ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ
September 19, 2008 at 7:59 am | In ನಿಮ್ಮೊಂದಿಗೆ | 16 CommentsTags: ಮತಾಂತರ, ಮತೀಯ ಗಲಭೆ
ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ.
ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ… ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ, ಚೆಂಡಿನಂತೆ…
ಇಷ್ಟಕ್ಕೂ ಧರ್ಮವನ್ನು ಮುಂದಿಟ್ಟುಕೊಂಡು ಜಗದಾದ್ಯಂತ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಎಷ್ಟೂಂತ ಬರೀಬಹುದು ಹೇಳಿ? ಓದಿಯೇ ಸಾಕಾಗಿಹೋಗಿದೆ. ಇವತ್ತು ಒಬ್ಬ ಸಾಮಾನ್ಯ ಹಿಂದೂ ಕೂಡ ಸಿಡಿಮಿಡಿಗುಟ್ಟುವ ಹಾಗಾಗಿರುವುದರ ಹಿಂದಿನ ಕಾರಣವನ್ನ ಯಾರಾದರೂ ಯೋಚಿಸಿದ್ದೀರಾ? ಖಂಡಿತ ಯೋಚಿಸಿಯೇ ಇರುತ್ತೀರಿ. ನಾನೂ ಯೋಚಿಸಿದ್ದೇನೆ. ಜಾತಿ ಗೀತಿಗಳ ತಂಟೆಗೇ ಹೋಗದ, ತೀರಾ ಅಮ್ಮ ಬಯ್ತಾಳೆ ಅಂತ ಊರಿಗೆ ಹೋಗುವಾಗ ಎರೆಡೆಳೆ ಜನಿವಾರ ಹಾಕ್ಕೊಳ್ಳುವ ತಮ್ಮ ಕೂಡ ‘ಬಡೀಬೇಕು ನನ್ ಮಕ್ಳಿಗೆ… ನಮ್ ಪಾಡಿಗೆ ನಮ್ಮನ್ನ ಇರೋಕೇ ಬಿಡಲ್ಲ ಅವ್ರು….” ಅಂದಾಗ ಹೌಹಾರಿಹೋಗಿದ್ದೆ. ಕ್ರಿಸ್ ಮಸ್ಸಿಗೆ ಕೇಕು ತಂದು ಹಂಚುವ, ರಂಜಾನಿಗೆ ಶಾವಿಗೆ ಪಾಯಸ ಮಾಡುವ, ಕತ್ತೆ ನಿಂತರೂ ಕಾಂಗ್ರೆಸ್ಸಿಗೇ ಓಟು ಹಾಕುವ ಅಮ್ಮ ಕೂಡ ‘ಅತಿ ಆಯ್ತು ಕಣೇ ಇವ್ರದ್ದು, ಆ ಬೊಬ್ಬಿ ಹುಡುಗನ್ನ ಕೊಂದೇ ಬಿಟ್ರಲ್ಲ, ಅವ್ರ ಹುಡುಗೀನ ಲವ್ ಮಾಡ್ತಿದ್ದ ಅನ್ನೋ ಒಂದೇ ಕಾರಣಕ್ಕೆ… ಎಷ್ಟ್ ದಿನ ಸಹಿಸ್ಬೇಕೋ ಇವ್ರ ಕರ್ಮಾನ ನಾವಿನ್ನೂ! ಬೇರೆ ದೇಶ ಕೊಟ್ಟಾಗ ಬಾಯ್ಮುಚ್ಕೊಂಡ್ ತೊಲಗ್ ಬೇಕಿತ್ತು’ ಅನ್ನುತ್ತ ಅವಡುಗಚ್ಚಿದಳು.
ಬೇರೆ ಯಾರೋ ದೂರದವರನ್ನ ಎಳೆದು ತರೋದು ಬೇಡ ಅಂತಲೇ ನಾನು ನನ್ನ ಹತ್ತಿರದ ಉದಾಹರಣೆಗಳನ್ನ ಕೊಟ್ಟಿದೇನೆ. ಇಂತಹ ಹಲವಾರು ಜನರ ಒಳಗುದಿಯನ್ನು ನೋಡುತ್ತ ನೋಡುತ್ತ ಮಧ್ಯಮವರ್ಗದ ಹಿಂದೂ ಮಾನಸಿಕತೆಯನ್ನ ಅರಗಿಸ್ಕೊಳ್ಳುವ ಯತ್ನ ಮಾಡ್ತಿದೇನೆ.
ಈಶಾನ್ಯ ರಾಜ್ಯಗಳಲ್ಲಿ ಸ್ವಯಂಸೇವಾ ಕಾರ್ಯಕರ್ತರೊಂದಷ್ಟು ಜನ ಕೆಲಸ ಮಾಡ್ತಿದಾರೆ. ಸಾವರ್ಕರ್, ‘ಮತಾಂತರದಿಂದ ರಾಷ್ಟ್ರ್‍ಆಂತರವಾಗತ್ತೆ’ ಎಂದು ಮುನ್ನುಡಿದಿದ್ದು ಅಲ್ಲಿ ನಿಜವಾಗ್ತಿದೆ. ನಾಗಾಲ್ಯಾಂಡಿನಲ್ಲಿ ‘ಇಂಡಿಯನ್ ಡಾಗ್ಸ್ ನಾಟ್ ಅಲೋವ್ಡ್’ ಅಂತ ಬೋರ್ಡು ಹಾಕ್ಕೊಂಡಿದಾರೆ. ನಮ್ಮ ನಾಡು ಕ್ರಿಸ್ತನಿಗೆ ಸೇರಿದ್ದು ಅಂತಿದಾರೆ.
ನಮ್ಮ ಪರಿಚಿತರೊಬ್ಬರು ಅಲ್ಲಿ ಕೆಲಸ ಮಾಡಿ ವಾಪಸು ಬಂದರು. ಜೊತೆಗಿಬ್ಬರು ಹುಡುಗರನ್ನ ಕರೆತಂದರು. ಒಬ್ಬನ ಹೆಸರು ‘ಚಿ ಮುಂಗ್’ ಅಂತ ನೆನಪು. ಅವರನ್ನಿಲ್ಲಿ ಕಾಲೇಜಿಗೂ ಸೇರಿಸಿದರು. ಒಬ್ಬ ಹೇಗೋ ಅಡ್ಜಸ್ಟ್ ಆದ. ಮತ್ತೊಬ್ಬ ಮಾತ್ರ, ‘ನಾನು ವಾಪಸು ಹೋಗಿ ಮತಾಂತರವಾಗ್ತೇನೆ. ಇಲ್ಲಿ ಓದೋಲ್ಲ’ ಅಂತ ಹಟ ಹಿಡಿದ. ಕಾರಣ ಕೇಳಿದರೆ, ‘ಹಿಂದೂಗಳಲ್ಲಿ ಒಗ್ಗಟ್ಟಿಲ್ಲ, ಜಾತೀಯತೆ ಇದೆ, ಮೇಲು ಕೀಳಿದೆ, ಈ ಧರ್ಮದ ದೇವತೆಗಳೆಲ್ಲ ಕ್ರೂರಿಗಳು, ಲಂಪಟರು…’ ಇತ್ಯಾದಿ ಪಾಠ ಒಪ್ಪಿಸಿದ.
ಖಂಡಿತ ಅಂವ ಹಿಂದೂ ಶಾಸ್ತ್ರ ಗ್ರಂಥಗಳನ್ನ ಓದಿರಲಿಲ್ಲ. ಅದಕ್ಕಿಂತ ಮುಖ್ಯವಾಗಿ ಬೈಬಲ್ ಪರಿಚಯವೇ ಅವನಿಗಿರಲಿಲ್ಲ ಅನ್ನೋದು ಸ್ಪಷ್ಟವಾಯ್ತು. ಇದನ್ನ ವಿವರವಾಗಿ ಹೇಳುವ ಅಗತ್ಯವಿಲ್ಲ ಅಲ್ಲವೆ?
ಮಾತೆತ್ತಿದರೆ ಭಜರಂಗಿಗಳು (ಸಮಜಾಯಿಷಿ- ಐ ಹೇಟ್ ದೆಮ್), ವಿಹಿಂಪ, ಸಂಘ ಪರಿವಾರವನ್ನು ದೂರುವ ಮಂದಿಗೆ ಒರಿಸ್ಸಾ ಘಟನೆ ಪಾಠ ಕಲಿಸಿರಬೇಕು(ಈ ಸಂದರ್ಭದಲ್ಲಿ ಮಡಿದವರ ಬಗ್ಗೆ ತೀವ್ರ ಸಂತಾಪವಿದೆ). ಅಲ್ಲಂತೂ ಸಂಘಿಗಳ ಗಂಧ ಗಾಳಿಯೂ ಇಲ್ಲ. ಅಲ್ಲಿ ಕ್ರೈಸ್ತರ ವಿರುದ್ಧ ಸೆಟೆದು ನಿಂತಿದ್ದು ಬುಡಕಟ್ಟು ಜನಂಗದ, ಗುಡ್ಡಗಾಡು ಪ್ರದೇಶದ ಜನ ಸಾಮಾನ್ಯರು! ಅವರ ಪಾಲಿಗೆ ಹಿಂದುತ್ವ ಒಂದು ಅಮಲಲ್ಲ. ಅದು ಶ್ರದ್ಧೆ, ನಂಬಿಕೆ.
ಅನಂತ ಮೂರ್ತಿಯವರ ಅರ್ಟಿಕಲ್ ಗಳನ್ನ ನೋಡಿದೆ. ಕೆಂಡಸಂಪಿಗೆಯಲ್ಲಿ, ಸಂಪದದಲ್ಲಿ, ಋಜುವಾತುವಿನಲ್ಲಿ. ದೊಡ್ಡವರು. ಅವರಿಗೆ ನಾವೇನೂ ಕಮೆಂಟ್ ಮಾಡಬಾರದು. ಪಾಪ. ಅವರಿನ್ನೂ ಗುಜರಾತ್ ಕನವರಿಕೆಯನ್ನೇ ಬಿಟ್ಟಿಲ್ಲ. ಅವರಿಗೆ (ಬಹುಶಃ) ಗ್ರೀನ್ ಕಾರಿಡರ್ ಸಂಗತಿ ಗೊತ್ತಿಲ್ಲ. ಯಾವುದೇ ವ್ಯಕ್ತಿ ಕ್ಷಣಿಕ ಆಮಿಷಕ್ಕೆ ಬಿದ್ದು ಮತಾಂತರಗೊಂಡರೆ ಅದರಿಂದಾಗುವ ವೈಯಕ್ತಿಕ- ಸಾಮಾಜಿಕ ನಷ್ಟದ ಬಗ್ಗೆ ಅರಿವಿಲ್ಲ. ಇವತ್ತು ನೆನ್ನೆ ಕಣ್ ಬಿಡುತ್ತಿರುವ ನಾವು ಹಾಗೆ ಅಪವಾದ ಮಾಡಿದರೆ ದೊಡ್ಡವರೆಲ್ಲ ಏನನ್ನುತ್ತಾರೋ?
ಅದಕ್ಕೇ,
ಏನೂ ಬರೆಯೋದು ಬೇಡವೆಂದು ಸುಮ್ಮನಾಗ್ತಿದೇನೆ. ಯಾರೇನು ಅಂದುಕೊಳ್ತಾರೋ ಅಂತ ಹಿಂಜರಿದು ಮುಖವಾಡ ಹಾಕ್ಕೊಳ್ತಿದೇನೆ. ಬಚಾವಾಗಲು ಹೆಣಗುವ ಮತ್ತದೇ ಆಮೆಯಂತೆ.
Blog at WordPress.com. | Theme: Pool by Borja Fernandez.
Entries and comments feeds.