ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…
October 11, 2008 at 5:49 am | In ಗಂಡಸ್ರ ಗೋಳು! | 11 Commentsನಾನು ಗಂಡಾಗಿ ಹುಟ್ಟಿದ್ದರ ಅಹಂಕಾರ ನನಗೆ ಖಂಡಿತ ಇತ್ತು. ಹಾಗಂತ ಹೆಣ್ಣುಮಕ್ಕಳಿಲ್ಲದ ನಮ್ಮ ಮನೆಯಲ್ಲಿ ನಾನೇ ಮಗನೂ ಮಗಳೂ ಆಗಿದ್ದೆ. ರಂಗೋಲಿ ಹಾಕೋದು, ಅಮ್ಮ ಮನೆ ಕ್ಲೀನು ಮಾಡುವಾಗ ಸಹಾಯಕ್ಕೆ ನಿಲ್ಲೋದು, ಅವಳ ಪೂಜೆ ಪುನಸ್ಕಾರಗಳಿಗೆ ಅಣಿ ಮಾಡ್ಕೊಡೋದು…
ನನಗದೆಷ್ಟು ದೇವರನಾಮಗಳು ಬಾಯಿಗೆ ಬರ್ತಿದ್ದವೆಂದರೆ, ನಮ್ಮ ಮನೆಗೆ ಬಂದುಹೋಗುವ ಆಂಟಿಯರೆಲ್ಲ “ಈ ಹುಡ್ಗನ್ನ ನೋಡಾದ್ರೂ ಕಲ್ತುಕೊಳ್ಳಿ” ಅಂತ ತಮ್ಮ ಹೆಣ್ಣುಮಕ್ಕಳ ಮೂತಿ ತಿವೀತಿದ್ದರು!
ಇದರ ಜೊತೆಗೆ ಓದಿನಲ್ಲಿ, ಆಟದಲ್ಲಿ ಎಲ್ಲಾದರಲ್ಲೂ ಮುಂದು. ನಮ್ಮಪ್ಪ ಅಮ್ಮನಿಗೆ ನಾನಂದರೆ ವಿಪರೀತ ಹೆಮ್ಮೆ.
ಆದರೆ, ನನ್ನ ಕಾಲೇಜಿನ ದಿನಗಳು ಮುಗಿದವು ನೋಡಿ… ಆಗ ಶುರುವಾಯ್ತು ಅಸಲಿ ಜೀವನ. ಡಿಗ್ರಿ ಮುಗಿಸಿದ ನಾನು ಕ್ಲಾಸಿಫೈಡುಗಳಲ್ಲಿ ಮುಳುಗಿಹೋದೆ. ಗುರುತು ಮಾಡಿಟ್ಟುಕೊಂಡ ವಿಳಾಸಗಳನ್ನ ಹುಡುಕಿಕೊಂಡು ಅಲೆದೆ. ಆದರೇನು? ನಾನು ಇಂಟರ್ವ್ಯೂಗೆ ಹಾಜರಾಗುವ ಹೊತ್ತಿಗೆ ‘ಕೆಲಸ ಖಾಲಿ ಇಲ್ಲ’ ಬೋರ್ಡು ನೇತಾಡತೊಡಗುತ್ತಿತ್ತು. ರಿಸೆಪ್ಷನ್ ಕೆಲಸ, ಟೆಲಿ ಮಾರ್ಕೆಟಿಂಗು, ಡಿಟಿಪಿ… ಊಹೂಂ! “ಅವೆಲ್ಲ ಹೆಣ್ಣುಮಕ್ಕಳಿಗೆ ಮಾತ್ರ” ಅಂದುಬಿಡ್ತಿದ್ದರು. ಯಾಕೆ? ಟೆಲಿ ಮಾರ್ಕೆಟಿಂಗಲ್ಲೂ ನಾವು ಬೇಡ್ವಾ? ಅಂದ್ರೆ, ಕಾಲ್ ರಿಸೀವ್ ಮಾಡಿದವರಿಗೆ ಹೆಣ್ಣುದನಿ ಕೇಳಿದರೆ ಖುಷಿಯಾಗತ್ತೆ ಅನ್ನುವ ಉತ್ತರ!
ಇನ್ನು ಮಾಹಿತಿ, ದೂರು ವಿಭಾಗಗಳು? ಯಾರು ಉತ್ತರ ಕೊಟ್ಟರೇನು? ಸಮಸ್ಯೆ ಪರಿಹಾರವಾದ್ರೆ ಸಾಕಲ್ಲ? ಇಲ್ಲ… ಹಾಗಲ್ವಂತೆ ಅದು. ಹೆಣ್ಣಿನ ದನಿ, ಕೇಳುಗರ ಕೋಪ ತಣಿಸುತ್ತಂತೆ. ಅದರಲ್ಲೊಂದು ಮಾದಕತೆ ಇರತ್ತಂತೆ!
ನಾನು ಅಲೆಯುತ್ತ ಅಲೆಯುತ್ತ ಕಾಲ ಕಳೆದಿದ್ದೊಂದೇ ಬಂತು. ಕೆಲಸ ಮಾತ್ರ ಸಿಗಲೇ ಇಲ್ಲ. ಈಗ ಅಪ್ಪನಿಗೂ ಅಸಹನೆ ಶುರುವಾಗಿತ್ತು. ಅರಿಶಿಣ ಕುಂಕುಮಕ್ಕೆ ಬರುವ ಅಂಟಿಯರು ‘ನಮ್ ಮಗ್ಳಿಗೆ ಬಿಪಿಓ ದಲ್ಲಿ ಕೆಲ್ಸ’ ಅಂದಾಗಲೆಲ್ಲ ಅಮ್ಮನ ಮುಖ ಸಣ್ಣಗಾಗ್ತಿತ್ತು. ನಾನು ಅಲ್ಲಿಗೆ ಮತ್ತೆ ಮತ್ತೆ ಎಡತಾಕಿದ್ದು, ಅವರು ಹೆಣ್ಣುಗಳಿಗೆ ಮೊದಲ ಆದ್ಯತೆ ಅಂದಿದ್ದು, ಎಲ್ಲಾ ವಿವರಿಸಿ ಹೇಳಿದರೂ ಅವಳಿಗೆ ಅರ್ಥವಾಗಲೇ ಇಲ್ಲ.
ನಾನು ಮಾತ್ರ ಹತಾಶನಾಗದೆ ನನ್ನ ಹುಡುಕಾಟ ಮುಂದುವರಿಸಿದ್ದೆ.
ಈ ಬಾರಿ ಟೀವಿ ಕಛೇರಿಯೆದುರು ನಿಂತಿದ್ದೆ. ನನ್ನ ನಿರರ್ಗಳ ಮಾತು, ಶೈಲಿ, ಹಾಡುಗಾರಿಕೆಗಳು ನನಗೆ ಕೆಲಸ ಕೊಡಿಸಿಕೊಡಬಹುದೆಂಬ ಭರವಸೆ ಇತ್ತು. ಅಲ್ಲಿ ನಿರೂಪಣೆಗಾಗಿ ಸಂದರ್ಶನ ನಡೆಸಿದ್ದರು. ನಾನು ನೋದಲು ಚೆಂದವಿದ್ದೇನೆ ಅಂತಿದ್ರು ಎಲ್ಲರೂ.
ಸರಿ. ಸ್ಕ್ರೀನ್ ಟೆಸ್ಟ್ ಮುಗಿಯಿತು. ನಮ್ಮ ಮಂಜ ಮಾವ ಆ ಟೀವಿ ಚಾನೆಲ್ಲಿನ ಆವರಣದಲ್ಲಿ ಕ್ಯಾಂಟೀನ್ ನಡೆಸ್ತಾರೆ. ಅವರೇ ಸ್ಟುಡಿಯೋಗೆಲ್ಲ ಕರೆದುಕೊಂಡುಹೋದರು.
ನಾನಂತೂ ಚೂರೂ ಭಯವಿಲ್ಲದೆ ಕ್ಯಾಮೆರಾದೆದುರು ನಿಂತೆ. ಡೈರೆಕ್ಟರು ಪೀಚು ಹುಡುಗ. “ನಾನು ಹೇಳಿದಾಗ ಮಾತಾಡು, ಸನ್ನೆ ಮಾಡಿದಾಗ ನಿಲ್ಲಿಸು” ಅಂದ.
ನಾನು ಶುರು ಹಚ್ಚಿಕೊಮ್ಡೆ. “ವೀಕ್ಷಕರೇ, ನಿಮಗೆಲ್ಲ ಮುಟ್ಟಿದರೆ ಮುನಿ ಕಾರ್ಯಕ್ರಮಕ್ಕೆ ಸ್ವಾಗತ. ನಾವಿವತ್ತು ನಾರಿ ಮುನಿದರೆ ಮಾರಿ ಅನ್ನೋ ಟಾಪಿಕ್ ಚರ್ಚಿಸೋಣ. ಯಾರ್ ಚೆನ್ನಾಗಿ ಒಲೀತಾರೋ, ಯಾರ್ ಚೆನ್ನಾಗಿ ಮುನೀತಾರೋ ಅವರಿಗೆ ಕಾರ್ಯಕ್ರಮದ ಕೊನೆಯಲ್ಲಿ ಬಹುಮಾಣ. ಬನ್ನಿ ಹಾಗಿದ್ರೆ, ಮೊದಲ ಕಾಲರ್ ಯಾರು ನೋಡೋಣ…”
ಅರಳುಹುರಿದಹಾಗೆ ಮಾತಾಡ್ತಾ ಸಾಗಿದೆ. ಡೈರೆಕ್ಟರು ‘ಕಟ್’ ಹೆಳೋದು ಮರೆತು ನಿಂತಿದ್ದ.
ವಿಶ್ವಾಸ ಬಂದಹಾಗಾಗಿ ‘ನಂಗೆ ಹಾಡ್ಲಿಕ್ಕೂ ಬರತ್ತೆ’ ಅಂದು ಹಾಡಿ ತೋರಿಸಿದೆ. ಲೈಟ್ ಬಾಯ್ ಗಳಿಂದ ಹಿಡಿದು ಎಲ್ಲರೂ ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಮೈಕು ತೆಗೀಲಿಕ್ಕೆ ಬಂದ ಹುಡುಗ ಕೂದ ‘ಚೆನಾಗಿ ಮಾತಾಡಿದ್ರಿ ಸಾರ್’ ಅಂದ. ನಾನು ಕೆಲಸ ಸಿಕ್ಕೇ ಬಿಡ್ತು ಅಂತ ನಿರಾಳವಾದೆ.
ಸ್ಟುಡಿಯೋ ಹೊರಗೆ ಬರೋ ವೇಳೆಗೆ ಡೈರೆಕ್ಟರು ಮಾತಾಡ್ತಿದ್ದದ್ದು ಕೇಳಿಸ್ತು. ‘ಸಾರ್, ಇವ್ನು ಹುಡುಗಿಯಾಗಿದ್ದಿದ್ರೆ ಮಜಾನೇ ಬೇರೆ ಇರ್ತಿತ್ತು ಸಾರ್. ಸಖತ್ ಪ್ರೋಗ್ರಾಮ್ ಮಾಡಬಹುದಿತ್ತು!”
ನನ್ನ ತಲೆ ಮೇಲೆ ತಣ್ಣೀರು ಸುರಿದಹಾಗಾಯ್ತು.
ಹೊರಗೆ ಬರುವಾಗ ನೋಡಿದೆ. ಟೀವಿಯಲ್ಲಿ ತುಂಡುಲಂಗದ ಹುಡುಗಿ “ಬನ್ನಿ, ಹಿಂದಿನ ನೇರ ಪ್ರಸಾರದಲ್ಲಿ ನಾವು ನೀವು ಒಸ ಹಾಟ ಹಾಡೋಣ” ಅಂತಿದ್ಲು! ಅಸಹ್ಯವಾಯ್ತು.
“ಛೆ! ನಾನೂ ಹುಡ್ಗಿಯಾಗಿ ಹುಟ್ಬೇಕಿತ್ತು”
ಹಾಗಂತ ಮೊದಲ ಬಾರಿಗೆ ಅನ್ನಿಸ್ತು.
Blog at WordPress.com. | Theme: Pool by Borja Fernandez.
Entries and comments feeds.