” What is more important? To satisfy one thousand desires, or to conquer just one?”
“………. There are things we must unlearn inorder to learn………. There are things we must own to renounce them”
ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.
ಕಾಲಕ್ಕೆ ಸದಾ ಓಡುವ ಕಾಲು.
ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?
ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ- ” What is more important? To satisfy one thousand desires, or to conquer just one?”
~

ಸನ್ಯಾಸ ವಸ್ತ್ರ ಬಿಚ್ಚಿ, ಬೋಳುತಲೆಯಲ್ಲಿ ಕೂದಲು ಬೆಳೆಸಿ, ಸಂಸಾರಿಗರ ಬಟ್ಟೆ ತೊಟ್ಟು ಹೆಂಡತಿಯನ್ನ ಕಟ್ಟಿಕೊಂಡಿರುತ್ತಾನೆ ಲಾಮಾ ಆಗಿದ್ದ ತಾಶಿ.
ಇದೀಗ ಸಂಸಾರಿಗರ ಬಟ್ಟೆ ಕಳಚುತ್ತಿದಾನೆ, ಅದೇ ಕೊಳದಲ್ಲಿ ಮೀಯುತ್ತಿದಾನೆ. ತಲೆ ಬೋಳಿಸಿಕೊಂಡು ಸನ್ಯಾಸಿಯಾದೆಂದುಕೊಳ್ಳುತಿದಾನೆ. ಅವನು ಮುಖ ನೋಡಿಕೊಳ್ತಿರುವ ಕನ್ನಡಿ ಒಡೆದಿದೆ. ಅದರ ಸಂಕೇತವೇನಿರಬಹುದು? ಹೇಳಿ ವಾಚ್ಯವಾಗಿಸಬಾರದಲ್ಲವ?
~
ನಡು ರಾತ್ರಿಯಲ್ಲಿ ಮಗನ ತಲೆ ನೇವರಿಸಿ, ಮನೆಬಿಟ್ಟು ಸಿದ್ಧಾರ್ಥನಂತೆ ಹೊರಟಿರುತ್ತಾನೆ ತಾಶಿ. ಆದರೆ ಪೇಮಾ ಯಶೋಧರೆಯಂತಲ್ಲ. ಕುದುರೆಯೇರಿ ಅವನೆದುರು ಬಂದೇ ಬರುತ್ತಾಳೆ. ಶತಮಾನಗಳ ಕಾಲದಿಂದ ಎಲ್ಲ ಸ್ತ್ರೀಸಂವೇದನೆಯ ಮನಸುಗಳು ಕೇಳಿದ ‘ಯಶೋಧರೆಯ ಪ್ರಶ್ನೆ’ಗಳನ್ನ ಕೇಳ್ತಾಳೆ.
ಬುದ್ಧನ ಹಾಗಲ್ಲ ತಾಶಿ. (ಬುದ್ಧನಾಗಿ ಅರಗಿಸಿಕೊಳ್ಳುವ ತಾಖತ್ತಿದ್ದರೆ ಮನೆ ಬಿಟ್ಟು ಹೋಗುವ ಎಲ್ಲ ಗಂಡಸರನ್ನೂ ಮಾಫ್ ಮಾಡಿಬಿಡಬಹುದಿತ್ತೇನೋ!?). ಅಂವ ಕಣ್ಣೀರಿಡ್ತಾನೆ. ನಾನೆಲ್ಲಿಗೆ ಸೇರಿದೇನೋ ಅಲ್ಲಿಗೇ ಬರ್ತೇನೆ, ನಿನ್ನ ಜತೆ ಬರ್ತೇನೆ ಅನ್ನುತಾನೆ. ಆದರೆ ಪೇಮಾ? ‘ಸುಖಪ್ರಯಾಣ’ದ ಗಂಟನ್ನ ಅವನ ಮಡಿಲಿಗೆ ಹಾಕಿ ಹೊರಟುಹೋಗ್ತಾಳೆ.(ನನಗೆ ಸಖತ್ ಖುಷಿಯಾಗಿದ್ದು ಇವಾಗ್ಲೇ! ಅವನ ಬಗ್ಗೆ ಪಾಪ ಅನಿಸ್ತಾದ್ರೂ, ಅದು ಅನುಕಂಪ ಮಾತ್ರ. ಪೇಮಾಳ ಉತ್ತರ ಎಂಥ ದೊಡ್ಡ ಸಂದೇಶ!). ಸರಿ, ಇಂವ ಬಿಕ್ಕಿ ಬಿಕ್ಕಿ ಬಿಕ್ಕಿ…
~
ಸುಮಾರು ವರ್ಷಗಳ ಕೆಳಗೆ… ತಾಶಿ ಮೂರು ವರ್ಷ-ಮೂರು ತಿಂಗಳು-ಮೂರು ವಾರ-ಮೂರು ದಿನ ತಪಸ್ಸು ಮಾಡಿದ ನಂತರ ಬುದ್ಧ ವಿಹಾರಕ್ಕೆ ಒಯ್ಯಲ್ಪಡುತ್ತಿರ್ತಾನಲ್ಲ, ಆಗ ವಿಹಾರದ ಬಳಿಯ ಒಂದು ಬಂಡೆಗಲ್ಲಿನ ಮೇಲೆ ಓದಿರ್ತಾನೆ- “How can one prevent a drop of water from drying up?”
ಈಗ ಉತ್ತರ ಹುಡುಕುವ ಕಾಲ ಸನ್ನಿಹಿತ. ಪ್ರಶ್ನೆಯ ಬೆನ್ನಲ್ಲೆ ಉತ್ತರವಿದೆ. ಅಂದರೆ, ಬಂಡೆಗಲ್ಲಿನ ಹಿಂಭಾಗದಲ್ಲಿ… “By throwing it in to the sea”!
ತಾಶಿಗೆ ಅರ್ಥವಾಯ್ತಾ?
ನಮಗೆ?
ಇಲ್ಲಿ ಎರಡು ಅರ್ಥಗಳಿರಬಹುದು. “ಸಂಸಾರ ಸಾಗರದಲ್ಲಿ ಒಂದಾಗಿಹೋಗುವುದು” ಅಂತಲೂ, “ಪರಮಾರ್ಥದಲ್ಲಿ ಒಂದಾಗುವುದು (ಮೋಕ್ಷ))” ಅಂತಲೂ…
ಕೊನೆಯ ಬಗ್ಗೆ ನಮಗೆ ಸಿಗುವ ಹಿಂಟ್- ಮಾಗಿದ ಎಲೆಗಳ ಮರ (ಇದು ಚಿತ್ರದುದ್ದಕ್ಕೂ ವಿವಿಧ ಋತುಗಳನ್ನು ಸಂಕೇತಿಸುತ್ತ, ಪೂರಕ ಅರ್ಥಗಳನ್ನು ಕೊಡುತ್ತ ನಮಗೆ ಬಹಳ ಕಡೆ ಎದುರಾಗುತ್ತದೆ), ಮತ್ತು ಅವನು ಪ್ರವೇಶಿಸುವ ಮಾಗಿದ ಹಳದಿ ಎಲೆಗಳ ಕಾಡು. ಇದನ್ನು ನಾವು ತಾಶಿಯ ಮಾಗುವಿಕೆಯಾಗೂ ಅರ್ಥೈಸಿಕೊಳ್ಳಬಹುದು ಬೇಕಿದ್ದರೆ.
ಹಾ… ಸಿನೆಮಾದ ಶುರುವಲ್ಲಿ ಹದ್ದೊಂದು ಕುರಿಯ ತಲೆಮೇಲೆ ಕಲ್ಲು ಹೊತ್ತಾಕಿ ಜೀವ ತೆಗೆಯುವ ದೃಶ್ಯವಿದೆ. ತಾಶಿ ಬಂಡೆಗಲ್ಲಿನ ಬರಹವನ್ನೋದಿ ತಲೆ ಎತ್ತಿದಾಗ ಅದೇ ಹದ್ದು ಚಕ್ರಚಕ್ರ ತಿರುಗುತ್ತ ಹಾರಾಡುತ್ತ, ನಮ್ಮಿಂದ ಕಲ್ಲು ಬೀಳುವುದನ್ನೆ ಕಾಯುವ ಹಾಗೆ ಮಾಡುತ್ತದೆ.
but, sorry… ಅಲ್ಲಿಗೆ ಸಿನೆಮಾ ಮುಗಿಯುತ್ತದೆ!
ಒಂದು ನೀತಿ ಕಥೆಯ ಹಾಗೆ ನೋಡಿ ನಮ್ಮ ಕೆಲಸ ಮುಂದುವರೆಸ್ಕೊಂಡು ಹೋಗಬೇಕಾದಂಥದಲ್ಲವಾ ಇದು? ಅಂದರೆ, ಸೀರಿಯಸ್ಸಾಗಿ ತೊಗೊಳ್ದೆ ನಮ್ಮ ಸಂಸಾರ, ಗೊಂದಲ, ಗೋಜಲು, ಸುಖ- ಸಂತೋಷ….?
~
ಕಣ್ಣಗಲಿಸಿ ಹೀರುವಂಥ ಛಾಯಾಗ್ರಹಣ, ಚೆಂದಚೆಂದದ ಲ್ಯಾಂಡ್‌ಸ್ಕೇಪುಗಳು, ಮುದ್ದು ಮುದ್ದಾದ ತಾಶಿ-ಪೇಮಾ, ಕೂಲ್ ಆಗಿ ನೋಡಿಸಿಕೊಂಡು ಹೋಗುವ ಎರಡು ಗಂಟೆಯ ಸಿನೆಮಾ- ಅದು SAMSARA.
ಈ ಸಿನೆಮಾ ಒಟ್ಟು 30 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿದೆ. ಪೂರ್ವ ಪಶ್ಚಿಮವೆನ್ನದೆ ಎಲ್ಲ ಚಿತ್ರಪ್ರೇಮಿಗಳು ಇದನ್ನ ಮೆಚ್ಚಿಕೊಂಡಿದಾರೆ. ಬೇರೆ ಬೇರೆ ದೇಶಗಳ ಮಂದಿ ಒಂದು ತಂಡವಾಗಿ ಈ ಸಿನೆಮಾ ಮಾಡಿದಾರನ್ನೋದು ಇದರ ಖಾಸಿಯತ್ತುಗಳಲ್ಲೊಂದು.
2001ರ ಈ ಸಿನೆಮಾದ ಭಾಷೆ- ಟಿಬೆಟನ್ / ಲಡಾಖಿ
ನಿರ್ದೇಶಕ- ಪಾನ್ ನಲಿನ್
ಮುಖ್ಯ ಪಾತ್ರದಲ್ಲಿ- ಶಾನ್ ಕು (ತಾಶಿ), ಕ್ರಿಸ್ಟೀ ಚಂಗ್ (ಪೇಮಾ), ನೀಲೇಶಾ ಬಾವೋರಾ (ಸುಜಾತಾ)
~
ಈ SAMSARA ನನ್ನ ಯಾವ ಪರಿ ಹೊಕ್ಕುಕುಂತಿದೆ ಅನ್ನೋದು ಈ ಅಸ್ತವ್ಯಸ್ತ ಬರಹ ನೋಡಿದರೆ ಗೊತ್ತಾಗಬಹುದು. ಯಾವುದಕ್ಕೂ ಇದು, ನೀವು ಕೂಡ ಒಮ್ಮೆ ನೋಡಲೇಬೇಕಾದ ಸಿನೆಮಾ ಅನ್ನೋದು ನನ್ನ ಶಿಫಾರಸು.
ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ… ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ.
ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ.
ಹೆಚ್ಚಿನ ಮಾಹಿತಿಗೆ ಭೇಟಿ ಕೊಡಿ: www.chendemaddale.wordpress.com
‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ, “ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ” . ಇದಕ್ಕೆ ಕಾರಣವೇನಿರಬಹುದು?
ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ.
ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು. ಹಾಗೂ ಇವಾವುದೂ ಹೆಣ್ಣಿಗೆ ಮಾತ್ರ ಸೀಮಿತವಲ್ಲದ ದೋಷಗಳೆಂಬುದನ್ನು ಮರೆಯಬಾರದು. ಈಗ ನನ್ನ ಅನಿಸಿಕೆಗಳು:
೧. ಹೆಣ್ಣು ತನ್ನ ಪ್ರತಿಯೊಂದಕ್ಕೂ ಗಂಡಸನ್ನೇ ಅವಲಂಬಿಸಬೇಕು ಅಂದುಕೊಂಡು ಆತನನ್ನು ಒಲಿಸಿಕೊಳ್ಳುವ ಯತ್ನವಾಗಿ, ದಬ್ಬಾಳಿಕೆ ಸಹಿಸುವ ಮನಸ್ಥಿತಿಯನ್ನು ರೂಢಿಸಿಕೊಂಡಿರುವುದು, ಅದನ್ನೇ ತನ್ನ ಮುಂದಿನ ಪೀಳಿಗೆಗೂ ದಾಟಿಸುತ್ತಿರುವುದು…
೨. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನಗಳು ಜತೆಗಾರ ಗಂಡಸಿನ ಇರುವಿಕೆ/ ಇಲ್ಲದಿರುವಿಕೆ, ಆತನೊಂದಿಗಿನ ಬಾಂಧವ್ಯಗಳನ್ನು ಅವಲಂಬಿಸಿರುವುದರಿಂದ, ಅದನ್ನು ಉಳಿಸಿಕೊಳ್ಳುವ ಯತ್ನ….
೩. ಮತ್ತೊಬ್ಬ ಹೆಣ್ಣನ್ನು ಛೀಕರಿಸುವ ಮೂಲಕ ಗಂಡಸಿನ (ಅದು ಗಂಡ, ಮಗ ಯಾರೇ ಆಗಿರಲಿ…) ಗಮನವನ್ನು ತನ್ನತ್ತ ಸೆಳೆದುಕೊಳ್ಳುವುದು, ಆತನನ್ನು ಅಂಕೆಯಲ್ಲಿರಿಸಿಕೊಳ್ಳಲು ಬಯಸುವುದು, ತನ್ನ ಅಸುರಕ್ಷತಾಭಾವವನ್ನು ಹೋಗಲಾಡಿಸಿಕೊಳ್ಳಲು ಇತರರ ಗಮನವನ್ನು ಸೆಳೆಯಲಿಕ್ಕೆಂದೇ ಗಯ್ಯಾಳಿತನ ಬೆಳೆಸಿಕೊಳ್ಳುವುದು….
ಪರಿಹಾರವೇನಿರಬಹುದು?
೧. ಆರ್ಥಿಕ ಸುಭದ್ರತೆ
೨. ಹೆಚ್ಚು ಹೆಚ್ಚಾಗಿ ಹೆಣ್ಣುಮಕ್ಕಳೊಂದಿಗೆ ಸ್ನೇಹ ಬೆಳೆಸಿಕೊಳ್ಳುವುದು, ಒಂದು ಸಂಘಟನೆಯಾಗಿ ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವುದು
೩. ಭಾವನಾತ್ಮಕವಾಗಿ ಗಂಡಿನ ಮೇಲೆ ಅವಲಂಬಿಸಿದ್ದರೂ ಅದನ್ನು ದೌರ್ಬಲ್ಯವಾಗಿ ಮಾಡಿಕೊಳ್ಳದಿರುವುದು
ಹೀಗೇ ಒಂದಿಷ್ಟು….
ಈಗಲಾದರೂ ನಾವು ನಮ್ಮನ್ನು ಬರೀ ಮನೆವಾಳ್ತೆಗೆ ಸೀಮಿತಗೊಳಿಸಿಕೊಳ್ಳದೆ ಸಮಾಜಕ್ಕೂ ತೆರೆದುಕೊಂಡರೆ, ಸಂಘಟಿತರಾದರೆ, ಬಹುಶಃ ಈ ‘ಹೆಣ್ಣು- ಹೆಣ್ಣಿನ ಶೋಷಣೆ’ ಕಡಿಮೆಯಾಗುತ್ತ ಹೋಗಬಹುದೇನೋ?
ಗೆಳತಿ ಟೀನಾ ಒಮ್ಮೆ ಮಾತನಾಡುವಾಗ ಹೇಳಿದ್ದಳು. ಹೆಣ್ಣು ಸಾಂಸರಿಕ, ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕ- ಈ ನಾಲ್ಕೂ ಸ್ತರಗಳಲ್ಲೂ ಶೋಷಣೆಗೊಳಗಾಗ್ತಾಳೆ ಅಂತ. ಅದು ಸರಿಯೆನಿಸಿತು. ನಾವು ಎಲ್ಲೀವರೆಗೂ ಸಂಸಾರವೇ ನಮ್ಮ ಮೊದಲ ಪ್ರಿಫರೆನ್ಸ್ ಅಂದುಕೊಳ್ತೀವೋ ಅಲ್ಲೀವರೆಗೂ ಈ ಶೋಷಣೆ ತಪ್ಪೋದಿಲ್ಲ. ನಾವು ಸಂಸಾರದ ಚೌಕಟ್ಟು ಮೀರಿ ಬೆಳೆದು ಸಮಾಜದ ಹೊಸ್ತಿಲಲ್ಲಿ ನಿಲ್ಬೇಕು. ನಮ್ಮ ಸಾಧ್ಯತೆಗಳನ್ನ ಇತರರಿಗೆ ಮನದಟ್ಟು ಮಾಡಿಸೋ ಮೊದಲು, ನಮ್ಮನ್ನು ನಾವು ಅರಿತುಕೊಳ್ಬೇಕು. ಸ್ನೇಹಿತರೊಬ್ಬರು ನನ್ನ ಯೋಚನೆಗಳ ಬಗ್ಗೆ ಅಭಿಪ್ರಾಯಪಟ್ಟಿರುವಂತೆ ಇದು ‘ರೊಮ್ಯಾಂಟಿಕ್’ ಮಟ್ಟಕ್ಕೆ ನಿಲ್ಲುವಂಥದಲ್ಲ. ಅವರು, ಹೆಣ್ಣು ಸಂಸಾರವನ್ನು, ಸಮಾಜವನ್ನು ಮೀರಬೇಕು, ಮೀರುತ್ತಾಳೆ ಅನ್ನುವ ನನ್ನ ಕಲ್ಪನೆಯನ್ನ ಹಾಗೆಂದಿರುವರು. ಇದು ತಮ್ಮ ಗಂಡು ಯೋಚನೆಯಲ್ಲವೆಂದೂ ಸ್ಪಷ್ಟಪಡಿಸಿದ್ದರು. ಆದರೆ, ಮೊದಲ ಬೇಲಿಯಾದ ಸಂಸಾರದ ನಿರ್ಬಂಧಗಳನ್ನು ಮೀರದೆ ಹೆಣ್ಣು ಮುಂದುವರೆಯೋದು ಹೇಗೆ? ನಾನು ಮೀರುವಿಕೆಯನ್ನು ‘ದ್ರೋಹ’ದ ಅರ್ಥದಲ್ಲಿ ಬಳಸುವುದಿಲ್ಲ. ಇದನ್ನು ಅರಿತುಕೊಂಡರೆ ಸಾಕು.
ಹೀಗೆ ಮೀರುವಿಕೆಯ ಮಾತು ಬಂದಾಗ ಇಸ್ಮತ್‌ರ ಕಥೆ ನೆನಪಾಗುತ್ತೆ. ಅವರದೊಂದು ಕಥೆಯಲ್ಲಿ ನಾಯಕಿ, ಕಪ್ಪುಕೀಳರಿಮೆಯ ಗಂಡ ತಾನೇ ದುಪಟ್ಟಾ ತೆರೆಯಲೆಂದು ಕಾದಿರುತ್ತಾಳೆ. ಅವನಾದರೋ ತನ್ನ ಕೀಳರಿಮೆಯನ್ನು ಮೆಟ್ಟಿನಿಲ್ಲಲು, ಆಕೆಗೇ ಅದನ್ನು ತೆಗೆದು ಮುಖ ತೋರುವಂತೆ ಆದೇಶಿಸುತ್ತಾನೆ. ಹಾಗೆ ಹೆಣ್ಣು ಮೊದಲ ಸಾರ್ತಿ ಗಂಡನಿಗೆ ಮುಖದೋರುವಾಗ ತಾನೇ ದುಪಟ್ಟಾ ತೆಗೆಯೋದು ಲಜ್ಜೆಗೇಡಿತನ ಅನ್ನುತ್ತದೆ ಸಂಪ್ರದಾಯ. ಅದಕ್ಕೇ ಅವಳು ತೆಗೆಯೋದಿಲ್ಲ. ಅವನ ದರ್ಪದ ಒಳಗುಟ್ಟು ಅವಳಿಗೆ ಗೊತ್ತಿದ್ದುದೂ ಅದಕ್ಕೆ ಕಾರಣವಾಗಿದ್ದಿರಬಹುದು. ಹೀಗೆ ಕೊನೆಯವರೆಗೂ ಅವಳು ತನ್ನ ದುಪಟ್ಟಾ ಅವನೆದುರು ತೆರೆಯೋದೇ ಇಲ್ಲ. ಅದಕ್ಕಾಗಿ ತಾನು ಸಂಸಾರ ಸುಖವನ್ನೇ ಕಳಕೊಳ್ಳಬೇಕಾಗಿ ಬಂದಾಗಲೂ ಸಹಾ. ಇಲ್ಲಿ ಇವಳ ಮೀರುವಿಕೆ- ಗಂಡನ ಆದೇಶದ ಮೀರುವಿಕೆ- ಅಂದರೆ ಸಾಮಾಜಿಕ ಕಟ್ಟುಪಾಡಿನ (ಗಂಡನ ಮಾತು ಕೇಳಬೇಕೆನ್ನುವ) ಮೀರುವಿಕೆ, ಸಂಪ್ರದಾಯದ ಚೌಕಟ್ಟಿನೊಳಗೇ ನಡೆದಿದೆ! ಈ ಕಥೆಯಲ್ಲಿ ಅವಳದು ಅತ್ಯಂತ ಡಿಗ್ನಿಫೈಡ್ ಆದ ಪ್ರತಿಭಟನೆ.
ನನ್ನ ಮಾತುಗಳಿಗೂ ಈ ಕಥೆಗೂ ಹೇಗೆ ಲಿಂಕ್ ಮಾಡಿಕೊಳ್ಳುವಿರೋ ಗೊತ್ತಿಲ್ಲ. ನನ್ನ ತಲೆಯೊಳಗಂತೂ ಇವೆಲ್ಲ ಒಂದಕ್ಕೊಂದು ಹೆಣೆದುಕೊಂಡಿವೆ. ಒಂದು ಎಳೆ ಹಿಡಿದೆಳೆದರೆ ಎಲ್ಲವೂ ಉರುಳಿ ಬರುತ್ತವೆ.
ಕೊನೆಯ ಮಾತಿನೊಂದಿಗೆ ಮುಗಿಸ್ತೇನೆ…
ಒಟ್ಟಾರೆ, ಎಲ್ಲೀವರೆಗೂ ಹೆಣ್ಣುಗಳು ಗಂಡಸಿನ ಕೃಪಾಪೋಷಣೆಗೆ ಒಳಗಾಗಿ ಬದುಕೋದೇ ತಮ್ಮ ಪರಮ ಧ್ಯೇಯವೆಂದುಕೊಳ್ತಾರೋ ಅಲ್ಲೀವರೆಗೂ ಹೆಣ್ಣಿಂದ ಹೆಣ್ಣಿನ ಶೋಷಣೆ ತಪ್ಪಿದ್ದಲ್ಲ. ನಾವು ನಮ್ಮ ಅಸ್ತಿತ್ವವನ್ನು ಕಂಡುಕೊಂಡು ಬದುಕಿ, ಮುಂದಿನ ಪೀಳಿಗೆಗೂ ಅದನ್ನೇ ಕಲಿಸತೊಡಗಿದರೆ ಮಾತ್ರ ಇದೆಲ್ಲ ಪರಿಹಾರವಾಗಬಹುದೇನೋ ಅಂದುಕೊಳ್ತೇನೆ.
ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ….
ಚಿತ್ರ ನಟಿ ರಮ್ಯಾ ನೃತ್ಯ ನಿರ್ದೇಶಕರನ್ನ, ಸ್ಪಾಟಲ್ಲಿದ್ದ ಕೆಲವರನ್ನ ಅವಾಚ್ಯವಾಗಿ ಬಯ್ದು, ಸುದ್ದಿಯಾಗಿ ಕ್ಷಮೆ ಕೇಳಿದ ಘಟನೆ ಇವತ್ತಿಗೆ ಹಳೇಹಪ್ಪಟ್ಟೆನಿಸಬಹುದು. ರಮ್ಯಳೋ, ರಂಜಿತಳೋ, ಯಾವ ನಟಿ, ನಟ, ನಿರ್ದೇಶಕ, ಒಟ್ಟಾರೆ ಮನುಷ್ಯ ಜಾತಿಯ ಜೀವಿಯೋ, ಹಾಗೆಲ್ಲ ಅಸಭ್ಯವಾಗಿ ವರ್ತಿಸೋದು ಶುದ್ಧ ತಪ್ಪು. ಹಾಗೆ ನಡೆದುಕೊಳ್ಳುವ ಯಾರ ಮೇಲೆಯೇ ಆಗಲಿ ನನ್ನ ವಿರೋಧವಂತೂ ಇದ್ದೇ ಇದೆ. ರಮ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಒಟ್ಟಾರೆಯಾಗಿ ರಮ್ಯಳ ವರ್ತನೆಯನ್ನ ಖಂಡಿಸಿಯೇ ಮಾತನ್ನ ಮುಂದುವರೆಸಬೇಕಾಗುತ್ತದೆ. ಮೊದಲೇ ಸ್ಪಷ್ಟಪಡಿಸುವುದೆಂದರೆ, ನಾನಿಲ್ಲಿ ಚರ್ಚಿಸಹೊರಟಿರೋದು ರಮ್ಯಾಳ ಪ್ರಕರಣ ಸುದ್ದಿಯಾದುದರ ಬಗ್ಗೆ. ಮತ್ತು ಆಕೆಯ ಘಮಂಡಿತನಕ್ಕೆ ಸಿಕ್ಕ ಪ್ರತಿಕ್ರಿಯೆಯ ಹಿಂದಿರಬಹುದಾದ ರಾಜಕಾರಣದ ಬಗ್ಗೆ.
ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ.
ನಮ್ಮಲ್ಲಿ ಕೆಲವು ಹಿರಿಯ ನಿರ್ದೇಶಕರುಗಳು, ಗರ್ವಿಷ್ಟ ನಿರ್ದೇಶಕರುಗಳು ತಮ್ಮ ಕೆಳಗಿನ ಉದ್ಯೋಗಿಗಳಿಗೆ ಕಪಾಳಕ್ಕೆ ಹೊಡೆಯುವ, ರೇಗುವ, ವಾಚಾಮಗೋಚರ ಬಯ್ಯುವ ಉದಾಹರಣೆಗಳು ಲೆಕ್ಕವಿಲ್ಲದಷ್ಟಿವೆ. ಉತ್ತಮ ಗುಣಮಟ್ಟದ ಫಲಿತಾಂಶ ಪಡೆಯಲಿಕ್ಕಾಗಿ ಅಂಕೆತಪ್ಪಿ ಹೀಗೆ ಪ್ರಮಾದಗಳಾಗ್ತವೆ ಅಂತ ಹೇಳಲಾಗ್ತದೆ. ಇದನ್ನ ಕೆಲವೊಮ್ಮೆ ಒಪ್ಪಬಹುದಾದರೂ ನೆತ್ತಿಗೇರಿದ ತಲೆಪ್ರತಿಷ್ಟೆಯಿಂದ ಇಂತಹ ದಬ್ಬಾಳಿಕೆ ನಡೆಸುವವರ ಸಂಖ್ಯೆ ಯಾವ ರಂಗದಲ್ಲೂ ಕಡಿಮೆಯೇನಿಲ್ಲ. ಆದರೆ ಬಹುತೇಕ ಇಂತಹ ಪ್ರಕರಣಗಳು ಹಾಹಾಗೇ ಸಹಜವೆಂಬಂತೆ ಮುಚ್ಚಿಹೋಗ್ತವೆ. ಹೀರೋ ಪಾತ್ರಧಾರಿಗೆ ಏನೋ ಸರಿ ಕಂಡು ಬರದಿದ್ದಾಗ, ಅಗತ್ಯವಸ್ತು ಪೂರೈಕೆಯಲ್ಲಿ ತಪ್ಪಾಗಿಯೋ, ಮತ್ತೇನು ಅನಾನುಕೂಲವೋ ಆದಾಗ ಆತ ಕೆಂಗಣ್ಣು ಮಾಡಿಕೊಂಡು ಉದುರಿಸುವ ಪ್ರತಿ ಬಯ್ಗುಳ ಅಮೂಲ್ಯ ಮುತ್ತು. ಕಪಾಳಕ್ಕೆ ಹೊಡೆದರೆ ಪರಮ ಪ್ರಸಾದ. ದುಡಿತದ ಮಟ್ಟದಲ್ಲಿ ವರ್ಗ ತಾರತಮ್ಯದ ಬಗ್ಗೆ ಆಗೆಲ್ಲ ಯಾರೂ ಮಾತನಾಡೋದಿಲ್ಲ. ಅದೇ, ಹೀರೋಇನ್ ಪಾತ್ರಧಾರಿ ಹೊಡೆಯೋದಿರಲಿ, ನಾಲ್ಕು ಮಾತು ಗಟ್ಟಿಬಯ್ದರೆ? ಅದು ಆಕೆಯ ಅಹಂಕಾರ, ಶ್ರೀಮಂತಿಕೆಯ ಪೊಗರು, ದಬ್ಬಾಳಿಕೆ ಇತ್ಯಾದಿ ಆಗುತ್ತದೆಯಲ್ಲವೆ? ಈಗ ರಮ್ಯಾಳಿಂದ ಬಯ್ಸಿಕೊಂಡು ಸುದ್ದಿಯಾಗುತ್ತಿರುವ ಮಂದಿಯನ್ನ ಕೇಳುತ್ತೇನೆ ನಾನು, ಈಗ ನಿಮ್ಮ ಆತ್ಮ ಸಮ್ಮಾನಕ್ಕೆ ಪೆಟ್ಟುಬಿದ್ದಿರೋದು ಒಟ್ಟಾರೆ ಒಂದು ವ್ಯಕ್ತಿ ನಿಮ್ಮನ್ನು ದೂಷಿಸಿದ್ದಕ್ಕೋ, ಒಬ್ಬ ಹೆಣ್ಣು ನಿಮ್ಮನ್ನು ದೂಷಿಸಿದಳೆಂತಲೋ ಎಂದು…
ಬಹುಶಃ ಇದು ಎಲ್ಲರಿಗೂ ಗೊತ್ತಿರುವ, ಯಾರೂ ಆಡದೆ ಸುಮ್ಮನಿರುವ ಮಾತು. ಚಿತ್ರರಂಗದಲ್ಲಿ ಹೆಣ್ಣುಮಕ್ಕಳು ಯಾವ ಪರಿ ದುರ್ಬಳಕೆಯಾಗ್ತಾರೆ, ಅವರ ಮಹತ್ವಕಾಂಕ್ಷೆಯನ್ನ ಯಾವೆಲ್ಲ ರೀತಿ ಎನ್ ಕ್ಯಾಶ್ ಮಾಡಿಕೊಳ್ಳಲಾಗತ್ತೆ, ಮುಗ್ಧರಂತೂ ಹೇಗೆ ನಾಶವಾಗಿ ಹೋಗ್ತಾರೆ ಅನ್ನೋದು… ಬಹುಶಃ ಯಾವತ್ತೂ ಹಲ್ಲುಗಿಂಜಿಕೊಂಡು ಅವಕಾಶ ಕೇಳುತ್ತಲೋ, ಅದಕ್ಕಾಗಿ ಯಾರ ಯಾರದೋ ಚೇಲಾಗಿರಿ ಮಾಡ್ತಲೋ ಹಿಂದಲೆಯದ, ಯಾರಿಗೂ ಯಾವತ್ತೂ ಸೊಪ್ಪು ಹಾಕದ ರಮ್ಯಾ ಗಾಂಧೀನಗರದ ಕಣ್ಣಮುಳ್ಳಾಗಿರಬೇಕು. ಅದಕ್ಕೇ ಅಲ್ಲವೆ ಆಕೆ ನಿಂತರೂ ಕುಂತರೂ ಸುದ್ದಿ? ಹೆಣ್ಣೊಬ್ಬಳ ಆತ್ಮವಿಶ್ವಾಸವನ್ನ, ಅದು ತಂದುಕೊಡುವ ಗರ್ವವನ್ನ ಪುರುಷ ಸಮಾಜ ಸಹಿಸೋದು ಕಷ್ಟ. ಇತ್ತಲಾಗಿ ಹೆಣ್ಣುಗಳೂ ತಮಗಿಲ್ಲದ ಆಕೆಯ ಹೆಚ್ಚುಗಾರಿಕೆಯನ್ನ ಕಂಡು ಮೆಚ್ಚೋದು ಕಷ್ಟ. ಅದಕ್ಕೇ ಯಾವಾಗಲೂ ಹೀಗೆ ದಿಟ್ಟೆಯರಾಗಿ ಬದುಕುವ ಹೆಣ್ಣುಮಕ್ಕಳಿಗೆ ಸೋಲು. ಆದರೆ ಈ ಸೋಲು ಮೇಲ್ತೋರಿಕೆಯದಷ್ಟೆ. ವಾಸ್ತವದಲ್ಲದು ಆವರ ಅಸ್ತಿತ್ವದ ಗೆಲುವೇ ಆಗಿರುತ್ತದೆ.
ಆದರೂ ಒಂದು ಖುಷಿಯ ವಿಚಾರ. ಡಿ ಎನ್ ಎ ಯಲ್ಲಿ ಓದಿದ್ದು. ಅಂದ್ರಿತಾ ರೇ, ಪೂಜಾ ಗಾಂಧಿ, ಪ್ರಿಯಾಂಕಾ ಉಪೇಂದ್ರ ಮತ್ತು ಶರ್ಮಿಳಾ ಮಾಂಡ್ರೆ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯವಾಗ್ತಿರೋದು ಹೌದು ಎಂದು ಹೇಳಲು ಹಿಂಜರಿದಿಲ್ಲ. ಖಂಡಿಸುವ ಮಾತಿರಲಿ, ಹೀಗೆ ತಮಗನಿಸಿದ್ದನ್ನ ಮುಕ್ತವಾಗಿ ಹೇಳಿಕೊಳ್ಳುವ ಮನಸಾದರೂ ಮಾಡಿದರಲ್ಲ ಅನ್ನೋದೇ ಸಮಾಧಾನ. ಎಲ್ಲ ರಂಗದಲ್ಲೂ ಹೆಣ್ಣುಮಕ್ಕಳು ಸಂಘಟಿತರಾಗಿ ತಮ್ಮ ವಿರುದ್ಧ ಯಾರೂ ಪಿಟ್ಟೆನ್ನದಂತೆ ನಿಭಾಯಿಸಿಕೊಳ್ಳುವ ಎದೆಗಾರಿಕೆ ತೋರಿದರಷ್ಟೆ ಇವೆಲ್ಲ ಒಂದು ಹದಕ್ಕೆ ಬಂದೀತು. ಆದರೇನು ಮಾಡೋದು? ‘ಹೆಂಗಸರು ಒಟ್ಟಾಗೋದಿಲ್ಲ’ ಅಂತ ಹೇಳಿಹೇಳಿಯೇ ನಮ್ಮನ್ನು ದ್ವೀಪಗಳಾಗಿಸುವ ಕಾಯಕ ವ್ಯವಸ್ಥಿತವಾಗಿ ನಡೆದೇ ಇದೆ. ಮೌಢ್ಯತೆಯ ತುದಿಯಲ್ಲಿ ನಿಂತಿರುವ ನಾವಂತೂ ಅದನ್ನು ನಂಬಿಯೇ ಕುಳಿತಿದೇವೆ ಅಲ್ಲವೆ?
ಅದ್ಯಾಕೋ ಗೊತ್ತಿಲ್ಲ. ರಮ್ಯಾಳ ಜಂಭದ ಮುಖ ನೋಡುವಾಗ ಖುಷಿಯಾಗತ್ತೆ. ಚೆಲ್ಲುಬಡಿಯುತ್ತಾ ಯಾರನ್ನೋ ಇಂಪ್ರೆಸ್ ಮಾಡಲು ಹೆಣಗಾಡುತ್ತ, ಒಳ್ಳೆತನದ ಪೋಸು ಕೊಡುವ ಹುಡುಗಿಯರಿಗಿಂತ ಈಕೆ ಜಾಸ್ತಿ ಇಷ್ಟವಾಗ್ತಾಳೆ. ಚಿತ್ರರಂಗದ ಪರಿಭಾಷೆಯಲ್ಲಿ ಹೆಣ್ಣುಗಳು ದುರುಪಯೋಗಗೊಳ್ತಾರಲ್ಲ, ಹಾಗೆ ಈಕೆ ಆಗಿಲ್ಲ ಅಂತೇನೋ ಅನಿಸತೊಡಗುತ್ತೆ. ಅವಕಾಶಗಳಿಗಾಗಿ ಯಾವುದಕ್ಕೂ ರಾಜಿಯಾಗದ, ತನ್ನನ್ನು ತಾನು ಇರುವಹಾಗೇ ನಿರೂಪಿಸಿಕೊಳ್ಳಲು ಹಿಂಜರಿಯದ ಆಕೆಯ ಬಗ್ಗೆ ಹೆಮ್ಮೆ ಮೂಡತ್ತೆ. ದಶಕದ ಹಿಂದೆ ಮಾಲಾಶ್ರೀ ತನ್ನ ಹೆಚ್ಚುಗಾರಿಕೆ ಮೆರೆದು ಕಮೆಂಟ್ ಮಾಡಿದಾಗ ಇವತ್ತಿಗೂ ಇಪ್ಪತ್ತರ ಹುಡುಗಿಯರ ಸೊಂಟಬಳಸಿ ಸಿಂಹಾವಲೋಕನ ಮಾಡ್ತಿರುವ ನಟರೊಬ್ಬರು ಆಕೆಯೊಟ್ಟಿಗೆ ಯಾವತ್ತೂ ನಟಿಸೋದೇ ಇಲ್ಲ ಅಂತ ಪ್ರತಿಜ್ಞೆ ಮಾಡಿದ್ದರು. ಆದರೆ ತನ್ನ ಇರುವಿಕೆಯಿಂದಲೇ ಸಿನೆಮಾ ಓಡಿಸುತ್ತಿದ್ದ ಮಾಲಾಶ್ರೀ ನನಗೆ ಕಾಲೇಜು ದಿನಗಳ ಆ ವಯಸ್ಸಿನಲ್ಲಿ ಬಹಳ ಪ್ರಿಯವಾಗಿಬಿಟ್ಟಿದ್ದಳು. ಈಗ ಯಾಕೋ ಅದರ ನೆನಪು… ಹಾಗೇನೇ ನಾಯಕ ನಟನೊಬ್ಬನಿಗೆ ಚಪ್ಪಲಿತೋರಿಸಿ ವಿವಾದ ಎಳೆದುಕೊಂಡ ವಿಜಯಲಕ್ಷ್ಮಿ (ಅದೇ ಹೆಸರು ಅಂದುಕೊಳ್ತೇನೆ, ನಾಗಮಂಡಲ ಹುಡುಗಿಯದು…) ಕೂಡ ಕಣ್ಮುಂದೆ ಬರ್ತಾಳೆ. ಅವಳು ಹಾಗೆ ಮಾಡುವುದಕ್ಕೆ ಹಿನ್ನೆಲೆಯಾಗಿ ಯಾವ ಕಿತಾಪತಿ ನಡೆದಿತ್ತು? ನನಗಂತೂ ಅದು, ಈವರೆಗೆ ಹೆಣ್ಣನ್ನು ಹಲವು ಮಗ್ಗುಲಲ್ಲಿ ಹುರಿದು ಮುಕ್ಕಿ ಚಪ್ಪರಿಸುತ್ತಿರುವ ಚಿತ್ರರಂಗದ ಗಂಡಸುತನಕ್ಕೇ ಆಕೆ ಚಪ್ಪಲಿ ತೋರಿಸಿದಂತೆನಿಸಿತ್ತು. ಹೀಗೆ ತೋರಿಸಿಕೊಳ್ಳುವ ಎಲ್ಲ ಯೋಗ್ಯತೆಯೂ ಅದಕ್ಕಿದೆ ಅಲ್ಲವ?
ಇಂಥಾ ‘ಜಂಭಗಾತಿ’ ಹುಡುಗಿಯರನ್ನ ಎದುರಿಟ್ಟುಕೊಂಡು ಎಲ್ಲ ಹುಡುಗಿಯರಿಗೊಂದು ಕಿವಿಮಾತು. ಅದು ಯಾವುದೇ ಫೀಲ್ಡ್ ಇರಲಿ. ನಮ್ಮನ್ನು ಕೊಟ್ಟುಕೊಂಡು ಪಡೆಯುವ- ರಾಜನ ಕಾಲ್ಕೆಳಗಿನ ಹೂವಿನಂಥ ಬಾಳಿಗಿಂತ, ಯಾರಿಗೂ ಗುರುತಾಗದೆಯೇ ಸುಮ್ಮನೆ ಅರಳಿಕೊಂಡು ಬಿದ್ದುಹೋಗುವ ಕಾಡು ಹೂವಿನಂಥ ಬದುಕು ನಿಜಕ್ಕೂ ಸಾರ್ಥಕ. ಮನದಣಿಯೆ ಬಿರಿದು, ಬಾಳಿ, ಕಳಚಿಕೊಂಡ ತೃಪ್ತಿಯಾದರೂ ಆಗ ನಮ್ಮ ಪಾಲಿಗೆ ಉಳಿದುಕೊಳ್ಳುವುದು.
ಗಂಡು ಪ್ರಾಬಲ್ಯದ ಈ ಜಗತ್ತನ್ನ ಮೆಚ್ಚಿಸೋದಂತೂ ಕಷ್ಟವೇ. ಒಂದೇ ತಪ್ಪಿಗೆ ಇಲ್ಲಿ ‘ಗಂಡು ಮಾಡಿದರೆ’, ‘ಹೆಣ್ಣು ಮಾಡಿದರೆ’ ಎನ್ನುವ ಪಕ್ಷಪಾತಗಳಿವೆ. ಇದು ಬಡವ- ಶ್ರೀಮಂತ, ಮೇಲ್ಜಾತಿ- ಕೆಳ ಜಾತಿಗಳೆಂಬ ಪಕ್ಷಪಾತಗಳಿಗಿಂತಲೂ ಹೆಚ್ಚು ಪ್ರಬಲವಾಗಿ ಚಾಲ್ತಿಯಲ್ಲಿದೆ (ಈ ಹಳೆಯ ಮಾತು ಇವತ್ತಿಗೂ ಎಷ್ಟೊಂದು ಪ್ರಸ್ತುತ!) ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಸಾಧ್ಯವಾದಷ್ಟೂ ಜೊತೆಯವರಿಗೆ ತೊಂದರೆಯಾಗದ ಹಾಗೆ ಎಚ್ಚರವಹಿಸುತ್ತ, ನಮ್ಮ ಆತ್ಮವಿಶ್ವಾಸವನ್ನೂ, ಹೆಮ್ಮೆಯನ್ನೂ ಕಾಯ್ದುಕೊಂಡು ದಾಪುಗಾಲಿಡುವುದಷ್ಟೆ ನಾವು ಮಾಡಬೇಕಿರುವ ಕೆಲಸ.
ರಮ್ಯಾಳ ಪ್ರಕರಣದಂಥ ಘಟನೆಗಳು ನಡೆದಾಗಲಾದರೂ ನಾವು ಇಂಥದನೆಲ್ಲ ಯೋಚಿಸಬೇಕು ಅಲ್ಲವ?
ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ” ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ.

ಪಾದಕ್ಕೆ ಮುತ್ತಿಟ್ಟವನ....
ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ ಗಾಬರಿ. ಅಂವ ಎದ್ದು ಹೋಗಿರುವ ಸುದ್ದಿ ನಂಬದೆ ಕುಳಿತಿದೆ ಇನ್ನೂ. ಅದಕ್ಕೆ ತಾನೊಂದು ಸುಳ್ಳು ಅನ್ನೋದು ಗೊತ್ತೇ ಇಲ್ಲ. ನಂಬಿಸಲಿ ಹೇಗೆ ಅದನ್ನ? ಗೋಡೆಗೊರಗಿದ ಮಂಚ ಘಮವಾಗಿ ಕಾಯ್ತಲೇ ಇದೆ ಇನ್ನೂ. ಅಲ್ಲಿ ಇನ್ನೆಂದೂ ಬರೀ ನನ್ನ ಕಳೇವರ ಮಲಗಲಿದೆ ಅಂತ ಹೇಳಬೇಕಿದೆ ಅದಕ್ಕೆ. ಆಡುಭಾಷೆಯಲ್ಲಿ ಜನ, ಕಳೇವರಕ್ಕೆ ಹೆಣ ಅಂತಾರಲ್ಲ? ಅವನಿಲ್ಲದ ಕೋಣೆಗೆ ಬೀಗವಿಕ್ಕಿದ ಎದೆಹೊತ್ತ ನಾನು ಹೆಣವೇ ಒಂಥರಾ.
ಒಳಗೊಳಗೇ ಸುಳಿದು ಬಿಸಿಗಟ್ಟಿದ ಗಾಳಿಗೆ ಅವನ ದನಿಯಪ್ಪುವ ತಹತಹ. ಒಂಟಿ ನನ್ನತ್ತ ಬೀಸದೆ ಉಸಿರುಗಟ್ಟಿಸುತಿದೆ ಹಾಗೇ, ಎದೆಯೊತ್ತಿ ಉಬ್ಬಸ. ಏದುಸಿರಿನ ತುಂಬ ಅವನದೆ ಕನವರಿಕೆ. ಹನಿಗಾಳಿಗೆ ಬೇಡಬೇಕಿರುವ ಜೀವ, ಅವನನ್ನೆ ಬೇಡುತ್ತ ಮೈಮರೆತುಹೋಗಿದೆ.
ಈ ಹಾಳು ಕೋಣೆಯ ಬಲ್ಬಿನಲ್ಲು ಅವನ ಕಣ್ಣಿನದೆ ಬೆಳಕು. ಎಂದೆಂದೂ ಆರದ ನಿತ್ಯನಂದಾದೀಪ. ಆರದಿರಲಿ ಸಧ್ಯ! ಕಣ್ಣೀರನ್ನೆ ಬತ್ತಿಯೊಳಗಿಟ್ಟು ಉರಿಸಿಯೇನು. ಆದರೇನು? ಅವನ ನೆನಪಲ್ಲಿ, ಕಣ್ಣಲ್ಲಿ ಹರಿದಿದ್ದು ಬರೀ ರಕ್ತ.
ಹೋ! ಆ ಕಪಾಟಿನ ಕೀಲಿಕೈ ಎಲ್ಲಿ? ಅದರಲ್ಲಿ ಎಷ್ಟೆಲ್ಲ ಪಿಸುಮಾತುಗಳು!! ಪಾದಕ್ಕೆ ಮುತ್ತಿಟ್ಟವನ ಕೆನ್ನೆ ಕೆಂಪು, ಮಳ್ಳು ನಗು, ಯುಗಯುಗಗಳ ಖಸ್ಮೇ ವಾದೇಂ, ಪ್ರೇಮಕಥೆ ನಾಚಿಸುವ ಆಶುಕವಿತೆಗಳು, ಪರಸ್ಪರ ಹೇಳಿಕೊಂಡ ಸಾವಿರದೆಂಟು ಸುಳ್ಳುಗಳು!! ಚಿಲಕ ಕಿಲುಬಿರುವ ಅದೊಂದು ಕಿಟಕಿ ತೆರೆದರೆ, ಆಚೆಗೇನಿದೆಯೋ? ಯಾವತ್ತೂ ನೋಡಲೇ ಇಲ್ಲ ನಾವು. ತೆರೆಯಲೇ ಇಲ್ಲ ಪ್ರೇಮಗೂಡಿನ ಕಿಟಕಿ. ಹೊರಗನ್ನ ಒಳಸುಳಿಯಲು ಬಿಡದೆ, ಒಳಗನ್ನ ಹೊರಗಿಗೆ ತೆರೆದಿಡದೆ, ಮಾಡಿ- ಮಾಡಿಕೊಂಡ ವಂಚನೆ. ಈಗಲಾದರೂ ತೆರೆದು, ಜಗದ ಅಸಲಿಯತ್ತನ್ನ ಕಂಡು ಕಲಿಯಲೆ?
ರಾಧೇ… ಕೃಷ್ಣನ ಮೈತುಂಬ ರಾಜಕಾರಣ ಕಣೇ. ಆಯತನ ನಿನ್ನ ಎಡಗಾಲಲ್ಲಿ ಒದ್ದಾನು. ಗೋಕುಲದ ಜನಕ್ಕಂತೂ ನೀನು ಸಂಜೆ ಮಾತು. ಪ್ರೇಮದ ಉಸಿರಿಲ್ಲದೆ ಕೊಳಲು ಕೂಡ ಮೂಕ. ಸರಿಯೇ! ಕೊನೆಗೂ ಗಂಡಸಿಗೆ ಬೇಕಾಗುವುದು ತೊಡೆಯೇರಿ ಮುದ್ದಿಸುವ ಪ್ರೇಯಸಿಗಿಂತ, ಕಾಲೊತ್ತಿ ಗುದ್ದಿಸಿಕೊಳ್ಳುವ ಹೆಂಡತಿಯೇ. ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?
ನನಗಿವತ್ತು ಝಾಡಮಾಲಿಯ ಕೆಲಸ. ಚೆಲ್ಲಾಪಿಲ್ಲಿ ಚಿತ್ರಗಳು ಎಷ್ಟಿವೆಯೆಂದರೆ, ಗುಡಿಸುತ್ತಲೇ ಸಾಯಬೇಕು ನಾನು. ಅಥವಾ ಸಾಯುವವರೆಗೂ…..
ಹೊಸ ತಲೆಮಾರಿನ ಹೊಸ ತಾಣ…. www.hosachiguru.wordpress.com
ಸಧ್ಯಕ್ಕೆ ಕಥೆ, ಕವಿತೆ, ಹೊಸಚಿಗುರುಗಳ ಕಿರು ಪರಿಚಯಗಳು ಮೂಡಿವೆ. ಇದು ನಿಮಗೂ ಖುಷಿ ಕೊದಬಹುದನ್ನೋದು ನನ್ನ ಅನಿಸಿಕೆ.
ನಲ್ಮೆ, ಚೇತನಾ
ಇದೋ! ಕತ್ತಲಾಗಿದೆ.
ನಿನ್ನ ಬೆತ್ತಲು
ಕಾಣುವುದಿಲ್ಲ ನಿನಗೂ…
ನಾಚಿಕೆ ಕಿತ್ತೆಗೆ,
ಒಳಗನೆಲ್ಲ ಹರಡಿ ಹಗುರಾಗು.
ಸುಳ್ಳು ನಾಟಕದ ಹೊರೆ
ಎಷ್ಟೆಂದು ಹೊರುತ್ತೀ?
-ಆತ್ಮ ಸಾಕ್ಷಿಯ ಮಾತು.
ತಪ್ಪೊಪ್ಪಿಗೆಯ ಹೊತ್ತಲ್ಲಿ
ಬೆಳೆಯುತ್ತಿದೆ ಪಟ್ಟಿ॒
ಎದೆಗೋರಿಯ ಕನವರಿಕೆ,
ಹೇಳಲಾಗದ ಅವನ ಹೆಸರು;
ಬರೆಯದೆ ಬಿಟ್ಟ ಕವಿತೆ,
ಮಡಚಿಟ್ಟ ಪುಟಗಳು.
ಸಂತನೊಡಲಲ್ಲಿ ಹಚ್ಚಿಟ್ಟ
ಹೆಣ ಸುಡುವ ಕಿಚ್ಚು!
ಒಂದೇ, ಎರಡೇ?
ನಾ ನಂಬಿಕೊಂಡ ನನ್ನ ಸುಳ್ಳುಗಳು,
ನಾನಪ್ಪಿಕೊಂಡ ನನ್ನ ಶತ್ರುಗಳು,
ನಾ ಕೊಂದ ನನ್ನ ಇಷ್ಟಗಳು,
ನನ್ನದಲ್ಲದ ನನ್ನ ಕಥೆಗಳು…
ದಾರಿಯಿಂದ ಕಿತ್ತು ಬಿಸುಟ
ಕರುಳಬಳ್ಳಿ ಹಬ್ಬುಗಳು,
ಸೀಮೆ ದಾಟಿ ತಿಪ್ಪೆ ಸವರಿದ
ಅದೊಂದು ಚಿಕ್ಕ ವಂಚನೆ!
ಒಂದೇ ಎರಡೇ?
ನಿಜದ ನನ್ನ ಮುಚ್ಚಿಕೊಳ್ಳಲು
ಎಷ್ಟೆಲ್ಲ ಹೊದಿಕೆಗಳು!
ಮೈಗಂಟಿ ಕೂತ ಚರ್ಮದ ಪದರುಗಳು…
ಸುಲಿದು ತೋರುವ ನೋವಿಗೆ
ಅಂಜುತ್ತಿದ್ದೇನೆ ನಾನು.
ಸುಳ್ಳು, ನಾಟಕದ ಹೊರೆ
ಎಷ್ಟೆಂದು ಹೊತ್ತು ನವೆಯುತ್ತೀ?
ಅತ್ಮ ಸಾಕ್ಷಿಯ ಮಾತು…
~
ಹೊರೆಯಿಲ್ಲದ ಅಕ್ಕ,
ಬೆಳಕಲ್ಲೂ ಬೆತ್ತಲಾಗಿದ್ದಳು.
ಕಡುಗತ್ತಲಲ್ಲಿ
ಅಂಜುತ್ತಿದ್ದೇನೆ ನಾನು.
ಇದು ನನ್ನ `ಸಿಡಿಲಾಗಲು ಕಾದಿದ್ದೇನೆ’ ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿತೆ. ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದು!! ನನಗಿಷ್ಟವಾಯ್ತು ಅಂತಲೇ ನಿಮ್ಮ ಜತೆ ಹಂಚಿಕೊಳ್ತಿದೇನೆ, ಅವರ ಅನುಮತಿ ಪಡೆಯದೆ… ಅವರು ಮನ್ನಿಸಿಯಾರು ಎನ್ನುವ ಭರವಸೆಯಿಂದ! ~ಚೇತನಾ
ನನಗೆ ಶಬ್ದಗಳ ಪರಿಚಯವಿದೆ
ಎಂದ ಮಾತ್ರಕ್ಕೆ
ಮಾತನಾಡುತ್ತೇನೆ ಎಂದೆಲ್ಲ
ಖುಷಿಪಡಬೇಡಿ. ನಾನು
ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು.
ನನಗೆ ನಿಶ್ಶಬ್ದದ ಬಗ್ಗೆ ಒಲವಿದೆ
ಎಂದಮಾತ್ರಕ್ಕೆ
ಸುಮ್ಮನಿರುತ್ತೇನೆ ಎಂದೆಲ್ಲ
ದುಃಖಿಸಬೇಡಿ. ನಾನು
ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು.
ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ
ನೀವು ದುಃಖಿಸುತ್ತಿದ್ದರೆ ಮಾತನಾಡುತ್ತೇನೆ
ಎಂಬ ಹೊಂದಾಣಿಕೆಗೂ ಬಂದಿದೆ ನನ್ನ
ಬದುಕು.
A compromise which is much hated
Yet
Inevitable
ಸುದರ್ಶನ ಬೇಳೂರು
ಹತ್ತು, ಇಪ್ಪತ್ತು… ನಲವತ್ತು ಮುಂಬತ್ತಿಗಳು!! ಮುಗಿದ ಬದುಕಿನ ಲೆಕ್ಕ. ಬೆಳಕು ಹರಡಿದ ಸಾರ್ಥಕ ಘಳಿಗೆಗಳೂ ಇವೆಯಿದರಲ್ಲಿ. ಈಗ ಉಪಯೋಗವಿಲ್ಲದ ಮೇಣದ ಚರಟದ ಹಾಗೆ ಉಳಿದಿದೀನಾ? ಯೋಚಿಸಬೇಕಿದೆ.
ಬೆಳಗಿಂದ ಒಂದೇ ಸಮ ಫೋನ್ ಕಾಲ್ ಗಳು. ಹರಕೆ ಹೊತ್ತಂತೆ ಶುಭ ಹಾರೈಕೆಯ ಶಾಸ್ತ್ರ ಮುಗಿಸ್ತಿದಾರೆ. ಗೊತ್ತಿರುವ ಗೆಳೆಯ ಗೆಳತಿಯರೆಲ್ಲರೂ ‘ಇನ್ನೇನು ಆಂಟಿಯಾದೆ’ ಅಂತ ಛೇಡಿಸುವವರೇ. ಹೀಗೆ ಎಲ್ಲರ ಹಾರೈಕೆಯೂ ಬಂದಿದೆ, ಬರುತ್ತಿದೆ. ಅವರಿಬ್ಬರದನ್ನ ಬಿಟ್ಟು. ‘ನನ್ನತನ ಮೀರಿದ ಜೀವ’ ಅಂದುಕೊಂಡ ವ್ಯಕ್ತಿಗಳು ಬಹಳಷ್ಟು ಸಾರ್ತಿ ಬದಲಾಗಿದಾರೆ. ಕೊನೆಗೂ ಉಳಿದವರು ಇವರಿಬ್ಬರೇ. ಇವರು ನಾನು ಬಿಟ್ಟವರಲ್ಲ, ನನ್ನ ಬಿಟ್ಟವರು. ಅರಸ ಸುಲಭಕ್ಕೆ ಸೋಲುವುದಿಲ್ಲ. ಸೋತರೆ, ಗುಲಾಮನಿಗಿಂತ ಗುಲಾಮನಾಗ್ತಾನೆ. ಪ್ರೇಮದ ಗುಲಾಮಗಿರಿ ಎಷ್ಟು ಚೆಂದ!
ನನ್ನ ಕಿವಿ ಮುಟ್ಟದ ಅವರನ್ನ ಇಷ್ಟು ಹೊತ್ತು ಕಾದಿದ್ದಾಯ್ತು. ಕಾದು ಕಾದು ಕುದಿಬಂದು ಆವಿಯಾಗತೊಡಗಿದ್ದೇನೆ. ಇನ್ನು ನಿರೀಕ್ಷೆ ಸಾಧ್ಯವಿಲ್ಲ. ಇಬ್ಬರದೂ ಒಂದೇ ಹಾದಿ. ಪರಸ್ಪರ ಸಂಬಂಧವೇ ಇರದ ಅವರಿಬ್ಬರು ನನ್ನ ಸೂತ್ರದಿಂದ ಒಂದೇ ರೇಖೆಯಲ್ಲಿರುವರಲ್ಲ? ನನ್ನ ಈಗಿನ ನಿರ್ಧಾರ ಅವರ ಕಾರಣದಿಂದ ಅಲ್ಲ ಅನ್ನೋದನ್ನ ಸ್ಪಷ್ಟ ಮಾಡಿಡಬೇಕು. ಅವರಿಗೆ ನೋವಾಗ್ತದೆ ಅಂತಲ್ಲ. ‘ನನ್ನ ಈ ಪರಿ ಪ್ರೇಮಿಸಿದ್ದಳು’ ಅನ್ನುವ ಅಹಂಕಾರ ಬರಬಾರದಲ್ಲ, ಅದಕ್ಕೆ.
ಇವತ್ತು ಬೆಳಗಿನ ಮೊದಲ ಕಾಲ್ ನನ್ನ ಪ್ರಿಯ ಶತ್ರುವಿನದು. ಆಮೇಲೆ ಅಮ್ಮ ಕಾಲ್ ಮಾಡಿದ್ದಳು. ವೆಂಕಟರಮಣನಿಗೆ ಪಂಚಾಮೃತ ಅಭಿಷೇಕಕ್ಕೆ ಕೊಟ್ಟಿದಾಳಂತೆ. ‘ಮನೇಲಿ ಒಂದು ದೀಪಾನಾದ್ರೂ ಹಚ್ಚು. ತಲೆಗೆ ಎಣ್ಣೆ ಇಟ್ಕೊಂಡು ನೀರು ಹಾಕ್ಕೋ’ ಅಂದಿದ್ದಳು. ಅಪ್ಪ ‘ಒಳ್ಳೇದಾಗ್ಲಿ ಕಣಮ್ಮಾ’ ಅಂದಿದ್ದ. ಅದು ಎಷ್ಟು ವಿಚಿತ್ರವಾಗಿ ಕೃತಕವಾಗಿ ಅನ್ನಿಸ್ತೆಂದರೆ, ಅಂವ ‘ಹಾಳಾಗಿ ಹೋಗು’ ಅಂದುಬಿಟ್ಟಿದ್ದರೆ ತೃಪ್ತಿಯಾಗಿ ಖುಷಿಪಡಬಹುದಿತ್ತೇನೋ. ಅವನ ದನಿಗೆ ಈ ಹಾರೈಕೆ ಒಗ್ಗುವುದೇ ಇಲ್ಲ!
‘ಪಾರ್ಟಿ ಯಾಕೆ ಅರೇಂಜ್ ಮಾಡಿಲ್ಲ? ನಾವು ಬಂದೇ ಬರ್ತೀವಿ ಮನೇಗೆ’ ಗೆಳೆಯರ ತಾಕೀತು. ನಾನಂತೂ ಊರಲ್ಲಿ ಇಲ್ಲವೆಂದುಬಿಟ್ಟಿದೇನೆ. ಹೇಗಿದ್ದರೂ ಅವರೆಲ್ಲ ಇವತ್ತು ರಾತ್ರಿಯೋ, ನಾಳೆ ಬೆಳಗ್ಗೆಯೋ ಸುದ್ದಿ ತಿಳಿದು ಬಂದೇಬರಬೇಕು, ಬರುತ್ತಾರೆ ಕೂಡ. ನಾನೀಗ ಈ ನನ್ನ ನೆಚ್ಚಿನ ಕಿಟಕಿ ಪಕ್ಕದ ಟೇಬಲಿನ ಮೇಲೆ ನಲವತ್ತು ಮುಂಬತ್ತಿಗಳನ್ನ ಉರಿಸುವವಳಿದ್ದೇನೆ. ಮುಂಬತ್ತಿಯ ಮೇಣದ ಹಾಗೆ ಕರಗಿಳಿದು ಹೆಪ್ಪುಗಟ್ಟೋದಿಲ್ಲ ಕಂಬನಿ. ಲಾವಾದಂತೆ ಕಣ್ಣಿಂದ ಎದೆಯೊಳಗಿಳಿದು ಸ್ಫೋಟಕ್ಕೆ ಕಾಯುತ್ತದೆ. ಎದೆಯೊಳಗೆ ಹೂತ ನೆನಪು ಕನಸುಗಳೆಲ್ಲ ಶಾಖಕ್ಕೆ ಬೇಯತೊಡಗುತ್ತವೆ. ಬೆಂದು ಬೆಂದು ಕರಗಿ ಕಳೆದುಹೋಗುತ್ತವೆ.
ಸ್ಫೋಟ!
ವರ್ಷಗಳ ಹಿಂದೆ ಅಂವ ಕೌನ್ಸೆಲಿಂಗಿಗೆ ಕರೆದೊಯ್ದಿದ್ದ. ‘ಎಲ್ಲಾದ್ಕೂ ಓವರ್ ರಿಯಾಕ್ಟ್ ಮಾಡ್ತಾಳೆ’ ಅಂತ. ಸೈಕಿಯಾಟ್ರಿಸ್ಟ್, ಈಕೆ ತುಂಬಾ ನಾರ್ಮಲ್ ಆಗಿದಾರೆ ಅಂತ ರಿಪೋರ್ಟ್ ಕೊಟ್ಟರು. ‘ಪ್ರತಿಭಟಿಸೋದು ಈಕೆಯ ಹುಟ್ಟುಗುಣ. ತಪ್ಪೇನಿಲ್ಲ’ ಅಂದರು. ಕರಕೊಂಡು ಹೋದವ, ‘ಇವರೆಲ್ಲ ಬಾಯಿಪಾಠದ ಡಾಕ್ಟರುಗಳು. ಪುಸ್ತಕ ನೋಡಿ ಮನಸ್ಸು ತಿಳಿಯೋಕಾಗತ್ತಾ?’ ಅಂತೇನೋ ಗೊಣಗಿದ್ದ. ಅವನ ಅವಸ್ಥೆ ನೋಡುವಾಗೆಲ್ಲ ಅವಂಗೇ ಸೈಕಿಯಾಟ್ರಿಸ್ಟರ ಅಗತ್ಯವಿದೆ ಅಂತನ್ನಿಸಿ ಹೋಗ್ತಿತ್ತು. ‘ನಿನಗಿಂತ ಜಾಸ್ತಿ ನೊಂದ….’ ಉಪನ್ಯಾಸ ಶುರುವಿಡುತ್ತಿದ್ದ. ನಾನು ಕೇವಲ ‘ನಾನು’ ಆಗಿದೇನಂತ ತಿಳಿಸಿಕೊಡಲು ಪಟ್ಟ ಪ್ರಯತ್ನವೆಲ್ಲ ಹುಸಿಹೋಗುತ್ತಿತ್ತು. ನಾನೊಂದು ಪ್ರತ್ಯೇಕ ವ್ಯಕ್ತಿ. ನಿನ್ನ ಹಾಗಲ್ಲದ, ಮತ್ಯಾರದೋ ಹಾಗಲ್ಲದ ಇಂಡಿವಿಜುವಲ್. ಪಕ್ಷಿಯ ಹಾಗೆ, ಪ್ರಾಣಿಯ ಹಾಗೆ, ಬ್ಯಾಕ್ಟೀರಿಯಾ, ವೈರಸ್ಸುಗಳ ಹಾಗೆ, ಕೋಟ್ಯಂತರ ಮನುಷ್ಯರು ಪ್ರತಿಯೊಬ್ಬರಿಗೂ ಅಸ್ತಿತ್ವವಿರುವ ಹಾಗೆ ನಾನೂ…. ಒಳಗೊಳಗೆ ಚೀರಿಕೊಳ್ಳುತ್ತಿದ್ದೆ. ಅವನ ಪ್ರೀತಿ ಉಳಿದೆಲ್ಲ ಭಿನ್ನಾಭಿಪ್ರಾಯಗಳನ್ನೂ ಮರೆಸಿಹಾಕ್ತಿತ್ತು. ಮರೆಸಿದ್ದಕ್ಕಿಂತ, ಮರುಮಾತನ್ನ ತಳ್ಳಿ ಹಾಕ್ತಿತ್ತು ಅನ್ನುವುದೇ ಸರಿಯೇನೋ?
~
ಈ ಹೊತ್ತು, ಕೊನೆಯಾಗಬೇಕನ್ನುವ ನಿಶ್ಚಯ ಹೊತ್ತು ಕುಳಿತಿದೇನೆ. ಮುಂಬತ್ತಿಗಳು ಒಂದೊಂದೇ ಹೊತ್ತುರಿದು ಕರಗಿ ಮುಗಿಯುವವರೆಗೆ, ಬರದಿರುವ ಅವನ ನಿರೀಕ್ಷೆಯನ್ನ ಮೆಟ್ಟಿನಿಲ್ಲಲು ಬಿಟ್ಟ ಹೆಜ್ಜೆಗಳನ್ನ ಎಣಿಸಿಕೊಳ್ಳಲೆ?
~
ಇವತ್ತಿಗೆ ಸರಿಯಾಗಿ ನಲವತ್ತು ವರ್ಷಗಳ ಮೇಲೊಂದು ದಿನದ ಹಿಂದೆ….
ಶ್ರಾವಣದ ಮಳೆ. ಬಿಡಾರದವರ ಹುಂಜ ಮೈಮುರಿದು ಕೂಗಿದ್ದೇ ಅವತ್ತು ಏಳು ಗಂಟೆಗೆ. ಆ ಹೊತ್ತಿಗೆ ಸರಿಯಾಗಿ ನಡುಮನೆಯಲ್ಲಿ ಹದಿನಾರರ ಎಳೆಬಸುರಿಗೆ ಹೆರಿಗೆ ನೋವು. ದೊಡ್ಡಮ್ಮ, ಮಂಜಿ ಅವಳ ಪಕ್ಕ ಕೂತು ‘ಸ್ವಲ್ಪ ಮುಕ್ಕು ತಾಯೀ’ ಅಂತ ಧೈರ್ಯ ಹೇಳ್ತಿದ್ದರು. ಗಾಬರಿಯಾಗಿಹೋಗಿದ್ದ ಅವಳು ಅವರು ಹೇಳಿದ ಹಾಗೇ ಕಾಲಗಲಿಸಿ ಮುಕ್ಕುತ್ತ ನೋವಿಗೆ ಚೀರುತ್ತಿದ್ದಳು. ಅಷ್ಟೇನೂ ತ್ರಾಸಾಗದೆ ಸಪೂರ ಮೈಯಿನ ಮಗು ಭೂಮಿಗಿಳಿಯಿತು. ನಾನು ‘ಹುಟ್ಟಿದ್ದೆ’. ಮಂಗಳವಾರದ ಬೆಳಗಿನ ಏಳೂಕಾಲರ ಸಮಯ. ದೊಡ್ಡಮ್ಮ ಘಳಿಗೆ ಬರೆದಿಟ್ಟರು. ನಾನಂತೂ ಅಳುತ್ತಿದ್ದೆ. ಸಜೀವವಿರುವುದರ ಸಂಕೇತವಾಗಿ ನಾನು ಅಳಲೇಬೇಕಿತ್ತು. ನನ್ನ ನೊಡಿದ್ದೇ ಅಮ್ಮನೂ ಮುಸುಗರೆಯತೊಡಗಿದ್ದಳು. ದೊಡ್ಡಮ್ಮನ ಬಾಣಲೆಯಗಲದ ಮುಖವೂ ಹಿಡಿಯಾಗಿಹೋಗಿತ್ತು. ನನ್ನ ಅಳು ಕೇಳ್ತಲೇ ನಡುಮನೆಯತ್ತ ಜೋಡಿ ಕಾಲ್ಗಳು ನಡೆದುಬಂದವು. ಬಾಗಿಲಿಗೆ ಕಿವಿಯಾನಿಸಿ, ‘ಇವ್ಳೇ’ ಅಂದವು. ದೊಡ್ಡಮ್ಮ ಬಾಯಿಬಿಡಲಿಲ್ಲ. ಮಂಜಿ ಹಗೂರ ದನಿಯಲ್ಲಿ ‘ಲಕ್ಷ್ಮಿ ಒಡೇರೇ’ ಅಂದಳು.
ಬಳ್ಳಿ ಕತ್ತರಿಸಿ ಅಮ್ಮನ ಜೀವದಿಂದ ನನ್ನದನ್ನ ಬೇರೆ ಮಾಡಲಾಯ್ತು. ಆ ಕ್ಷಣದಿಂದ ನಾನೊಬ್ಬಳು ಸ್ವತಂತ್ರ ವ್ಯಕ್ತಿಯಾಗಿದ್ದೆ.
( ಸಶೇಷ)
(ಶಾಸನ ವಿಧಿಸಿದ ಎಚ್ಚರಿಕೆ: ಇದು ಏನು, ಏನಾಗಲಿದೆ ಅಂತ ನಮಗೆ ಬ್ಲಾಗೇಶ್ವರಿಯಾಣೆ ಗೊತ್ತಿಲ್ಲ. ಯಾರೂ ತಲೆಕೆಡಿಸ್ಕೊಬಾರದು.)
ಮೌನವಾಗಿ ಉಳಿದಿದೇನೆ
ಅಂದ ಮಾತ್ರಕ್ಕೆ
ಶಾಂತವಾಗಿದ್ದೇನೆ ಎಂದಲ್ಲ
ನೂರೊಂದು ನೋವುಗಳ
ಎದೆಗುದಿಯುಕ್ಕಿ ಸಿಡಿಯುವ
ಹೊತ್ತಿಗೆ ಕಾದಿದ್ದೇನೆ.
ವಿಷದ ಹನಿ ಹನಿ
ನುಂಗುತ್ತ ಬೆಳೆದಿದ್ದೇನೆ.
ಸಾವಿರ ನಾಲಗೆಯ ನಂಜು ಕೂಡ
ನನ್ನ ನೀಲಿಗಟ್ಟಿಸಲು ಸೋತಿವೆ
ರಣಚೋರಳೆನ್ನ ಬೇಡಿ,
ತಮ್ಮ ಕಣ್ಣುರಿಗೆ ತಾವೇ
ಬೂದಿಯಾಗುವಂತೆ
ಕನ್ನಡಿಗಳನಿರಿಸಿದ್ದೇನೆ.
ಅವರವರ ‘ನಿಜ’ ಬಿಂಬ
ಕಂಡವರು ಸುಟ್ಟುಹೋಗುತ್ತಿದ್ದಾರೆ.
ಜಡಿಮಳೆಗೆ ಮುನ್ನ
ಹೆಪ್ಪುಗಟ್ಟುವ ಕತ್ತಲಂತೆ
ಅಮಾಯಕಳಂತೆ ಸುಮ್ಮನೆ-
ಸುಮ್ಮನೇ ಕುಳಿತಿದೇನೆ.
ಅಂದ ಮಾತ್ರಕ್ಕೆ
ಶಾಂತವಾಗಿದ್ದೇನೆ ಎಂದಲ್ಲ
ಸಿಡಿಲಾಗುವ ತವಕದಲ್ಲಿ
ಮಾತನೆಲ್ಲ ಒಟ್ಟುಮಾಡುತಿದ್ದೇನೆ.
ಅದೋ,
ಅವೆರಡು ಮೋಡಗಳು ಢಿಕ್ಕಿಯಿಟ್ಟು
ಯುದ್ಧ ಸಾರುವುದನ್ನೆ ಕಾಯುತ್ತಿದ್ದೇನೆ…