ಒಂದು ಕಥೆ, ನಾಲ್ಕು ಮಾತು…
September 26, 2008 at 9:54 am | In ನಿಮ್ಮೊಂದಿಗೆ | 6 CommentsTags: ಧರ್ಮ, ರಾಜಕಾರಣ
ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು. ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.
ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು ಬೀರುವುದು ಮೊದಲಾದ ಉಪಟಳ ನೀಡತೊಡಗಿದರು. ಇದು ಎಷ್ಟು ಹೆಚ್ಚಾಯ್ತೆಂದರೆ, ಸರ್ಪ ಸದಾ ಹುತ್ತದೊಳಗೆ ಅಡಗಿ ಕೂರುವ ಸ್ಥಿತಿ ಬಂತು. ಇದರಿಂದಾಗಿ ಅದಕ್ಕೆ ಆಹಾರ ಒದಗುವುದು ದುಸ್ತರವಾಗತೊಡಗಿತು. ಬಲಹೀನನಾದ ಸರ್ಪ ಹುತ್ತದೊಳಗೆ ಕುಳಿತಿದ್ದರೆ, ಹುಡುಗರು ಹುತ್ತದ ಬಾಯಿಗೆ ಮರಳು ಸುರಿದು, ಮತ್ತಷ್ಟು ಹಿಂಸೆ ಕೊಟ್ಟರು. ಇವೆಲ್ಲವನ್ನೂ ಸಹಿಸಿಕೊಳ್ಳುತ್ತ ಅದು ದಿನೇ ದಿನೇ ಸೊರಗತೊಡಗಿತು.
ಭೂಲೋಕ ಸಂಚಾರ ಮಾಡುತ್ತಿದ್ದ ನಾರದರು, ತಮ್ಮ ಸರ್ಪಶಿಷ್ಯನನ್ನು ಹುಡುಕಿಕೊಂಡು ಬಂದರು. ಹುತ್ತದಲ್ಲಿ ಎರೆಹುಳುವಿನಂತೆ ವಿಲಿಗುಟ್ಟುತ್ತ ಬಿದ್ದಿದ್ದ ಅದನ್ನು ಕಂಡು ಕನಿಕರಪಟ್ಟರು. ಅದರ ದುರವಸ್ಥೆಗೆ ಕಾರಣ ವಿಚಾರಿಸಿದರು. ಆಗ ಸರ್ಪ, ತನ್ನ ಸಾಧುತ್ತ್ವವೇ ಇಂಥಹ ಪರಿಸ್ಥಿತಿ ಒದಗಿಸಿತು ಎಂದು ಹೇಳಿತು.
ಅದಕ್ಕುತ್ತರವಾಗಿ ನಾರದರು,
“ಹಿಂಸೆಯನ್ನು ಬಿಡುವುದೆಂದರೆ ಸ್ವರಕ್ಷಣೆಯನ್ನು ಕೈ ಬಿಡುವುದಲ್ಲ. ನೀನು ಕಚ್ಚುವುದನ್ನು ಬಿಡುವುದು ಸರಿಯೇ, ಆದರೆ ಹೆಡೆಬಿಚ್ಚಿ ಭುಸುಗುಟ್ಟುವುದನ್ನು ಬಿಡಬೇಡ. ಆಗ ಈ ಹುಡುಗರು ನಿನ್ನನ್ನು ನೋಡಿ ಭಯಪಡುತ್ತಾರೆ. ನಿನಗೆ ತೊಂದರೆ ಕೊಡುವುದಿಲ್ಲ” ಎಂದು ಉಪದೇಶಿಸಿ, ಹರಸಿ ಹೊರಟುಹೋದರು.
~
ಈ ಕಥೆ ಹೇಳಲು ಇದು ಸಕಾಲ ಅನಿಸಿತು. ತಡೆಯಲಾಗಲಿಲ್ಲ. ಅದಕ್ಕೇ, ನಿಮಗೆಲ್ಲ ಗೊತ್ತಿರಬಹುದಾದರೂ ಹೇಳಬೇಕಾಯಿತು. ಯಾವುದೇ ಕಥೆಯಾಗಲಿ, ಅದು ಕೆಲವು ಸಂದರ್ಭಗಳಲ್ಲಿ ವಿಶೇಷ ಬಲ ಪಡೆದುಬಿಡುತ್ತದೆ ಅಲ್ಲವೆ?
‘ವಿಶ್ವ ಮಾನವ’ರು ನನ್ನ ‘ಮತೀಯ ದುರಂತಗಳ ಬಗ್ಗೆ ನನ್ನದೊಂದು ಸತ್ತ ದನಿ’ ಲೇಖನಕ್ಕೆ ಪ್ರತಿಕ್ರಿಯೆ ಬರೆದು ಒಂದೆರಡು ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಉತ್ತರ ಏನು ಅಂತ ಕೊಡೋದು? ಜಾತಿ ಆಧಾರಿತ ಭಯೋತ್ಪಾದನೆ ನಮ್ಮ ದೇಶದಲ್ಲಿ ಎಲ್ಲೆಲ್ಲಿ ನಡೀತಿದೆ, ಯಾರಿಂದ ನಡೀತಿದೆ, ಯಾಕಾಗಿ ನಡೀತಿದೆ ಅಂತ ಚರ್ಚಿಸೋಕೆ ಇದು ಸಕಾಲವಲ್ಲವೆ? ನಿಮಗೆ ಆಸಕ್ತಿ ಇದೆಯೇ? ನಿಮಗೆಲ್ಲ ಪುರುಸೊತ್ತಿದ್ದರೆ ನಾನಂತೂ ತಯಾರಾಗಿರುವೆ. ಈ ನಿಟ್ಟಿನಲ್ಲಿ ಸಾಕಷ್ಟು ಅಧ್ಯಯನ ಮಾಡಿರುವುದರಿಂದ ಬಲವಾದ ದಾಖಲೆಗಳ ಸಹಿತ ಮಾಹಿತಿ ನೀಡಬಲ್ಲೆ. ಬಿಡೀ. ಅದೇನೂ ದೊಡ್ಡ ಸಂಗತಿಯಲ್ಲ. ಜಗತ್ತು ಕೀ ಬೋರ್ಡಿನ ಮೇಲೆ ನಲಿದಾಡುವ ಈ ದಿನಗಳಲ್ಲಿ ಯಾರೂ ಕಷ್ಟ ಪಡಬೇಕಾಗಿಲ್ಲ.
ಆದರೂ, ಚರ್ಚಿಸಬೇಕನಿಸುತ್ತದೆ. ಯಾಕೆ ಹೀಗಾಗುತ್ತಿದೆ, ಯಾಕೆ ಧರ್ಮದ ಹೆಸರಲ್ಲಿ ದೇಶ ಹೊತ್ತುರಿಯುತ್ತದೆ ಎಂದೆಲ್ಲ ಮಾತಾಡಿಕೊಂಡು ಮುಂದಿನ ಪೀಳಿಗೆ ಇದರತ್ತ ತಲೆ ಹಾಕದ ಹಾಗೆ ಮಾಡಬೇಕನಿಸುತ್ತದೆ. ಕುಂತತ್ರ ರಾಜಕಾರಣಕ್ಕಾಗಿ ನಾವು- ಜನ ಸಾಮಾನ್ಯರೆಲ್ಲರೂ ದಂಡ ತೆರಬೇಕಾಗುತ್ತಲೇ ಇದ್ದರೂ ಇದಕ್ಕೊಂದು ಅಂತಿಮ ಪರಿಹಾರ ಸಿಗದಿರುವುದರ ಬಗ್ಗೆ, ಅದರ ಹಿಂದಿನ ಕಾರಣದ ಬಗ್ಗೆ ಚಿಂತಿಸಬೇಕೆನಿಸುತ್ತದೆ. ನನ್ನ ಓರಗೆಯ ನೀವೆಲ್ಲ ಈ ಬಗ್ಗೆ ಏನು ಯೋಚಿಸುತ್ತಿದ್ದೀರಿ? ಕೇಳಬೇಕೆನಿಸುತ್ತದೆ.
ಆದರೇನು ಮಾಡಲಿ? ಈ ಬಗ್ಗೆ ನಿಮ್ಮಲ್ಲಿ ಕೇಳಿದರೆ ನೀವೇನು ಹೇಳುವಿರೋ ಎಂದುಕೊಂಡು ಸುಮ್ಮನಿದ್ದೇನೆ.
ಸರ್ವೇ ಭವನ್ತು ಸುಖಿನಃ ಸರ್ವೇ ಸನ್ತು ನಿರಾಮಯಾಃ| ಸರ್ವೇ ಭದ್ರಾಣಿ ಪಶ್ಯನ್ತು ಮಾ ಕಶ್ಚಿದ್ ದುಃಖ ಭಾಗ್ಭವೇತ್|| ಅಷ್ಟೇ.
Blog at WordPress.com. | Theme: Pool by Borja Fernandez.
Entries and comments feeds.
