ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…

September 6, 2008 at 5:13 am | In ಕಥೆ ಥರ... | 9 Comments
Tags: , , ,

ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್… ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ!
ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು ಗೊತ್ತಿದ್ದೂ….

ಆ ಬೆಳಗಿನ ಒಂಬತ್ತು ಗಂಟೆಗೇ ಬಸ್ಸು ಹುಳ್ಳಗಾಗಿತ್ತು. ಒಂಥರಾ ಹಾಳಾದ ಹುಳಿ ಮಜ್ಜಿಗೆ ವಾಸನೆ. ದೊಗಲೆ ಡ್ರಾಯರ್ರು ಹಾಕಿ ಅದು ಕಾಣುವಷ್ಟು ಮೇಲೆ ಲುಂಗಿ ಎತ್ತಿ ಕಟ್ಟಿ, ಹೆಗಲ ಮೇಲೊಂದು ಶಾಲು, ಟವೆಲು… ಅವರವರ ಅಂತಸ್ತಿಗೆ ತಕ್ಕ ಹಾಗೆ. ಅದಾಗಲೇ ಒಂದಷ್ಟು ತಾವೂ ಹುಳ್ಳಗಾಗಿ ಬೀಡಿ ಸೇದುತ್ತಲೋ ನಶ್ಯ ನುರಿಯುತ್ತಲೋ ಬಸ್ಸು ಹೊರಡೋದನ್ನೇ ಕಾಯುತ್ತ ಬಸ್ಸಿನ ತುಂಬ ಚಡಪಡಿಸ್ತಿದ್ದರು ಒಂದಷ್ಟು ಗಂಡಸರು.
ಝರಿಝರಿಯ ಸೀರೆ ಉಟ್ಟು, ಬಾಯಿ ತುಂಬ ತಂಬಾಕು- ಎಲೆ ತುಂಬಿಕೊಂಡು ಕಚಪಚ ಮಾಡುತ್ತ ಬಸ್ಸು ಊರು ಮುಟ್ಟೋದು ತಡವಾದಷ್ಟೂ ಚೆನ್ನ ಅಂತ ಹಾರೈಸ್ತ ಕೂತಿದ್ದರು ಹೆಂಗಸರು.
ಅವರೆಲ್ಲರ ನಡುವೆ ಕಿಸಿಕಿಸಿ ಅನ್ನುತ್ತ ಕಂಡಕ್ಟರನ ಕಟಾಕ್ಷಕ್ಕೆ ಪೈಪೋಟಿ ನಡೆಸ್ತಿದ್ದ ಹರೆಯದ ಒಂದಷ್ಟು ಹೆಣ್ಣುಗಳು. ಇವೆಲ್ಲವನ್ನೂ ಮೀರಿ, ಡ್ರೈವರನ ಪಕ್ಕದ ಮೂಲೆಯಲ್ಲೊಂದು ಭಾರೀ ಸೈಜಿನ ಟೀವಿ ಅಲ್ಲಿದ್ದವರೆಲ್ಲರನ್ನೂ ಒಟ್ಟಾಗಿ ಸೆಳೆಯುತ್ತಿತ್ತು. ಅದರಲ್ಲೊಂದು ತೆಲುಗು ಸಿನೆಮಾ. ದಪ್ಪಕೆ ತೀಡಿದ ಹುಬ್ಬಿನ ಹೀರೋ ಹೀರೋಇನ್ನಿನ ಕೆನ್ನೆ ತಿನ್ನುತ್ತಿದ್ದ. ನೋಡುತ್ತ ಕುಂತಿದ್ದ ಹೆಂಗಸರೆಲ್ಲ ‘ಅಯ್ಯಾ…. ತಗಿ ತಗೀ… ’ ಅನ್ನುತ್ತಲೇ ಎಲೆಯಡಿಕೆ ಜಗಿತದ ವೇಗ ಹೆಚ್ಚಿಸ್ಕೊಂಡು ಮುಸಿನಗತೊಡಗಿದರು. ಅವರ ಸಂಕೋಚಕ್ಕೆ ಸವಾಲಾಗಿ ಬಸ್ಸಿನ ಬಾರು ಹಿಡಿದು ನೇತಾಡ್ತಿದ್ದ ಹುಡುಗರು ಪೋಲಿ ಪೋಲಿ ತೆಲುಗು ಡೈಲಾಗು ಹೊಡೆಯುತ್ತ ವಾತಾವರಣವನ್ನ ಮತ್ತಷ್ಟು ನಶೀಲಾ ಆಗಿಸತೊಡಗಿದರು. ಇವೆಲ್ಲದರ ಮಧ್ಯೆ ಬಸ್ಸು ಹೊರಟಿದ್ದೇ ಯಾರ ಗಮನಕ್ಕೂ ಬರಲಿಲ್ಲ!

ಬಸ್ಸು ತೆವಳುತ್ತ ನಿಲ್ಲುತ್ತ ಏದುಸಿರು ಬಿಡುತ್ತ ಹೋಗುತ್ತಲೇ ಇತ್ತು. ನಡುವಲ್ಲೊಂದು ಯನಗುಂಟೆ ಸ್ಟಾಪು. ಅಲ್ಲಿ ಸುಮಾರು ಎಂಟು- ಹತ್ತು ವಡ್ಡರ ಹೆಂಗಸರು ಹತ್ತಿಕೊಂಡರು. ಅವರೊಳಗೊಬ್ಬ ದುಂಡುದುಂಡನೆಯ ಹೆಣ್ಣು. ಹರಿದ ಉದ್ದನೆ ಜಾಕೀಟಿನ ಕೆಳಗೆ ಎಂಥದೋ ಬಗೆಯ ಲಂಗ ಹಾಕಿದ್ದಳು. ಅವಳು ಬಂದು ನಿಂತಿದ್ದೇ ಹೆಂಡದ ಮತ್ತಲ್ಲಿ ತೇಲಾಡ್ತಿದ್ದ ಕೆಲವರಿಗೆ ಏನೋ ಹುಕ್ಕಿ ಬಂದ ಹಾಗಾಯ್ತು. ಅವಳ ಹಿಂದಿನ ಸೀಟಿಗೆ ಆತುಕೊಂಡು ನಿಂತಿದ್ದ ಮುದುಕ ಮುಂದೆ ಬಂದು ಹೆಚ್ಚೂ ಕಡಿಮೆ ಅವಳಿಗೆ ಅಂಟಿಕೊಂಡೇ ನಿಂತ. ಬಹುಶಃ ಅವನ ಕೈ ಎಲ್ಲೆಲ್ಲೋ ತಡಕಾಡಿರಬೇಕು… “ಏ ಥೂತ್….” ಅಂತ ಅವಳು ಕ್ಯಾಕರಿಸಿ ಉಗಿದಿದ್ದು ಸ್ವಲ್ಪ ಮುಂದೆ ಕುಂತಿದ್ದ ನನ್ನ ವರೆಗೂ ಸಿಡಿಯಿತು.
ಅವಳ ಉಗಿತ ಅವನಿಗೆ ಮತ್ತಷ್ಟು ಹುರುಪು ತುಂಬಿರಬೇಕು, ಎಲ್ಲರೆದುರೇ ತನ್ನ ಲೀಲೆಗೆ ಶುರುವಿಟ್ಟ. ಹೌದು… ಎಲ್ಲರೆದುರೇ!!
ಬಸ್ಸಲ್ಲಿ ಕುಂತಿದ್ದವರೆಲ್ಲರೂ ನಾನೂ ಅದನ್ನ ನೋದಿಯೂ ನೋಡದವರಂತೆ ಇದ್ದುಬಿಟ್ಟಿದ್ದೆವು. ಆ ಹೆಂಗಸು “ತೆಗೆಯಲಾ ಮಾದರ್ ಛೋತ್…” ಅಂತೆಲ್ಲ ಅನ್ನುತ್ತ ಕೊಸರಾಡ್ತಲೇ ಇದ್ದಳು. ಅಂವ ಕೊನೆಗೂ ಏನೂ ಮಾಡಲಾಗದೆ ಸುಸ್ತು ಹೊಡೆದು ಅತ್ತಿಬೆಲೆಯಲ್ಲಿ ಇಳಿಯಹೊರಟಾಗ ‘ಮಡಗಲಾ ದುಡ್ನ’ ಅಂತ ಕಂಕುಳಲ್ಲಿ ಅವನ ಕುತ್ತಿಗೆ ಅವುಚಿ ನಿಂತುಬಿಟ್ಟಳು!

ಇವೆಲ್ಲ ರಂಪಾಟ ಮುಗಿಯುವ ಹೊತ್ತಿಗೆ ಕೆಯಿಬಿಯೆದುರು ಬಸ್ಸು ನಿಂತು ನಾನು ಇಳಿದುಕೊಂಡೆ. ಅಲ್ಲಿ ನನಗಾಗಿ ಕಾದು ನಿಂತಿದ್ದ ಬಿಳಿ ಪಂಚೆ ಹುಡುಗರು, ಸೀರೆ- ತುರುಬಿನ ಹೆಂಗಸರು, ಮನೆಯೊಳಗಿಂದ ತೇಲಿ ಬರುತ್ತಿದ್ದ ಧೂಪದ ಘಮ, ಅಂಗಳದ ಹಾದಿಯುದ್ದಕ್ಕೂ ನೆಟ್ಟಿದ್ದ ಧ್ಯೇಯ ವಾಕ್ಯಗಳು…. ಇವೆಲ್ಲವೂ ಟೀವಿಯಲ್ಲಿ ತೋರುವ ಹಾಗೆ ಕಾಣತೊಡಗಿ, ಬರೀ ಬಸ್ಸಿನ ತುಂಬ ತುಂಬಿದ್ದ ಜನರೇ ಸುತ್ತ ಮುತ್ತ ಆವರಿಸತೊಡಗಿದರು. ನನ್ನದೇ ಒಂದು ಚಿಕ್ಕ ಕೋಟೆ ಕಟ್ಟಿಕೊಂಡು ಜಗತ್ತೆಲ್ಲ ಅದರಲ್ಲೇ ಇದೆ ಅಂದುಕೊಂಡಿದ್ದ ಭ್ರಮೆ ಕಳಚತೊಡಗಿತು.
ಒಳಗೆಲ್ಲೋ ಅಮ್ಮನ ದನಿ ಜೋರಾಗಿ ಕೇಳ್ತಿತ್ತು. “ಹಾಲು ಕರಿಯೋ ಮೊದಲು ಕೊಟ್ಟಿಗೆ ತೊಳೀಬೇಕು… ಓಹೋ…!! ಮೈಕೈ ಕೊಳೆಯಾಗದ ಕೆಲಸಕ್ಕೆ ಬಂದ್ಬಿಡ್ತಾರೆ ಇವ್ರು!”
ಹೌದಲ್ಲ!?
ಹಾಲು ಕರೆಯುವ ಮೊದಲು ಕೊಟ್ಟಿಗೆ ಗುಡಿಸಬೇಕು. ಆದರೆ, ಪೊರಕೆ ಎಲ್ಲಿದೆ!?

(ಇದು ಕೆಂಡ ಸಂಪಿಗೆಗಾಗಿ ಬರೆದಿದ್ದು)

Blog at WordPress.com. | Theme: Pool by Borja Fernandez.
Entries and comments feeds.