ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ…
November 29, 2008 at 5:39 am | In ನಿಮ್ಮೊಂದಿಗೆ | 9 CommentsTags: ನರಮೇಧ
ನೋವಿನ ನದಿ ಹರಿಸಿ
ಧರ್ಮದ ತೆಪ್ಪದಲ್ಲಿ
ದಡ ಸೇರಲು ಬಯಸಿದ್ದಾರೆ!
ತೊಟ್ಟಿಕ್ಕಿದ ನೋವು
ಮಣ್ಣಲ್ಲಿ ಬೆರೆತು
ಕೆಂಪಾಗಿದೆ…
ಈ ಹಾಯ್ಕುವನ್ನು ಸ್ನೇಹಿತರಾದ ಡಾ.ರವೀಂದ್ರನಾಥ್ ಕಳುಹಿಸಿಕೊಟ್ಟಿದ್ದು. ಆಗವರು ನ್ಯೂಸ್ ನೋಡುತ್ತ ಕುಳಿತಿದ್ದರು. ಅದರಲ್ಲಿ ಏನು ಬರುತ್ತಿತ್ತೆನ್ನುವುದನ್ನು ಹೇಳಬೇಕಿಲ್ಲ ಅಲ್ಲವೆ?
~
ಹೀಗೆ ನೆನ್ನೆಯಿಡೀ ಹರಿದಾಡಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ರೋಷದ, ವಿಷಾದದ, ಹತಾಶೆಯ, ಸೇಡಿನ, ದ್ವೇಷದ, ಆತಂಕದ, ವಿಡಂಬನೆಯ…. ಒಂದೇ ಎರಡೇ?
ಈ ಮೆಸೇಜುಗಳಲ್ಲಿ ಎರಡು ಹೀಗಿವೆ:
1. Pass it on… ” Forgiving the terrorists is left to God; But fixing their appointment with God is our responsibility”
2. We salute the brave officers who laid down their lives in protecting us and our country, including HEMANT KARKARE, ASHOK KAMTE, VIJAY SALASKAR and SANDIP UNNIKRISHNAN. Pray for our forces who are still fighting with terrorists without thinking about their lives and family just for us. JAI HIND!!
3. ತಾಜಾ ಸುದ್ದಿ. ತಮ್ಮ ಬಂಧುಗಳು ಮಾಡಿದ ಕೃತ್ಯಗಳಿಂದಾಗಿ ನೊಂದು ಒಬ್ಬ ಪಳಾಗಿದ ರಾಜಕಾರಣಿ, ಒಬ್ಬ ಸಾಹಿತಿ ಮತ್ತು ಒಬ್ಬ ಪತ್ರಕರ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ!! ( ಬಂದ ಮೆಸೇಜಲ್ಲಿ ಅವರೆಲ್ಲರ ಹೆಸರುಗಳೂ ಇದ್ದವು. ಅದನ್ನ ಬೇಕೆಂದೇ ಕೈಬಿಟ್ಟಿದ್ದೇನೆ.)
4. NSG Commandos – who have both North Indians and South Indians have come to Mumbai so that Raj Thakre can sleep peacefully. Pl forward this so that it finally reaches the coward bully!
~
ಕನ್ನಡ ಬ್ಲಾಗ್ ಲೋಕದಲ್ಲಿ ಬರೀ ಕಥೆ- ಕವನ- ಭಾವ ಲಹರಿಗಳಲ್ಲಿ ಕಳೆದುಹೋಗದೆ ಸಮಾಜದ ಅಗುಹೋಗುಗಳಿಗೆ ಸ್ಪಂದಿಸುವ ಜವಾಬ್ದಾರಿಯುತ ಮನಸ್ಸುಗಳೂ ಇವೆ. ಅದು ಈ ಹಿಂದೆಯೂ ಸಾಕಷ್ಟು ಸಂದರ್ಭದಲ್ಲಿ ಪ್ರೂವ್ ಆಗಿದ್ದರೂ ಈಗ ಮತ್ತೊಮ್ಮೆ ಅದನ್ನು ತಮ್ಮ ಗಮನಕ್ಕೆ ತರುವ ಯತ್ನ ಮಾಡುತ್ತಿದ್ದೇನೆ. ಈ ಕೆಳಗಿನ ಬ್ಲಗ್ ಗಳ ಲಿಂಕುಗಳಲ್ಲಿ ಮುಂಬಯಿಯಲ್ಲಿ ನಡೆದ ನರಮೇಧದ ಕುರಿತು ಬ್ಲಾಗಿಗರ ಅಭಿಪ್ರಾಯಗಳನ್ನು ನೋಡಬಹುದು. ನಾನು ನನ್ನ ಕಣ್ಣಿಗೆ ಬಿದ್ದ ಕೆಲವನ್ನಷ್ಟೆ ಇಲ್ಲಿ ನೀಡಲು ಸಾಧ್ಯವಾಗಿದೆ. ನಿಮಗೂಇದಕ್ಕೆ ಸಂಬಂಧಿಸಿದ ಲೇಖನಗಳು ಕಣ್ಣಿಗೆ ಬಿದ್ದರೆ ದಯವಿಟ್ಟು ಲಿಂಕ್ ಕಳುಹಿಸಿಕೊಡಿ. ಇವುಗಳ ಜೊತೆ ಒಂದಷ್ಟು ಸಂಪದಿಗರೂ ಈ ಬಗ್ಗೆ ಬರೆದಿದ್ದಾರೆ. ಆದರೆ ಅದು ನನ್ನ ಈ ಸಿಸ್ಟಮ್ ನಲ್ಲಿ ಓಪನ್ ಆಗುತ್ತ್ತಿಲ್ಲವಾದ್ದರಿಂದ ಲಿಂಕ್ ನೀಡಲು ಸಾಧ್ಯವಾಗಲಿಲ್ಲ.
ಈ ಪೋಸ್ಟಿನ ಜೊತೆಗೆ ಮುಂಬಯ್ ನರಮೇಧದ ಕುರಿತ ನನ್ನ ಅಭಿಪ್ರಾಯ- ಬರಹಗಳನ್ನು ಮುಗಿಸುತ್ತಿದ್ದೇನೆ.
ಬ್ಲಾಗ್ ಲಿಂಕ್ ಗಳು:
ದ ಆರ್ಗ್ಯುಮೆಂಟ್, ಕಂಟಿನ್ಯೂಡ್…
November 28, 2008 at 5:18 am | In ನಿಮ್ಮೊಂದಿಗೆ | 5 CommentsTags: ಭಯೋತ್ಪಾದನೆ
( ನವೆಂಬರ್ ೨೮ರ ಕನ್ನಡ ಪ್ರಭದಿಂದ ಈ ಕೆಳಗಿನ ಸಾಲುಗಳನ್ನು ಕಡ ತರಲಾಗಿದೆ.ಈ ಧಿಕ್ಕಾರ ಘೋಷಣೆಗೆ ನನ್ನದನಿಯೂ ಸೇರಿದೆ. ನಿಮ್ಮ ಪಾಲನ್ನೂ ನೀವು ನೀಡಬಹುದು. )
ಮನುಕುಲ ವಿರೋಧಿ ಉಗ್ರಗಾಮಿಗಳಿಗೆ, ಸಾವಿರ ಭಯೋತ್ಪಾದನೆಗಳಿಂದಲೂ ಪಾಠ ಕಲಿಯದ ಸರ್ಕಾರಗಳಿಗೆ, ಇನ್ನೆಂದೂ ಹೀಗಾಗಲು ಬಿಡೆವು ಎನ್ನುವ ಗಿಳಿಪಾಠದ ರಾಜಕಾರಣಿಗಳಿಗೆ, ಕಠಿಣ ಉಗ್ರ ನಿಗ್ರಹ ಕಾನೂನು ಜಾರಿಯನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಗೆ, ಓಟಿಗಾಗಿ ಧರ್ಮವನ್ನು ವಿಬಜಿಸುವ ಮತರಾಕ್ಷಸರಿಗೆ, ಸಂಸತ್ತಿನ ಮೇಲೆ ದಾಳಿ ನಡೆಸಿದವನನ್ನು ಶಿಕ್ಷಿಸಬಾರದೆನ್ನುವ ಮಹಾನುಭಾವರಿಗೆ, ಡೋಂಗಿ ಜಾತ್ಯತೀತವಾದಿಗಳಿಗೆ, ಜಾಳು ಬಾಯಿಯ ಬುದ್ಧಿಜೀವಿಗಳಿಗೆ, ಉಗ್ರರೊಡನೆ ಹೋರಾಡಿ ಮಡಿದ ಅಧಿಕರಿಗಳ ಮೇಲೆ ತನಿಖೆಗೆ ಒತ್ತಾಯಿಸುವ ಅಮಾನವೀಯ ಹಕ್ಕು ಪ್ರತಿಪಾದಕರಿಗೆ, ಮತ್ತು ಈ ಮೊದಲೇ ದಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದೆವು ಎಂದು ಬೆನ್ನು ತಟ್ಟಿಕೊಳ್ಳುವ ಗುಪ್ತದಳಗಳಿಗೆ ಜನ ಸಾಮಾನ್ಯರ ಹಿಡಿಶಾಪ ಮತ್ತು,
ಧಿಕ್ಕಾರ
ಈ ಕೆಳಗಿನದು, ಈ ಲೇಖನದ ಪ್ರತಿಕ್ರಿಯೆಗಳ ಮುಂದುವರೆದ ಚರ್ಚೆಯಾಗಿದೆ.
ಶ್ರೀನಿಧಿ ಡಿ.ಎನ್.-
Corrected…
ಚೇತನಾ,
ನನ್ನ ಪ್ರಕಾರ ಹಿಂದು ಧರ್ಮ, ಇಸ್ಲಾಂ ಧರ್ಮ, ಕ್ರೈಸ್ತ ಧರ್ಮ ಇತ್ಯಾದಿ ಧರ್ಮಗಳಲ್ಲಿ ಅದರದರದೇ ಆದ ಶ್ರೇಷ್ಟತೆ, ಆಯಾ ಧರ್ಮಕ್ಕೆ ಸೇರಿದ ಋಣಾತ್ಮಕ ಗುಣಗಳು ಇದ್ದೇ ಇವೆ. ಚರಿತ್ರೆಯ ಆಯಾ ಕಾಲಘಟ್ಟದಲ್ಲಿದ್ದ ಮನುಷ್ಯರಿಂದ, ಅವರ ಕಾರ್ಯಗಳಿಂದ ಒಂದೊಂದು ಧರ್ಮಕ್ಕೆ ಒಂದೊಂದು ಬಣ್ಣ ಅಂಟಿರಬಹುದು. ಆದರೆ, ಇವೆಲ್ಲವೂ ಮನುಷ್ಯ ಧರ್ಮದೊಳಗಿರುವ ಒಳಧರ್ಮಗಳು.
ಆದರೆ ಭಯೋತ್ಪಾದಕರು ಮಾತ್ರ ಯಾವುದೇ ಜಾತಿಗಾಗಲಿ ಧರ್ಮಕ್ಕಾಗಲಿ ಸೇರದವರು, ಎಲ್ಲಾ ಧರ್ಮಗಳು ಮಾನವಹಿಂಸೆಯ ವಿರೋಧವೇ ಇವೆ, be it hindu or muslim or christian. ಧರ್ಮದ ಹೆಸರು ಹೇಳಿಕೊಂಡರೂ ಧರ್ಮದ ನಿಜವಾದ ಹಂಗು ಇವರ್ಯಾರೂ ಇಟ್ಟುಕೊಂಡವರಲ್ಲ, ಹಾಗಾಗಿ ಅವರ ಬಗ್ಗೆ ಹಿಂಧು ಭಯೋತ್ಪಾದಕರು, ಮುಸ್ಲಿಂ ಭಯೋತ್ಪಾದಕರು ಎಂದು ಬೇರ್ಪಡಿಸಿ ಮಾತಾಡುವುದು ನನ್ನ ಪ್ರಕಾರ ತಪ್ಪು. ಅವರೆಲ್ಲರೂ ಒಂದೇ ಜಾತಿಯವರು. ನನ್ನ ಒಂದು ಕಣ್ಣು ಹೋದರೆ ಅವರದು ಎರಡೂ ಕಣ್ಣು ಹೋಗಲಿ ಅನ್ನುವುದು ತುಂಬಾ ಕ್ರೂರ.
ಎಂದೋ ಆಗಿಹೋದ, ನಾವು ನೋಡದ, ನಮ್ಮ ಕಾಲಕ್ಕೆ ನಿಜವಾಗಿ ಸಂಬಂಧಪಡದ ವಿಚಾರಗಳನ್ನು, ಘಟನೆಗಳನ್ನು – ನಾವೇ ನೋಡಿದಂತೆ, ನಮಗೇ ನೇರವಾಗಿ ಸಂಬಂಧಪಟ್ಟಂತೆ, ಪುನ: ಪುನ: ಪೋಸ್ಟ್-ಮಾರ್ಟಂ ಮಾಡುವ ಕೆಲಸ ಕರ್ನಾಟಕದಲ್ಲಿ, ಕನ್ನಡದಲ್ಲಿ ಇತ್ತೀಚೆಗೆ ಅಡೆತಡೆಯಿಲ್ಲದೇ ನಡೆಯುತ್ತಿದೆ. ಆಮೂಲಕ ಇಂದು ಹೇಗೋ ಸರಿಹೋಗಬಹುದಾದದ್ದನ್ನು ಮತ್ತೆ ಹಾಳುಮಾಡುವ ಕೆಲಸ, ಕಟ್ಟುವ ಬದಲು ಕೆಡವುವ ಕೆಲಸ ಮತ್ತೆ ಮತ್ತೆ ನಡೆಯುತ್ತಿದೆ. ನೀವೂ ಅದಕ್ಕೆ ಕೊಡುಗೆ ನೀಡಬೇಡಿ ಅಂತ ನಿಮ್ಮ ಗೆಳತಿಯಾಗಿ ಕಳಕಳಿಯಿಂದ ಪ್ರಾರ್ಥಿಸುತ್ತೇನೆ.
ನನ್ನ ಗೆಳೆಯರೊಬ್ಬರಿದ್ದಾರೆ, ಹೇಳುತ್ತಿರುತ್ತಾರೆ – “ನನ್ನ ಸುತ್ತ ಏನಾದರೂ ನಡೆಯುತ್ತಿದ್ದರೆ ಅದರಲ್ಲಿ ನನ್ನ ಪಾಲೂ ಇದ್ದೇ ಇರುತ್ತದೆ… ನನ್ನಲ್ಲಿರುವ ಕೆಟ್ಟತನ ನನ್ನ ಸುತ್ತ ಕಂಡಾಗ ಅದು ನನ್ನನ್ನು ರೇಗಿಸುತ್ತದೆ… ಯಾಕೆಂದರೆ ಅದು ಕೆಟ್ಟದು ಅಂತ ನನಗೆ ಗೊತ್ತಿರುತ್ತದೆ… ಅದರಿಂದ ಹಿಂಸೆಯಾಗುತ್ತದೆ… ಆ ಹಿಂಸೆಯಿಂದ ನನ್ನಲ್ಲಿರುವ ದೆವ್ವಕ್ಕೆ ಸಂತೋಷವಾಗುತ್ತದೆ… ನನ್ನೊಳಗಿರುವ ದೆವ್ವವನ್ನು ನಾನು ಯಾವಾಗ ಓಡಿಸುತ್ತೇನೋ, ಆಗ ಮಾತ್ರ ನನ್ನ ಸುತ್ತಲ ಜಗತ್ತು ಶಾಂತವಾಗಲು ಸಾಧ್ಯ… selfpurification ಇದ್ದಾಗ ಮಾತ್ರ ನಮ್ಮ ಸುತ್ತ ಶಾಂತಿ ನೆಲಸಲು ಸಾಧ್ಯ…”
ನಾನು ಅವರ ಜತೆ ವಾದ ಮಾಡುತ್ತಿದ್ದೆ, ಅದು ಹೇಗೆ ಸಾಧ್ಯ, ನಾನು ಒಳ್ಳೆಯವಳಾಗಿಬಿಟ್ಟರೆ ಸುತ್ತಲವರು ಒಳ್ಳೆಯವರಾಗಲು ಹೇಗೆ ಸಾಧ್ಯ ಅಂತ. ಅವರು ಹೇಳಿದರು, “ಇಲ್ಲ, ಹಾಗಲ್ಲ, ನೀನು ಒಳ್ಳೆಯವಳಾದರೆ ಒಳ್ಳೆಯದನ್ನೇ ಮಾತಾಡುತ್ತೀ, ಒಳ್ಳೆಯದನ್ನೇ ಮಾಡುತ್ತೀ, ನಿನ್ನನ್ನು ನೋಡುವವರು, ನೀನು ಸೃಷ್ಟಿಸುವ ವಾತಾವರಣದಿಂದ ಪ್ರಭಾವಿತರಾಗುವವರು, ನಿನ್ನಿಂದ ಪ್ರಭಾವಿತರಾಗುವವರು ಹಲವರಿರುತ್ತಾರೆ, ಅವರು ನಿನ್ನನ್ನು ನೋಡಿ ಕಲಿಯುತ್ತಾರೆ… ನೀನು ಒಳ್ಳೆಯದು ಕೊಟ್ಟರೆ ಒಳ್ಳೆಯದೇ ಕಲಿಯುತ್ತಾರೆ, ಕೆಟ್ಟದು ಕೊಟ್ಟರೆ ಅವರೂ ಕೆಟ್ಟವರಾಗುತ್ತದೆ… ಜಗತ್ತಲ್ಲಿ ಎಲ್ಲಾ give and take.. ನಿನ್ನಲ್ಲಿ ಯಾವುದೇ ಕೆಟ್ಟತನವಿಲ್ಲದಾಗ ಜಗತ್ತು ನಿನಗೆ ಕೊಡಬಹುದಾದ ಕೆಟ್ಟತನದ ಪ್ರಮಾಣ ಕಡಿಮೆಯಾಗುತ್ತದೆ…”
ನನಗೆ ಯೋಚನೆ ಮಾಡಿದಾಗ ಇದು ತುಂಬಾ ಸತ್ಯವೆನಿಸಿತು… ನಾನು ಸೆಕ್ಯುಲಾರ್ ಅಂತ ಪೋಸ್ ಕೊಡಲಿಕ್ಕೋಸ್ಕರ ಖಂಡಿತಾ ಈ ವಾದ ಮಾಡುತ್ತಿಲ್ಲ. ನೀವೂ ಯೋಚನೆ ಮಾಡಿ.
~
ಸುಪ್ರೀತ್-
ಅಕ್ಕಾ,
ಭಾರಿ ಜೋರು ಚರ್ಚೆಯನ್ನು ಶುರು ಮಾಡಿರುವಿರಿ. ಇಂತಹ ವಿಷಯಗಳ ಬಗ್ಗೆ ಚರ್ಚೆಯನ್ನು ಶುರು ಮಾಡುವ ಧೈರ್ಯವನ್ನು ತೋರಿರುವುದು ನಿಜಕ್ಕೂ ಮೆಚ್ಚಬೇಕಾದ ಸಂಗತಿಯೇ.
ನಾನು ಸಂಪದ ಫೋರಮ್ಮಿನಲ್ಲಿ ಈ ಬಗ್ಗೆ ಕೆಲವು ಪ್ರತಿಕ್ರಿಯೆಗಳನ್ನು ಬರೆದಿರುವೆ. ಅವನ್ನು ಇಲ್ಲಿ ಕೊಟ್ಟರೆ ಚರ್ಚೆಗೆ ಸಹಾಯವಾಗಬಹುದು ಎಂದುಕೊಂಡಿರುವೆ.
ಹಿಂದೂ ಭಯೋತ್ಪಾದನೆ ಮುಸ್ಲಿಂ ಭಯೋತ್ಪಾದನೆ ಎಂಬುದರ ಬಗ್ಗೆ-
>> ಭಯೋತ್ಪಾದನೆ ಎಂಬುದಕ್ಕೆ ಧರ್ಮವಿಲ್ಲ. ಹಾಗೆಯೇ ನಮ್ಮ ದೇಶದ ಪೊಲೀಸರು, ಸೇನೆ, ನ್ಯಾಯಾಲಯ, ಮಾಧ್ಯಮ, ರಾಜಕೀಯಕ್ಕೂ ಅದಿರಬಾರದು.
(ವಿ.ಕದಲ್ಲಿನ ಚರ್ಚೆಯ ಬಗ್ಗೆ ಬರೆದ್ದಾದರೂ ಇದು ಇನ್ನೂ ಅನೇಕ ಧರ್ಮ ಸಂಬಂಧಿ ಚರ್ಚೆಗಳ ಬಗ್ಗೆ ಮಾತಡುವುದರಿಂದ ಇಲ್ಲಿ ಕೊಟ್ಟಿರುವೆ.
>> ಭೈರಪ್ಪನವರ ಲೇಖನಕ್ಕಿಂತ ಉಗ್ರವಾಗಿದೆ ನಿಮ್ಮ ಪ್ರತಿಕ್ರಿಯೆ.)
ಇರಲಿ, ಮೂಲಭೂತವಾದ ಪ್ರಶ್ನೆ ಇರುವುದು ಇಲ್ಲಿ… ಹಿಂದೂ ಧರ್ಮದವರು ಯಾರ್ಯಾರು? ಹಾಗೂ ಇಡೀ ಚರ್ಚೆಯಲ್ಲಿ ಕೇವಲ ಮೇಲ್ಜಾತಿಯ ಹಿಂದುಗಳೆನಿಸಿಕೊಂದವರು ಮತಾಂತರವನ್ನು ವಿರೋಧಿಸಿರುವುದು ಏಕೆ? ದಲಿತ ಚಿಂತಕರಾಗಲಿ, ಬ್ರಾಹ್ಮಣರಲ್ಲದ ಇತರ ಬಹುಸಂಖ್ಯಾತರಾಗಲೀ ಅಷ್ಟಾಗಿ ದನಿ ಎತ್ತದಿರುವುದು ಏತಕ್ಕಾಗಿ? ಬ್ರಾಹ್ಮಣರು ತಮ್ಮನ್ನು ತಾವು ಹಿಂದೂ ಧರ್ಮದ ನಾಯಕರು, ಮೌತ್ ಪೀಸ್‌ಗಳು ಎಂದುಕೊಂಡಿದ್ದಾರೆಯೇ? ಅಥವಾ ಬ್ರಾಹ್ಮಣರು ತಮ್ಮ ಜಾತಿಯನ್ನೇ ಹಿಂದೂ ಧರ್ಮ ಎಂದುಕೊಂಡಿದ್ದಾರೆಯೆ?
ಪೇಜಾವರರು ಮಾತಾಡಿರುವಷ್ಟು ಕಕ್ಕುಲತೆಯಿಂದ ಬಾಲಗಂಗಾಧರರಾಗಲಿ, ಮುರುಗ ಮಠದ ಸ್ವಾಮಿಯವರಾಗಲಿ ಏಕೆ ಮಾತಾಡಿಲ್ಲ? ಇದರ ಬಗ್ಗೆ ಏನೆನ್ನುವಿರಿ?
(ಹಿಂದೂ Vs others ಎಂಬ ಎಲ್ಲಾ ಬಗೆಯ ಚರ್ಚೆಗಳಲ್ಲಿ ನಾನು ಗಮನಿಸಿದ ಸಂಗತಿ)
>> ನನ್ನದು ನೇರವಾದ ಪ್ರಶ್ನೆ. ಹಿಂದೂ ಎಂದರೆ ಯಾರು?
ಮುಸಲ್ಮಾನರೆಂದರೆ ಕುರಾನ್ ಒಪ್ಪುವವರು, ಅಲ್ಲಾಹುವಿನಲ್ಲಿ, ಮೊಹಮ್ಮದ್‌ರಲ್ಲಿ ನಂಬಿಕೆ ಇಟ್ಟವರು, ಕ್ರೈಸ್ತರು ಬೈಬಲನ್ನು ನಂಬಿ ಯೇಸು ದೇವರ ಮಗ ಎಂದು ಒಪ್ಪಿಕೊಂಡವರು. ಅದರಲ್ಲಿ ನಾನಾ ಪಂಗಡಗಳಿವೆ, ಕೆಲವು ಕಡೆಯಲ್ಲಿ ಹಲವು ಒಡಕುಗಳು ಇವೆ. ಆದರೆ ಹಿಂದೂ ಎಂದರೆ ಯಾರು? ನಿಮ್ಮ ಪ್ರಕಾರ ವೇದಗಳನ್ನು ಒಪ್ಪುವವರು ಹಿಂದೂಗಳೇ(ಅವುಗಳಲ್ಲಿ ಏನಿದೆ ಎಂತಲೇ ಅನೇಕರಿಗೆ ಗೊತ್ತಿಲ್ಲ!)? ವೈದಿಕರು ಹೇಳುವ ಆಚರಣೆಗಳನ್ನು ಮಾಡುವವರೇ? ಯಾರು ಹಿಂದೂಗಳು?ಹಿಂದೂ ಎಂದು ಕರೆದುಕೊಳ್ಳುವವರಿಗೆ ಹುಟ್ಟಿದ ಮಕ್ಕಳು ಹಿಂದುಗಳಾಗುತ್ತಾರೆಯೇ? ಹಾಗಾದರೆ ಇಬ್ಬರು ನಾಸ್ತಿಕರ ಮಕ್ಕಳು ನಾಸ್ತಿಕನಾಗಿಬಿಡಬೇಕು !
ನಾನು ಉಳಿದ ಬಹುಸಂಖ್ಯಾತ ‘ಭಾರತವಾಸಿ’ಗಳಿಗೆ ಇಲ್ಲದ ಉಸಾಬರಿ ವೈದಿಕ ‘ಭಾರತೀಯರಿಗೆ’ ಯಾಕೆ ಎಂದು ಕೇಳಿದ್ದಕ್ಕೆ ಹಿಂದೂ ಎಂದರೆ ಯಾರು ಎನ್ನುವ ಪ್ರಶ್ನೆಯೇ ಮೂಲ.
>>ಸರ್ ನನ್ನದೊಂದು ಪ್ರಾಮಾಣಿಕ ಪ್ರಶ್ನೆ.
ನಾನು ಎಡಪಂಥದವನೂ ಅಲ್ಲ, ಬಲವೂ ಅಲ್ಲ. ಹಿಂದೂ ಚಿಂತನೆ, ಸಂಸ್ಕೃತಿ, ಪರಂಪರೆ ಎಂದರೆ ಯಾವುದು? ಒಂದು ವರ್ಗದ ಜನರು ನೂರಾರು ವರ್ಷಗಳಿಂದ ಹೇಳುತ್ತಾ ಬಂದ ಸಂಗತಿಗಳೇ? ವಿಹಿಂಪ, ಬಜರಂಗ ದಳ ಮುಂತಾದವನ್ನು ಬೆಂಬಲಿಸದವ, ಅವರು ಹೇಳಿದ್ದನ್ನು ಒಪ್ಪದವ ಹಿಂದೂ ಅಲ್ಲವೇ? ಹಿಂದೂ ಆಗುವುದಕ್ಕೂ ಒಂದು ಸಂಸ್ಥೆಯ ಸದಸ್ಯನಾಗುವುದಕ್ಕೂ ವ್ಯತ್ಯಾಸವಿಲ್ಲವೇ? ಸ್ವಯಂ ಘೋಷಿತ ಹಿಂದೂ ಪ್ರತಿನಿಧಿಗಳಾದ ಭೈರಪ್ಪನವರು, ಚಿದಾನಂದ ಮೂರ್ತಿಯವರು, ಪ್ರತಾಪ್ ಸಿಂಹರವರು ಹೇಳಿದ್ದನ್ನು ಒಪ್ಪದ ಕಾರಣಕ್ಕೆ ನಾವು ಅದು ಹೇಗೆ ಹಿಂದುಗಳಾಗುವುದಿಲ್ಲ ದಯವಿಟ್ಟು ತಿಳಿಸಬೇಕು.
ನಾನು ಗಮನಿಸಿರುವಂತೆ ಅನೇಕ ಹಿಂದೂಗಳು ಅಸಹ್ಯ ಪಡುವುದು ಈ ಸ್ವಯಂ ಘೋಷಿತ ಹಿಂದೂ ಪ್ರತಿನಿಧಿಗಳ ಬಗ್ಗೆ. ದ್ವೇಷಿಸುವುದು ಅವರನ್ನೇ ಹೊರತು ಹಿಂದೂ ಧರ್ಮ, ಸಂಸ್ಕೃತಿ, ಪರಂಪರೆಯನ್ನಲ್ಲ.
ಮತಾಂಧ ಮುಸ್ಲೀಂ ಸಂಘಟನೆಗಳನ್ನು ಮುಸ್ಲೀಮರು ಉಗ್ರವಾಗಿ ಖಂಡಿಸಬೇಕು ಎಂದು ಹೇಳುತ್ತೀರಲ್ಲವೇ? ಆ ಮತಾಂಧ ಸಂಘಟನೆಗಳು ಅವರ ದೃಷ್ಟಿಯಲ್ಲಿ ಅವರ ಧರ್ಮವನ್ನು ಎತ್ತಿ ಹಿಡಿಯುವ, ಅದರ ಸಂಸ್ಕೃತಿಯನ್ನು ಮೆರೆಸುವ ಉದ್ದೇಶ ಉಳ್ಳವರೇ. ಅವರನ್ನು ವಿರೋಧಿಸುವವರು ನಿಜವಾದ ಮುಸ್ಲೀಮರು, ನಿಜವಾದ ಭಾರತೀಯರು ಆಗುತ್ತಾರೆಂದರೆ ಹಿಂದೂ ಪ್ರತಿನಿಧಿಗಳಾದವರು ಮತಾಂಧರಂತೆ ವರ್ತಿಸುವಾಗ (ಚರ್ಚ್ ಮೇಲೆ ದಾಳಿಯನ್ನು ನಡೆಸಿದವರು ನಾವೇ ಎಂದು ಬಜರಂಗದಳದ ಸಂಚಾಲಕ ಮಾಧ್ಯಮದ ಮುಂದೆ ಹೇಳಿದರೂ ದಾಳಿಗಳು ಪ್ರತಿಕ್ರಿಯೆಯಾಗಿದ್ದವು ಎಂದು ಭೈರಪ್ಪ ಹೇಳಿದಾಗ ) ಅದನ್ನು ವಿರೋಧಿಸದವರು ನಿಜವಾದ ಹಿಂದೂಗಳು ಹೇಗಾಗುತ್ತಾರೆ, ನಿಜವಾದ ಭಾರತೀಯರು ಹೇಗಾಗುತ್ತಾರೆ? ಇಲ್ಲೇ ನಿಮಗೆ ನಿಮ್ಮ ಚಿಂತನೆಯಲ್ಲಿರುವ ಡೈಕಾಟಮಿ ಗೋಚರಿಸಬಹುದು.
ನನ್ನ ಮಾತುಗಳು ಅತಿರೇಕವೆನ್ನಿಸಿದರೆ ಮನ್ನಿಸಿ…
ಭಯೋತ್ಪಾದನೆಯೆಂಬುದೇನು ಹಾಗೂ ಇದಕ್ಕೆ ಧರ್ಮಕ್ಕೆ ಇರುವ ಸಂಬಂಧ ಎಂಥದ್ದು?
>>ಪ್ರತ್ಯೇಕತಾವಾದಕ್ಕೂ ಭಯೋತ್ಪಾದನೆಗೂ ನಾನು ವ್ಯತ್ಯಾಸಗಳನ್ನು ಗುರುತಿಸುತ್ತೇನೆ. ಉಲ್ಫಾದ ಉಗ್ರನೊಬ್ಬ ಬೆಂಗಳೂರಿನಲ್ಲಿ ನಾಲ್ಕು ಬಾಂಬುಗಳನ್ನು ನೆಟ್ಟು ಭಯ ಹರಡುವುದರಿಂದ ಏನನ್ನೂ ಪಡೆಯುವುದಿಲ್ಲ. ಹಾಗೆಯೇ ಎಲ್.ಟಿ.ಟಿ.ಇಯು ಸಹ ತಮ್ಮ ಧ್ಯೇಯೋದ್ದೇಶಕ್ಕೆ ಸಂಬಂಧಿಸದ ಹಿಂಸೆಯಲ್ಲಿ ತೊಡಗುವುದಿಲ್ಲ. ಹೀಗಾಗಿ ಅವನ್ನು, ನಕ್ಸಲೀಯರನ್ನು ಉಗ್ರವಾದಿಗಳು ಎನ್ನಬಹುದು. ಆದರೆ ಭಯೋತ್ಪಾದನೆಗೆ ಅಜೆಂಡಾ ಇರುವುದಿಲ್ಲ. ಭಯ ಉಂಟು ಮಾಡುವುದು ನೆಮ್ಮದಿಯನ್ನು ಕದಡುವುದು ಅಷ್ಟೇ ಅವರ ಉದ್ದೇಶ.
ದುರದೃಷ್ಟವಶಾತ್ ಒಂದು ಭಯೋತ್ಪಾದನೆಯ ಕ್ರಿಯೆಗೆ ಮತ್ತೊಂದಿ ಭಯೋತ್ಪಾದಕ ಪ್ರತಿಕ್ರಿಯೆ ಹುಟ್ಟಿಕೊಂಡಿರುವುದು ಸಮಾಜದ ನೆಮ್ಮದಿಗೆ ಘಾತಕವಾದದ್ದು.
ಟೆರರಿಸ್ಟರನ್ನು ಅವರ ಧರ್ಮದ ಆಧಾರದ ಮೇಲೆ ಗುರುತಿಸುವುದು ನಿಜ. ಆದರೆ ನಮ್ಮ ದೇಶದಲ್ಲಿ ಬಾಂಬು ಸಿಡಿಯುವ ಮೊದಲೇ ಸಿಡಿಸಿದವನು ಈ ಧರ್ಮದವನು ಎಂದು ಗುರುತಿಸಿಬಿಡುತ್ತಾರೆ. ಆ ಮೇಲೆ ತನಿಖೆ, ನಾಲ್ಕು ಮಂದಿಯನ್ನು ಮುಖಕ್ಕೆ ಮುಸುಕು ಹಾಕಿ ಮಾಧ್ಯಮದ ಮಂದಿಗೆ ಪರಿಚಯಿಸುವುದು… ಇವೆಲ್ಲ ನಡೆಯುತ್ತದೆ. ಹೀಗಾಗಿ ಭಯೋತ್ಪಾದನೆಗೆ ಧರ್ಮವಿಲ್ಲ, ಆದರೆ ಭಯೋತ್ಪಾದಕರಿಗೆ ಧರ್ಮವಿದೆ ಎನ್ನಬಹುದು ಏಕೆಂದರೆ ಅವರಿಗೆ ಧರ್ಮವೇ ಭಯೋತ್ಪಾದನೆಯ ಪ್ರೇರಣೆ.
ಪ್ರತ್ಯೇಕತಾವಾದ ಸಾಮಾನ್ಯವಾಗಿ ಭೌಗೋಳಿಕ ಸೀಮೆಯ ತಕರಾರಿಗೆ ಸಂಬಂಧಿಸಿದ್ದು. ಅಲ್ಲಿ ಧರ್ಮದ ಐಡಿಯಾಲಜಿ ಕೆಲಸ ಮಾಡದು. ಹಾಗೆಯೇ ಎಲ್.ಟಿ.ಟಿ.ಇ ನದ್ದು ಎಥ್ನಿಕ್ ತಕರಾರು…
(ಸಾಧ್ವಿ, ಪಾಂಡೆಯವರ ಕೃತ್ಯದ ಸಮರ್ಥನೆಯ ಬಗ್ಗೆ)
>>ನೀವು ತುಂಬಾ ಡಿಸ್ಟರ್ಬ್ ಆಗಿರುವಂತಿದೆ.
ಭಯೋತ್ಪಾದನೆ ಸಾಹಸ ಕೃತ್ಯವಲ್ಲ. ಅದು ಅತಿ ಹೀನ ಹೇಡಿ ಕೃತ್ಯ. ಮರೆಯಲ್ಲಿ ನಿಂತು ಮುಗ್ಧ ಮಕ್ಕಳು, ಮಹಿಳೆಯರು, ಅಮಾಯಕರು ತಮಗೆ ಯಾವ ರೀತಿಯಲ್ಲೂ ಸಮಾನರಲ್ಲದವರ ಮೇಲೆ ಬಾಂಬ್ ಎಸೆದು ಅದನ್ನು ಸಾಹಸ ಕೃತ್ಯ ಎಂದು ಕರೆದುಕೊಳ್ಳುವವರು ವಿಕೃತರು ಅಷ್ಟೇ. ಆತ ಯಾವ ಧರ್ಮದವನೇ ಆಗಿರಲಿ, ಮುಗ್ಧರ ಹತ್ಯೆ, ವಿವೇಕವಿಲ್ಲದ ಅತಿರೇಕ ವಿಕೃತವೇ. ಮಹಮ್ಮದ್ ಅಫ್ಜಲ್ ಗುರುವಿನಷ್ಟೇ ವಿಕೃತರು ಪುರೋಹಿತ್ ಹಾಗೂ ಸಾಧ್ವಿ.
ನಮಗ್ಯಾರಿಗೂ ಅವರು ಹೀರೋಗಳಂತೆ ಕಾಣುತ್ತಿಲ್ಲ. Pardon me!
>> ಸರ್ ನೀವಿನ್ನೂ ವಿಭಜನೆ ನಡೆದ ಕಾಲದಲ್ಲಿದ್ದೀರಿ. ನಮಗೆ ನಿಮ್ಮ ಯಾವ ಪ್ರತೀಕಾರಗಳ ಬಗ್ಗೆಯೂ ಕಾಳಜಿಯಿಲ್ಲ. ನಾನು ಹಾಗು ನನ್ನಂಥವರು ಹುಟ್ಟಿದ್ದು ಗಾಂಧಿ ಗೋಡ್ಸೆಯರೆಲ್ಲಾ ಸತ್ತ ನಂತರ. ನಮಗೆ ನಮ್ಮ ಕಾಲದ ಭಾರತ ಬೇಕು, ಇತಿಹಾಸದ ಕೆಡು ಕನಸುಗಳಲ್ಲಿ ಸಿಕ್ಕು ನಲುಗುತ್ತಿರುವ ಭಾರತವಲ್ಲ.
ಗಾಬರಿಯಾಗಬೇಡಿ, ನಾನು ಅತಿರೇಕಿ ಹಿಂಸೆಯನ್ನು ಬೆಂಬಲಿಸುವಷ್ಟು ಡಿಸ್ಟರ್ಬ್ ಎಂದೂ ಆಗುವುದಿಲ್ಲ
>> ಭಾರತದಲ್ಲಿ ನಡೆದ ಬಾಂಬ್ ಸ್ಪೋಟಗಳನ್ನು ನಡೆಸಿದವರು ಸಮ್‌ಜೋತಾ ಎಕ್ಸ್ ಪ್ರೆಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪಾಕಿಸ್ತಾನದ ಪ್ರಜೆಗಳು ಎಂದೂ, ಮಲೆಗಾಂವ್ ಸ್ಪೋಟದಲ್ಲಿ ಸತ್ತ ಆರು ಮಂದಿ ಬಾಂಬ್ ಸ್ಪೋಟಗಳ ಹಿಂದಿನ ಮಾಸ್ಟರ್ ಮೈಂಡ್‌ಗಳೆಂದು ಎಲ್ಲಾದರೂ ವರದಿಯಾಗಿದೆಯೇ?
ಕ್ರಿಯೆಗೆ ಪ್ರತಿಕ್ರಿಯೆಯಂತೆ! ಬಾಂಬ್ ಸಿಡಿದಿದವರು ಯಾರು… ಅದಕ್ಕೆ ಈ ಅವಿವೇಕಿಗಳು(ವಿವೇಕವಿಲ್ಲದವರು) ಪ್ರತೀಕಾರ ತೀರಿಸಿಕೊಂಡದ್ದು ಯಾರ ಮೇಲೆ?
(“ಈಗಿನ ಯುವ ಜನರ ಮನಸ್ಥಿತಿಗೆ ಕನ್ನಡಿ ನೀವು ಎಂದರೆ ತಪ್ಪಿಲ್ಲ. ಕಾರಣ ಕಂಪ್ಯೂಟರ್ ಮುಂದೆ ಕೂತು ವೇದಾಂತಗಳನ್ನು ಎಷ್ಟಾದರೂ ಹೇಳಬಹುದು ಸ್ವಾಮಿ.. ಅದೇ ಮುಸ್ಲಿಮ್ ಭಯೋತ್ಪಾದಕರಿಂದ ನಡೆಯುವ ಬಾಂಬ್ ದಾಳಿಗಳಲ್ಲಿ ನಿಮ್ಮ ಕುಟುಂಬದವರು ಯಾರಾದರು ಸತ್ತಾಗ, ಅದರ ವಿರುದ್ದ ಸರ್ಕಾರವಾಗಲಿ ಅಥವಾ ಯಾರು ಹೋರಾಡದೆ ಹೋದಾಗ ನಿಮಗೆ ಗೊತ್ತಾಗುತ್ತದೆ ಆ ಕಷ್ಟ ಏನು ಅಂತ.” ಎಂಬ ಆರೋಪಕ್ಕೆ ಉತ್ತರ)
>> ನಿಮ್ಮ ಮೊದಲ ವಾಕ್ಯ ಸತ್ಯವಾಗಿದ್ದರೆ ನಮ್ಮ ದೇಶ ಅದೆಷ್ಟು ನೆಮ್ಮದಿಯಿಂದಿರುತ್ತಿತ್ತು ಅಲ್ಲವೇ? ಯಾವುದೋ ಕಾಲದಲ್ಲಿ ನಡೆದ ದೇವಾಲಯ ಧ್ವಂಸ, ನಾವು ಕಂಡಿರದ ವಿಭಜನೆಯ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲು ನಿಮಗೆ ನಮ್ಮಂತಹ ಯುವಕರ ಬಿಸಿ ರಕ್ತಬೇಕು. ನನ್ನಂತೆ ಎಲ್ಲರೂ ನಮಗೇಕೆ ಬೇಕು ಹಿಂಸೆ ಎಂದಿದ್ದರೆ ಸಾಬರಮತಿ ಎಕ್ಸ್‌ಪ್ರೆಸ್ಸು ಹೊತ್ತಿ ಉರಿಯುತ್ತಿರಲಿಲ್ಲ, ಗೋಧ್ರಾ ಘಟಿಸುತ್ತಿರಲಿಲ್ಲ, ಇಷ್ಟು ಬಾಂಬುಗಳು ಸಿಡಿಯುತ್ತಿರಲಿಲ್ಲ.
ಇರಲಿ, ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ನಾವೆಷ್ಟು ಇಲ್ಲಾಜಿಕಲ್ ಆಗುತ್ತೇವೆ ಎಂಬುದಕ್ಕೆ ನೀವು ಮಾಡಿರುವ ಪರ್ಸನಲ್ ರೆಫರೆನ್ಸ್ ಸಾಕ್ಷಿ. ನನ್ನ ಪರಿಚಿತರು, ಗೆಳೆಯರು, ಸಂಬಂಧಿಕರು ಬಾಂಬ್ ಸ್ಪೋಟದಲ್ಲಿ ಸತ್ತರೆ, ನನಗೆ ಸೂಕ್ತ ನ್ಯಾಯ ಸಿಕ್ಕದಿದ್ದರೆ ನಾನೇನು ಮಾಡಬೇಕು? ಇನ್ನಷ್ಟು ಮಂದಿಯ ಬಲಿ ತೆಗೆದುಕೊಳ್ಳಲು ಬಾಂಬು ಸಿಡಿಸಬೇಕೆ? ಒಬ್ಬನ್ಯಾವನೋ ಕಾರಿನವನು ನನ್ನ ತಮ್ಮನನ್ನು ಅಪಘಾತದಲ್ಲಿ ಕೊಂದ ಎಂದರೆ ನಾನು ದೇಶದಲ್ಲಿರುವ ಎಲ್ಲಾ ಕಾರುಗಳ ಗಾಜು ಒಡೆಯಬೇಕೆ?
ಭಗತ್ ಸಿಂಗ್, ಚಂದ್ರಶೇಖರ್ ಆಜಾದ್‌ರನ್ನು ತಪ್ಪು ತಪ್ಪಾಗಿ ಕೋಟ್ ಮಾಡುವ ಮೊದಲು ಅವರ ಬಗ್ಗೆ ಸರಿಯಾಗಿ ತಿಳಿಯಿರಿ. ಒಂದು ಬಾಂಬು ಎಸೆಯುವ ಮೊದಲು ನೂರು ಬಾರಿ ಆಲೋಚನೆ ಮಾಡಿ ಕನಿಷ್ಠ ಹಾನಿಯಾಗುವಂತೆ ಎಸೆದವ ಭಗತ್ ಸಿಂಗ್. ಆತನೇನು ಆಕಾಶದಿಂದ ಇಳಿದು ಬಂದವನಲ್ಲ. ನಮ್ಮಂತೆಯೇ ಇದ್ದ ಒಬ್ಬ ಯುವಕ. ಬಹುಶಃ ಆತ ಈಗ ಇದ್ದರೂ ಹುಚ್ಚುಚ್ಚಾಗಿ ಬಾಂಬು ಸಿಡಿಸಿ ಅಮಾಯಕರನ್ನು ಬಲಿ ತೆಗೆದುಕೊಂಡು ಅದನ್ನು ದೇಶ ಭಕ್ತಿ, ಶೌರ್ಯ ಎಂತೆಲ್ಲಾ ಹೆಮ್ಮೆ ಪಡುತ್ತಿರಲಿಲ್ಲ.
ರಂಗ್ ದೇ ಬಸಂತಿ ಬಗ್ಗೆ ನನಗೆ ಅನೇಕ ತಕರಾರುಗಳಿವೆ. ಬಂದೂಕು ಎಲ್ಲದಕ್ಕೂ ಉತ್ತರವಾಗುವುದಾಗಿದ್ದರೆ ಇಷ್ಟೊತ್ತಿಗೆ ನಾವು ನಕ್ಸಲ್ ಮುಖ್ಯಮಂತ್ರಿಯನ್ನೂ, ಪ್ರತ್ಯೇಕತಾವಾದಿ ಮುಖಂಡ ಪ್ರಧಾನಿಯನ್ನೂ ಹೊಂದಿರಬೇಕಾಗುತ್ತಿತ್ತು.
>>> ನಾವು ಆರಿಸಿ ತಂದಿರುವ ಸರಕಾರದಿಂದ ನಮಗೆ ನ್ಯಾಯ ದೊರೆಯುತ್ತಿಲ್ಲ ಎಂಬುದು ಇಳಿದರೆ ಸರಕಾರವನ್ನು ಇಳಿಸುವ ಶಕ್ತಿಯೂ ನಮ್ಮ ಕೈಯಲ್ಲೇ ಇದೆ. ಹೀಗಾಗಿ ನಾವು ನಮ್ಮ ವ್ಯವಸ್ಥೆಯನ್ನು ಗೌರವಿಸುತಲೇ, ಅದರ ನಿರಂತರತೆಯನ್ನು ಬೆಂಬಲಿಸುತ್ತಲೇ ಬದಲಾವಣೆಗಳಿಗೆ ಕೈ ಹಾಕಬೇಕು. ಮತಾಂತರ ಹೇಗೆ ಸಮಸ್ಯೆಯಾಗುತ್ತಿದೆ ಎಂಬುದನ್ನು ಈ ನಿಟ್ಟಿನಿಂದ ಆಲೋಚನೆ ಮಾಡಿ ತಿಳಿಯುವುದು ಸೂಕ್ತವಾದದ್ದು. ಅಂದರೆ ಮತಂತರದಿಂದ ಸಮಾಜದ ಫ್ಯಾಬ್ರಿಕ್ ಯಾವ ರೀತಿ ಒಡೆಯುತ್ತಿದೆ ಎಂಬುದನ್ನು ನಮ್ಮ ಭೈರಪ್ಪ ಮುಂತಾದ ರಿಸರ್ಚ್ ಬೇಸ್ಡ್ ಬರಹಗಾರರು ವಿವರಿಸಿದ್ದರೆ ಅದಕ್ಕಿಂತ ಶ್ರೇಷ್ಠ ಕಾರ್ಯ ಬೇರೊಂದು ಇರುತ್ತಿರಲಿಲ್ಲ. ಆಗ ಅಪ್ಪನಿಗಿಂತ ಲಕ್ಷಾಂತರ ರೂಪಾಯಿ ಹೆಚ್ಚು ಸಂಪಾದನೆ ಮಾಡುವ ಮಗನನ್ನು ಸೃಷ್ಟಿ ಮಾಡುವ ಆರ್ಥಿಕ ವ್ಯವಸ್ಥೆ, ಹಳ್ಳಿ ಹುಡುಗನ ಬೇರುಗಳನ್ನು ಕತ್ತರಿಸಿ ಹಾಕಿ ಆತನನ್ನು ಹೈದನಿಂದ ನಾಗರೀಕರನ್ನಾಗಿಸುವ ನಗರ ವ್ಯವಸ್ಥೆ, ಶಿಕ್ಷಣ ಪದ್ದತಿ ಎಲ್ಲವನ್ನೂ ಸಹ ನಾವು ಸಮಾಜದ ಫ್ಯಾಬ್ರಿಕ್ ಕೆಡಿಸುವ ಶಕ್ತಿಗಳಾಗಿ ಗುರುತಿಸಬಹುದಿತ್ತು. ಅನಂತರ ಇವೆಲ್ಲಕ್ಕೂ ಪರಿಹಾರವಾಗಬಲ್ಲ ಕಾನೂನು ರೂಪಿಸುವಂತೆ ಆಗ್ರಹಿಸಬಹುದಿತ್ತು. ಆದರೆ ನಮ್ಮಲ್ಲಿ ನಡೆದದ್ದು ತದ್ವಿರುದ್ಧದ ಪ್ರಶ್ನೆ. ಕ್ರೈಸ್ತರು ಎಲ್ಲಾ ವಿಧದಲ್ಲೂ ಹಿಂದೂಗಳಿಗಿಂತ ಕನಿಷ್ಟರು, ಅವರ ಧರ್ಮ ನಮ್ಮದರ ಮುಂದೆ ಏನೂ ಅಲ್ಲ. ಅವರ ಧರ್ಮ ಉಳಿದುಕೊಳ್ಳುವ ಬಾಳುವ ಅರ್ಹತೆಯೇ ಇಲ್ಲದ್ದು. ಅವರು ಮತಾಂತರಿಸುತ್ತಿರುವುದು ತಪ್ಪು ಎಂದು ಎಲ್ಲರೂ ಮಾತನಾಡುತ್ತಿದ್ದಾರೆ.
>>> ನಿಮ್ಮ ವಾದವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಭಾರತದಲ್ಲಿರುವವರೆಲ್ಲರೂ ಹಿಂದೂಗಳು ಎಂಬುದು ನಿಮ್ಮ ವಾದ. ಹಾಗೆ ನೋಡಿದರೆ ಹಿಂದೂ ಯಾವ ಧರ್ಮದವನು ಬೇಕಾದರೂ ಆಗಬಲ್ಲ, ಆತ ಅಲ್ಲಾಹುವನ್ನು , ಯೇಸುವನ್ನು ಪ್ರಾರ್ಥಿಸಬಲ್ಲ ಎಂಬ ಬಗೆಯ ವಾದವನ್ನೊಳಗೊಂಡ ಲೇಖನವನ್ನು ನಾನೇ ಹಿಂದೆ ಬರೆದಿದ್ದೆ. ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿರುವಂತೆ ಹಿಂದೂ ಎನ್ನುವುದು ಒಂದು ಜೀವನ ಪದ್ಧತಿ, ಅದು ಧರ್ಮವಲ್ಲ ಎಂಬುದನ್ನೂ ಒಪ್ಪಿಕೊಳ್ಳೋಣ.
ನಮ್ಮ ದೇಶದಲ್ಲಿರುವುದು ಜಾತಿಗಳು ಮಾತ್ರ. ಧರ್ಮವೆಂಬುದರ ಆವಶ್ಯಕತೆ ನಮಗೆ ಇಲ್ಲ. ಅಲ್ಲದೆ ಒಬ್ಬನೇ ದೇವರು ಇರುವ ಮಾನೊಥಿಸ್ಟಿಕ್ ಧರ್ಮದ ಬೆಳವಣಿಗೆಗೆ ನಮ್ಮ ದೇಶ ಸಹಕಾರಿಯಲ್ಲ. ನಮ್ಮ ಜೀವನ ಪದ್ಧತಿಯೂ ಸಹಕಾರಿಯಲ್ಲ.
ನಿಮ್ಮ ವಾದದ ಪ್ರಕಾರವೇ ಭಾರತೀಯರೆಲ್ಲರೂ ಹಿಂದೂಗಳು ಎಂದು ಹೇಳುವ ಲಾಜಿಕ್ ಬಳಸಿದರೆ ನೇಪಾಳ ಹಿಂದೂ ರಾಷ್ಟ್ರ ಎಂದು ಹೇಳುವುದು ಅಪರಾಧವಾಗುತ್ತದೆ ಏಕೆಂದರೆ ಅದು ಭಾರತದ ಭಾಗವಲ್ಲ. ಅದು ಸರ್ವ ಸ್ವತಂತ್ರವಾದ ರಾಷ್ಟ್ರ. ಹಾಗೆಯೇ ಇತರ ದೇಶಗಳಲ್ಲಿ ನೂರಾರು ವರ್ಷಗಳಿಂದ ವಾಸಿಸುತ್ತಿರುವವರನ್ನು ಹಿಂದೂ ಎನ್ನಲು ಸಾಧ್ಯವಿಲ್ಲ. ಅವರ್ಯಾರೂ ಹಿಂದು ಆಗುವುದಿಲ್ಲ.
ಇದು ಅಷ್ಟು ಸುಲಭಕ್ಕೆ ಬಗ್ಗುವ ವಿಷಯವಲ್ಲ ಬಿಡಿ…
ಚೇತನಾ-
ಶ್ರೀ,
ನಿಜವಾಗ್ಲೂ ನನಗೆ ಈಗ ಸಮಾಧಾನವಾಯ್ತು. ಕಳೆದ ಕಮೆಂಟಿನಲ್ಲಿ ನೀವು ವಿಷಯ ವಸ್ತುವಿನ ಬದಲು ನನ್ನವೈಯಕ್ತಿಕತೆಯ ಮೇಲೆ ಆರೋಪ ಮಾಡಿದ್ದಿರಿ. ನನಗದು ಸಹನೆಯಾಗಿರಲಿಲ್ಲ. ಇಷ್ಟು ಸೂಕ್ಷ್ಮವಾಗಿ ವಿವರಣೆ ನೀಡಬಲ್ಲ ನೀವು ಇಲ್ಲಿ ತೆರೆದುಕೊಂಡಿದ್ದು ಸಂತೋಷ. ನೀವು ಇಲ್ಲಿನ ಪ್ರತಿಕ್ರಿಯೆಯಲ್ಲಿ ಮನ ನೋಯಿಸುವ, ಕೆರಳಿಸುವ ಯಾವುದೇ ಮಾತನ್ನು ಆಡದೆ ನಿಮ್ಮ ಸಹಜ – ಸೌಹಾರ್ದ ಚಿಂತನೆಯನ್ನು ಹಂಚಿಕೊಂಡಿದ್ದೀರಿ. ನಿಮಗೆ ನನ್ನ ಎದುರಿಲ್ಲ. ಸಿದ್ಧಾಂತಗಳು ಬೇರೆಬೇರೆಯಾದರೂ ಜೀವ ಪರ ನಿಲುವು ನನ್ನದೂ ನಿಮ್ಮದೂ ಆಗಿದೆ. ಆದರೆ ನೀವು ನನ್ನದನ್ನು ಜೀವ ವಿರೋಧಿ ನಿಲುವೆಂದರೆ ನಾನು ಹೊಣೆಗಾರಳಲ್ಲ. ನನಗೆ ಸ್ವಂತದ ನೆಮ್ಮದಿಯ ಬದುಕಿನೊಂದಿಗೆ ರಾಷ್ಟ್ರದ ಅಸ್ಮಿತೆಯೂ ಮುಖ್ಯವಾಗುತ್ತದೆಯಾದ್ದರಿಂದ ಇಂತಹ ವಿಷಯಗಳಲ್ಲಿ ನನ್ನ ಅಭಿಪ್ರಾಯಗಳನ್ನು ನಿಖರವಾಗಿ ಹೇಳುವ ಪ್ರಯತ್ನ ಮಾಡುತ್ತೇನಷ್ಟೆ.
ಸ್ನೇಹವಿರಲಿ. ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ.
ಸುಪ್ರೀತ್,
ನೀನು ನೀಡಿರುವ ಸಂಭಾಷಣೆ/ ಪ್ರತಿಕ್ರಿಯೆಗಳು ಬಹಳ ಸಹಾಯಕಾರಿಯಾದವು. ಇದನ್ನು ಓದಿದ ಮೇಲೂ ನಮ್ಮ ನಿಲುವನ್ನು ಅರ್ಥೈಸಿಕೊಳ್ಳದೆ ನಮ್ಮನ್ನು ಮತಾಂಧರು ಎಂದು ಯಾರಾದರೂ ಜರಿದರೆ ಅದು ಅವರ ಹಣೆಬರಹ.
ಮೊನ್ನೆ ವಿ.ಕ. ದಲ್ಲಿ ರಾಮಾ ಜೋಯಿಸರ ಲೇಖನ ಓದಿದಾಗ ಜಿಗುಪ್ಸೆ ಹುಟ್ಟಿತ್ತು. ಮಾಲೇಗಾಂವ್ ಸ್ಫೋಟವನ್ನು ಸಮರ್ಥಿಸಿಕೊಂಡು, ಅವರಿಗೆಲ್ಲ ಕ್ರಾಂತಿಕಾರಿಗಳ ಪಟ್ಟ ಕಟ್ಟಿದ್ದು ಸ್ವಲ್ಪ ಕೂಡ ಸರಿಬೀಳಲಿಲ್ಲ. ಅದಕ್ಕೆ ಪ್ರತಿಕ್ರಿಯಿಸಬೇಕನ್ನುವಷ್ಟರಲ್ಲೇ ಈ ಅನಾಹುತ ಮನಸ್ಸನ್ನು ಬೇರೆಡೆಗೆ ತಿರುಗಿಸಿತು.
ಕ್ಲಾರಿಫಿಕೇಶನ್ನು…
ಭಾರತದಲ್ಲಿನ ಭಯೋತ್ಪಾದನೆ ‘ಮುಸ್ಲಿಮ್’ ಭಯೋತ್ಪಾದನೆಯೆಂದು ಕರೆಯಲ್ಪಡುವುದು ಏಕೆ?
ಹೌದು. ಭಯೋತ್ಪಾದಕತೆಯನ್ನು ಜಾತಿವಾರು ವಿಂಗಡಿಸುವುದು ಮೂರ್ಖತನ. ಕ್ರೌರ್ಯಕ್ಕೆ ಜಾತಿಯಿಲ್ಲ ಎನ್ನುವುದು ಸತ್ಯಸ್ಯ ಸತ್ಯ. ಮಾಲೇಗಾಂವ್ ಸ್ಫೋಟವನ್ನು ‘ಭಾರತದ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಅನ್ನುವುದನ್ನು ಬಿಟ್ಟು ‘ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಎಂದು ಸಮರ್ಥಿಸಿಕೊಂಡರೆ ಅದು ಹಿಂದೂ ಭಯೋತ್ಪಾದನೆಯಾಗುತ್ತದೆ. ಹಾಗೆಯೇ ಮುಸ್ಲಿಮರು ‘ಮುಸ್ಲಿಮರ ಮೇಲಿನ ದೌರ್ಜನ್ಯಕ್ಕೆ ಪ್ರತಿಕ್ರಿಯೆ’ ಎಂದು ಸ್ಪೆಸಿಫೈ ಮಾಡಿದಾಗ ಅದು ‘ಮುಸ್ಲಿಮ್ ಭಯೋತ್ಪಾದನೆ’ಯಾಗುತ್ತದೆ. ಯಾಕೋ ಮುಸ್ಲಿಮ್ ಭಯೋತ್ಪಾದಕರು ಹಾದಿ ತಪ್ಪಿದ ಮಕ್ಕಳಂತಾಗಿದ್ದಾರೆ. ಮಾತೆತ್ತಿದರೆ ನಮ್ಮ ಮೇಲಿನ ದೌರ್ಜನ್ಯ ಎನ್ನುತ್ತಾರೆ. ಹಾಗೆಂದು ನಮ್ಮ ಬುದ್ಧಿ ಜೀವಿಗಳೂ ನಿರಂತರವಾಗಿ ನಂಬಿಸಿಕೊಂಡು ಬಂದಿದ್ದಾರೆ. ನಿಜ ಹೇಳಿ. ನಮ್ಮ ಭಾರತದಲ್ಲಿ ‘ಮುಸ್ಲಿಮ್’ ಎನ್ನುವ ಕಾರಣಕ್ಕೆ ದೌರ್ಜನ್ಯ ನಡೆದ ಉದಾಹರಣೆ ಎಷ್ಟಿದೆ? ನಮ್ಮಲ್ಲಿ ದಲಿತರ ಮೇಲೆ, ಬಡ- ಮಧ್ಯಮ ವಅರ್ಗದ ಮೇಲೆ ನಿರಂತರ ಆಘಾತ ನಡೆಯುತ್ತಲೇ ಇವೆ. ಮತ್ತಿದು ಜಾತ್ಯತೀತವಾಗಿ ನಡೆಯುತ್ತಿದೆ ಹೊರತು, ಮುಸ್ಲಿಮ್ ಬಡವ, ಹಿಂದೂ ಬಡವ ಎಂಬ ವಿಂಗಡಣೆಯ ಮೇಲಲ್ಲ. ನಮ್ಮ ದೇಶದ ಅನ್ನ ತಿಂದು, ನಮ್ಮ ದೇಶವಾಸಿಗಳನ್ನೇ ಕೊಲ್ಲುತ್ತಿರುವ ಇವರನ್ನು ಬಂಧಿಸಿದ ಕೂಡಲೆ, ನಮ್ಮ ಮೇಲಿನ ದೌರ್ಜನ್ಯ ಇದು ಎಂದು ಅರಚುವುದು ಯಾವ ನ್ಯಾಯ? ಇದನ್ನು ಸಾವಧಾನದಿಂದ ಚಿಂತಿಸಿ ಉತ್ತರಿಸುವ ವ್ಯವಧಾನ ಭಯೋತ್ಪಾದನೆ ‘ನೊಂದ ಮುಸ್ಲಿಮರ ಕೃತ್ಯ’ ಎಂದು ಸಮರ್ಥಿಸಿಕೊಳ್ಳುವ ಮಂದಿಗೆ ಇದೆಯೇ?
ಭಾರತದ ಜನ ಸಾಮಾನ್ಯರು ಮುಸ್ಲಿಮರನ್ನು ಅನುಮಾನದ ಕಣ್ಣುಗಳಿಂದ ನೋಡುತ್ತಾರೆ.
- ಇಂತಹದೊಂದು ಸುಳ್ಳನ್ನು ಮುಸ್ಲಿಮರ ತಲೆಯಲ್ಲಿ ತುಂಬುತ್ತಿರುವ ವಿಷ ಜಂತುಗಳಿಗೆ ಧಿಕ್ಕಾರ. ಈ ಮಾತಿಗೆ ಕೆಲವು ಅಪವಾದಗಳಿವೆ. ತಮ್ಮನ್ನು ತಾವು ‘ಹಿಂದೂ’ಗಳೆಂದು ಕರೆದುಕೊಳ್ಳುವ ಕೆಲವು ಸಂಘಟನೆಗಳು ಭಾರತದ ಮುಸ್ಲಿಮರನ್ನೆಲ್ಲ ಹೊಡೆದೋಡಿಸಬೇಕೆನ್ನುವಂತಹ ಅಸಹ್ಯದ ಮಾತುಗಳನ್ನಾಡುತ್ತಿರುತ್ತಾರೆ. ಅವರಿಗೂ ಧಿಕ್ಕಾರ. ಇಂತಹ ತಲೆಹಿಡುಕರನ್ನು ಸಮಸ್ತ ಭಾರತದ ಪ್ರತಿನಿಧಿಗಳು ಎಂದು ತಮ್ಮಷ್ಟಕ್ಕೆ ತಾವು ಗ್ರಹಿಸಿಕೊಂಡು ಸಮಸ್ತ ಹಿಂದೂಗಳ ಮೇಲೆ ಗೂಬೆ ಕೂರಿಸುವ ಹೊಣೆಗೇಡಿಗಳಿಗೂ ನನ್ನ ಧಿಕ್ಕಾರವಿದೆ.
ಹೀಗೆ ಅರೋಪ ಹೊರಿಸುವವರು ಒಂದು ನಿಮಿಷ ಯೋಚಿಸಬೇಕು. ‘ವಂದೇ’, ‘ಹಿಂದೂ’, ‘ರಾಷ್ಟ್ರ’- ಎಂದೆಲ್ಲ ಮಾತಾಡುವ ಪ್ರತಿಯೊಬ್ಬನನ್ನೂ ‘ಕೋಮುವಾದಿ’ ಎಂದು ಗುರುತಿಸುವಿರಾದರೆ; ‘ಭಯೋತ್ಪಾದಕರನ್ನು ಗಲ್ಲಿಗೇರಿಸಬೇಡಿ’ ಎಂದು ಬೊಬ್ಬೆ ಹೊಡೆಯುವವರನ್ನು, ‘ಕೋಮು ಸೌಹಾರ್ದ’ ಎನ್ನುತ್ತ ಹಿಂದೂಗಳನ್ನು ಅಪಹಾಸ್ಯ ಮಾಡುವವರನ್ನು, ಭಯೋತ್ಪಾದನೆಯ ಸಮರ್ಥಕರನ್ನು ‘ದೇಶ ದ್ರೋಹಿಗಳು’ ಎಂದು ಗುರುತಿಸುವುದರಲ್ಲಿ ಯಾವ ತಪ್ಪೂ ಕಾಣುವುದಿಲ್ಲ. ಎರಡೂ ಕಡೆಯಿಂದಲೂ ತಪ್ಪುಗಳು ನಡೆಯುತ್ತಿವೆ. ಎರಡು ಕೈ ಸೇರಿ ಚಪ್ಪಾಳೆ. ಆದರೆ ಇದು, ಚಪ್ಪಾಳೆ ಹೊಡೆಯುತ್ತ ಕೂರುವ ಸಮಯವಲ್ಲ.
ಅಂಡ್, ದ ಆರ್ಗ್ಯುಮೆಂಟ್ ಕಂಟಿನ್ಯೂಸ್….
November 27, 2008 at 10:59 am | In Uncategorized | 4 Commentsನೀಲಾಂಜಲ
“ಸಹನೆಗೂ ಮಿತಿ ಇದೆ” !!!
ಇದೆ ಮಾತು ಕೇಳಿ ಅವರು ಜಿಹಾದ್ ಗೆ ಇಳಿದಿದ್ದಲ್ಲವೇ??
“ಹೇಗೆ ಸಾಯಬಾರದೆಂದು ಬಯಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ” !!
ನಾವು ಅವರಂತೆ ಬಂದುಕು ಕೈಯಲ್ಲಿ ಹಿಡಿಯಬೇಕೆ ?
ಇದೆ ರೀತಿ ರಕ್ತದ ಹೊಳೆ ಹರಿಸಬೇಕೆ?
ಹೇಳಿ ಚೇತನಾ
ಚೇತನಾ
ನೀಲಾಂಜಲ,
‘ಜಿಹಾದ್’ ಎನ್ನುವ ಧರ್ಮ ಯುದ್ಧ ಶುರುವಾಗಿದ್ದು ಸಹನೆಯ ಮಿತಿ ಮೀರಿ ಅಲ್ಲ. ‘ಜಿಹಾದ್’ ಶುದ್ಧ ಧಾರ್ಮಿಕ ನೆಲೆಗಟ್ಟಿನ, ಯುದ್ಧ ಎಂದು ಹೇಳಿಕೊಳ್ಳುವ ಅತಿಕ್ರಮಣ. ಇದು ನಿಮಗೂ ಗೊತ್ತಿದೆ ಎಂದುಕೊಳ್ಳುತ್ತೇನೆ.
ಭಾರತದ ಮೇಲೆ ಮುಸ್ಲಿಮರ ಆಕ್ರಮಣಗಳು ಮತ್ತು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದೌರ್ಜನ್ಯ; ಭಾರತೀಯರು ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಸಿದ ಆಕ್ರಮಣಗಳು ಮತ್ತು ಹಿಂದೂಗಳ ಮೇಲೆ ಮುಸ್ಲಿಮರ ದೌರ್ಜನ್ಯ – ಇವುಗಳ ಅನುಪಾತವನ್ನು ಲೆಕ್ಕ ಹಾಕಿ ಹೇಳಿ.
ಇಷ್ಟಕ್ಕೂ, ‘ಸಹನೆಗೂ ಮಿತಿ ಇದೆ’ ಎನ್ನುವ ವಾಕ್ಯ ನನ್ನ ಪ್ರತಿಕ್ರಿಯೆಗೆ ಸಂಬಂಧಿಸಿದ್ದು. ಇದರರ್ಥ, ನಾನು ದನಿಯೆತ್ತದೆ ಉಳಿಯುವುದಿಲ್ಲ ಎಂದೇ ಹೊರತು, ಬಂದೂಕು ಹಿಡಿಯುತ್ತೇನೆ ಎಂದಲ್ಲ. ನಾನು ರಕ್ತದ ಹೊಳೆ ಹರಿಸಬೇಕೆನ್ನುತ್ತೇನೆಂದು ಹೇಗೆ ಊಹಿಸಿದಿರಿ? ಇದು ಸರಿಯೇ?
ಹರೀಶ್
ನಾವು ‘ಎ ವೆಡ್ನಸ್ ಡೇ’ ತರ ಶುರುಮಾಡ್ಬೇಕೇನೋ.. ಭಾರತದಲ್ಲಿ ಹುಟ್ಟಿ ಮೋಸ ಹೋದಿವಾ ಅ೦ತ ಕಾಣ್ತಾ ಇದೆ.
ನೀಲಾಂಜಲ
ಚೇತನಾ,
-ಮುಸ್ಲಿಮರ ಆಕ್ರಮಣಗಳು!!??
ನನಗೆ ಗೊತ್ತಿರುವ ಹಾಗೆ;
ಆಕ್ರಮಣಗಳು ನಡೆದದ್ದು ಲೂಟಿ ಮಾಡಲಿಕ್ಕೆ, ಸಾಮ್ರಾಜ್ಯ ವಿಸ್ತರಿಸುವುದಕ್ಕೆ,
ಮೊಗಲ್ ರು ಬರುವುದಕ್ಕೆ ಮುಂಚೇನೂ ನಮ್ಮ ರಾಜರುಗಳು ಪರ ರಾಜ್ಯದ ಮೇಲೆ ದಂಡೆತ್ತಿ ಹೋಗುತ್ತಿದ್ದರು. ಎಲ್ಲರೂ ಒಂದೇ ದೇಶವೆಂಬ ಬ್ಯಾನರ್ ಅಡಿ ಯಾವತ್ತೂ ಇರಲಿಲ್ಲ.ಆಗ ‘ಹಿಂದೂ ರಾಜರು’ಎನ್ನುವ concept ಇರಲಿಲ್ಲ ಅನ್ದುಕೊಳ್ಳುತ್ತೇನೆ. ಏನಿದ್ದರೂ ರಾಜವಂಶಗಳ ನಡುವೆ ಯುದ್ಢಗಳಿರುತ್ತಿತ್ತು.ಮೊಗಲ್ ರಿಗೆ “ಹಿಂದೂ” ರಾಜರ ಬೆಂಬಲ ಇತ್ತಲ್ಲವೇ?ಇತಿಹಾಸವನ್ನು ಇವತ್ತು ಓದಬೇಕಾದರೆ ಮುಸ್ಲಿಮ್ ರಾಜರು -ಹಿಂದೂ ರಾಜರು ಎಂದು ವಿಂಗಡಿಸುತ್ತೇವೆ. ರಾಜನಾದವನು ತನ್ನ ಧರ್ಮವನ್ನು ಇತರರ ಮೇಲೆ ಹೇರುವುದೂ ಆಗಿನ ಪದ್ಧತಿಯಾಗಿತ್ತೇನೊ?
-ಭಾರತೀಯರು (ಹಿಂದೂ +ಮುಸ್ಲಿಮ್+ ಇತರೆ) ಮುಸ್ಲಿಮ್ ರಾಷ್ಟ್ರಗಳ ಮೇಲೆ ನಡೆಸಿದ ಆಕ್ರಮಣಗಳು??
ಈ ಎರಡು concept ನನಗೆ ಸರಿ ಕಾಣುವುದಿಲ್ಲ. ಬಿಡಿಸಿ ಹೇಳಿದರೆ ಅನುಪಾತ ಹುಡುಕುವ ಗೋಜಿಗೆ ಹೋಗುತ್ತೇನೆ.
Shree
Chetana, U have started supporting a dangerous trend in society… we all have lost the good sensitive writer in you. Feeling sad.
ನೀಲಾಂಜಲ
“ಸಹನೆಗೂ ಮಿತಿ ಇದೆ” !!!
ಇದೆ ಮಾತು ಕೇಳಿ ಅವರು ಜಿಹಾದ್ ಗೆ ಇಳಿದಿದ್ದಲ್ಲವೇ??
ಅಷ್ಟು ಸಣ್ಣ ವಯಸ್ಸಿನ ಹುಡುಗರು ಕೈಯಲ್ಲಿ ಕೇವಲ ಜಿಹಾದ ಅಂದಾಕ್ಷಣ ಬಂದುಕು ಎತ್ತುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರಿಗೆ ಕಾಶ್ಮೀರದಲ್ಲಿ ಮುಸೀಮ್ ರ ಮೇಲೆ ನಡೆಯುವ ದೌರ್ಜನ್ಯ, ನಮ್ಮಲ್ಲೇ ಕೋಮು ಗಲಭೆಯಾದಾಗ ಅವರ ಮೇಲೆ ನಡೆದ ಹಿಂಸೆ, ಕೇವಲ ಮುಸ್ಲಿಮ್ ಎಂದು ಅವರನ್ನು ದೇಶದ್ರೋಹಿಗಳನ್ತೆ ನೋಡುವ ಜನರು…..etc. ಈ ಎಲ್ಲರ ಕತೆಯನ್ನು ಅತಿ ರಂಜಿತವಾಗಿ ಹೇಳಿ “ಸಹನೆಗೂ ಮಿತಿ ಇದೆ ” ಎಂದು ಹೇಳಿ ಅವರ ತಲೆ ತಿರುಗಿಸುತ್ತಾರೆ ಅಂದುಕೊಂಡಿದ್ದೇನೆ. (ಇಲ್ಲಿ ಕಾಶ್ಮೀರ ಮತ್ತು ಕೋಮು ಗಲಭೆಯಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಆಗಿಲ್ಲ ಎಂದು ನಾನು ಹೇಳುತ್ತಿಲ್ಲ )
ಚೇತನಾ ನಿಮ್ಮ ಬರಹಕ್ಕೆ ತುಂಬಾ ತಾಕತ್ತಿದೆ. ಮೇಲಿನ ಬರಹ ಓದಿ ನನಗೆ ಅನ್ನಿಸಿದ್ದನ್ನು ನಿಮಗೆ ಕೇಳಿದೆ. ನೀವು ಬಂದುಕು ಹಿಡಿಯುತ್ತಿಲ್ಲ ಎಂದು ಸಮಾಧಾನವಾಯಿತು. ಹಾಗೆ ನೀವು ಮುಸ್ಲಿಮರ ಮೇಲೆ ದನಿಯೆತ್ತಿದ್ದೋ ಅಥವಾ ಭಯೋತ್ಪಾದನೆಯ ಮೇಲೋ ಎಂದು ತಿಳಿಸಿ. ಎರಡನೆಯದಕ್ಕಾದರೆ ನನ್ನ ಬೆಂಬಲವಿದೆ. ![]()
ಚೇತನಾ
ನೀಲಾಂಜಲ,
ಆಕ್ರಮಣಕಾರರು ಕೇವಲ ಲೂಟಿ ಮಾಡಿ ಹೋಗಿದ್ದಿದ್ದರೆ ಅದನ್ನು ಅನ್ಯ ದೇಶೀಯರ ಆಕ್ರಮಣ ಅಂದು ಸುಮ್ಮನಿದ್ದುಬಿಡಬಹುದಿತ್ತು. ಆದರೆ, ಆಕ್ರಮಣದ ನಂತರ ಮತಾಂತರ ನಡೆಯಿತಲ್ಲ, ದೇವಾಲಯಗಳ ಲೂಟಿಯೊಡನೆ ಆಕ್ರಮಣ ಕೊನೆಗೊಳ್ಳದೆ ದೇವತೆಗಳ ವಿಗ್ರಹ ಛಿದ್ರಗೊಳಿಸುವ ಕೆಲಸ ನಡೆಯಿತಲ್ಲ, ಅವು ಆಕ್ರಮಣವನ್ನು ‘ಮುಸ್ಲಿಮ್’ ಆಕ್ರಮಣ ಎನ್ನುವ ಹಣೆಪಟ್ಟಿ ಹೊತ್ತುಕೊಳ್ಳುವಂತೆ ಮಾಡಿತು. ಚರ್ಚಿಗೆ ಕಲ್ಲು ಹೊಡೆಯುವುದು ಹೇಗೆ ‘ಹಿಂದೂ’ ಪುಂಡಾಟಿಕೆಯೆನಿಸುವುದೋ, ಅದೇ ರೀತಿಯಲ್ಲಿ.
‘ಮುಸ್ಲಿಮ್’ ಎಂದ ಕೂಡಲೆ ದೇಶದ್ರೋಹಿಗಳಂತೆ ನೋಡುವ ಲಿಸ್ಟಿನಲ್ಲಿ ನಾನಂತೂ ಇಲ್ಲ. ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ, ಅವರ ಮೇಲೆ ಹೊರಿಸಲಾಗುತ್ತಿರುವ ಆರೋಪಗಳ ವಿರುದ್ಧ ದನಿಯೆತ್ತಿದ ಮಾತ್ರಕ್ಕೆ ನಾನು ಖಡಾಖಂಡಿತವಾಗಿ ಮುಸ್ಲಿಮ್ ವಿರೋಧಿ ಎಂದು ತೀರ್ಮಾನಿಸುವುದು ತಪ್ಪಾಗುತ್ತದೆ.
ಕಾಶ್ಮೀರದ ವಿಷಯ ಹೇಳುವಾಗ, ಕಾಶ್ಮೀರಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯವನ್ನು ಹೇಳಿ, ಮುಸ್ಲಿಮರ ಮೇಲೂ ನಡೆದಿಲ್ಲ ಎಂದಲ್ಲ ಎನ್ನುವ ವಾಕ್ಯ ಸೇರಿಸುವುದೇ ಹೆಚ್ಚು ಸೂಕ್ತವೆಂದು ನನ್ನ ಅನಿಸಿಕೆ. ಜನ ಸಂಖ್ಯಾ ಪ್ರಮಾಣದ ದೃಷ್ಟಿಯಿಂದ ಈ ಮಾತು.
ನನ್ನ ದನಿ ಏನಿದ್ದರೂ ಭಯೋತ್ಪಾದನೆಯ ವಿರುದ್ಧ. ಮಾಲೇಗಾಂವ್ ಸ್ಫೋಟದಲ್ಲಿ ಹಿಂದೂಗಳ ಕೈವಾಡ ಸಾಬೀತಾದಾಗ ಹೊಟ್ಟೆ ಉರಿದು ಹೋಗಿತ್ತು. ಭಯೋತ್ಪಾದಕ ಮುಖ್ಯಸ್ಥರನ್ನೇ ಅವರು ಕೊಂದುಹಾಕಿದ್ದರೆ, ಖಂಡಿತ ಬೇಸರಪಡುತ್ತಿರಲಿಲ್ಲ. ಇಲ್ಲಿ ಸತ್ತವರು ಅಮಾಯಕರಾಗಿದ್ದರು. ಮತ್ತು ಹಾಗೆ ಪ್ರಾರ್ಥನಾ ಸ್ಥಳದಲ್ಲಿ ಕೊಲ್ಲುವುದು ಅಮಾನವೀಯ. ನನ್ನ ಪಾಲಿಗೆ ನಕ್ಸಲೈಟರು ಮಾಡುವ ಕೊಲೆಯೂ, ಮೂಲಭೂತವಾದಿಗಳು, ಕೋಮುವಾದಿಗಳು ಮಾಡುವ ಕೊಲೆಗಳೂ, ಒಬ್ಬ ಆಸೆಬುರುಕ ಕೊಲೆಗಾರನು ಮಡುವ ಕೊಲೆಯೂ – ಎಲ್ಲವೂ ಒಂದೇ.
ಆದರೆ, ಸತ್ತ ಮನೆಯಲ್ಲಿ ಗಳ ಹಿಡಿಯುವಂತೆ ರಾಜಕೀಯ ಪಕ್ಷಗಳು, ಧಾರ್ಮಿಕ ಸಂಘಟನೆಗಳು ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ಜನರ ತಲೆ ಹಾಳು ಮಾಡುತ್ತಾರಲ್ಲ, ಅದಕ್ಕೆ ನನ್ನ ವಿರೋಧವಿದೆ.
ಯಾಕೆ ಇಂಥದೊಂದು ಘಟನೆಯಾದಾಗ ಅದರ ಆರೋಪಿಗಳನ್ನು ಹಿಡಿದು ಗಲ್ಲುಶಿಕ್ಷೆ ವಿಧಿಸಬಾರದು? ಅಮಾಯಕರನ್ನು ಕೊಂದ ಪಾಪಿಗಳಿಗೆ ಯಾಕೆ ಶಿಕ್ಷೆ ಕೊಡಲಗುತ್ತಿಲ್ಲ? ಹೀಗೆ ಮಾಡಿದರೆ ಜನ ಸಾಮಾನ್ಯರಿಗೆ, ನಮ್ಮ ಜೊತೆ ಸರ್ಕಾರ ರಕ್ಷಣೆಗಿದೆ ಅನ್ನುವ ಫೀಲಿಂಗ್ ಬರುವುದಿಲ್ಲವೆ? ಅಫ್ಜಲ್ ಗುರುವಿಗೆ ಯಾಕೆ ಶಿಕ್ಷೆಯಾಗಿಲ್ಲ? ಧಾರಾ ಸಿಂಗ್ ಗೆ ಮಾತ್ರ ಯಾಕೆ?ಈ ಪ್ರಶ್ನೆ ಕೇಳಿದಾಕ್ಷಣ ನೀವು ನಾನು ಧಾರಾ ಪರ ಮಾತನಾದುತ್ತಿರುವೆನೆಂದು ಆರೋಪಿಸುವಿರೇ ಹೊರತು, ಅಫ್ಜಲ್ ಗುರುವಿನ ದೇಶದ್ರೋಹದ ವಿರುದ್ಧ ಎಂದು ತಿಳಿಯುವ ಗೋಜಿಗೇ ಹೋಗುವುದಿಲ್ಲ. ಯಾಕೆ ಹೀಗೆ?
ಯಾಕೆ ಇತ್ತೀಚಿನ ಸ್ಫೋಟಗಳಲ್ಲಿ ಬಾಂಗ್ಲ ದೇಶೀಯರ ಹೆಸರು ಕೇಳಿ ಬರುತ್ತಿದೆ? ಇದಕ್ಕೆ ರಾಜಕಾರಣ ಹೊಣೆಯಲ್ಲ, ಅದರಲ್ಲೂ ತುಷ್ಟೀಕರಣದ- ವೋಟ್ ಬ್ಯಾಂಕ್ ರಾಜಕಾರಣ ಹೊಣೆಯಲ್ಲ ಎಂದು ಹೇಗೆ ಹೇಳುತ್ತೀರಿ?
ಜೀವನ ಪ್ರೀತಿಯ ಯಾರಿಗೂ ಈ ಬಗೆಯ ಸಾವು ಸಹನೆಯಾಗುವುದಿಲ್ಲ. ಮತ್ತೆ ಮತ್ತೆ ನಾನು ಮುಸ್ಲಿಮ್ ವಿರೋಧಿಯಲ್ಲ ಎಂದು ಹೇಳಿಕೊಳ್ಳಬೇಕಾದ ನನ್ನ ದುಃಸ್ಥಿತಿಗೆ ಹಿಂದೂ ಪರ ಮಾತನಾಡುವವರೆಲ್ಲರೂ ಕೋಮುವಾದಿಗಳು ಎನ್ನುವ ಸಂಕುಚಿತ ಗ್ರಹಿಕೆಯೇ ಕಾರಣವೇನೋ? ಇರಲಿ. ನನಗೇನೂ ಸಮಸ್ಯೆಯಿಲ್ಲ. ಎಷ್ಟೆಂದು ಸಮಜಯಿಷಿ ಕೊಡುತ್ತ ಉಳಿಯಲಿ?
ನೀವು, ಭಯೋತ್ಪಾದನೆಯ ವಿರುದ್ಧದ ದನಿಗೆ ಬೆಂಬಲ ನೀಡುವೆ ಎಂದು ಹೇಳಿದ್ದೀರಲ್ಲ, ಅದೇ ಸಮಾಧಾನ. ಧನ್ಯವಾದ.
ದಯವಿಟ್ಟು, ಅಪಾರ್ಥ ಬೇಡ.
ಹರೀಶ್,
ನಮಗೆ ರೇಜಿಗೆ ಇರಬೇಕಾಗಿರೋದು ಸೋಗಿನ ರಾಜಕಾರಣಿಗಳ ಮೇಲೆ ಹೊರತು ಪ್ರಜಾಪ್ರಭುತ್ವದ ಮೇಲಲ್ಲ. ಕಾನೂನಿನ ಮೇಲೂ ಅಲ್ಲ. ಎ ವೆಡ್ನೆಸ್ ಡೇ ಸಿನೆಮಾ ನೋಡಿ ಸಮಾಧಾನ ಪಡಲಷ್ಟೇ ಹೊರತು ಪ್ರ್ಯಾಕ್ಟಿಕಲ್ ಆಗಿ ಮಾಡುವಂಥದಲ್ಲ. ಅದು ಸಾಧ್ಯವೂ ಇಲ್ಲ, ಹಾಗೆ ಮಾಡುವುದೂ ತರವಲ್ಲ.
ಶ್ರೀ,
ಸೆನ್ಸಿಟಿವ್ ಆಗಿರೋದಕ್ಕೇ, ಈ ಬಗೆಯ ಸಾವು ನನ್ನನ್ನ ಕಾಡೋದು. ಸತ್ತವರು ಹಾಗೆ ಯಾರೋ ಒಂದಷ್ಟು ಕ್ರೂರ ಹೇಡಿಗಳ ಮರ್ಜಿಗೆ ಸಿಕು ಸತ್ತಿದ್ದು ನ್ಯಾಯವೇ? ಎದೆ ಕಲುಕುವುದಿಲ್ಲವೆ? ನಿಜ. ಹಿಂದೂ ಪರ ಮಾತನಾಡುವುದು ಡೇಂಜರಸ್. ಮುಸ್ಲಿಮ್ ಪರ ಮಾತನಾಡುವುದು ‘ಪ್ರಗತಿ ಪರ- ಜಾತ್ಯತೀತ’ ಚಿಂತನೆ. ಹೀಗೆ ಇದನ್ನೆಲ್ಲ ಮಾಡಿಟ್ಟಿದ್ದು ಯಾರು?
- ಚೇತನಾ ತೀರ್ಥಹಳ್ಳಿ
“ಹೀಗೆ ಮಾಡಿದ್ದಕ್ಕೇ ಹಾಗೆ ಮಾಡಿದ್ದು…” ಛೆ! ಹಾಗಲ್ಲ, “ಹಾಗೆ ಮಾಡಿದ್ದಕ್ಕೇ ಹೀಗೆ ಮಾಡಿದ್ದು…”
November 27, 2008 at 6:03 am | In Uncategorized | 16 Commentsಅಂತೂ ಮತ್ತೊಂದು ಸ್ಫೋಟ ನಡೆದಿದೆ. ಭಯೋತ್ಪಾದಕರ ದಾಳಿಗೆ ನೂರಾರು ಜೀವಗಳು ಬಲಿಯಾಗಿವೆ. ಪಾಪ ಭಯೋತ್ಪಾದಕರದೇನೂ ತಪ್ಪಿಲ್ಲ. ಅವರು ಅಮಾಯಕರು. ಮೊನ್ನೆ ಮಾಲೆಗಾಂವ್ ಸ್ಫೋಟ ನಡೀತಲ್ಲ, ಅದರಲ್ಲಿ ಹಿಂದೂಗಳು ಭಾಗಿಯಾಗಿದ್ದರಲ್ಲ, ಅದು ಅವರನ್ನು ರೊಚ್ಚಿಗೆಬ್ಬಿಸಿತ್ತು. ಅದಕ್ಕೆ ಅವರು ಪ್ರತಿಕ್ರಿಯೆ ತೋರಿದ್ದಾರೆ ಅಷ್ಟೆ. ತಪ್ಪೇನಿದ್ದರೂ ಮಾಲೇಗಾಂವ್ ದುಷ್ಕೃತ್ಯ ನಡೆಸಿದ ಹಿಂದೂ ಉಗ್ರರದು.
ಹಿಂದೂಗಳು ಮಾಲೇಗಾಂವ್ ನಲ್ಲಿ ಯಾಕೆ ಹಾಗೆ ಮಾಡಿದರು. ಹ್ಹ! ಅವರು ಕೊಡುವ ಕಾರಣ ಗೊತ್ತೆ? “ಈವರೆಗೆ ಮುಸ್ಲಿಮರು ಭಯೋತ್ಪಾದನೆ ಮಾಡುತ್ತ ನಮ್ಮ ಜೀವಗಳನ್ನ ಆಪೋಶನ ತೆಗೆದುಕೊಳ್ತಿದ್ದರಲ್ಲ, ಅದಕ್ಕೆ” ಎಂದು. ನಾಚಿಕೆಯಾಗ್ಬೇಕಲ್ಲವೆ ಅವರಿಗೆ? ಅವರು ಗೋಧ್ರಾದಲ್ಲಿ ಅತ್ಯಾಚಾರ ನಡೆಸಿದ ಮೇಲೇನೇ ಪಾಪ ಮುಸ್ಲಿಮ್ ಭಯೋತ್ಪಾದಕರು ಕೆರಳಿ ಹಾಗೆಲ್ಲ ಮಾಡಲು ಶುರುವಿಟ್ಟಿದ್ದು.
ಹಾಗಂದರೆ ಕೇಳುತ್ತಾರೆಯೇ ಇವರು? ಅವರು ಗೋಧ್ರಾದಲ್ಲಿ ಕರಸೇವಕರ ಬೋಗಿಗೆ ಬೆಂಕಿ ಹಚ್ಚಿದ್ದಕ್ಕೇ ಅಂತೆ ಇವರು ಹಾಗೆಲ್ಲ ಮಾಡಿದ್ದು.
ಪಾಪ. ಅವರೇನೂ ಸುಮ್ಮಸುಮ್ಮನೆ ಬೆಂಕಿ ಹಚ್ಚಲಿಲ್ಲ. ಕರಸೇವಕರು ಬಾಬ್ರಿ ಮಸೀದಿಯನ್ನ ಕೆಡವಿದ್ದಕ್ಕೇ ಅಲ್ಲವೆ ಅವರು ಹಾಗೆ ಮಾಡಿದ್ದು. ಹೀಗೆ ಪ್ರಚೋದಿಸಬಹುದಿತ್ತೇ ಹಿಂದೂಗಳು?
ಇಲ್ಲಿಗೆ ಬಂದು ನಿಂತು ತಪ್ಪೆಲ್ಲ ಹಿಂದೂಗಳ ತಲೆಮೇಲೆ ಚಪ್ಪಡಿಯ ಹಾಗೆ ಬಿದ್ದು ಅವರ ಸಮಾಧಿಯಾಗುತ್ತದೆ. ಹಾಗಾಗಬೇಕು. ಹಾಗಾದಾಗ ಮಾತ್ರ ಭಾರತ ಒಂದು ‘ಜಾತ್ಯತೀತ’ ರಾಷ್ಟ್ರವಾಗಲು ಸಾಧ್ಯ. ಹಿಂದೂವನ್ನು ಒಡಲಲ್ಲಿಟ್ಟುಕೊಂಡ ದೇಶ ಜಾತಿ ನಿರಪೇಕ್ಷವಾಗಲು ಅಸಾಧ್ಯ ಅಲ್ಲವೆ?
ಬಾಬ್ರಿ ಮಸೀದಿ ಉರುಳಿಸಿದಾಗ ಎಷ್ಟು ಜನರ ಜೀವ ಹಾನಿಯಾಗಿತ್ತು? ಲೆಕ್ಕ ಕೇಳಬೇಡಿ. ಸ್ವತಃ ಮುಘಲ್ ದೊರೆ ಬಹದ್ದೂರ್ ಶಾಹ್ ಅದನ್ನು ಹಿಂದೂಗಳಿಗೆ ಮರಳಿಸಿದ್ದನೆನ್ನುವ ದಾಖಲೆ ತೋರಿಸಬೇಡಿ. ನಂತರದ ದಿನಗಳಲ್ಲಿ ಹೊಲಸು ರಾಜಕೀಯಕ್ಕಾಗಿ ಅದನ್ನೆಲ್ಲ ಮುಚ್ಚಿಹಾಕಿ ಹಿಂದೂ ಮುಸ್ಲಿಮರ ನಡುವೆ ದ್ವೇಷದ ವಿಷ ಬೀಜ ಬಿತ್ತಿದ ರಾಜಕಾರಣಿಗಳನ್ನು ಫ್ರೇಮು ಹಾಕಿ ಪೂಜಿಸಿ. ಆಗ ಹಿಂದೂಗಳಂತೂ ತಪ್ಪು ಮಾಡಿದರು. ಪ್ರತಿಯೊಬ್ಬನ ಎದೆಯಲ್ಲೂ ರಾಮನನ್ನು ಕಾಣಬೇಕೆನ್ನುವ ತತ್ತ್ವವನ್ನು ಮರೆತು ಇಸ್ಲಾಮ್ ಶ್ರದ್ಧಾ ಕೇಂದ್ರವನ್ನು ಅವರು ಉರುಳಿಸಬಾರದಿತ್ತು. ಮಾನವೀಯತೆ ಇರುವವರೆಲ್ಲ ಒಪ್ಪಲೇಬೇಕಾದ ಮಾತು ಇದು.
ಆದರೆ,
ಆದರೆ, ಇಸ್ಲಾಮ್ ಭಯೋತ್ಪಾದನೆಗೆ ಕಾರಣ ಅದೊಂದೇ ಎಂದು ಆತ್ಮ ಸಾಕ್ಷಿಯಿರುವ ಯಾವನೂ ಹೇಳಲಾರನು. ಖಿಲಾಫತ್ ಚಳುವಳಿಯ ಕಾಲದಲ್ಲಿ ಕೇರಳದ ಮೋಪ್ಲಾ ದಂಗೆಯಲ್ಲಿ ಇಸ್ಲಾಮೀಯರು ನಡೆಸಿದ ಅತ್ಯಾಚಾರವನ್ನು ಗಮನಿಸಿದರೆ, ಹಿಂದೂಗಳ ಮೇಲೆ ಅವರ ಅತಿಕ್ರಮಣ ಶತಮಾನಗಳಷ್ಟು ಹಿಂದಿನದೆಂದು ಮರೆತುಬಿಡುವಂಥದಲ್ಲ ಎನ್ನುವುದು ಅರಿವಾದೀತು. ಆದರೆ ಹಾಗೆಲ್ಲ ಹಿಂದೂಗಳು ಇತರರರು ಮಾಡುವ ದೌರ್ಜನ್ಯವನ್ನು ಎತ್ತಿ ತೋರಿಸಬಾರದು.
ಬಾಂಗ್ಲಾದಲ್ಲಿ ಎಷ್ಟು ಬಡತನವಿದೆ ಗೊತ್ತೇ? ಅದಕ್ಕೇ ಅವರು ಹಾಗೆಲ್ಲ ಗಡಿ ನುಸುಳಿ ಭಾರತಕ್ಕೆ ಬರುವುದು. ಇಲ್ಲಿ ಹೇಗಿದ್ದರೂ ವೋಟಿನಾಸೆಯ ರಾಜಕಾರಣಿಗಳು ಅವರಿಗೆ ರೇಶನ್ ಕಾರ್ಡು ಕೊಡಿಸುತ್ತಾರೆ. ಹಾಗೆ ಬಂದವರ ಕೈ ಕಡಿಯುವುದಿಲ್ಲವೆ? ಬಾಂಬು ಹಿಡಿದು ನವೆ ತೀರಿಸಿಕೊಳ್ಳುತ್ತಾರೆ. ತಪ್ಪೇನು? ನಮಗೆ ತಾಖತ್ತಿದ್ದರೆ ಬೇಲಿ ಗಟ್ಟಿ ಮಾಡ್ಕೊಳ್ಳಬೇಕು. ಆಶ್ರಯ ಬೇಡಿ ಬಂದವರನ್ನು ಹಾಗೆಲ್ಲ ದೂರುವುದೇ?
ಹುಟ್ಟಿದವರೆಲ್ಲ ಸಾಯಲೇಬೇಕು ನಿಜ. ಆದರೆ ಸಾವು, ನಮ್ಮ ಹಕ್ಕು. ನಮ್ಮ ಕೈಲಿಲ್ಲದಿದ್ದರೂ ನಾವು ಹೇಗೆ ಸಾಯಬೇಕು, ಹೇಗೆ ಸಾಯಬಾರದೆಂದು ಬಯಸುವ ಹಕ್ಕು ಪ್ರತಿಯೊಬ್ಬನಿಗೂ ಇರುತ್ತದೆ. ನೀವು ಹೆಣ್ಣುಮಗಳೊಬ್ಬಳಿಂದ ನಿರೀಕ್ಷಸದ ಪದ ಬಾಯಿಗೆ ಬರುತ್ತಿದೆ. ತಡೆದುಕೊಂಡಿದ್ದೇನೆ. ಹಾಳು ಬೈಗುಳಗಳೆಲ್ಲ ಹೆಣ್ಣಿನ ದೂಷಣೆಯ ಮೇಲೇ ರಚನೆಗೊಂಡಿವೆ ಎನ್ನುವ ಕಹಿ ವಾಸ್ತವ ಈ ಸಂದರ್ಭದಲ್ಲೂ ವಿಷಾದದ ನಗೆಯುಕ್ಕಿಸುತ್ತಿದೆ. ಮುಖ ಮುಚ್ಚಿಕೊಂಡು ಬಂದು ಧರ್ಮದ ಹೆಸರಲ್ಲಿ ಹೀಗೆ ಜನರನ್ನು ಕೊಲ್ಲುವ ನಾಮರ್ದರನ್ನು ಹೆತ್ತ ತಾಯಂದಿರೆನೂ ಖುಷಿಪಟ್ಟಿರಲಾರರು ಬಿಡಿ, ಇಂತಹ ಮಕ್ಕಳನ್ನು ಹೆತ್ತಿದ್ದಕ್ಕೆ.
ತಡೆಯಲಾರದೆ ಹೀಗೆಲ್ಲ ಬರೆದುಬಿಟ್ಟಿದ್ದೇನೆ. ಬಹುಶಃ ಮತ್ತೊಮ್ಮೆ ಓದಿದಾಗ ಕಟುವಾಯಿತು ಎಂದು ನನಗೇ ಅನಿಸುವುದೇನೋ… ಆದರೂ ತಿದ್ದುವುದಿಲ್ಲ. ಹೀಗೇ ಇದ್ದುಕೊಳ್ಳಲಿ.
ಸಹನೆಗೂ ಮಿತಿ ಇದೆ. ಅಲ್ಲವೆ?
ಬದಲಾದ ನನ್ನೂರು… ಬಯಲಾದ ನಾನು.
November 22, 2008 at 6:21 am | In ಕನವರಿಕೆ | 17 CommentsTags: ತೀರ್ಥಹಳ್ಳಿ
ಊರಿಗೆ ಹೋಗ್ಬೇಕು…
ಹಾಗಂದಕೂಡಲೆ, ಸಂಭ್ರಮ ಮತ್ತು ವಿಷಾದಗಳೆರಡೂ ನನ್ನ ಆವರಿಸ್ಕೊಂಡು ಬಿಡುತ್ತೆ. ಎಷ್ಟೋ ಬಾರಿ ಊರಿಗೆ ಹೋಗಬೇಕಾದಾಗಲೆಲ್ಲ ಏನಾದರೊಂದು ನೆವ ತೆಗೆದು ಅದನ್ನ ತಪ್ಪಿಸಿಕೊಂಡು ಕುಂತಿದ್ದೂ ಇದೆ. ಇದೆಂಥ ಪಲಾಯನವೋ.. ಗೊತ್ತಾಗದೆ ಸುಮ್ಮನುಳಿದಿದ್ದೇನೆ.
ನಾನ್ಯಾಕೆ ಚೇತನಾ ಹೆಸರಿನ ಜೊತೆ ತೀರ್ಥಹಳ್ಳಿಯನ್ನ ಅಂಟಿಸ್ಕೊಂಡೆ? ಚೇತನಾ ಬೆಂಗಳೂರು ಅನ್ನುವ ಹೆಸರು ಅಷ್ಟೇನೂ ಆಕರ್ಷಕವಾಗಿ ಕಾಣುವುದಿಲ್ಲವೆಂದೇ? ತೀರ್ಥಹಳ್ಳಿಯೆಂಬ ಹೆಸರಿಂದಲಾದರೂ ಒಂದಷ್ಟು ಜನ ನನ್ನ ಗಮನಿಸಲೆಂದೇ? ಅಥವಾ, ಹಳೆಯ ಐಡೆಂಟಿಟಿ ಕಳಚಲೆಂದು ಅಂದುಕೊಂಡರೂ, ನಾನು ಪೂರ್ತಿ ಕಳೆದುಹೋಗಿಬಿಡಬಾರದೆಂಬ ಎಚ್ಚರಿಕೆಯಿಂದಲೇ? ಇವನ್ನೆಲ್ಲ ಯೋಚಿಸುತ್ತ ಇದ್ದರೆ ನನ್ನೆದುರು ನನ್ನ ನಿಜಬಣ್ಣ ಬಯಲಾಗಿಬಿಡುವ ಭಯಕ್ಕೆ ಯೋಚಿಸದೆ ಇದ್ದೇನೆ. ಈ ಸಂಗತಿ ತಲೆ ಹೊಕ್ಕಾಗಲೆಲ್ಲ, ಲಿಂಕ್ ಲೆಸ್ಸಾಗಿ ತೀರ್ಥಹಳ್ಳಿ ಈಗ ಹಳೆಯ ನನ್ನ ಊರಾಗಿ ಉಳಿಯದಿರುವುದನ್ನೂ, ನಾನೂ ಬದಲಾಗಿರುವುದನ್ನೂ ತಾಳೆ ಹಾಕುತ್ತ, ಸಮಜಾಯಿಷಿಗಳಲ್ಲಿ ಖುಷಿಪಡುತ್ತೇನೆ.

ನನ್ನೂರು ಬದಲಾಗಿದೆ… ಎಲ್ಲ ಊರುಗಳ ಹಾಗೇ… ವಿಶೇಷವೇನಿಲ್ಲ. ಹುಡುಗರೆಲ್ಲ ಖಾಲಿಯಾಗಿ, ಹುಡುಗಿಯರೆಲ್ಲ ಮದುವೆಯಾಗಿ, ಹೊಸ ಪೀಳಿಗೆ ಸ್ಕೂಲು ಕಾಲೇಜಿನ ಹಾದಿ ಸವೆಸುತ್ತಾ ಊರುಬಿಡುವ ಹೊಂಚಿನಲ್ಲಿ ಕರಗುತ್ತಿದೆ. ನನ್ನಪ್ಪ ಅಮ್ಮನಂಥವರು ಮನೆ ಮಾರಿ ಮಕ್ಕಳ ಜತೆಯಿರಲು ಬೆಂಗಳೂರಿಗೆ ಬಂದುಬಿಡುತ್ತೇವೆ ಅಂತ ಹೇಳುತ್ತಲೇ, ಊರು ಬಿಟ್ಟು ಬರಲಾಗದ ಸಂಕಟದಲ್ಲಿ ಕಾಲಯಾಪನೆ ಮಾಡುತ್ತ ಉಳಿದಿದ್ದಾರೆ.
ಮುಂಚಿನಂತೆ ಊರಲ್ಲಿ ಈಗ ಬಡವರ ಸಂಖ್ಯೆ ಹೆಚ್ಚೇನಿಲ್ಲ. ಭಿಕ್ಷುಕರಂತೂ ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಊರಿನವರಿಗೆ ಅಚ್ಚುಮೆಚ್ಚಿನವನಾಗಿದ್ದ ಹುಚ್ಚುಪಾಂಡು, ಹುಚ್ಚು ಬಿಟ್ಟು ಸರಿಯಾದ ಸ್ವಲ್ಪ ವರ್ಷದಲ್ಲೇ ಸತ್ತುಹೋಗಿಯಾಗಿದೆ. ಯಾವುದೋ ಊರಿನವರು ಬಿಟ್ಟು ಹೋಗಿದ್ದ ಹುಚ್ಚಿಯೊಬ್ಬಳನ್ನ ಆಗೊಂದಷ್ಟು ಜನ ರೇಪು ಮಾಡಿದ ಮೇಲೆ, ಹುಚ್ಚಿಯರೂ ಇಲ್ಲವಾಗಿದ್ದಾರೆ.
ಹಸುಗಳ ಸಂಖ್ಯೆ ಕಡಿಮೆಯಾಗಿದೆ. ಕತ್ತೆಗಳು ತೀರ್ಥಹಳ್ಳಿಯಲ್ಲಿ ಯಾವತ್ತೂ ಇರಲಿಲ್ಲ! ಹಂದಿಗಳನ್ನಂತೂ ತೀರ್ಥಳ್ಳಿಯ ಬೀದಿಗಳಲ್ಲಿ ನೀವು ಊಹಿಸಲೂ ಸಾಧ್ಯವಿಲ್ಲ.
ಮನೆ ಹಿತ್ತಿಲಲ್ಲಿ ಬುಟ್ಟಿಯಲ್ಲಿ ಬೆಚ್ಚಗೆ ಕೂತ ಕೋಳಿಗಳನ್ನು ನಾವೀಗ ಕಾಣಲಾರೆವು. ಮೆಟ್ಟಿಲ ತುದಿಯಲ್ಲಿ ಬಾಲ ಆಡಿಸುತ್ತ ಕೂತ ನಾಯಿಯನ್ನೂ…
ಊರಲ್ಲೀಗ ಗಂಧದ ಮರಗಳು ಉಳಿದಿಲ್ಲ. ದಬ್ಬೆ ಬೇಲಿಗಳಿಲ್ಲ. ಹೊಸತಾಗಿ ಯಾರೂ ಹೆಂಚಿನ ಮನೆಗಳನ್ನ ಕಟ್ಟುತ್ತಿಲ್ಲ. ಮನೆಯೆದುರು ಕೈತೋಟಕ್ಕೆ ಜಾಗ ಖಾಲಿ ಬಿಡುತ್ತಿಲ್ಲ. ಗದ್ದೆಗಳೆಲ್ಲ ಸೈಟುಗಳಾಗಿ, ಮನೆಗಳಾಗಿ, ಮಳಿಗೆಗಳಾಗಿ ಮಲಗಿವೆ. ಇಷ್ಟಾದರೂ ಹುಡುಗರಿಗೆ ಊರಲ್ಲೇ ಇದ್ದುಕೊಂಡು ಮಾಡಲು ಕೆಲಸವಿಲ್ಲ. ಇದ್ದು, ಮಾಡಿದರೂ ಆ ಹುಡುಗರಿಗೆ ಅಷ್ಟೇನೂ ಮನ್ನಣೆಯಿಲ್ಲ. ನನ್ನ ಸ್ಕೂಲು- ಕಾಲೇಜಿನ ದಾರಿ, ಆಟವಾಡಿದ ಗ್ರೌಂಡು, ಮೊದಲ ಪ್ರೇಮ ಪತ್ರ ಇಸ್ಕೊಂಡ ಜಾಗ…, ಮೊದಲ ನಾಚಿಕೆಯ ಸಾಕ್ಷಿ… ಯಾವುದೂ ಇದ್ದ ಹಾಗೆ ಇಲ್ಲ!
ಊರ ಮಕ್ಕಳೀಗ ಕಾಲೇಜಿಗೆ ನಡೆದು ಹೋಗುವುದಿಲ್ಲ. ಸಂಕ ದಾಟುವುದು, ಗದ್ದೆಬೇಲಿ ಹಾರುವುದು… ಇವೆಲ್ಲ ಅವರಿಗೆ ಗೊತ್ತಿಲ್ಲ. ಹಳ್ಳಗಳಲ್ಲಿ ನೀರಿಲ್ಲ. ಮಾಗಿಯಲ್ಲೂ ಚಳಿಯಿಲ್ಲ. ಮಲೆನಾಡಿನ ಮಳೆ, ಹೇಗಿತ್ತೆಂದೇ ಮರೆತುಹೋಗಿದೆ. ಅಷ್ಟಾದರೂ ಅಲ್ಲೇ ಹುಟ್ಟಿ ಬೆಳೆದು ಜೀವನ ಮಾಡ್ತಿರುವ ಅಮ್ಮ, ‘ಕೇಡು ಮಳೆ, ಸುರೀತಲೇ ಇರತ್ತೆ’ ಅಂತ ಗೊಣಗೋದು ಬಿಟ್ಟಿಲ್ಲ.
ಹಾದಿಬದಿಗಳಲ್ಲಿ ಇದ್ದವಲ್ಲ, ಮಾಸ್ತಿಕಲ್ಲು- ವೀರಗಲ್ಲುಗಳು? ಅವೀಗ ಯಾರ ಮನೆಯ ಚಪ್ಪಡಿಗಳಾಗಿವೆಯೋ? ಶಿವಪ್ಪ ನಾಯಕನ ಕಾಲದ ಕಲ್ಲಿನ ಪುಟ್ಟಪುಟ್ಟ ದೇಗುಲಗಳೆಲ್ಲ ಸುತ್ತ ಸಿಮೆಂಟಿನ ಗೋಡೆ ಕಟ್ಟಿಸಿಕೊಂಡು ಬರೀ ಆಡಂಬರದ ವಸ್ತುಗಳಾಗಿಬಿಟ್ಟಿವೆ. ಆದರೂ, ಹುಡುಗಿಯರಿಗೆ ಲೈನು ಹೊಡೆಯಲು ಹುಡುಗರೀಗ ಅಲ್ಲಿಗೆ ಬರೋದಿಲ್ಲ. ಆಮೇಲೆ ಹುಡುಗೀರು ತಮ್ಮನ್ನ ‘ಗುಗ್ಗು’ ಅಂದ್ಕೊಂಡುಬಿಟ್ಟರೆ?
- ಹೀಗೆಲ್ಲ ಗೊಣಗಿಕೊಳ್ಳುತ್ತ, ಊರಿಗೆ ಹೋಗಲು ಇಷ್ಟವಿಲ್ಲದರ ನೆವಗಳು ಇವು ಎಂದು ನನ್ನನ್ನು ನಾನು ನಂಬಿಸ್ಕೊಳ್ಳುತ್ತ ಕುಳಿತಿದ್ದೆ. ಊರಿಗೊಂದು ಅವಕಾಶ ಕೊಟ್ಟರೆ, ನನ್ನ ‘ಇಲ್ಲ’ಗಳ ಪಟ್ಟಿಯಲ್ಲಿ ಏನೆಲ್ಲ ಹೇಳಬಹುದು? ಬದಲಾವಣೆಯನ್ನ ಹೇಗೆಲ್ಲ ಗುರುತಿಸಬಹುದು? ಚಿಂತೆಯಾಯ್ತು.
“ಊಹೂಂ… ನಾನು ಊರಿಗೆ ಹೋಗೋದಿಲ್ಲ!” ದಿಗಿಲಿನ ದಾರಿಯನ್ನೇ ಮುಚ್ಚಿಹಾಕಿದೆ.
‘ಮತ್ತೊಬ್ಬ ಗೆಳೆಯ’ನ ಪರಿಚಯ
November 21, 2008 at 5:07 am | In ನಿಮ್ಮೊಂದಿಗೆ | 1 CommentTags: ಸಿದ್ಧು
ಮತ್ತೊಬ್ಬ ಗೆಳೆಯನ ಕವಿತೆ ಮೆಚ್ಚಿದವರಿಗೆ ಸಿದ್ಧು ದೇವರಮನಿಯ ಪರಿಚಯ ಇಲ್ಲಿದೆ. ಓದಿರದವರಿಗೂ…
ನನಗೆ ಸಿದ್ಧು ಪರಿಚಯವಾಗಿದ್ದು ಒನ್ ಅಂಡ್ ಓನ್ಲಿ ಹಂಗಾಮಾದ ಮೂಲಕ. ಅದೊಂದು ಪುಟ್ಟ ಪತ್ರಿಕೆಯ ಮೂಲಕ ನನಗಾದ ಲಾಭವದೆಷ್ಟೋ!? ಆ ಮೂಲಕ ಪರಿಚಯವಾದವರು ವೆಂಕಟ್ರಮಣ ಗೌಡ, ಜಿ.ಎನ್.ಮೋಹನ್, ಸಿದ್ಧು ದೇವರಮನಿ ಮತ್ತು ಅರುಣ್ ಜೋಳದಕೂಡ್ಲಿಗಿ. ಅಷ್ಟೇ ಅಲ್ಲ, ಸುಮಾರು ಐದಾರು ವರ್ಷ ಕಳೆದುಹೋಗಿದ್ದ ಮತ್ತೊಬ್ಬ ಗೆಳೆಯ ವಿಕ್ರಮ್ ವಿಸಾಜಿಯನ್ನು ಹುಡುಕಿಕೊಟ್ಟಿದ್ದೂ ಇದೇ ಹಂಗಾಮಾ.
ಈ ಸಿದ್ಧು ಎನ್ನುವ ಪುಣ್ಯಾತ್ಮನನ್ನು ನಾನು ನಾನು ನೋಡಿಲ್ಲ. ಪಕ್ಕಾ ವ್ಯವಹಾರಸ್ಥನಾಗಿರುವ ಈತ ಬೆಂಗಳೂರಿಗೆ ಬಂದರೂ ಸಿಗದೆ ಕೆಲಸ ಮುಗಿಸಿ ಓಡಿಹೋಗುತ್ತಾನಾದ್ದರಿಂದ ಭೇಟಿಯಾಗುವ ಅವಕಾಶವೂ ಸಿಕ್ಕಿಲ್ಲ. ಯಾವಾಗಲೂ ‘ಹೆಲಿಕಾಪ್ಟರಲ್ಲಿ ಬರ್ತಿದೀನ್ ನೋಡವ್ವ’ ಅನ್ನುತ್ತ, ಕೆಲಸ ಸಿಕ್ಕಿದ್ದಕ್ಕೊಂದು, ಉಫೀಟ್ ಬಿಡುಗಡೆಯಾಗಿದ್ದಕ್ಕೊಂದು, ಭಾಮಿನಿ ಷಟ್ಪದಿಗೊಂದು, ಅಂವ ನನ್ನ ಅಣ್ಣನ್ನ ಭೇಟಿಯಾಗಿದ್ದ ಖುಷಿಗೊಂದು.. ಹೀಗೆ ಸಾಕಷ್ಟು ಮಸಾಲೆದೋಸೆಗಳ ಲೆಕ್ಕವಿಟ್ಟಿದ್ದಾನೆ. ನಮ್ಮ ಭಾಗವತರು ಮಸಾಲೆ ದೋಸೆ ಅಂದಾಗಲೆಲ್ಲ ನನಗೆ ಸಿದ್ಧುವಿನ ನೆನಪಾಗುತ್ತಿರುತ್ತದೆ.
ಟೀನಾ, ಕವಿಯ ಪರಿಚಯ ಮಾಡಿಸು ಮಹರಾಯ್ತೀ ಅಂದಿದ್ದಾಳೆ. ಅಸಲಿಗೆ, ನನಗೇ ಆತನ ಪರಿಚಯ ಸಂಪೂರ್ಣವಾಗಿ ಇಲ್ಲ. ಅರು ವರ್ಷದ ಹಿಂದೊಮ್ಮೆ ಪ್ರತಿಷ್ಠಿತ ಪತ್ರಿಕೆಯ (ಹೆಸರು ಕನ್ಫ್ಯೂಸು) ಕವಿತೆ ಸ್ಫರ್ಧೆಯಲ್ಲಿ ಈತ ಬಹುಮಾನ ಪಡೆದಿದ್ದ. ಈಗ ಕವನ ಸಂಕಲನವೊಂದನ್ನು ಹೊರತರುವ ಚಿಂತನೆ ನಡೆಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ.
ಬಹಳ ದಿನಗಳಿಂದ ಹೇಳೀಹೇಳೀ, ಕೊನೆಗೂ ಒಂದು ಬ್ಲಾಗ್ ತೆರೆದಿದ್ದಾನೆ (ಅಂತೆ!). ಸಧ್ಯದಲ್ಲೇ ಅವನ ಲಿಂಕ್ ನನ್ನ ಬ್ಲಾಗ್ ರೋಲಿನಲ್ಲಿ ಕೊಡುತ್ತೇನೆ. ಮತ್ತಷ್ಟು ಚೆಂದದ ಕವಿತೆಗಳಿಗಾಗಿ ಅಲ್ಲಿಗೆ ಹೋಗಬಹುದು.
ಸಿದ್ಧು ದೇವರಮನಿಯ ‘ಆಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ’ ಕವಿತೆಯಿದೆಯಲ್ಲ, ಅದನ್ನವನು ಬರೆದ ಸಂದರ್ಭ ತೀರಾ ವಿಷಾದದ್ದು. ರಸ್ತೆ ಅಗಲೀಕರಣಕ್ಕಾಗಿ ಅವನ ಅಂಗಡಿ, ಮನೆ- ಮುಂಗಟ್ಟುಗಳನೆಲ್ಲ ಬುಲ್ಡೋಜರ್ರು ಸವರುತ್ತ ಸಾಗಿತಲ್ಲ, ಆಗ ಹುಟ್ಟಿದ್ದು. ಅಸಹನೆ, ಕೋಪ, ಹತಾಶೆಗಳು ಚಿಗಿಯಬೇಕಿದ್ದ ಹೊತ್ತಿನಲ್ಲಿ ಈ ಹುಡುಗ ಕವಿತೆಹುಟ್ಟಿಸಿಕೊಂಡು ಕುಳಿತಿದ್ದು ಸೋಜಿಗವಲ್ಲವೆ? ಅದೂ ಇಂತಹ ಮಾನವೀಯ ಮೌಲ್ಯದ ಕವಿತೆ… !
ಈ ಗೆಳೆಯನ ನೋವುಗಳದೆಷ್ಟಿವೆಯೋ ನನಗಂತೂ ಗೊತ್ತಿಲ್ಲ. ಅದನ್ನವನು ಯಾವತ್ತೂ ತೋರಿಸಿಕೊಂಡಿದ್ದೂ ಇಲ್ಲ. ಸದಾ ನಗುನಗುತ್ತಲೇ ಮಾತನಾಡುವ ಸಿದ್ಧು ದೇವರಮನಿ ಅನುಗಾಲವೂ ಹೀಗೇ ಇರಲಿ ಎಂದು ಹಾರೈಸುತ್ತಾ, ನನಗೆ ಗೊತ್ತಿಲ್ಲದ ಗೆಳೆಯನ ಪರಿಚಯವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.
ಮತ್ತೊಬ್ಬ ಗೆಳೆಯನ ಕವಿತೆ…
November 20, 2008 at 7:28 am | In ಕಡ ತಂದಿದ್ದು... | 6 CommentsTags: ಸಿದ್ಧು ದೇವರಮನಿ
ಬೆಂಗಳೂರಿಗೆ ದೂರವೆನಿಸುವ ಬಳ್ಳಾರಿಯ ಕೊಟ್ಟೂರಿನಲ್ಲೊಬ್ಬ ಗೆಳೆಯನಿದ್ದಾನೆ. ಹೆಸರು, ಸಿದ್ಧು ದೇವರಮನಿ. ಗೆಳೆತನದ ವಿಶೇಷವೆಂದರೆ, ಅವನು ಗಾಢವಾದ ಕವಿತೆಗಳನ್ನ ಬರೀತಾನೆ, ಮತ್ತು ಅದರಿಂದಲೇ ನನಗೆ ಪರಿಚಿತನಾಗಿದ್ದಾನೆ.
ಬರಹ ನನಗೆ ಏನು ಕೊಟ್ಟಿದೆ? ಅಂತ ಕೇಳಿದರೆ ಹೊಟ್ಟೆಬಟ್ಟೆಗಿಂತಲೂ ಹೆಚ್ಚಾಗಿ ಸಾಕಷ್ಟು ಗೆಳೆಯರನ್ನು ಕೊಟ್ಟಿದೆ ಎಂದು ತುಂಬು ಮನಸಿನಿಂದ ಹೇಳಿಕೊಳ್ತೇನೆ. ಅಂತಹ ಕೆಲವು ಖುಷಿಖುಷಿಯ ಗೆಳೆಯರಲ್ಲಿ ಈತನೂ ಒಬ್ಬ. ಅಲ್ಲದೆ, ನನ್ನನ್ನು ‘ಗಾನಾ’ ಎಂದು ಕರೆಯುವ ಕೆಲವೇ ಮಂದಿಯಲ್ಲೊಬ್ಬ. ಸಿದ್ಧು ದೇವರಮನಿಯ ಕವಿತೆಗಳಲ್ಲಿ ನನಗಿಷ್ಟವಾದ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ ಹಾಕಿದ್ದೇನೆ. ಓದಿಕೊಳ್ಳಿ.
ಅಯುಷ್ಯದ ಕೆಲ ದಿನಗಳನ್ನು ದಾನ ಮಾಡಿದ್ದೇನೆ..!
ನಾನು ಕತ್ತಲನ್ನು ಹುಡುಕುತ್ತಿದ್ದೇನೆ
ಇದರಥ೯ ನಾನು ಸೋಲು ಒಪ್ಪಿಕೊ೦ಡೆ, ಅ೦ತಲ್ಲ
ಕತ್ತಲ ಭೇಧಿಸುವ ಕಲೆ ಸಿದ್ದಿಸಿದ
ಭೂಮಿಗೊ೦ದು ಹೊಳಪು ತರುವ ತಾರೆಗಳ ವಿಳಾಸ ಬೇಕಾಗಿದೆ.
ನಾನು ಕತ್ತಲ ಬಣ್ಣವನ್ನ ಹುಡುಕುತ್ತಿದ್ದೇನೆ
ಇದರಥ೯ ಕಪ್ಪುಬಣ್ಣ ದಿಗಿಲುಗೊಳಿಸಿದೆ ಅ೦ತಲ್ಲ
ಕತ್ತಲಿನೊ೦ದಿಗೆ ಅವರ ನೆ೦ಟಸ್ತನ ಕಡಿದು ಹಾಕಬೇಕಿದೆ.
ಆಗಿನ್ನು ಮಲಗಿದ್ದೆವು
ಅಪ್ಪ ಎಲ್ಲರನ್ನು ಎಚ್ಚರಿಸಿದರು
ಅನತಿ ದೂರದಲ್ಲಿ ಕಟ್ಟಡ ಬೀಳಿಸುತ್ತಿರುವ ಯ೦ತ್ರದ ಸದ್ದು.
ಆ ಕತ್ತಲು ಹೆದರಿಸಿತು…
ಮನೆಯ ಸಾಮಾನುಗಳನೆಲ್ಲಾ ಬಯಲಿಗೆ ಇಡುತ್ತ ಇಡುತ್ತ
ಹೋದ೦ತೆಲ್ಲ ನಮ್ಮ ಮಾತುಗಳೆಲ್ಲ ಹುದುಗಿಹೋದವು.
ನಮಗೆ ಗೊತ್ತಗದೆ ನಾವು ಕತ್ತಲಿನ ಆಜ್ಞೆಯಲ್ಲಿದ್ದೆವು.
ಕೊನೆಗೊಮ್ಮೆ ದಣಿವಾದ೦ತೆ ಕ್ಷಣ ಹೊತ್ತು ಕೂತದ್ದು
ಬಿದ್ದ ಮನೆಯ ಕೊನೆಯ ಸೌಭಾಗ್ಯವಿರಬೇಕು!
ಏನಾಗುತ್ತಿದೆ…ಆಕಾಶ ನೋಡಿದೆ
ಉಹು೦: ಕತ್ತಲು ಸರಿಯಬಹುದಾದ ಯಾವುದೇ ಕುರುಹುಗಳಿರಲ್ಲಿಲ್ಲ
ಸ೦ದಭ೯ದ ಎಲ್ಲ ಸವಾಲುಗಳನ್ನು ಖುಶಿಪಟ್ಟೆ
ಕತ್ತಲು ಸರಿದ೦ತಾಯಿತು
ಈ ಜಗತ್ತು ಅದಕ್ಕೆ ” ಮು೦ಜಾವು” ಎ೦ದು ಹೆಸರಿಸಿತು
ನಾವು ಒಪ್ಪಿಕೊ೦ಡೆವು.
ಸೂರು ಇಲ್ಲದ ನನಗೆ ಎಲ್ಲರೂ ಊಟಕ್ಕೆ ಕರೆದರು
ನನಗೆ ಹೊಟ್ಟೆ ತು೦ಬಿತು.
ನಮ್ಮದೇ ಜ೦ಜಾಟದಲ್ಲಿ ಮರೆತ .. ನಾಕಾರು ದಿನ ಉಪವಾಸವಿದ್ದ
ನಮ್ಮ ಬೆಕ್ಕು “ಮಿನ್ನು” ನನ್ನ ಹತ್ತಿರ ಕೊಡ ಬರಲಿಲ್ಲ.
ನಾ ಅರಿಯಬಲ್ಲೆ
ಅದರ ಕಣ್ಣಿನ ಅತ೦ಕ ನಮ್ಮ ನೋವಿಗಿ೦ತ ದೊಡ್ಡದು
ಹಾಗಾಗಿಯೇ
ನಾನು ಕತ್ತಲಲ್ಲಿ ಮನೆ ಒಡೆದವರನ್ನ ಹುಡುಕುತ್ತಿದ್ದೇನೆ
ಇದರಥ೯ ಅವರನ್ನಿಡಿದು .. ಹೊಡೆದು ಕೊಲ್ಲುತ್ತೇನೆ ಅ೦ತಲ್ಲ
ಅವರಿಗೆ ನನ್ನ ಆಯುಷ್ಯದ ಕೆಲ ದಿನಗಳ ದಾನಮಾಡಿ
ಭ್ರಮೆ ತು೦ಬಿದ ಅವರ ಬದುಕನ್ನು ಬೆಳಕಿಸಬೇಕಿದೆ.
– ೨ -
ಬಯಲಿಗೆ ಬಿದ್ದ ಎಲ್ಲ ವಸ್ತುಗಳೊ೦ದಿಗೆ
ನಾವು ನಮ್ಮತನವನ್ನು ಕಾಯುತಿದ್ದೆವು.
ಬಯಲಲ್ಲಿ ಬಿದ್ದ ಚೆಲ್ಲಾಪಿಲ್ಲಿ ಜೀವನ ನೋಡಿ
ಅಪ್ಪ,
” ಈ ಪರಿಯ ಸೊಬಗು ಇನ್ಯಾವ ದೇವರಲಿ ಕಾಣೆ “
ಸಾಲು ನೆನಪಿಸಿಕೊ೦ಡು ನನ್ನಡೆಗೆ ನೋಡಿ ನಕ್ಕರು
ನಾನು ನಗುವುದನ್ನ ಕಲಿತೆ.
ಅರೆ, ನನ್ನ ಪುಸ್ತಕ.. ಕಾಪಿಟ್ಟ ಗೆಳೆಯರ ಪತ್ರ
ದಿನವೂ ನನ್ನಡೆಗೆ ನೋಡಿ ನಗುತ್ತಿದ್ದ
ನನ್ನ ಪುಟ್ಟ ತ೦ಗಿ ’ರೀತು’ ನ ಫೋಟೋ
ಹೀಗೆ ಎಲ್ಲವನ್ನು ಕಳೆದುಕೊ೦ಡಿದ್ದೇನೆ..
ನನ್ನವೆ೦ಬ ಎಲ್ಲವೂ ಕಳೆದಿವೆ..
ಈ ಇಡೀ ಜಗತ್ತು ನನ್ನದೆ೦ಬ
ದಿವ್ಯ ಉತ್ತರದೊ೦ದಿಗೆ
ನೀವು ಸಿಕ್ಕಾಗ ನಕ್ಕು ಮಾತಾಡಿಸುತ್ತೇನೆ.
_ ಸಿದ್ದು ದೇವರಮನಿ
ಪುಸ್ತಕ ಸಂತೆಯಲ್ಲಿ ಸಿಕ್ಕ ನೀಲಾ ಮೇಡಮ್
November 17, 2008 at 11:21 am | In ಕನವರಿಕೆ | 4 CommentsTags: ಒರಿಯಾ ಕಥೆಗಳು, ಪುಸ್ತಕ ಸಂತೆ
ಅದು ನೀಲಾ ಮೇಡಮ್ ಕಥೆ.
ಅದೇ, ಅಮ್ಮ ಇಲ್ಲದ ಹುಡುಗಿ… ಮದುವೆಯಾದ ಹೊಸತರಲ್ಲೆ ಗಂಡನ್ನ ಕಳಕೊಂಡು ಅಪ್ಪನ ಮನೆ ಸೇರಿದ ಹುಡುಗಿ…
ಚೆನ್ನಾಗಿ ಓದು ಬರಹ ಕಲಿತು, ನೀಲಾಳಿಂದ ನೀಲಾ ಮೇಡಮ್ ಆದ ಹುಡುಗಿ. ಅಪ್ಪನೂ ಇಲ್ಲವಾಗಿ, ಮತ್ತೆ ಒಬ್ಬಂಟಿಯಾದ ಹುಡುಗಿ. ತಮ್ಮನ್ನ ಓದಿಸಲಿಕ್ಕೆ ಕವಡೆಕಟ್ಟಿಕೊಂಡು ದುಡಿದ ಹುಡುಗಿ. ಟೀಚರ್ ಆಗಿದ್ದಾಗಲೇ ನಾಟಕದ ಪಾತ್ರವಾಗಿದ್ದ ಅರ್ಜುನನ್ನ ಮೋಹಿಸಿ, ಊರು ಬಿಟ್ಟು, ಕೇರಿ ಬಿಟ್ಟು, ಜಾತಿ ಬಿಟ್ಟು, ತಮ್ಮನ್ನೂ ಬಿಟ್ಟು ಮದುವೆಯಾದ ಹುಡುಗಿ.
ಅರ್ಜುನ ಕುಡಿದು ಅವಾಂತರ ಮಾಡಿದ ದಿನ ಅಂವನ್ನ ಬಿಟ್ಟು ನಡೆದು ಮತ್ತೊಂದು ಊರು ಸೇರಿ ಅಗಸಗಿತ್ತಿಯಾಗಿ ಬಾಳಿದ ಹುಡುಗಿ… ತಮ್ಮನ ಮದುಮಗಳ ಸೀರೆಯನ್ನ ತಾನೇ ಒಗೆಯುತ್ತೇನೆಂದು, ಓರಗೆಯ ಅಗಸಗಿತ್ತಿಯಿಂದ ಕಿತ್ತುಕೊಂಡು, ಅದನ್ನು ಮರಳಿ ಕೊಡದೆ ಸತಾಯಿಸಿದ ಹುಡುಗಿ…
ತಮ್ಮನೇ ಬರಲಿ ಅಂತ ಹಟ ಹಿಡಿದು, ಅವನನ್ನ ಕಣ್ತುಂಬಿಸಿಕೊಂಡು ‘ಹೋಗೆಲೋ’ ಅಂತ ಕಳಿಸಿಬಿಟ್ಟ ಹುಡುಗಿ…
~
ನೀಲಾ ಮೇಡಮ್…
ಯಾರು ಹೇಳಿದ್ದರು ಈ ಹಿಂದೆ ಅವಳ ಕಥೆಯನ್ನ?
ಊಹೂಂ… ತಲೆ ಕಿತ್ತು ಗಲಬರಿಸಿದರೂ ನೆನಪಾಗಲೇ ಇಲ್ಲ. ಆದರೆ ಅದನ್ನ ಓದುತ್ತ ಓದುತ್ತ, ಈ ಕಥೆಯನ್ನ ಎಲ್ಲೋ ಕೇಳಿದ ಹಾಗಿದೆ ಅಂದುಕೊಳ್ಳುತ್ತ ನನ್ನ ಸುತ್ತಮುತ್ತಲೆಲ್ಲ ಕಥೆಗಳು ಹುಟ್ಟಿಕೊಂಡು ಬಳ್ಳಿಯಾಗಿ ನನ್ನ ಸುತ್ತುತ್ತ, ಉಸಿರು ಕಟ್ಟುತ್ತ, ಕಥೆಯಿಂದ ಹೊರಬರಲಾರದೆ ನಾನು ಒದ್ದಾಡ್ತಿರುವಾಗ ಕರೆಂಟು ಹೋಗಿ, ತಮ್ಮ ಊಟಕ್ಕೆ ಬಂದು, ‘ಬುಕ್ಕು ತೆಗೆದಿಡೇ ಮಾರಾಯ್ತಿ, ಕಣ್ ಯಾತಕ್ಕೆ ಬರತ್ತೆ?’ ಅಂತ ಗದರಿ, ಅವುಗಳನ್ನೆಲ್ಲ ಸವರಿಬಿಟ್ಟ.
ಇಷ್ಟಕ್ಕೂ ನಾನ್ಯಾಕೆ ನೀಲಾ ಮೇಡಮ್ ಳನ್ನು ತಲೆಮೇಲೆ ಹತ್ತಿಸ್ಕೊಳ್ಳಲಿ? ಆ ಕಥೆಯನ್ನ ಯಾರು ಹೇಳಿದ್ದರೋ, ಯಾಕಾಗಿ ಹೇಳಿದ್ದರೋ, ಹೇಳಿದ್ದರೋ- ಇಲ್ಲವೋ? ನನಗೇನು? ಹಾಗಂದುಕೊಂಡು ಒರಿಯಾ ಕಥೆಗಳನ್ನ ಮುಚ್ಚಿಟ್ಟು ಕುಳಿತೆ. ಆದರೂ, ಒರಿಯಾ ಕಥೆಯೆಂದ ಮಾತ್ರಕ್ಕೆ, ಅದು ಒರಿಸ್ಸಾದಲ್ಲಿ ಮಾತ್ರ ನಡೆಯಬಹುದಾಗಿರೋದೇನೂ ಅಲ್ಲವಲ್ಲ? ಅನಿಸುತ್ತಲೇ ಇತ್ತು.
ನನಗ್ಗೊತ್ತು. ಹಾಗೆಲ್ಲ ಯೋಚಿಸುವ ಜರೂರತ್ತೇ ಇರಲಿಲ್ಲ. ಆಫ್ಟರ್ ಆಲ್ ಅದೊಂದು ಕಥೆ. ಆದರೂ…
ತಲೆಯಲ್ಲಿ ಕೆಂಪು ಹೆಲಿಪೆಟ್ಟರ್ ಗುಂಯ್ ಗುಡುತ್ತಿತ್ತು. ಆಮದನ ಪ್ರೇಮ ಪ್ರಾಪ್ತವಾಗಿ ಅವನ ಕಥೆ ಸುಖಾಂತವಾಗುತ್ತ ನಡೆದರೆ, ಆಮಿನಾಳ ಬೆಕ್ಕು ವಿಷ ಬೆರೆತ ನೀರು ಕುಡಿದು ಸತ್ತ ಮೀನಿನ ಕರುಳು ತಿಂದು ತೊಂಡೇ ಚಪ್ಪರದ ಬಳಿ ಕಣ್ಣು ಹೊರಚಾಚಿ ನೆಗೆದುಬಿದ್ದಿತ್ತು. ಇದನ್ನ ಪ್ರಣಯದ ಕಥೆ ಅಂತ ಓದಿಕೊಳ್ಳಲೋ, ಆಧುನಿಕತೆಯ ಕರಾಳತೆ ಅಂತಲೋ ಅಂತೆಲ್ಲ ಕನ್ಫ್ಯೂಸ್ ಆಗುತ್ತಿದ್ದ ನನಗೆ ಕಥೆಗಳ ಸಹವಾಸವೇ ಸಾಕೆನಿಸುತ್ತ ಶಕ್ತಿಶಾರದೆಯ ಮೇಳದತ್ತ ಮನಸಾಗಿ ಹೊರಳಿ ಕುಂತೆ.
ನೀಲಾ ಮೇಡಮ್? ಆಮೇಲೇನಾಯ್ತು ಅವಳಿಗೆ? ಬೆಳ್ಳಿಕ್ಕಾರನ ಮತ್ತಿನಲ್ಲಿದ್ದ ಆಮಿನಾ ಆಮದನನ್ನ ನಿಖಾ ಮಾಡ್ಕೊಂಡಳೇನು? ಈ ಎರಡು ಪ್ರಶ್ನೆಗೆ ಉತ್ತರ ಸಿಗದೆ ಶಕ್ತಿ, ಶಾರದೆಯರೆಲ್ಲ ನನ್ನ ಕೈಬಿಟ್ಟು ಹೋದರು. ಅಲ್ಲೆಲ್ಲೂ ಕಾಣದ ಡಿ. ಆರ್. ತಣ್ಣಗೆ ನಕ್ಕರು.
~
~
“ಹೋದ ಜನ್ಮದಲ್ಲಿ ಇದು ಪುಸ್ತಕದ ಹುಳುವಾಗಿ ಹುಟ್ಟಿತ್ತು” ಹಾಗಂತ ಅಮ್ಮ ಬಲವಾಗಿ ನಂಬಿಬಿಟ್ಟಿದಾಳೆ.
ನಾನು ಓದಿದರೆ, ಓದುವುದು ಹೀಗೇ. ಓದಿನೊಳಗೆ ನಾನೇ ಕಳೆದುಹೋಗುವ ಹಾಗೆ. ಅದಕ್ಕೇ, ಆದಷ್ಟೂ ಕಥೆ ಪುಸ್ತಕಗಳನ್ನ ಓದುವುದನ್ನ ನನಗೆ ನಾನೇ ಅವಾಯ್ಡ್ ಮಾಡಿಕೊಂಡು ಬೇರೆ ಪುಸ್ತಕಗಳತ್ತ ವಾಲುತ್ತಿರುತ್ತೇನೆ. ಸಾಮಾನ್ಯವಾಗಿ ನನಗೆ ಮಾಡಲು ಬೇರೇನೂ ಕೆಲಸವಿರುವುದಿಲ್ಲವಾದ್ದರಿಂದ, ಓದೋದನ್ನೇ ನನ್ನ ಫುಲ್ ಟೈಮ್ ಡ್ಯೂಟಿಯೂ ಮಾಡ್ಕೊಂಡು ಬಿಟ್ಟಿದೇನೆ. ಎಷ್ಟೇ ಕಣ್ತಪ್ಪಿಸಿಕೊಂಡು ಓಡಾಡಿದರೂ ಈ ಕಥೆಗಳು ನನ್ನ ಕೈಬೀಸಿ ಕರೆಯುತ್ತವೆ. ಹಾಗೆಂದೇ ಈ ಬಾರಿಯ ಬುಕ್ ಫೇರಿನಿಂದ ಒಂದಷ್ಟು ಅನುವಾದಿತ ಒರಿಯಾ, ಬಂಗಾಳೀ, ಸಮಕಾಲೀನ ಹಿಂದೀ, ಗುಜರಾಥಿ ಮೊದಲಾದ ಕಥಾ ಸಂಗ್ರಹಗಳನ್ನ ಹೊತ್ತು ತಂದಿದ್ದೇನೆ. ಈ ಮೇಲಿನ ಡ್ರಾಮಾವೆಲ್ಲ ಅದರದೇ ಎಫೆಕ್ಟು!
~
ಮ್ಮ್… ನಾನೂ ತಂದಿದೇನೆ ಮೂವತ್ತು ಪುಸ್ತಕಗಳನ್ನ, ಹದಿನೆಂಟು ಡಿವಿಡಿ, ಸೀಡಿಗಳನ್ನ. ಎಲ್ಲಾ ಬಿಟ್ಟು ‘ಈ ತನಕದ ಕಥೆಗಳು’ ಮತ್ತು ಒರಿಯಾ ಕಥೆಗಳನ್ನ ಓದಲು ಕುಳಿತಿದ್ದೇ ಕೆಲಸ ಕೆಟ್ಟಿತು ನೋಡಿ.
ಏನು ಮಾಡಿದರೂ ಪೂಚೆಕುಟ್ಟಿಯ ಹೊರಚಾಚಿದ ಕಣ್ಣು, ನೀಲಾಳ ಕೊಳಕು ಬಟ್ಟೆಗಳ ಮೂಟೆಗಳು… ಎರಡೇ ಮತ್ತೆ ಮತ್ತೆ ನೆನಪಾಗ್ತಿವೆ. ಕಥೆಗಳನ್ನ ಹೆಣೆದ ಕಥೆಗಾರರ ಶೈಲಿ ಕೂಡ ನನಗೆ ಮೋಡಿಮಾಡಿಬಿಟ್ಟಿವೆ. ಅದನ್ನೆಲ್ಲ ನನಗಂತೂ ಹೆಳಲಿಕ್ಕೆ ಬರೋಲ್ಲ. ನೀವೇ ಖುದ್ದಾಗಿ ಓದಬೇಕು, ಹೇಳಬೇಕು. ಅಷ್ಟೆ.
ಇಷ್ಟಾದರೂ ನೆನಪಾಗ್ತಿಲ್ಲ ನಂಗೆ.
ತೀರ ಇತ್ತೀಚೆಗೆ ನೀಲಾ ಮೇಡಮ್ಮಳ ಕಥೆಯನ್ನ ನನಗೆ ಹೇಳಿದ್ದು ಯಾರು? ಅವಳ್ಯಾಕೆ ನನ್ನ ಹೀಗೆ ಕಾಡಬೇಕು? ಅದೂ, ಕಾಲರಾದಲ್ಲಿ ಅಪ್ಪ ಸತ್ತು, ಅಮ್ಮ ಸತ್ತು, ಪ್ರಿಯತಮನೂ ಸತ್ತು, ತಾನೂ ಸತ್ತೇ ಹೋದ ರೇವತಿಗಿಂತ ಹೆಚ್ಚಾಗಿ…!?
ರೇವತಿಯ ಕಥೆ, ಮತ್ತೊಮ್ಮೆ ಹೇಳುವೆ.
ಪುಸ್ತಕ ಸಂತೆಗೊಮ್ಮೆ ಹೋಗಿಬನ್ನಿ.
ಎಲ್ರಿಗೂ ಥ್ಯಾಂಕ್ಸ್…
November 14, 2008 at 6:11 am | In Uncategorized | 3 Commentsಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು.
ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ.
ಎಲ್ರಿಗೂ ಥ್ಯಾಂಕ್ಸ್…
ಈ ಮೇಲಿನ ಸಮಸ್ಯೆಗೆ ಹಲವು ಮಿತ್ರರು ಸ್ಪಂದಿಸಿದರು. ಎಲ್ಲರಿಗೂ ಧನ್ಯವಾದಗಳು. ನೆನ್ನೆಯೇ ಎಗ್ಸಾಮ್ ನಡೆದು, ಮುಗಿದುಹೋಯ್ತು. ಬಹುತೇಕರ ಅಭಿಪ್ರಾಯದಂತೆ ಸಧ್ಯಕ್ಕೆ ಶ್ವೇತಾ ಹಣ ಕೊಟ್ಟು ಬಂದಿದ್ದಾಳೆ. ಸಂದೀಪ್, ನಾವಡ, ನಿವು ಅದಕ್ಕಿಂತ ಬೇರೆ ಏನನ್ನಾದರೂ ಮಾಡುವ ಭರವಸೆ ನೀಡಿದ್ದಿರಿ. ನಿಮ್ಮ ಬೆಂಬಲಕ್ಕೆ ಆಭಾರಿಯಾಗಿದ್ದೇನೆ. ಈ ಸಂಗತಿಯನ್ನು ಹೀಗೇ ಬಿಟ್ಟುಬಿಡುವ ಮನಸಿಲ್ಲ. ಇವತ್ತು ಶ್ವೇತಾ, ನಾಳೆ ಮತ್ತೊಬ್ಬ ವಿದ್ಯಾರ್ಥಿ/ನಿ… ಹೀಗಾಗಬಾರದು. ಆಕೆಯ ಅಭಿಪ್ರಾಯಗಳನ್ನು ಡಿಸ್ಕಸ್ ಮಾಡಿ ಉಳಿದ ಮಾಹಿತಿ ನೀಡುವೆ. ಅದು ಜೆಪಿ ನಗರದ ಡಿಪ್ಲೊಮಾ ಕಾಲೇಜು ಎಂದಷ್ಟೆ ಈಗ ಹೇಳಬಲ್ಲೆ. ನಾವಡರೇ, ನೀವು ಪತ್ರಕರ್ತರಾಗಿರುವುದರಿಂದ, ಈ ನಿಟ್ಟಿನಲ್ಲಿ ನಿಮ್ಮಿಂದ ಹೆಚ್ಚಿನ ಸಹಾಯ ಅಪೇಕ್ಷಿಸುತ್ತೇನೆ.
ವಿದ್ಯಾರ್ಥಿಗಳು ಇಂಥದನ್ನು ಇತರರ ಗಮನಕ್ಕೆ ತಂದು ಅದನ್ನು ಪ್ರತಿಭಟಿಸುವ ಸ್ಥೈರ್ಯ ತಂದುಕೊಳ್ಳಬೇಕು ಅನ್ನುವುದು ನಮ್ಮ ಬಯಕೆ. ಅದಕ್ಕಾಗಿ ಅವರನ್ನು ಬಹಳ ಮುಂಚಿನಿಂದಲೇ ಪ್ರಿಪೇರ್ ಮಾಡಬೇಕಾಗುತ್ತದೇನೋ? ಮತ್ತು, ಇಂತಹ ಕೆಲಸಗಳಿಗೆ ಅವರಲ್ಲಿ ಸಂಘಟನೆಯೂ ಅಗತ್ಯ. ನಿಮ್ಮೆಲ್ಲರ ಪ್ರತಿಕ್ರಿಯೆಗಳನ್ನು ಶ್ವೇತಾ ಮತ್ತವಳ ಸಹಪಾಠಿಗಳಿಗೆ ತಲುಪಿಸಲು ಪ್ರಯತ್ನಿಸುತ್ತೇನೆ. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದ.
ವಂದೇ,
ಚೇತನಾ ತೀರ್ಥಹಳ್ಳಿ.
ಪ್ರತಿಕ್ರಿಯೆಗಳು ಹೀಗಿವೆ: ( ನೆಲದ ಮಾತು ಬ್ಲಾಗ್ ನದೂ ಸೇರಿ…)
ದುಡ್ಡು ಕೇಳಿದ ಶಿಕ್ಷಕನ ಹೆಸರು ಮತ್ತು ಕಾಲೇಜನ್ನು ತಿಳಿಸುತ್ತೀರ?
ಅಂದಹಾಗೆ, ಪರಿಹಾರವಿಲ್ಲವೆಂದು ಸುಮ್ಮನೆ ಕೂರುವುದು ಬೇಡ. ಏನಾದರು(ವಿದ್ಯಾರ್ಥಿಯ ಭವಿಷ್ಯಕ್ಕೆ ತೊಂದರೆಯಾಗದಂತೆಯೇ) ಮಾಡಬಹುದು.
ಒಂದು ನಾಲ್ಕು ಜನ ಒಗ್ಗೂಡಬೇಕಷ್ಟೆ.
ತಕ್ಷಣಕ್ಕೆ ಯಾರೂ ಏನೂ ಮಾಡಲಾಗದ ಸಂದರ್ಭ… ಬಹಳ ಇಕ್ಕಟ್ಟಿನ ಪರಿಸ್ಥಿತಿ. ಬಹುಶ: ತಕ್ಷಣಕ್ಕೆ ದುಡ್ಡುಕೊಟ್ಟು ಪಾರಾಗುವ ಜಾಣತನವೇ ಉತ್ತಮ ಪರಿಹಾರ.
ಇಲ್ಲವೇ ಹೋರಾಟ ಮಾಡಲೇಬೇಕೆಂದಾದರೆ ಲೋಕಾಯುಕ್ತಕ್ಕೆ ದೂರು ಕೊಟ್ಟು ಲಂಚ ತೆಗೆದುಕೊಳ್ಳುವಾಗ ಹಿಡಿಸಿ. (ಇದರಿಂದ ಆತ ಬಹುಶ: ಸಸ್ಪೆಂಡ್ ಆಗಲಾರ) ಅಥವಾ ಯಾರಾದರೂ ಸಂಬಂಧಪಟ್ಟ ಸಚಿವರಿಗೆ ಅಥವಾ ಅಧಿಕಾರಿಗಳಿಗೆ ತಕ್ಷಣ ದೂರು ನೀಡಿ, ಹಿಡಿಸಿ ಹಾಕಿ.
ದುಡ್ಡು ಕೊಡಿ ಸ್ವಾಮಿ. ಆಕೆಯ ರೀಸಲ್ಟ್ ಬಂದ ಮೇಲೆ ಆ ಶಿಕ್ಷಕರ ಮನೆಗೆ ಹೋಗಿ ಶಾಲು ಹೋದಿಸಿ ಸನ್ಮಾನ ಮಾಡಿ. ಏಕೆ ಅಂದು ಕೇಳಿದರೆ ದೊಡ್ಡ ಸರ್ಟಿಫಿಕೇಟ್ ತಗೊನ್ಡು ಹೋಗಿ. ಅದರಲ್ಲಿ ಕಲಿಯುಗದ ಗುರುಗಳಿಗೆ ಕಿಂಚಿತ್ತು ದುಡ್ಡಿಗಾಗಿ ಪಾಸ್ ಮಾಡಿಸಿದ್ದಕ್ಕೆ ಧನ್ಯವಾದ ಬರೆಸಿ. ಆದ್ರೆ ಪತ್ರಿಕೆ, ಮಾದ್ಯಮಗಳನ್ನು ದೂರ ಇಡಿ. ನಾಳೆ ಅವರು ತಪ್ಪು ತಿದ್ದು ಕೊಳ್ಳೊ ಬದಲು ಆತ್ಮಹತ್ಯೆ ಮಾಡಿಕೊನ್ಡರೆ ಕಷ್ಟ.
ಸಮಸ್ಯೆ ಕಷ್ಟದ್ದೇ. ಆದಷ್ಟು ಬೇಗ ಕಾಲೇಜು ಮತ್ತು ಮೇಸ್ಟ್ರ ಹೆಸರು ಕೊಡಿ. ಮುಂದಿನದ್ದನ್ನು ಸರಿ ಮಾಡೋಕೆ ಪ್ರಯತ್ನಿಸ್ತೇನೆ. ಯಾರಿಗೂ ಏನೂ ಆಗೋಲ್ಲ. ಸಮಸ್ಯೆ ನಿವಾರಿಸೋಣ. ನಂತರ ದೊಡ್ಡ ಮಟ್ಟದ್ದು ಆಲೋಚಿಸೋಣ. ಇಲ್ಲವೇ ಶ್ವೇತಾಗೆ ನನ್ನ ಮೊಬೈಲ್ ಸಂಖ್ಯೆ 93433 81802 ಕೊಡಿ.
ನಾವಡ
ಸಧ್ಯಕ್ಕೆ ನೀಲಾಂಜಲ ಅವರು ಹೇಳಿದಂತೆ ಮಾಡುವುದೇ ಉಚಿತವೆನಿಸುತ್ತದೆ. ಏಕೆಂದರೆ, ಒಬ್ಬರೋ, ಇಬ್ಬರೋ ಎದುರು ನಿಂತರೆ ಏನೂ ಮಾಡಲಾಗದು. ಕೋರ್ಟು, ಕಛೇರಿ ಅಂತಾ ವರ್ಷ ಕಳೆದವರೆಷ್ಟೋ ಮಂದಿಯಿದ್ದಾರೆ. ಆ ಕಾಲೇಜಿನ ಎಲ್ಲಾ ಮಂದಿ ಒಗ್ಗೂಡಿ ಇದಕ್ಕೆ ಬಹಿಷ್ಕಾರ ಹಾಕಿದರೆ ಮಾತ್ರ ತುರ್ತು ಪ್ರಯೋಜನವಿದೆ. ಅಂದ ಹಾಗೆ, ಅದು ಖಾಸಗಿ ಕಾಲೇಜೋ, ಇಲ್ಲಾ ಸರಕಾರಿಯೋ?
ಆದ್ರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
ಕೊನೆಗೆ ಶ್ವೇತಾಳೆ “ಅಕ್ಕ ನಂದು ತಪ್ಪಾಯ್ತು ಉಗುರಲ್ಲಿ ಆಗೋದಕ್ಕೆ ಕೊಡಲಿ ಎತ್ತಿಕೊಂಡೆ ” ಅಂತ ಏನಾದ್ರೂ ಹೇಳಿದ್ರೆ ಸಹಾಯಕ್ಕೆ ಬಂದವರೆಲ್ಲ ಜೀವನಪೂರ್ತಿ ಯಾರಿಗೂ ಸಹಾಯ ಮಾಡದೇ ಇರೋ ಪರಿಸ್ಥಿತಿ ಬರಬಹುದು.(ಯಾಕಂದ್ರೆ ಬಹಳಷ್ಟು ಸಂದರ್ಭದಲ್ಲಿ ನನಗೇ ಈ ರೀತಿ ಸಹಾಯ ಮಾಡಲು ಹೋಗಿ ,ಸಹಾಯ ಪಡೆದವರೇ ಕಾರಣಾಂತರಗಳಿಂದ ತಿರುಗಿ ಬಿದ್ದಿದ್ದಾರೆ)
ಲಂಚ ತಗೊಳ್ಳೋದು ಒಂದು ಚಟ .ಈಗ ಸಿಕ್ಕಿ ಬಿದ್ದು ಸಸ್ಪೆಂಡ್ ಆದ್ರೂ ಮುಂದೆ ಖಂಡಿತ ಚಾಳಿ ಮುಂದುವರೆಸುತ್ತಾರೆ ಅವರು.
ಲಿಂಕು- http://lokayukta.kar.nic.in/telephone.pdf - ಸಂದೀಪ್ ಕಾಮತ್.
ಚೇತನಾ,
ಸಮಸ್ಯೆ ಬುಡಕ್ಕೆ ಕೈ ಹಾಕಬೇಕು, ಅದು ಅಷ್ಟು ಸುಲಭದ ಕೆಲಸವಲ್ಲ. ಇಡಿ ವ್ಯವಸ್ಥೆಯನ್ನು ಸರಿ ಮಾಡಲು ವರ್ಷಗಟ್ಟಳೆ ತೆಗೆದುಕೊಳ್ಳಬಹುದು.
ನಂಗೆ ಕೇಳಿದರೆ ಅವರ/ಅಂತವರ ಮನೆಗೆ ದಿನಕ್ಕೊಂದು ಪೋಸ್ಟ ಕಾರ್ಡ್ ಕಳಿಸಿ. . ಅದರಲ್ಲಿ ಧೀಮಂತ ಗುರುಗಳ ಕತೆ ಬರೆದು ಕಳಿಸಿ, ಹೆದರಿಸಬೇಡಿ ಮಾತ್ರ. - ನೀಲಾಂಜಲ
ನಮ್ಮ ಕಾಲೇಜಿನಲ್ಲೂ ಇದೇ ರೀತಿ ನಮ್ಮ ಸೀನಿಯರ್ಸ್ ಗೆ ಒಬ್ರು ಲೆಕ್ಚರರ್ ಪ್ರಾಕ್ಟಿಕಲ್ ಎಕ್ಸಾಮ್ ಗೆ ಹಣ ಕೇಳಿದ್ರು .Rs 1000/- per head!
ಎಲ್ಲಾ ಸೇರಿ ಕೊಟ್ಟಿದ್ರು .ಅವ್ರು ಎಲ್ಲರಿಗೂ ಕಣ್ನು ಮುಚ್ಚಿ 90 ರ ಮೇಲೆ ಮಾರ್ಕ್ಸ್ ಕೊಟ್ಟಿದ್ರು .
ಪಾಪ ಬಹಳಷ್ಟು ಜನರಿಗೆ ಪ್ರಾಕ್ಟಿಕಲ್ ನಲ್ಲಿ 90 ಬಂದ್ರೂ ಥಿಯರಿನಲ್ಲಿ 35 ತೆಗೆಯೋದಕ್ಕೆ ಸಾಧ್ಯ ಆಗೇ ಇಲ್ಲ:)) – - ಸಂದೀಪ್ ಕಾಮತ್.
ಶ್ವೇತಾಳ ಸಂಕಟಕ್ಕೆ ಪರಿಹಾರವಿದೆಯೇ?
November 13, 2008 at 5:51 am | In ನಿಮ್ಮೊಂದಿಗೆ | 5 CommentsTags: ಭ್ರಷ್ಟಾಚಾರ
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು.
ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ.
ವಂದೇ,
ಚೇತನಾ ತೀರ್ಥಹಳ್ಳಿ.
Blog at WordPress.com. | Theme: Pool by Borja Fernandez.
Entries and comments feeds.
