ಕಳೆದು ಪಡೆದ ಮತ್ತೊಂದು ಭಾನುವಾರ!

2008 November 10

ಭಾನುವಾರ ಕಳೆದಿದ್ದೇ ಗೊತ್ತಾಗಲಿಲ್ಲ!
ಅದು ಹಾಗೇ. ಈ ಭಾನುವಾರಗಳು ಯಾವತ್ತೂ ಚಿಕ್ಕವಾಗಿಯೇ ಇರುತ್ತವೆ. ಬೇಗ ದಿನ ಮುಗಿದುಹೋಗುತ್ತದೆ. ಅದರಲ್ಲೂ ಅವತ್ತು ನಮ್ಮ ಇಷ್ಟದ ಪ್ರೋಗ್ರಾಮುಗಳಿದ್ದರಂತೂ ಮುಗಿದೇಹೋಯ್ತು!

ಈ ಭಾನುವಾರವೂ ಹಾಗೇ ಆಯ್ತು. ಜಯನಗರದ ಆರ್.ವಿ.ಟೀಚರ್ಸ್ ಕಾಲೇಜಿನಲ್ಲಿ ವಿವೇಕ ಚಿಂತನ ಯುವ ಸಮ್ಮೇಳನವಿತ್ತು. ಜೊತೆಗೆ, ಚಕ್ರವರ್ತಿಯ ‘ಜಾಗೋ ಭಾರತ್’ ತಂಡದಿಂದ ಗೀತಗಾಯನ.
ಓಹ್! ಎಷ್ಟೊಂದು ಮಕ್ಕಳು! ಮಕ್ಕಳಂದ್ರೆ, ಕಾಲೇಜು ಹುಡುಗ ಹುಡುಗಿಯರು. ಇಡೀ ದಿನ ಅದೆಷ್ಟು ಆಸ್ಥೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಗೊತ್ತಾ? “ಈ ಕಾಲದ ಹುಡುಗರಾ? ಒಳ್ಳೇದೇನೂ ಬೇಡ ಅವಕ್ಕೆ!” ಅಂತ ಜನರಲೈಸ್ ಮಾಡಿ ಗೊಣಗಾಡುವ ಹಿರಿಯರು ಸಿಕ್ಕರೆ ಕರೆದುಕೊಂಡು ಬಂದು ತೋರಿಸಬೇಕು ಇದನ್ನೊಮ್ಮೆ ಅಂದುಕೊಂಡೆ. ಹಾಗೆ ಕಿಕ್ಕಿರಿದು ತುಂಬಿತ್ತು ಆಡಿಟೋರಿಯಮ್.
ವಿಜಯನಗರದ ಭವತಾರಿಣಿ ಶಾರದಾ ಆಶ್ರಮದವರು ಏರ್ಪಡಿಸಿದ್ದ ಸಮ್ಮೇಳನವದು. “ಅಂಥಾ ಕಾರ್ಯಕ್ರಮಕ್ಕೂ ಕಾಲೇಜು ಹುಡುಗರು ಬರ್ತಾರಾ?” ನಾನು ಬಾಗಿಲು ಹಾಕಿ ಕೀಲಿ ತಿರುವುವಾಗ ಎದುರು ಮನೆ ವಸು ಕೇಳಿದಳು. ನಾನು ಸುಮ್ಮನೆ ನಕ್ಕೆ ಅಷ್ಟೆ. ಈಗ ನಾಲ್ಕು ವರ್ಷದ ಮೊದಲು ನಾನೂ ಇದೇ ಪ್ರಶ್ನೆ ಕೇಳಿದ್ದು ನೆನಪಾಯ್ತು.

~
ಮೊದಲ ಮೂರು ಸೆಷನ್ ಗಳು ನಡೆಯುತ್ತಿರುವಾಗ ಬುಕ್ ಕೌಂಟರಿನಲ್ಲಿ ಸುತ್ತಾಡುತ್ತಿದ್ದ ನಾನು, ಅಣ್ಣನ ಭಾಷಣದ ಹೊತ್ತಿಗೆ ಒಳಹೊಕ್ಕಿದ್ದೆ. ಹುಡುಗರೆಲ್ಲ ಅಲುಗಾಡದೆ ಕುಳಿತಿದ್ದರು. ಅಲ್ಲವನು ಮೇಜರ್ ಭಾತ್ರಾನ ಕಥೆ ಹೇಳುತ್ತಿದ್ದರೆ, ಇಲ್ಲೊಬ್ಬಳು ಕಣ್ಣೊರೆಸಿಕೊಳ್ಳುತ್ತಿದ್ದಳು. ಕ್ಯಾಪ್ಟನ್ ಮುಗಿಲನ್ ಬಗ್ಗೆ ಹೇಳುವಾಗ, ಇಲ್ಲೊಬ್ಬ ತಾನಿನ್ನು ಜೀವಮಾನವಿಡೀ ಕೇಸರಿಭಾತು ತಿನ್ನುವುದಿಲ್ಲವೆಂದು ಶಪಥ ಮಾಡುತ್ತಿದ್ದ.
ಭಾಷಣ ಮುಗಿದ ಮೇಲೂ ಕುಳಿತಿದ್ದ ಹುಡುಗರು ಏಳಲಿಲ್ಲ. ಭಾರವಾದ ಮೌನದೊಳಗೆ ಅವರೆಲ್ಲ ಕಳೆದುಹೋಗಿದ್ದರು. ಕೊನೆಗೆ, ‘ಎರಡು ಗಂಟೆಯೊಳಗೆ ಊಟ ಮುಗಿಸಿ ಬರಬೇಕು’ ಅಂತ ಮೈಕಲ್ಲಿ ಅನೌನ್ಸ್ ಮಾಡಿದಾಗಲೇ ಎಲ್ಲರೂ ಎದ್ದಿದ್ದು. ನೆನಪಿರಲಿ… ಅವರೆಲ್ಲರೂ ಶುದ್ಧ ತರಳೆ ಎನ್ನಬಹುದಾದ ವಯಸ್ಸಿನ ಹುಡುಗರು!

~
“ಯೂಥ್ಸ್ ಆರ್ ನಾಟ್ ಯೂಸ್ ಲೆಸ್… ದೇ ಆರ್ ಲೆಸ್ ಯೂಸ್ಡ್. …” ಸ್ವಾಮಿ ಚಿನ್ಮಯಾನಂದರ ಮಾತು. ಸರಿಯಾದ ಮಾರ್ಗದರ್ಶನವೊಂದು ಸಿಕ್ಕುಬಿಟ್ಟರೆ ವಜ್ರವಾಗಿ ಹೊಳೆಯುವ ಕಲ್ಲುಗಳು ಈ ಯುವ ಜನಾಂಗ. ಅಲ್ಲಿ ಸೇರಿದ್ದ ಐನೂರು ವಿದ್ಯಾರ್ಥಿಗಳಲ್ಲಿ ಐವರಾದರೂ ಕಾರ್ಯಕ್ರಮದ ಲಾಭ ಪಡೆದು ವಜ್ರದ ಹಾಗೆ ಬೆಳಗುತ್ತಾರೆನ್ನುವುದು ಖಚಿತ. ಇದಕ್ಕೆ ಉದಾಹರಣೆಗಳು ಒಂದೆರಡಲ್ಲ.

ವಿವೇಕ ಚಿಂತನ ಸಮ್ಮೇಳನದ ಅಂಗವಾಗಿ, ಮನರಂಜನೆ ಕಾರ್ಯಕ್ರಮವೂ ಇತ್ತು. ಅದು, ಜಾಗೋ ಭಾರತ್ ತಂಡದ ಗೀತಗಾಯನ. ಸದಾ ಸಿನೆಮಾ ಹಾಡುಗಳ- ಪ್ರೇಮಗೀತೆಗಳ ಗುಂಗಲ್ಲೇ ಇರುವ ಹುಡುಗರು ದೇಶಪ್ರೇಮದ ಹಾಡುಗಳನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಚಿಂತೆ ನನಗೆ ಮಾತ್ರ ಇತ್ತು. (ಯಾಕೆಂದರೆ, ಆಶ್ರಮದವರು ಮತ್ತು ಅಣ್ಣನಿಗೆ ಯಾವಾಗಲೂ ಧನಾತ್ಮಕವಾಗಿ ಆಲೋಚಿಸಿಯೇ ಅಭ್ಯಾಸ!)
ಶುರುವಾಯ್ತು ನೋಡಿ, ವಂದೇ ಮಾತರಂ! ಮತ್ತೆ ತಣ್ಣಗಿನ ಮೌನ. ಹುಡುಗರು ತಾವೇ ತಾವಾಗಿ ಎದ್ದು ನಿಂತು ಗೌರವ ಸಲ್ಲಿಸುವಷ್ಟು ಪ್ರಬುದ್ಧರು! ಯಾರು ಹೇಳಿದ್ದು ಇವರಿಗೆ ದೇಶದ ಬಗ್ಗೆ ಗೌರವವಿಲ್ಲ ಅಂತ!?

ಬಂಕಿಮರ ವಂದೇ ಮಾತರಂ, ಧರೆಗಿಳಿದಿದೆ ಸ್ವರ್ಗದ ಸ್ಫರ್ಧಿಯು, ಪರ್ ದೇಸ್ ಫಿಲಮ್ಮಿನ ಐ ಲವ್ ಮೈ ಇಂಡಿಯಾ, ರಂಗ್ ದೆ ಬಸಂತೀ ಚೋಲಾ, ಎಲೆಗಳು ನೂರಾರು, ಏ ಮೇರೆ ವತನ್ ಕೀ ಲೋಗೋ, ಎಚ್ಚರಾಗು ಧೀರ, ಜೈ ಭಾರತ ಜನನಿಯ, ರೆಹಮಾನರ ವಂದೇ ಮಾತರಂ, ಜಿಸ್ ದೇಸ್ ಕಿ ಧರ್ತೀ… ಒಟ್ಟು ಹತ್ತು ಹಾಡುಗಳು. ಒಂದೊಂದು ಹಾಡಿಗೂ ಮಕ್ಕಳು ಹುಚ್ಚೆದ್ದು ಕುಣಿಯುತ್ತಿದ್ದರು. ಚಪ್ಪಾಳೆ ತಟ್ಟುತ್ತ ದನಿಗೂಡಿಸುತ್ತಿದ್ದರು. ಹಾಡುಗಳ ನಡುವಿನ ನಿರೂಪಣೆಯ ಸಮಯದಲ್ಲಿ ಹೇಳಲಾಗುತ್ತಿದ್ದ ಕಥೆಗಳಿಗೆ ಕಣ್ಣೀರಾಗುತ್ತಿದ್ದರು. ಭಾರತದ ಹಿರಿಮೆ ಸಾರುವ ಮಾತುಗಳು ಬಂದಾಗಲೆಲ್ಲ ಎದ್ದು ನಿಂತು ಚಪ್ಪಾಳೆಯ ಜಡಿಮಳೆಯನ್ನೇ ಸುರಿಸುತ್ತಿದ್ದರು!

“ಅಂಥಾ ಕಾರ್ಯಕ್ರಮಕ್ಕೂ ಕಾಲೇಜು ಹುಡುಗ್ರು ಬರ್ತಾರಾ?” ಅಂತ ಕೇಳಿದ್ದವಳನ್ನ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದೆ. ಅವಳಂತೂ  ಅಲ್ಲಿನ ಉತ್ಸಾಹದ ಅಲೆಯಲ್ಲಿ ಕೊಚ್ಚಿಹೋಗಿಬಿಟ್ಟಿದ್ದಳು!

~
ಕಾರ್ಯಕ್ರಮದ ಯಶಸ್ಸನ್ನ ಬರೀ ಚಪ್ಪಾಳೆಗಳಿಂದ ಅಳೆಯಲು ಬರುವುದಿಲ್ಲ. ಅದು ಸರಿಯೂ ಅಲ್ಲ. ಅಲ್ಲಿ ಸೇರಿದ್ದವರಲ್ಲಿ ಶೇ. ನಲವತ್ತರಷ್ಟು ಮಕ್ಕಳು ಕಾರ್ಯಕ್ರಮ ಮುಗಿದ ನಂತರ ದೇಶಕ್ಕಾಗಿ ತಮ್ಮ ಜೀವನ ಮುಡಿಪಾಗಿಡುವ ಪ್ರಮಾಣ ಮಾಡಿದರಲ್ಲ, ಅದು ಯಶಸ್ಸು. ಅವರವರ ಕಾರ್ಯಕ್ಷೇತ್ರಗಳಲ್ಲೇ ಇದ್ದುಕೊಂಡು ದೇಶದ ಪ್ರಗತಿಗೆ ಪೂರಕವಾಗಿ ದುಡಿಯುವ ಭರವಸೆ ನೀಡಿದರಲ್ಲ, ಅದು ಯಶಸ್ಸು.
ಮುಂದೆಯೂ ಅ ಹುಡುಗರ ಮನಸ್ಸು ಆ ದಿಕ್ಕಿನಲ್ಲೇ ಚಿಂತಿಸುವಂತಾಗಲಿ ಅನ್ನುವ ಹಾರೈಕೆ ನನ್ನದು.

~
ಒಟ್ಟಿನಲ್ಲಿ ನನ್ನ ಭಾನುವಾರ ಖುಷಿಯಿಂದ ಕಳೆಯಿತು. ನೆನ್ನೆಯದು ಮಾತ್ರವಲ್ಲ, ನನ್ನ ಬಹುತೇಕ ಭಾನುವಾರಗಳು ಕಳೆಯುವುದು ಹೀಗೇ. ಈ ಸಾರ್ತಿ ನಿಮ್ಮೊಂದಿಗೆ ಇದನ್ನ ಹಂಚಿಕೊಳ್ಳಬೇಕನಿಸಿತು, ಹೇಳಿಕೊಂಡೆನಷ್ಟೆ. ಯಾಕೆಂದರೆ ಇದು ವಿದ್ಯಾರ್ಥಿಗಳ ವಿಷಯ.
…ಇಂದಿನ ಪೀಳಿಗೆ ಕುಲಗೆಟ್ಟುಹೋಗಿದೆ. ಇದರಿಂದ ಹಾಗಾಗಿಬಿಡುತ್ತೆ, ಹೀಗಾಗಿಬಿಡುತ್ತೆ… ಅಂತೆಲ್ಲ ಹಳಹಳಿಸುವ ಯಾರಾದರೂ ಇದ್ದರೆ, ಅವರಿಗೊಂದು ತಸಲ್ಲೀ ನೀಡುವ ಸಲುವಾಗಿ ಅಷ್ಟೆ. ಅದಕ್ಕಿಂತ ಹೆಚ್ಚಾಗಿ, ನನಗೆ ಮೂಡಿರುವ ಭರವಸೆ ಹುಸಿಹೋಗದಿರಲಿ ಎಂದು ಹಾರೈಸಿಕೊಳ್ಳುತ್ತಾ ನನಗೆ ನಾನೇ ಕೊಟ್ಟುಕೊಳ್ಳುತ್ತಿರುವ ಸಾಕ್ಷಿ ಇದು!

ನಿಜ್ವಾಗ್ಲೂ ಮರೆತಿದ್ದೆ.
ವಿವೇಕ ಚಿಂತನ ಕಾರ್ಯಕ್ರಮ ಆಯೋಜಿಸಿದ್ದು ವಿಜಯ ನಗರದ ಭವತಾರಿಣಿ ಅಶ್ರಮ. ಪಾಲ್ಗೊಂಡಿದ್ದು, ವಿವಿಧ ಹೈಸ್ಕೂಲು- ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಮತ್ತು ನನ್ನಂಥ ಒಂದಷ್ಟು ಸಾರ್ವಜನಿಕರು.
ಗೀತಗಾಯನದಲ್ಲಿ ರಾಷ್ಟ್ರ ಕಥನ- ನಿರೂಪಣೆ- ಚಕ್ರವರ್ತಿ ಸೂಲಿಬೆಲೆ. ಹಾಡುಗಾರಿಕೆ- ಗಣೇಶ್ ದೇಸಾಯಿ, ಮಾಲಿನಿ ಕೇಶವ ಪ್ರಸಾದ್ ಮತ್ತು ತಂಡದವರು.

ಭಾನುವಾರಗಳನ್ನು ಸಾರ್ಥಕವಾಗಿ ಕಳೆಯಲಿಕ್ಕೆ ನನ್ನ ಹತ್ತಿರ ಬಹಳಷ್ಟು ಉಪಾಯಗಳಿವೆ. ಇಲ್ಲಿ ನಾವು, ಒಂದು ದಿನವನ್ನ ಕಳೆದುಕೊಂಡರೂ ಬಹಳಷ್ಟು ಪಡೆಯುತ್ತೇವೆ. ನಿಮಗೂ ಆಸಕ್ತಿಯಿದ್ದರೆ, ಮುಂದೆಂದಾದರೂ ಹೇಳ್ತೇನೆ. ಸರೀನಾ?

18 Responses leave one →
  1. 2008 November 10

    “ಯೂಥ್ಸ್ ಆರ್ ನಾಟ್ ಯೂಸ್ ಲೆಸ್… ದೇ ಆರ್ ಲೆಸ್ ಯೂಸ್ಡ್. …” ಎಂಥಾ ಮಾತು!
    ಆಲ್ಸೋ ಮಿಸ್ ಯೂಸ್ದ್. ಅಂತಾನೂ ಸೇರಿಸಬಹುದು ಅಲ್ವ??

  2. 2008 November 10
    chetana chaitanya permalink

    ಖಂಡಿತ, ಸಂದೀಪ್. ಈ ಮಾತು ಕೇಳಿದಾಗ ನಾನೂ ಹೀಗೇ ಅಂದುಕೊಂಡಿದ್ದೆ!

  3. 2008 November 10
    Venkatesh permalink

    Chetana Madam,

    intaha karyakramagaliddare dayavittu munchitavagi tilisi. maalini, Ganesh Desai avara sangeeta eraDu baari kELiddEne. chennAgi hADuttAre. chakravartiyavara mAtu bere Bonus! idakke kaLashavittante vivekanandara chintanegaLu!!
    mahatvaddannu miss maaDikonDe.

    Venkatesh
    Mysuru

  4. 2008 November 10

    ನಾನು ಅಂಡರ್ ಯುಟಿಲೈಝೈಡ್ :-( :-(

  5. 2008 November 11
    uniquesupri permalink

    ಅಕ್ಕಾ ಸುಮ್ಮನೆ ಎಲ್ಲರೂ ದೇಶದ ಬಗ್ಗೆ ಮಾತನಾಡುತ್ತಾರೆ. ಆದರೆ ನಿಜವಾಗಿ ದೇಶವನ್ನು ಕಟ್ಟುತ್ತಿರುವವರು, ಪ್ರತಿನಿತ್ಯದ ಪ್ರಗತಿಯ ಹಾದಿಯನ್ನು ಸಿದ್ಧ ಪಡಿಸುತ್ತಿರುವವರು, ದೇಶದ ಬೆಳವಣಿಗೆಯ ದಿಕ್ಕನ್ನು ನಿರ್ಧರಿಸುತ್ತಿರುವವರು ಎಲ್ಲರೂ ಯುವಕರೇ. ಶಕ್ತಿ ಇರುವುದು ಯುವಕರಲ್ಲಿ, ಯಾವ ವಿಷಯವನ್ನೇ ಆಗಲಿ ಪ್ಯಾಶನೇಟ್ ಆಗಿ ಮಾಡಲು ಸಾಧ್ಯವಿರುವುದು ಯೌವನದಲ್ಲಿ ಮಾತ್ರ. ಒಂದು ಪೈಸೆಯ ಲಾಭವಿಲ್ಲದೆ ಎಂಥಹ ಕೆಲಸವನ್ನಾದರೂ ಮಾಡುವ ಉತ್ಸಾಹ ಈ ವಯಸ್ಸಿನಲ್ಲಿ, ಜವಾಬ್ದಾರಿಗಳು ಇಲ್ಲದ ಹಂತದಲ್ಲಿ ಮಾತ್ರ ಇರುತ್ತದೆ.
    ನಮ್ಮ ದೇಶದ ರಾಜಕಾರಣಿಗಳು, ನಮ್ಮ ಮಾಧ್ಯಮದ ಸಂಪಾದಕರು, ಸಂಘಟನೆಗಳ ಮುಖಂಡರು ಎಲ್ಲರೂ ತಲೆ ಹಣ್ಣಾದವರು, ಅವರಿಗೆ ದೇಶದ ಬಗ್ಗೆ ನಾಲ್ಕು ಹೊತ್ತು ವಟಗುಡುತ್ತ ಕೂರುವುದೇ ದೇಶ ಭಕ್ತಿ ಅನ್ನಿಸಿರುತ್ತದೆ, ಹೀಗಾಗಿ ಯುವಕರು ದೇಶಪ್ರೇಮವಿಲ್ಲದೆ ಬೆಳೆಯುತ್ತಾರೆ ಅಂದುಕೊಳ್ಳುತ್ತಾರೆ. ಇದೂ ಒಂದು ಮಿಥ್.
    ಸ್ವಾಮಿ ಚಿನ್ಮಯಾನಂದರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಆದರೆ ಅವರ ಆ ಮಾತು ಋಣಾತ್ಮಕವಾದದ್ದು ಎನ್ನುವುದು ನನ್ನ ಭಾವನೆ. ಯೂಥ್ ಆರ್ ಲೆಸ್ ಯೂಸ್ಡ್ ಎಂದರೆ why shud they be used by others ಎಂದು ಕೇಳಬೇಕಾಗುತ್ತದೆ. ಬೇರೊಬ್ಬರು ಅವರನ್ನು ಬಳಸಿಕೊಂಡಾಗಲೇ ಅವರು useful ಆಗುವುದಾ? ವಯಸ್ಸಾದ ಸಿದ್ಧಾಂತಿಗಳು ತಮ್ಮ ಪ್ರಸ್ತುತೆ ಉಳಿಸಿಕೊಳ್ಳಲು ಬಯಸುವುದೇ ಈ useful ಯುವಕರನ್ನು. ನನ್ನ ಪ್ರಕಾರ ಯುವಕರಾದವರು ಕುವೆಂಪು ಹೇಳಿದ ‘ನಿರಂಕುಶ ಮತಿ’ಗಳಾಗಬೇಕು. ಸಂಘಟನೆ ಮುಖ್ಯವಲ್ಲ individual ಮುಖ್ಯ. ಅದಕ್ಕೇ ನನಗೆ ವಿವೇಕಾನಂದರು ‘ನನಗೆ ನಲವತ್ತು ಮಂದಿ ಸಶಕ್ತ ಯುವಕರನ್ನು ಕೊಡಿ ನಾನು ದೇಶವನ್ನು ಬದಲಾಯಿಸುತ್ತೇನೆ’ ಎಂದು ಹೇಳಿದರು ಎಂದು ಯಾರಾದರೂ ಹೇಳುವುದು ಕೇಳಿದಾಗ ಕಿರಿಕಿರಿಯಾಗುತ್ತೆ. ಅದರ ಬದಲು ದೇಶದ ಪ್ರತಿಯೊಬ್ಬ ಯುವಕ, ಯುವತಿಯೂ ನನ್ನಂತೆ ವಿವೇಕಾನಂದರಾಗಲಿ ಎಂದು ಹೇಳಬೇಕು ಎನ್ನುವುದು ನನ್ನ ಭಾವನೆ.

    ಸುಪ್ರೀತ್

  6. 2008 November 11
    Raghu permalink

    ಅಕ್ಕಾ,

    “ಅಲ್ಲವನು ಮೇಜರ್ ಭಾತ್ರಾನ ಕಥೆ ಹೇಳುತ್ತಿದ್ದರೆ, ಇಲ್ಲೊಬ್ಬಳು ಕಣ್ಣೊರೆಸಿಕೊಳ್ಳುತ್ತಿದ್ದಳು. ಕ್ಯಾಪ್ಟನ್ ಮುಗಿಲನ್ ಬಗ್ಗೆ ಹೇಳುವಾಗ, ಇಲ್ಲೊಬ್ಬ ತಾನಿನ್ನು ಜೀವಮಾನವಿಡೀ ಕೇಸರಿಭಾತು ತಿನ್ನುವುದಿಲ್ಲವೆಂದು ಶಪಥ ಮಾಡುತ್ತಿದ್ದ.”- ಅದೇನು ಕಥೆ? ನಮಗೂ ಸ್ವಲ್ಪ ಹೇಳಿ ಪ್ಲೀಸ್…

  7. 2008 November 11
    chetana chaitanya permalink

    ಸುಪ್ರೀ,
    “ಎಲ್ಲವನ್ನೂ ಮಾಡುತ್ತಿರುವುದು ಯುವಕರೇ” ಅನ್ನುವ ಅಹಂಕಾರವೇ ಯೌವ್ವನದ ಲಕ್ಷಣ. ಇದು ಒಂದು ರೀತಿಯಲ್ಲಿ ಒಳ್ಳೆಯದೇ. ಆದರೆ ಅದು ಪಾಸಿಟಿವ್ ಬಗೆಯಲ್ಲಿ ಬಳಕೆಯಾದಾಗ ಮಾತ್ರ. ಇಲ್ಲವಾದಲ್ಲಿ ಅದು ಭ್ರಾಂತಿಯಾಗಿ, ಹಿರಿಯರೆಡೆಗಿನ ಅಗೌರವವಾಗಿ, ನಮ್ಮನ್ನು ಎಲ್ಲ ಬಗೆಯಿಂದಲೂ ಚಿಕ್ಕವರನ್ನಾಗಿ ಮಾಡಿಬಿಡುತ್ತದೆ.
    ಬೇರೆ ಯಾರು ಯಾರೋ ಬೇಡ. ನಮ್ಮ ವಿಜ್ಞಾನಿಗಳನ್ನೇ ತೆಗೆದುಕೋ. ಅಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಯುವ ವಿಜ್ಞಾನಿಗಳಿಗೂ ಹಿರಿಯ ವಿಜ್ಞಾನಿಗಳು ಮಾರ್ಗದರ್ಶಕರು. ಬಾಹ್ಯಾಕಾಶ ವಿಜ್ಞಾನದಲ್ಲಿ ಸಾಧನೆಗಳಾಗಿವೆಯಲ್ಲಾ, ಅದರ ಹಿಂದೆ ದುಡಿದಿರುವುದು ಹಿರಿಯ ಜೀವಗಳು.
    ಇದೊಂದು ಉದಾಹರಣೆಯಷ್ಟೆ. ಎಲ್ಲ ಕ್ಷೇತ್ರದಲ್ಲಿಯೂ ಹಾಗೆಯೇ. ಹಿರಿಯರ ಮಾರ್ಗದರ್ಶನ, ಸಲಹೆ ಸಹಕಾರಗಳಿಲ್ಲದೆ ನಾವು ಮುಂದುವರೆಯಲು ಸಾಧ್ಯವಿಲ್ಲ. ರಾಜಕಾರಣವೊಂದನ್ನು ಬಿಟ್ಟು! ಏಕೆಂದರೆ ಅಲ್ಲಿ ರಾಜಕಾರಣಿ ಅನ್ನುವ ಒಂದೇ ಜಾತಿ, ಲಿಂಗ, ವಯೋಮಾನ, ವರ್ಗ ಮಾತ್ರ ಇರುವುದು. ಅದು ಯಾವುದೇ ಪಕ್ಷವಾಗಿದ್ದರೂ ಸರಿಯೇ!

    ನಿನ್ನ ಪ್ರಶ್ನೆ, ಯುವಕರು ಯಾಕೆ ಯಾರಿಂದಲಾದರೂ ಬಳಸಲ್ಪಡಬೇಕು?- ಎನ್ನುವುದು.
    ಇಲ್ಲಿ ಬಳಸಿಕೊಳ್ಳುವುದು ಎಂದರೆ, ಅವರನ್ನೆಲ್ಲ ಹಿಡಿದುಕೊಂಡು ಹೋಗಿ ಜಿಹಾದಿಗೆ ತರಬೇತಿ ನೀಡುವ ಹಾಗೆ ನೀಡಿ ಜಗತ್ತನ್ನು ಧ್ವಂಸ ಮಾಡುವುದಕ್ಕೆ ಬಳಸಿಕೊಳ್ಳುವ ಹಾಗೆ ಬಳಸಿಕೊಳ್ಳುವುದಲ್ಲ…
    ಹರೆಯ ಚಿಗುರೊಡೆದ ಉಮ್ಮೇದಿನಲ್ಲಿ, ಶಕ್ತಿ ಭೋರ್ಗರೆಯುವ ಉತ್ಸಾಹದಲ್ಲಿ ತನ್ನ ಅಂತಃಸತ್ತ್ವದ ಅರಿವಿಲ್ಲದೆ ಬದುಕು ಮುಗಿಸಿಕೊಳ್ಳಬಹುದಾದ ಯುವಕರಿಗೆ, ಅವರ ಸಾಮರ್ಥ್ಯವನ್ನು ತೋರಿಸಿಕೊಡುವುದು. ನಮ್ಮ ಪರಂಪರೆ ಗುರುವಿಗೆ ಮಹತ್ವದ ಸ್ಥಾನ ಕೊಟ್ಟಿದೆ. ಏಕೆಂದರೆ, ಗುರು ಶಿಷ್ಯನ ಶಕ್ತಿಯನ್ನು ಉದ್ದೀಪನಗೊಳಿಸುತ್ತಾನೆ. ತನ್ನ ಶಕ್ತಿಯನ್ನು ಅರಿತ ಶಿಷ್ಯ ಅದನ್ನು ಲೋಕೋಪಕಾರಕ್ಕೆ ಬಳಸಿಕೊಳ್ಳುತ್ತಾನೆ. ಬಳಸಲ್ಪಡುವುದು ಆ ಅರ್ಥದಲ್ಲಿ.

    ಸರಳವಾದ ಉದಹರಣೆ ಬೇಕಿದ್ದರೆ; ನಿನಗೆ ಬರೆಯುವ, ಚಿಂತಿಸುವ, ವಿಶ್ಲೇಷಿಸುವ ಸಾಮರ್ಥ್ಯವಿದೆ. ಅದನ್ನು ಪ್ರೋತ್ಸಾಹಿಸುವ ಮೂಲಕ ನಿನ್ನನ್ನು ಮತ್ತಷ್ಟು ಉತ್ತಮ ಚಿಂತನೆಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದರಲ್ಲಿ ಯಾರ ಸ್ವಾರ್ಥವೂ ಇರುವುದಿಲ್ಲ. ಶಕ್ತಿಯಿರುವ ನಿನ್ನ ಮತ್ತು ಪ್ರೋತ್ಸಾಹಿಸುತ್ತಿರುವವರ ಉದ್ದೇಶಗಳೆರಡೂ ಸಮಾಜದ ಸ್ವಾಸ್ಥ್ಯವೇ ಆಗಿರುತ್ತದೆ.

    ಇನ್ನು, ವಿವೇಕಾನಂದರ ಮಾತು. ಅವರೊಬ್ಬ ರಾಷ್ಟ್ರ ಸೇನಾನಿ. ಅದನ್ನು ನಿಭಾಯಿಸಬಲ್ಲ ಅಸೀಮ ಸಾಮರ್ಥ್ಯವಿದ್ದವರು. ಎಲ್ಲರಿಗೂ ಸೇನಾಧಿಪತ್ಯ ವಹಿಸಲು ಸಾಧ್ಯವೇ? ಅವರಿಗೆ ಆ ತಾಖತ್ತಿತ್ತು. ನುರಿತ ಸೈನಿಕರಿಗೆ ಮಾರ್ಗದರ್ಶನ ಮಾಡಿ ಯುದ್ಧವನ್ನು ಗೆಲ್ಲಬಲ್ಲೆ ಎನ್ನುವಂಥ ಆತ್ಮ ವಿಶ್ವಾಸ ಅವರದು.
    ಮತ್ತೊಂದು ಸಂಗತಿ, ವಿವೇಕಾನಂದರು ಪ್ರತಿಯೊಬ್ಬರೂ ಅತ್ಯುನ್ನತ ವ್ಯಕ್ತಿಯಾಗಬಹುದು ಎಂದೇ ಬೋಧಿಸಿದ್ದರು. ತನ್ನಂತೇನು? ತನ್ನನ್ನೂ ಮೀರಿ ಬೆಳೆಯಬಹುದು ಎಂದೂ ಹೇಳುತ್ತಿದ್ದರು. ವಿವೇಕಾನಂದರಂತೆ ಏಕೆ? ಮತ್ತೊಬ್ಬ ವ್ಯಕ್ತಿ ಸ್ವತಃ ತಾನೇ ಒಂದು ಮಾದರಿಯಾಗಬೇಕು ಎನ್ನುವುದು ಅವರ ಚಿಂತನೆ.

    ನದಿ, ತನ್ನಿಂದ ತಾನೆ ಹರಿಯಬಲ್ಲ ಶಕ್ತಿ ಹೊಂದಿರುತ್ತದೆ. ಅದಕ್ಕೊಂದು ಒಡ್ಡುಕಟ್ಟಿ, ಕಾಲುವೆ ಹರಿಸಿ, ಬೆಳೆ ಬೆಳೆಯಬಹುದು. ವಿದ್ಯುತ್ ಪಡೆಯಬಹುದು. ಇನ್ನೂ ಬಹಳಷ್ಟು ಸಾಧಿಸಬಹುದು. ಹಾಗೆಯೇ ಬಿಟ್ಟರೆ ಅದು ಪೋಲಾಗಿಹೋಗುತ್ತದೆ. ಏಕೆಂದರೆ ನದಿಗೆ ತಾನು ಹೇಗೆಲ್ಲಾ ಉಪಯೋಗವಾಗಬಲ್ಲೆ ಎಂಬುದು ಗೊತ್ತಿಲ್ಲ.
    ಯುವ ಶಕ್ತಿಯೂ ಹಾಗೇ. ಅದು ಪೋಲಾಗದಂತೆ ಒಡ್ಡುಕಟ್ಟಲು ಗುರು ಹಿರಿಯರ ಮಾರ್ಗದರ್ಶನ ಅತ್ಯಗತ್ಯ.

    ಈ ಮಾತುಗಳು ಕನ್ ವಿನ್ಸ್ ಆಗದಿದ್ದರೆ, ಚರ್ಚೆ ಮುಂದುವರೆಸಲು ಖಂಡಿತ ಅವಕಾಶವಿದೆ.
    - ಚೇತನಾ

  8. 2008 November 11
    chetana chaitanya permalink

    ರಘು,
    ಖಂಡಿತ ಹೇಳುವೆ. ಅದಕ್ಕಾಗಿ ಮತ್ತೊಂದು ಪೋಸ್ಟ್ ಹಾಕುವೆ.

  9. 2008 November 11

    “ಫಟಾಫಟ್” ಜಿಂದಗಿಯಲ್ಲೂ ಭರ್ಜರಿ ಭಾನುವಾರವನ್ನು ಕಿವಿಗಂಟಿಸುವ ನವಪೀಳಿಗೆ ರಾಷ್ಟ್ರ ಸೇನಾನಿಗಳ ಕುರಿತು ಕೇಳುತ್ತಾ ತನ್ಮಯರಾದದ್ದು ವಿಶೇಷ..
    ಇಂಥ ಮನಸ್ಸುಗಳು ಮತ್ತಷ್ಟು ಹೆಚ್ಹಾಗಲಿ..

  10. 2008 November 12
    ಭಾಗ್ವತ್ರು permalink

    ಶುದ್ಧ ತರಳೆ ಎನ್ನಬಹುದಾದ ವಯಸ್ಸಿನ ಹುಡುಗರು!

    ತರ’ಳೆ’ಯೋ? ಇಲ್ಲ ತರ’ಲೆ’ಯೋ? :-)

  11. 2008 November 12
    chetana chaitanya permalink

    ಹರೀಶರೇ, ಧನ್ಯವಾದ.

    ಕನ್ನಡ ಪಂಡಿತ ಭಾಗವತೋತ್ತಮರೇ, ಅದು ತರ‘ಲೆ’ಯಾ? ತರ‘ಳೆ’ ಅಂದ್ರೆ ಹುಡುಗಿ ಅಂತ ಅರ್ಥ ಬರತ್ತಾ? ಹಾಗೆಲ್ಲೋ ಕೇಳಿದ ನೆನಪು.

  12. 2008 November 12

    akka neevu modale heLabekagithu, nanu mis madkonde :(

  13. 2008 November 12
    uniquesupri permalink

    ಅಕ್ಕಾ,
    ನನ್ನ ಪ್ರತಿಕ್ರಿಯೆಯನ್ನು ಮತ್ತೊಮ್ಮೆ ಓದಿಕೊಂಡೆ. ಅದರಲ್ಲಿ ಸ್ವಲ್ಪ ಅರೋಗೆನ್ಸ್ ಹೆಚ್ಚಾಗಿತ್ತು ಆನ್ನಿಸಿತು.
    ನನ್ನ ಮನಸ್ಸಿನಲ್ಲಿದ್ದದ್ದು ಇಷ್ಟು: ನಮ್ಮ ಸಮಾಜದಲ್ಲಿ ವಯಸ್ಸಾದವರು, ವೃದ್ಧರು ಹಾಗೂ ಹಿರಿಯರ ಅಭಿಪ್ರಾಯಗಳಿಗೇ ಯಾವಾಗಲೂ ಮನ್ನಣೆ. ಮನೆಯಲ್ಲಿ ಅಪ್ಪನದೇ ಕೊನೆಯ ಮಾತು ಹಾಗೂ ಆತನ ಅಭಿಪ್ರಾಯವೇ ಅಂತಿಮ ಎನ್ನುವಂತೆ ಇದು. ಹೀಗಾಗಿ ನಮ್ಮ ಮಕ್ಕಳು ಹೇಗಿದ್ದಾರೆ, ಅವರಿಗೆ ನಾವು ಉತ್ತಮವಾದ ಸಂಸ್ಕಾರ ಕೊಡಬೇಕು, ಯುವಕರು ಆದರ್ಶವಿಲ್ಲದವರಾಗುತ್ತಿದ್ದಾರೆ ಅವರಿಗೆ ಒಳ್ಳೆಯ ಮಾರ್ಗ ದರ್ಶನ ಕೊಡಬೇಕು ಎನ್ನುವ ಅಭಿಪ್ರಾಯ ಬೇರೂರಿರುತ್ತದೆ. ಅಂದರೆ ವಯಸ್ಸಾದ ತಕ್ಷಣ ಮಕ್ಕಳನ್ನು ಸರಿಯಾಗಿ ಬೆಳೆಸುವ, ಯುವಕರನ್ನು ತಿದ್ದಿ ತೀಡಿ ಅವರ ವ್ಯಕ್ತಿತ್ವ ರೂಪಿಸುವ ಜವಾಬ್ದಾರಿ ತಮ್ಮ ಮೇಲಿದೆ ಎಂದು ಅವರು ಭಾವಿಸುತ್ತಾರೆ. ಇದು ಅವರ ತಪ್ಪಲ್ಲ ನಿಜ, ನಮ್ಮ ಸಮಾಜದಲ್ಲಿ ಈ ಸಂಪ್ರದಾಯ ಬೇರೂರಿದೆ. ಮಕ್ಕಳಾಗಿದ್ದಾಗ, ಯೌವನದಲ್ಲಿದ್ದಾಗ ಇಲ್ಲದ ‘ಬೋಧನೆ’ಯ ಕಾಳಜಿ ವಯಸ್ಸಾಗುತ್ತಿದ್ದಂತೆಯೇ ಹೆಚ್ಚುತ್ತದೆ. ಅದಕ್ಕೇ ನಮ್ಮ ದೇಶದಲ್ಲಿ ಪ್ರತಿಭೆಗಿಂತ, ಸಾಧನೆಗಿಂತ, performanceಗಿಂತ ಅನುಭವಕ್ಕೇ ಹೆಚ್ಚು ಬೆಲೆ.
    ವೈಜ್ಞಾನಿಕ ಕ್ಷೇತ್ರದಲ್ಲಿ ನಿಜವಾದ ಪ್ರತಿಭೆಯಿರುವವನ ಸಾಧನೆಗಿಂತ ಆತನ ಮಾರ್ಗದರ್ಶಕನ ವರ್ಚಸ್ಸು ಹೆಚ್ಚು ಕೆಲಸ ಮಾಡುತ್ತದೆ. ಪಿಎಚ್.ಡಿ ಕೊಡುವುದು ಸಂಶೋಧಕನ ಕೆಲಸಕ್ಕೋ ಅಥವಾ ಮಾರ್ಗದರ್ಶನಕ್ಕೋ ಎಂಬ ಸಂಶಯ ಬರುವಷ್ಟು ಕ್ಲಿಷ್ಟಕರ ವ್ಯವಸ್ಥೆ ರೂಪುಗೊಂಡಿದೆ.
    ಅದಕ್ಕೇ ದೊಡ್ಡವರು, ಹಿರಿಯರು, ಗುರುಗಳು, ವೃದ್ಧರು ಹೇಳುವುದು ಪ್ರತಿಯೊಂದೂ ಹೇರಿಕೆಯಾಗಿ ಕಾಣುತ್ತದೆ. ಇದೊಂದು ವಿಷಯದಲ್ಲಿ ನಮಗೆ ಪಾಶ್ಚಾತ್ಯರು ಉದಾಹರಣೆಯಾಗಬಲ್ಲರು. ಅಲ್ಲಿ ಯುವಕರಿಗೆ, ಹೊಸತನಕ್ಕೆ ಸಿಕ್ಕುವಷ್ಟು ಅವಕಾಶ ನಮ್ಮಲ್ಲೂ ಸಿಕ್ಕಬೇಕು. ನಲವತ್ತೇಳು ವರ್ಷದವ ಎಪ್ಪತ್ಮೂರು ವರ್ಷದ ರಾಜಕಾರಣಿಯನ್ನು ಮಣಿಸಿ ದೇಶದ ಅಧ್ಯಕ್ಷನಾಗುವುದು ನಮ್ಮ ದೇಶದಲ್ಲಿ ಕಾಣುವುದು ಯಾವಾಗ? ಇಷ್ಟೇ ನನ್ನ ಕಾಳಜಿ…

    ಸುಪ್ರೀತ್

  14. 2008 November 12
    chetana chaitanya permalink

    ಹೌದು. ಕೆಲವು ಬಾರಿ ಹಿರಿಯರ ಅನುಭವದ ಮಾತು- ಸಲಹೆಗಳು ಮಾರ್ಗದರ್ಶನವಾಗುವ ಬದಲು ‘ಹೇರಿಕೆ’ಯಾಗಿಬಿಟ್ಟರೆ ಕಿರಿಕಿರಿಯೆನಿಸುತ್ತದೆ ನನಗೂ. ಮತ್ತು, ನಮ್ಮಲ್ಲಿ ಹಿರಿಯರ ಹೇರಿಕೆಯೇ ಬಹುತೇಕ ಕಡೆ ಕಂಡುಬರುವುದು ದುರಂತ. ಖಂಡಿತ ಈ ವಿಷಯದಲ್ಲಿ ನಾವು ಪಾಶ್ಚಾತ್ಯರಿಂದ ಕಲಿಯುವುದು ಬಹಳಷ್ಟಿದೆ. ವಂಶ ಪಾರಂಪರ್ಯದ ಹಂಗಿಲ್ಲದ ಯುವ ರಾಜಕಾರಣಿಯೊಬ್ಬ ಈ ದೇಶದ ಚುಕ್ಕಾಣಿ ಹಿಡಿದ ದಿನ ಒಂದಷ್ಟು ಭರವಸೆ ಚಿಗುರಬಹುದೇನೋ?
    ನಿನ್ನ ಈ ಮಾತಿಗೆ, ಆಕ್ಷೇಪಕ್ಕೆ ನನ್ನ ಸಹಮತವಿದೆ.

  15. 2008 November 12

    ಚೇತನಾ ಮೇಡಂ, ರೈಲು ಹೋದ ಮೇಲೆ ಟಿಕೆಟ್ ಕೊಟ್ಟ ಹಾಗೆ, ಕಾರ್ಯಕ್ರಮ ಮುಗಿದ ಮೇಲೆ ಇದನ್ನೆಲ್ಲ ಹಾಕಿದರೆ ಏನು ಉಪಯೋಗ? ಇಂಥ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮೊದಲೇ ಮಾಹಿತಿ ಕೊಡಿ. ನಾವೂ ಬರಲು ಪ್ರಯತ್ನಿಸುತ್ತೇವೆ.

  16. 2008 November 13
    ಭಾಗ್ವತ್ರು permalink

    ಹೌದ್ರಿ. ನೀವು ಯಕ್ಷಗಾನ ಸ್ವಲ್ಪ ಜಾಸ್ತಿ ನೋಡ್ಬೇಕು ಅಂತ ಅನ್ನೋದು ಇದ್ದಕ್ಕೇ :-)

  17. 2008 November 20
    ರಾಕೇಶ್ ಶೆಟ್ಟಿ permalink

    ಚೇತನ
    ಮುಂದಿನ ಕಾರ್ಯಕ್ರಮ ಎಲ್ಲಿ ನಡೆಯುತ್ತೆ ಹೇಳಿ, ನನಗೂ ಬಾರೋ ಆಸೆ

Trackbacks & Pingbacks

  1. ‘ಜಾಗೋ ಭಾರತ್’… ಒಂದು ಹೊಸ ಪ್ರಯತ್ನ « ರಾಷ್ಟ್ರ ಶಕ್ತಿ ಕೇಂದ್ರ

Leave a Reply

Note: You can use basic XHTML in your comments. Your email address will never be published.

Subscribe to this comment feed via RSS