ. ಅದು ಸಾಧ್ಯವೂ ಇಲ್ಲ, ಹಾಗೆ ಮಾಡುವುದೂ ತರವಲ್ಲ.

ಶ್ರೀ,

ಸೆನ್ಸಿಟಿವ್ ಆಗಿರೋದಕ್ಕೇ, ಈ ಬಗೆಯ ಸಾವು ನನ್ನನ್ನ ಕಾಡೋದು. ಸತ್ತವರು ಹಾಗೆ ಯಾರೋ ಒಂದಷ್ಟು ಕ್ರೂರ ಹೇಡಿಗಳ ಮರ್ಜಿಗೆ ಸಿಕು ಸತ್ತಿದ್ದು ನ್ಯಾಯವೇ? ಎದೆ ಕಲುಕುವುದಿಲ್ಲವೆ? ನಿಜ. ಹಿಂದೂ ಪರ ಮಾತನಾಡುವುದು ಡೇಂಜರಸ್. ಮುಸ್ಲಿಮ್ ಪರ ಮಾತನಾಡುವುದು ‘ಪ್ರಗತಿ ಪರ- ಜಾತ್ಯತೀತ’ ಚಿಂತನೆ. ಹೀಗೆ ಇದನ್ನೆಲ್ಲ ಮಾಡಿಟ್ಟಿದ್ದು ಯಾರು?

- ಚೇತನಾ ತೀರ್ಥಹಳ್ಳಿ

“ಹೀಗೆ ಮಾಡಿದ್ದಕ್ಕೇ ಹಾಗೆ ಮಾಡಿದ್ದು…” ಛೆ! ಹಾಗಲ್ಲ, “ಹಾಗೆ ಮಾಡಿದ್ದಕ್ಕೇ ಹೀಗೆ ಮಾಡಿದ್ದು…”

November 27, 2008 at 6:03 am | In Uncategorized | 16 Comments

ಅಂತೂ ಮತ್ತೊಂದು ಸ್ಫೋಟ ನಡೆದಿದೆ. ಭಯೋತ್ಪಾದಕರ ದಾಳಿಗೆ ನೂರಾರು ಜೀವಗಳು ಬಲಿಯಾಗಿವೆ. ಪಾಪ ಭಯೋತ್ಪಾದಕರದೇನೂ ತಪ್ಪಿಲ್ಲ. ಅವರು ಅಮಾಯಕರು. ಮೊನ್ನೆ ಮಾಲೆಗಾಂವ್ ಸ್ಫೋಟ ನಡೀತಲ್ಲ, ಅದರಲ್ಲಿ ಹಿಂದೂಗಳು ಭಾಗಿಯಾಗಿದ್ದರಲ್ಲ, ಅದು ಅವರನ್ನು ರೊಚ್ಚಿಗೆಬ್ಬಿಸಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ತೋರಿದ್ದಾರೆ ಅಷ್ಟೆ. ತಪ್ಪೇನಿದ್ದರೂ ಮಾಲೇಗಾಂವ್ ದುಷ್ಕೃತ್ಯ ನಡೆಸಿದ ಹಿಂದೂ ಉಗ್ರರದು.

ಹಿಂದೂಗಳು ಮಾಲೇಗಾಂವ್ ನಲ್ಲಿ ಯಾಕೆ ಹಾಗೆ ಮಾಡಿದರು. ಹ್ಹ! ಅವರು ಕೊಡುವ ಕಾರಣ ಗೊತ್ತೆ? “ಈವರೆಗೆ ಮುಸ್ಲಿಮರು ಭಯೋತ್ಪಾದನೆ ಮಾಡುತ್ತ ನಮ್ಮ ಜೀವಗಳನ್ನ ಆಪೋಶನ ತೆಗೆದುಕೊಳ್ತಿದ್ದರಲ್ಲ, ಅದಕ್ಕೆ” ಎಂದು. ನಾಚಿಕೆಯಾಗ್ಬೇಕಲ್ಲವೆ ಅವರಿಗೆ? ಅವರು ಗೋಧ್ರಾದಲ್ಲಿ ಅತ್ಯಾಚಾರ ನಡೆಸಿದ ಮೇಲೇನೇ ಪಾಪ ಮುಸ್ಲಿಮ್ ಭಯೋತ್ಪಾದಕರು ಕೆರಳಿ ಹಾಗೆಲ್ಲ ಮಾಡಲು ಶುರುವಿಟ್ಟಿದ್ದು.
ಹಾಗಂದರೆ ಕೇಳುತ್ತಾರೆಯೇ ಇವರು? ಅವರು ಗೋಧ್ರಾದಲ್ಲಿ ಕರಸೇವಕರ ಬೋಗಿಗೆ ಬೆಂಕಿ ಹಚ್ಚಿದ್ದಕ್ಕೇ ಅಂತೆ ಇವರು ಹಾಗೆಲ್ಲ ಮಾಡಿದ್ದು.
ಪಾಪ. ಅವರೇನೂ ಸುಮ್ಮಸುಮ್ಮನೆ ಬೆಂಕಿ ಹಚ್ಚಲಿಲ್ಲ. ಕರಸೇವಕರು ಬಾಬ್ರಿ ಮಸೀದಿಯನ್ನ ಕೆಡವಿದ್ದಕ್ಕೇ ಅಲ್ಲವೆ ಅವರು ಹಾಗೆ ಮಾಡಿದ್ದು. ಹೀಗೆ ಪ್ರಚೋದಿಸಬಹುದಿತ್ತೇ ಹಿಂದೂಗಳು?

ಇಲ್ಲಿಗೆ ಬಂದು ನಿಂತು ತಪ್ಪೆಲ್ಲ ಹಿಂದೂಗಳ ತಲೆಮೇಲೆ ಚಪ್ಪಡಿಯ ಹಾಗೆ ಬಿದ್ದು ಅವರ ಸಮಾಧಿಯಾಗುತ್ತದೆ. ಹಾಗಾಗಬೇಕು. ಹಾಗಾದಾಗ ಮಾತ್ರ ಭಾರತ ಒಂದು ‘ಜಾತ್ಯತೀತ’ ರಾಷ್ಟ್ರವಾಗಲು ಸಾಧ್ಯ. ಹಿಂದೂವನ್ನು ಒಡಲಲ್ಲಿಟ್ಟುಕೊಂಡ ದೇಶ ಜಾತಿ ನಿರಪೇಕ್ಷವಾಗಲು ಅಸಾಧ್ಯ ಅಲ್ಲವೆ?

ಬಾಬ್ರಿ ಮಸೀದಿ ಉರುಳಿಸಿದಾಗ ಎಷ್ಟು ಜನರ ಜೀವ ಹಾನಿಯಾಗಿತ್ತು? ಲೆಕ್ಕ ಕೇಳಬೇಡಿ. ಸ್ವತಃ ಮುಘಲ್ ದೊರೆ ಬಹದ್ದೂರ್ ಶಾಹ್ ಅದನ್ನು ಹಿಂದೂಗಳಿಗೆ ಮರಳಿಸಿದ್ದನೆನ್ನುವ ದಾಖಲೆ ತೋರಿಸಬೇಡಿ. ನಂತರದ ದಿನಗಳಲ್ಲಿ ಹೊಲಸು ರಾಜಕೀಯಕ್ಕಾಗಿ ಅದನ್ನೆಲ್ಲ ಮುಚ್ಚಿಹಾಕಿ ಹಿಂದೂ ಮುಸ್ಲಿಮರ ನಡುವೆ ದ್ವೇಷದ ವಿಷ ಬೀಜ ಬಿತ್ತಿದ ರಾಜಕಾರಣಿಗಳನ್ನು ಫ್ರೇಮು ಹಾಕಿ ಪೂಜಿಸಿ. ಆಗ ಹಿಂದೂಗಳಂತೂ ತಪ್ಪು ಮಾಡಿದರು. ಪ್ರತಿಯೊಬ್ಬನ ಎದೆಯಲ್ಲೂ ರಾಮನನ್ನು ಕಾಣಬೇಕೆನ್ನುವ ತತ್ತ್ವವನ್ನು ಮರೆತು ಇಸ್ಲಾಮ್ ಶ್ರದ್ಧಾ ಕೇಂದ್ರವನ್ನು ಅವರು ಉರುಳಿಸಬಾರದಿತ್ತು. ಮಾನವೀಯತೆ ಇರುವವರೆಲ್ಲ ಒಪ್ಪಲೇಬೇಕಾದ ಮಾತು ಇದು.
ಆದರೆ,
ಆದರೆ, ಇಸ್ಲಾಮ್ ಭಯೋತ್ಪಾದನೆಗೆ ಕಾರಣ ಅದೊಂದೇ ಎಂದು ಆತ್ಮ ಸಾಕ್ಷಿಯಿರುವ ಯಾವನೂ ಹೇಳಲಾರನು. ಖಿಲಾಫತ್ ಚಳುವಳಿಯ ಕಾಲದಲ್ಲಿ ಕೇರಳದ ಮೋಪ್ಲಾ ದಂಗೆಯಲ್ಲಿ ಇಸ್ಲಾಮೀಯರು ನಡೆಸಿದ ಅತ್ಯಾಚಾರವನ್ನು ಗಮನಿಸಿದರೆ, ಹಿಂದೂಗಳ ಮೇಲೆ ಅವರ ಅತಿಕ್ರಮಣ ಶತಮಾನಗಳಷ್ಟು ಹಿಂದಿನದೆಂದು ಮರೆತುಬಿಡುವಂಥದಲ್ಲ ಎನ್ನುವುದು ಅರಿವಾದೀತು. ಆದರೆ ಹಾಗೆಲ್ಲ ಹಿಂದೂಗಳು ಇತರರರು ಮಾಡುವ ದೌರ್ಜನ್ಯವನ್ನು ಎತ್ತಿ ತೋರಿಸಬಾರದು.
ಬಾಂಗ್ಲಾದಲ್ಲಿ ಎಷ್ಟು ಬಡತನವಿದೆ ಗೊತ್ತೇ? ಅದಕ್ಕೇ ಅವರು ಹಾಗೆಲ್ಲ ಗಡಿ ನುಸುಳಿ ಭಾರತಕ್ಕೆ ಬರುವುದು. ಇಲ್ಲಿ ಹೇಗಿದ್ದರೂ ವೋಟಿನಾಸೆಯ ರಾಜಕಾರಣಿಗಳು ಅವರಿಗೆ ರೇಶನ್ ಕಾರ್ಡು ಕೊಡಿಸುತ್ತಾರೆ. ಹಾಗೆ ಬಂದವರ ಕೈ ಕಡಿಯುವುದಿಲ್ಲವೆ? ಬಾಂಬು ಹಿಡಿದು ನವೆ ತೀರಿಸಿಕೊಳ್ಳುತ್ತಾರೆ. ತಪ್ಪೇನು? ನಮಗೆ ತಾಖತ್ತಿದ್ದರೆ ಬೇಲಿ ಗಟ್ಟಿ ಮಾಡ್ಕೊಳ್ಳಬೇಕು. ಆಶ್ರಯ ಬೇಡಿ ಬಂದವರನ್ನು ಹಾಗೆಲ್ಲ ದೂರುವುದೇ?

ಹುಟ್ಟಿದವರೆಲ್ಲ ಸಾಯಲೇಬೇಕು ನಿಜ. ಆದರೆ ಸಾವು, ನಮ್ಮ ಹಕ್ಕು. ನಮ್ಮ ಕೈಲಿಲ್ಲದಿದ್ದರೂ ನಾವು ಹೇಗೆ ಸಾಯಬೇಕು, ಹೇಗೆ ಸಾಯಬಾರದೆಂದು ಬಯಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ನೀವು ಹೆಣ್ಣುಮಗಳೊಬ್ಬಳಿಂದ ನಿರೀಕ್ಷಸದ ಪದ ಬಾಯಿಗೆ ಬರುತ್ತಿದೆ. ತಡೆದುಕೊಂಡಿದ್ದೇನೆ. ಹಾಳು ಬೈಗುಳಗಳೆಲ್ಲ ಹೆಣ್ಣಿನ ದೂಷಣೆಯ ಮೇಲೇ ರಚನೆಗೊಂಡಿವೆ ಎನ್ನುವ ಕಹಿ ವಾಸ್ತವ ಈ ಸಂದರ್ಭದಲ್ಲೂ ವಿಷಾದದ ನಗೆಯುಕ್ಕಿಸುತ್ತಿದೆ. ಮುಖ ಮುಚ್ಚಿಕೊಂಡು ಬಂದು ಧರ್ಮದ ಹೆಸರಲ್ಲಿ ಹೀಗೆ ಜನರನ್ನು ಕೊಲ್ಲುವ ನಾಮರ್ದರನ್ನು ಹೆತ್ತ ತಾಯಂದಿರೆನೂ ಖುಷಿಪಟ್ಟಿರಲಾರರು ಬಿಡಿ, ಇಂತಹ ಮಕ್ಕಳನ್ನು ಹೆತ್ತಿದ್ದಕ್ಕೆ.

ತಡೆಯಲಾರದೆ ಹೀಗೆಲ್ಲ ಬರೆದುಬಿಟ್ಟಿದ್ದೇನೆ. ಬಹುಶಃ ಮತ್ತೊಮ್ಮೆ ಓದಿದಾಗ ಕಟುವಾಯಿತು ಎಂದು ನನಗೇ ಅನಿಸುವುದೇನೋ… ಆದರೂ ತಿದ್ದುವುದಿಲ್ಲ. ಹೀಗೇ ಇದ್ದುಕೊಳ್ಳಲಿ.
ಸಹನೆಗೂ ಮಿತಿ ಇದೆ. ಅಲ್ಲವೆ?

Blog at WordPress.com. | Theme: Pool by Borja Fernandez.
Entries and comments feeds.